ಸಿದ್ದರಾಮಯ್ಯ ಮೇಲೆ ಕೆಂಡ ಕಾರುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರು
ಅಭ್ಯರ್ಥಿಗಳನ್ನು ಬಿಟ್ಟು ಸಿದ್ದು ಮೇಲೆ ಮುಗಿಬಿದ್ದ ಘಟಾನುಘಟಿಗಳು
ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು
ಇತ್ತೀಚೆಗೆ ಎಲ್ಲ ಹಿರಿಯ ನಾಯಕರ ಕಣ್ಣುಗಳು ಸಿದ್ದರಾಮಯ್ಯ ಅವರ ಮೇಲೆಯೇ ನೆಟ್ಟಿವೆ. ಆಡಳಿತ ಪಕ್ಷ ಬಿಜೆಪಿಯ ನಾಯಕರು
ಮಾತ್ರವಲ್ಲದೇ, ಜೆಡಿಎಸ್ ನಾಯಕರು ಸಹ ಸಿದ್ದರಾಮಯ್ಯ ಅವರ ಮೇಲೆ ಕೆಂಡ ಕಾರುತ್ತಿದ್ದಾರೆ. ಅಷ್ಟಕ್ಕೂ ಈ ಎಲ್ಲ ನಾಯಕರ
ಕೆಂಗಣ್ಣಿಗೆ ಸಿದ್ದರಾಮಯ್ಯ ಅವರೇ ಗುರಿಯಾಗುತ್ತಿರುವ ಹಿಂದಿನ ಗುಟ್ಟೇನು ಎಂಬುದು ಪ್ರಸ್ತುತದ ಚರ್ಚಾ ವಿಷಯ.
ಸಿದ್ದರಾಮಯ್ಯ ಸದಾ ಕ್ರಿಯಾಶೀಲವಾಗಿರುವ ರಾಜಕಾರಣಿ. ಪ್ರಸ್ತುತ ವಿಷಯಗಳಲ್ಲಿ ಹಾಗೂ ಇತಿಹಾಸದ ವಿಚಾರಗಳಲ್ಲಿ ಪಾಂಡಿತ್ಯಭರಿತ ಭಾಷಣ ಮಾಡುವಲ್ಲಿ ಎತ್ತಿದ ಕೈ. ಟೀಕಾಸ್ತ್ರದಲ್ಲಿಯೂ ಚಿಂತನಾಲಹರಿ ಹರಿಸುವ ಸಿದ್ದರಾಮಯ್ಯ ಅವರು ಇತ್ತೀಚೆಗೆ ತಮ್ಮ ‘ಮಾಸ್ ಲೀಡರ್’ ಎಂಬ ಪಟ್ಟವನ್ನು ಮತ್ತಷ್ಟು ಎತ್ತರಿಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಹಿನ್ನೆಲೆ ಯಲ್ಲಿ ಅವರ ವಿರುದ್ಧ ಗುಡುಗುವವರ ಗುಂಪು ಹೆಚ್ಚಾಗುತ್ತಿದೆ.
ಉಪಚುನಾವಣೆಯಂತೂ ಆರೋಪ-ಪ್ರತ್ಯಾರೋಪಗಳ ಮೇಲೆಯೇ ನಡೆಯುತ್ತಿದ್ದು, ಸಿದ್ದರಾಮಯ್ಯ ಅವರ ವಿರುದ್ಧ ಆರ್ಭಟಿಸುವ ನಾಯಕರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಉಪ ಚುನಾವಣೆಯು ಮೂರೂ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಹೈಕಮಾಂಡ್ ಭೇಟಿ ನಂತರ ಸಿದ್ದರಾಮಯ್ಯ ಅವರು ಉಪ ಚುನಾವಣೆ ಕಣದಲ್ಲಿ ಸಕ್ರಿಯ ರಾಗಿದ್ದಾರೆ. ಗೆಲುವಿನ ಮೂಲಕವೇ ಪಕ್ಷದ ಆಡಳಿತದ ಆಸೆಯನ್ನು ಚಿಗುರಿಸುವ ಇರಾದೆ ಅವರದ್ದು. ಇದಕ್ಕೆ ತಕ್ಕುದಾದ ಪ್ರಯತ್ನವನ್ನು ತಮ್ಮ ತಂಡ ಕಟ್ಟಿಕೊಂಡು ಮಾಡುತ್ತಿ ದ್ದಾರೆ ಸಿದ್ದರಾಮಯ್ಯ.
ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರು ಪದೇ ಪದೆ ಬೆಲೆ ಏರಿಕೆ ವಿರುದ್ಧ ಮಾಡುವ ಆರೋಪದಿಂದ ಬೇಸತ್ತಿದ್ದಾರೆ. ಇದು ಜನರ ನಡುವೆ ಸರಕಾರಕ್ಕೆ ಪೆಟ್ಟು ನೀಡುವ ಪಟ್ಟು ಎಂಬ ಅರಿವು ಅವರಿಗಿದೆ. ಹೀಗಾಗಿ, ಸಿದ್ದರಾಮಯ್ಯ ಅವರ ಬಾಯಿ ಮುಚ್ಚಿ ಸುವ ಸಲುವಾಗಿ ಅವರ ಮೇಲೆ ಮುಗಿಬೀಳುವುದು ಅವರ ತಂತ್ರಗಾರಿಕೆ. ಸದಾ ಸಿದ್ದರಾಮಯ್ಯ ಅವರನ್ನು ಹಿರಿಯರಂತೆ ಭಾವಿಸು ತ್ತಿದ್ದ ಬೊಮ್ಮಾಯಿ ಅವರು ಕೂಡ ಇತ್ತೀಚೆಗೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಿದ್ದಾರೆ.
ಎಚ್.ವಿಶ್ವನಾಥ್, ಶ್ರೀನಿವಾಸ್ ಪ್ರಸಾದ್, ಸಿ.ಟಿ. ರವಿ, ಪ್ರತಾಪ್ ಸಿಂಹ, ಕೆ.ಎಸ್.ಈಶ್ವರಪ್ಪ, ಎಸ್. ಆರ್.ವಿಶ್ವನಾಥ್, ಆರ್.ಅಶೋಕ ಮೊದಲಾದ ನಾಯಕರು ಆಗಾಗ ಅವರ ಮೇಲೆ ಬೀಳುತ್ತಲೇ ಇರುತ್ತಾರೆ. ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಮಾತ್ರ ವಲ್ಲ, ಎಚ್.ಡಿ.ಕುಮಾರಸ್ವಾಮಿ ಅವರದು ಸದಾ ಟೀಕಾವಾತ್ಸಲ್ಯ. ಮೈತ್ರಿ ಸರಕಾರ ಮುರಿದರು ಎಂಬಲ್ಲಿಂದ ಹಿಡಿದು, ಅಲ್ಪ ಸಂಖ್ಯಾತರನ್ನು ಹಾಳು ಮಾಡಿದರು, ಅಕ್ಕಿ ಕೊಟ್ಟಿದ್ದು ಸಿದ್ದರಾಮಯ್ಯ ಮಾತ್ರವೇ, ಅವರು ಪಕ್ಷಕ್ಕೆ ದ್ರೋಹ ಮಾಡಿ ಬರಲಿಲ್ಲವೇ ಎಂಬಿತ್ಯಾದಿ ಅಂಶಗಳನ್ನಿಟ್ಟುಕೊಂಡು ಟೀಕಿಸುತ್ತಲೇ ಬರುತ್ತಾರೆ. ಇದಕ್ಕೆ ಅವರ ಮೇಲೆ ಅಲ್ಪಸಂಖ್ಯಾತರ ಮೇಲಿರುವ ಪ್ರೇಮ ವನ್ನು ಕಡಿಮೆ ಮಾಡುವುದು, ತಮ್ಮ ಹಳೆಯ ಸೇಡನ್ನು ತೀರಿಸಿಕೊಳ್ಳುವುದು ಎಚ್.ಡಿ. ಕುಮಾರಸ್ವಾಮಿ ಉದ್ದೇಶ.
ಆದರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ ಮಾತ್ರ ತಮ್ಮ ಮಾಸ್ ಸ್ಟೈಲ್ನಲ್ಲಿ ಡೈಲಾಗ್ ಹೊಡೆಯುತ್ತಲೇ ಜನರ ಚಪ್ಪಾಳೆಯನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಚಪ್ಪಾಳೆ ಗಿಟ್ಟಿಸಿಕೊಳ್ಳುವ ಡೈಲಾಗ್ಗಳಿಗೆ ಸೀಮಿತವಾಗದ ಸಿದ್ದರಾಮಯ್ಯ ಅವರು, ದೇಶದ ಮತ್ತು ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ಅಂಕಿ-ಅಂಶಗಳ ಸಮೇತ ಜನರ ಮುಂದಿಡುವ ಜತೆಗೆ, ಬಿಜೆಪಿಯ
ಆಡಳಿತದಿಂದ ಸಾಮಾನ್ಯ ಜನರಿಗೆ ಆಗಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಮೋದಿ ಅವರನ್ನು ಟೀಕಿಸುತ್ತಲೇ ಅವರ ಆಡಳಿತದಲ್ಲಿ ತಪ್ಪಿರುವ ಕೆಲವು ಅಂಶಗಳನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಜತೆಗೆ, ತಮ್ಮ ಟೀಕೆಯಿಂದ ಎಂದಿಗೂ ಹಿಂದೆ ಸರಿಯದೆ ನಿಲ್ಲುತ್ತಿದ್ದಾರೆ. ಈ ಎಲ್ಲ ಕಾರಣಗಳಿಗಾಗಿಯೇ ಸಿದ್ದರಾಮಯ್ಯ ಅವರನ್ನೇ
ಬಹುತೇಕ ಎಲ್ಲ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ. ಅವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರು
ಬಾಯಿ ಮುಚ್ಚಿಕೊಂಡು ರಾಜಕಾರಣ ಮಾಡುವ ಆಸಾಮಿಯೇ?
ಟೀಕೆಗೆ ಬದ್ಧವಾಗಿ ನಿಲ್ಲುವ ಸಿದ್ದು
ಆರ್ಎಸ್ಎಸ್, ಬೆಲೆ ಏರಿಕೆ, ನರೇಂದ್ರ ಮೋದಿ ವಿರುದ್ಧದ ಟೀಕೆಗಳ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಸ್ಪಷ್ಟ ನಿಲುವು
ಹೊಂದಿದ್ದಾರೆ. ಅವರು ಈ ವಿಚಾರಗಳಲ್ಲಿ ಮಾಡಿದ ಟೀಕೆಯ ವಿಚಾರದಲ್ಲಿ ಅವರು ಬದ್ಧತೆಯಿಂದ ನಿಲ್ಲುತ್ತಾರೆ. ಅದೇ ಮೋದಿ ಅವರ ವಿರುದ್ಧ ಮೊನ್ನೆ ಕೆಪಿಸಿಸಿ ಮಾಡಿದ ಟ್ವೀಟ್ಗೆ ಡಿಕೆಶಿ ಕ್ಷಮೆ ಕೋರಿದರು. ಸಾಮಾಜಿಕ ಜಾಲತಾಣದ ಸಿಬ್ಬಂದಿ ವಿರುದ್ಧ ಕ್ರಮ
ತೆಗೆದುಕೊಂಡರು. ಹೀಗಾಗಿ, ಉಳಿದ ಕಾಂಗ್ರೆಸ್ ನಾಯಕರು ಬಿಜೆಪಿಯ ಕೆಂಗಣ್ಣಿಗೆ ಅಷ್ಟೊಂದು ಗುರಿಯಾಗುತ್ತಿಲ್ಲ. ಸಿದ್ದರಾ ಮಯ್ಯ ಮಾತ್ರ ಸದಾ ಘರ್ಜಿಸುತ್ತಾ, ಬಿಜೆಪಿಯ ಆಡಳಿತವನ್ನು, ಆರ್ಎಸ್ಎಸ್ನ ಅಜೆಂಡಾವನ್ನು ಜರಿಯುತ್ತಲೇ ಬಂದಿ ದ್ದಾರೆ.