Friday, 22nd November 2024

ಪುನೀತ್ ನಿಧನಕ್ಕೆ ಸಚಿವ ಸಿ.ಸಿ.ಪಾಟೀಲ ಶೋಕ

ಬೆಂಗಳೂರು: ತಮ್ಮ ಎಳೆ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಶ್ರೇಷ್ಠ ಕಲಾವಿದರಾಗಿ, ಅಭಿಮಾನಿಗಳಲ್ಲಿ ವಿಶೇಷ ಛಾಪು ಮೂಡಿಸಿದ್ದ ನಮ್ಮೆಲ್ಲರ ನೆಚ್ಚಿನ “ಅಪ್ಪು” ಆಗಿದ್ದ ಶ್ರೀ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕವಾಗಿ ನಿಧನರಾಗಿರುವುದು ನಿಜಕ್ಕೂ ದುಃಖದ ಬೆಳವಣಿಗೆಯಾಗಿದೆ. ಈ ಆಘಾತಕಾರಿ ಸುದ್ದಿಯನ್ನು ನಮಗೆ ನಂಬಲು ಸಾಧ್ಯವಾಗುತ್ತಿಲ್ಲ. ಅಗಲಿದ ಈ ಚೇತನಕ್ಕೆ ನನ್ನ ಆಶ್ರುತರ್ಪಣಗಳು.

ಹುಟ್ಟಿದ ಪ್ರತಿಯೊಬ್ಬರಿಗೂ ಸಾವು ನಿಶ್ಚಿತ. ಆದರೆ ತಮ್ಮ ಅಪ್ರತಿಮ ಪ್ರತಿಭೆ ಮತ್ತು ಸಾಧನೆಗಳಿಂದ ಕೋಟ್ಯಂತರ ಕಲಾಭಿಮಾನಿಗಳ ಹೃದಯ ಗೆದ್ದ ಪುನೀತ್ ಅವರಂತಹವರನ್ನು ಕಳೆದುಕೊಂಡಾಗ ಈ ಸಾವು ಸೃಷ್ಟಿಸುವ ದುರಂತ ಮತ್ತು ಶೋಕವು ದೀರ್ಘಕಾಲ ಮನಸ್ಸನ್ನು ಘಾಸಿಗೊಳಿಸುತ್ತದೆ. ಈ ರೀತಿಯ ಅಗಾಧ ದುಃಖದಲ್ಲಿರುವ ಅವರ ಕುಟುಂಬಕ್ಕೆ ಮತ್ತು ಅಪಾರ ಅಭಿಮಾನಿಗಳಿಗೆ ನನ್ನ ಹೃದಯಾಂತರಾಳದ ಸಾಂತ್ವನಗಳು. ಅಗಲಿದ ಪುನೀತ್ ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ನಾನು ಪ್ರಾರ್ಥಿಸುತ್ತೇನೆ.

ತಮ್ಮ ತಂದೆ ಡಾ. ರಾಜ್ ಕುಮಾರ್ ಮತ್ತು ಸಹೋದರರಾದ ಶಿವ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರ ಸಾಧನೆಯ ಹಾದಿಯಲ್ಲೇ ಮುನ್ನಡೆದು, ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ್ದ ಪುನೀತ್ ಅವರು ಹಲವಾರು ಸಾಮಾಜಿಕ ಕೆಲಸ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿ ಕೊಂಡು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಪುನೀತ್ ಅವರ ಎಲ್ಲಾ ಸಾಧನೆಗಳನ್ನು ಬಣ್ಣಿಸಲು ಶಬ್ದಗಳು ಸಾಲುವುದಿಲ್ಲ.

ಒಂದೇ ಮಾತಿನಲ್ಲಿ ಹೇಳುವುದಾದರೆ ಎಲ್ಲಾ ಸದಭಿರುಚಿಯ ಪಾತ್ರಗಳಿಗೂ ಸೈ ಎನಿಸಿಕೊಂಡಿದ್ದ ಅವರು, ತಮ್ಮ ಸಹಜ ನಟನೆಯಿಂದ, ಸುಸಂಸ್ಕೃತ ನಡತೆಯಿಂದ ನಿಜಕ್ಕೂ ಅಮರರಾಗಿದ್ದಾರೆ. ಅವರಿಗೆ ಅಂತಿಮ ನಮನಗಳು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.