ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಚುರುಕಿನಿಂದ ಸಾಗಿತ್ತು. ಸಂಜೆ 7 ಗಂಟೆವರೆಗೆ ಮತದಾನ ಮಾಡಲು ಅವಕಾಶ ವಿದೆ. ನ.2ರಂದು ಮತ ಎಣಿಕೆ ನಡೆಯಲಿದೆ.
ಮತಗಟ್ಟೆಯಲ್ಲಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸಿ ಕೋವಿಡ್ ನಿಯಮ ಗಳನ್ನು ಪಾಲಿಸಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ಕಂಡುಬಂತು. ಹಲವೆಡೆ ಮತಯಂತ್ರಕ್ಕೆ ಪೂಜೆ ಸಲ್ಲಿಸಿ ಮತದಾನ ಪ್ರಾರಂಭ ಮಾಡಿದ್ದು ವಿಶೇಷವಾಗಿತ್ತು.
ಸಿಂಧಗಿ ಕ್ಷೇತ್ರದ ಉಪಚುನಾವಣೆ ಮತದಾನ ಬಿರುಸಿನಿಂದ ಸಾಗಿದ್ದು, ತಾಲ್ಲೂಕಿನ ಆಲಮೇಲದ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಬೂಸನೂರು ಪರ ಮಹಿಳೆ ಯರು ಮತಗಟ್ಟೆಗೆ ಪೂಜೆ ಸಲ್ಲಿಸಿದರು. ರಮೇಶ್ ಬೂಸನೂರು ಸೋದರಿ ಪ್ರಭಾವತಿ ಅವರು ಪೂಜೆ ಸಲ್ಲಿಸಿ ಮತ ಚಲಾಯಿಸಿದರು. ಮುಸ್ಲಿಂ ಹಾಗೂ ಹಿಂದೂ ಮಹಿಳೆಯರು ಒಟ್ಟಾಗಿ ಪೂಜೆ ಸಲ್ಲಿಸಿ ಮತದಾನದಲ್ಲಿ ಪಾಲ್ಗೊಂಡರು.
ಕ್ಷೇತ್ರದಲ್ಲಿ ಒಟ್ಟು 2,34,584 ಮತದಾರರಿದ್ದು, 1,20,884 ಪುರುಷರು, 1,13,561 ಮಹಿಳೆಯರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಆರು ಅಭ್ಯರ್ಥಿಗಳು ಕಣದಲ್ಲಿದ್ದು, 101 ಗ್ರಾಮಗಳ 297 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, 57 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 1302 ಚುನಾವಣಾ ಸಿಬ್ಬಂದಿ, 980 ಭದ್ರತಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದಲ್ಲೂ ಕೂಡ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಮತದಾರರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ತಾಲ್ಲೂಕಿನ ಕೂಡಲ ಗ್ರಾಮದ ಮತಕೇಂದ್ರದಲ್ಲಿ ಗುರುನಂಜೇಶ್ವರ ಮಠದ ಮಹೇಶ ಸ್ವಾಮೀಜಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿಯಾದ ಶಿವರಾಜ್ ಸಜ್ಜನ್, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಜೆಡಿಎಸ್ ಅಭ್ಯರ್ಥಿ ಪ್ರಬಲ ಸ್ಪರ್ಧೆ ನೀಡಿದ್ದಾರೆ.