Thursday, 12th December 2024

ಕನ್ನಡ ನಾಡು-ನುಡಿಗಾಗಿ ಮಿಡಿದ ಹೃದಯಗಳು

ಯಶೋ ಬೆಳಗು

ಯಶೋಮತಿ ಬೆಳಗೆರೆ

yashomathy@gmail.com

ನಾಟಕವೇ ಜೀವಾಳವಾಗಿದ್ದ ಶಂಕರ್ ನಾಗ್‌ರ ಕನಸನ್ನು ಅವರ ಪತ್ನಿ ಅರುಂಧತಿ ನಾಗ್ ರಂಗ ಶಂಕರವನ್ನು ಕಟ್ಟಿ ನಿಲ್ಲಿಸಿದ್ದಾರೆ. ಮುಂದೆ ಪುನೀತ್‌ರ ಪತ್ನಿ ಅಶ್ವಿನಿ ಕೂಡ ಅವರ ಕನಸುಗಳಿಗೆ ಜೀವ ಕೊಡುವಂತಾಗಲಿ. ಅದರ ಮೂಲಕ ನಮ್ಮ ನೆಚ್ಚಿನ ನಟರು ನಮ್ಮೊಂದಿಗೆ ಸದಾ ಜೀವಂತವಾಗಿರುವಂತಾಗಲಿ.

ಸಾವೆನ್ನುವುದು ಒಂದೇ ಸಲಕ್ಕೆ ಬಂದು ಅಪ್ಪಳಿಸಿ ಹೋಗುವಂತಹ ಚಂಡಮಾರುತ ದಂಥದ್ದು. ಅಗಲಿಕೆಯೆಂಬುದು ಮನದ ಸಾಗರದಲ್ಲಿ ಅಲೆ ಅಲೆಯಾಗಿ ನಿರಂತರವಾಗಿ ಕದಲುತ್ತಲೇ ಇರುವ ಶಾಶ್ವತ ನೋವು. ಅದಕ್ಕೆ ಪರ್ಯಾಯವಾಗಲೀ ಪರಿಹಾರ ವಾಗಲೀ ಇಲ್ಲ. ಹುಟ್ಟು ಒಂದೇ ವಿಧ. ಸಾವು ನಾನಾ ವಿಧ ಅನ್ನುತ್ತಿದ್ದ ಕಾಲವಿತ್ತು. ಆದರೆ ತಂತ್ರಜ್ಞಾನ ಬೆಳೆದಂತೆಲ್ಲ ಈಗ ಹುಟ್ಟು ನಾನಾ ವಿಧ. ಹಾಗೆಯೇ ಸಾವು ಕೂಡ!

ಸಾವಿನ ನಂತರ ದಿಢೀರನೆ ಉದ್ಭವವಾಗುವ ಖಾಲಿತನ, ಶೋಕ, ಸಾಂತ್ವನದ ಮಾತು ಗಳೆಲ್ಲದರ ನಡುವೆ ಕೊನೆಯ ಸಮಯದಲ್ಲಿ ಅವರೊಡನೆ ಕಳೆದ ಘಳಿಗೆಗಳು, ಹೀಗಾಗು ತ್ತದೆ ಅನ್ನುವ ಕಲ್ಪನೆಯಿದ್ದಿದ್ದರೆ ಏನೇನೆಲ್ಲ ಮಾಡಬಹುದಿತ್ತು ಅನ್ನುವ ಆಲೋಚನೆ ಗಳು, ಕಣ್ಣೆದುರಿಗೇ ಜಾರಿ ಹೋದ ಜೀವ, ಎಲ್ಲ ನೋಡುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕತೆ, ಮುಂದೆ ಅವರಿಲ್ಲದೇ ಇರುವ ದಿನಗಳನ್ನು ನೆನೆದು ಕಣ್ಣೀರಾಗುವಿಕೆ, ಅವರ ನಗು, ಧೈರ್ಯ, ಸಾಹಸ, ತುಂಬುತ್ತಿದ್ದ ಭರವಸೆ, ಮಾಡುತ್ತಿದ್ದ ಸಹಾಯ, ನೀಡಿದ್ದ ಆಶ್ರಯ, ತೆಗೆದುಕೊಳ್ಳುತ್ತಿದ್ದ ನಿರ್ಧಾರ, ಕೆಲಸದೆಡೆಗಿನ ಶ್ರದ್ಧೆ, ಹಿರಿಯರಿಗೆ ತೋರುತ್ತಿದ್ದ ಗೌರವ, ಸೌಜನ್ಯದ ಮಾತು ಗಳು, ಎಲ್ಲರೊಂದಿಗೆ ವಿನಯದಿಂದ ಬೆರೆಯುತ್ತಿದ್ದ ರೀತಿ ಎಲ್ಲವೂ ಪ್ರತಿ ದಿನ, ಪ್ರತಿ ಕ್ಷಣ ಕಣ್ಣಮುಂದೆ ಹಾದು ಹೋಗುತ್ತಲೇ ಇರುತ್ತದೆ ಸಂಕಟದ ಛಾಯೆಯಂತೆ.

ಕೆಲವರು ಬದುಕಿದ್ದೂ ಸತ್ತಂತಿರುತ್ತಾರೆ. ಮತ್ತೆ ಕೆಲವರು ಸತ್ತ ನಂತರವೂ ಬದುಕಿರುತ್ತಾರೆ ಎಲ್ಲರ ಮನಸುಗಳಲ್ಲಿ. ಅಂಥವರಲ್ಲಿ ಕಳೆದ ವಾರವಷ್ಟೇ ಅಕಾಲಿಕವಾಗಿ ಕೊನೆಯುಸಿರೆಳೆದ ನಮ್ಮ ಕನ್ನಡ ನಾಡಿನ ವರನಟನ ರಾಜಕುಮಾರನೂ ಒಬ್ಬ! ಎಲ್ಲರ ಪ್ರೀತಿಯ ಅಪ್ಪು, ಅಭಿಮಾನಿಗಳ ಪವರ್ ಸ್ಟಾರ್. ಸಣ್ಣ ವಯಸ್ಸಿನಿಂದಲೂ ಅಮ್ಮನೊಂದಿಗೇ ಹೆಚ್ಚು ಬೆಳೆದ ಪುನೀತ್‌ಗೆ ಅಮ್ಮ ನೆಂದರೆ ಅಚ್ಚುಮೆಚ್ಚು. ಅಮ್ಮನ ನೋವು, ನಲಿವು, ಬವಣೆಗಳಿಗೆ ಸಾಕ್ಷಿಯಾದವರು. ಹೀಗಾಗಿ ಪ್ರತಿ ಮಾತಾಡುವಾಗಲೂ ಅಮ್ಮ ನನ್ನು ನೆನೆದು ಅವರಂತೆ ಎಲ್ಲ ಹೆಣ್ಣುಮಕ್ಕಳೂ ಗಟ್ಟಿಗಿತ್ತಿಯರಾಗಿರಬೇಕೆಂದು ಹೇಳುವುದನ್ನು ಮರೆಯುತ್ತಿರಲಿಲ್ಲ. ತನ್ನ ಹತ್ತನೇ ವಯಸ್ಸಿಗೇ ರಾಷ್ಟ್ರಪ್ರಶಸ್ತಿ ಪಡೆದುಕೊಂಡ ಹೆಮ್ಮೆಯ ಬಾಲ ನಟ.

ಅಪ್ಪನೆಂದರೆ ಪ್ರೀತಿ ತುಂಬಿದ ಗೌರವ. ಅವರ ನಟನೆ, ಸರಳತೆ, ಅವರಿಗಿದ್ದ ಅಭಿಮಾನಿ ಬಳಗವನ್ನೆಲ್ಲ ಬಹಳ ಹತ್ತಿರದಿಂದ ನೋಡುತ್ತಲೇ ಬೆಳೆದ ಹುಡುಗ ತನಗೇ ಗೊತ್ತಿಲ್ಲದೆ ಅವರಲ್ಲಿದ್ದ ಅಪರೂಪದ ಗುಣ ಗಳನ್ನೆಲ್ಲ ಮೈಗೂಡಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಬೆಳೆಯುತ್ತಾ ಪ್ರಸಿದ್ಧಿಗೆ ಬಂದಿದ್ದು ಒಂದು ಇತಿಹಾಸವೇ. ಸಾಮಾನ್ಯ ಮಕ್ಕಳಿಗಿಂತ ಎರಡರಷ್ಟು ಹೆಚ್ಚಿನ ಮಟ್ಟದ ಸವಾಲು ಸೆಲೆಬ್ರಿಟಿಗಳ ಮಕ್ಕಳಿಗಿರುತ್ತದೆ. ಏಕೆಂದರೆ ಪ್ರತಿಯೊಬ್ಬರೂ ಅವರ ಮೇಲೆ ಅಪಾರವಾದ ನಿರೀಕ್ಷೆಯನ್ನಿಟ್ಟುಕೊಂಡಿರು ತ್ತಾರೆ. ಅವರಿಗೆ ಸಿಗುವ ಹೊಗಳಿಕೆಯ ಎರಡರಷ್ಟಿರುತ್ತದೆ ನಿಂದಕರ ಕಟು ನುಡಿಗಳು.

ಬಣ್ಣ, ಎತ್ತರ, ಕಂಚಿನ ದನಿ ಇಲ್ಲದಿದ್ದರೂ ಉತ್ತಮ ಮೈಕಟ್ಟನ್ನು ಹೊಂದಿ ಆಜಾನು ಬಾಹುವಾಗಿದ್ದ ಪುನೀತ್‌ರ ಡಾನ್ಸಿಗೆ ಮನಸೋಲದವರೇ ಇಲ್ಲ. ಪ್ರತಿ ಸಿನಿಮಾದಲ್ಲೂ ಸಮಾಜಕ್ಕೆ ಸಂದೇಶವಿದ್ದೇ ಇರುತ್ತಿತ್ತು. ಕಿರುತೆರೆಯಲ್ಲಿ ಮೂಡಿಬರುತ್ತಿದ್ದ ಕನ್ನಡದ ಕೋಟ್ಯಧಿಪತಿ ಎಂಬ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಡುತ್ತಿದ್ದರು. ಇತ್ತೀಚೆಗೆ ತಮ್ಮದೇ ಆದ ‘PRK ಪ್ರೊಡಕ್ಷನ್’ ಸಂಸ್ಥೆಯನ್ನು ಹುಟ್ಟುಹಾಕಿ ನಾಲ್ಕಾರು ಸಿನಿಮಾಗಳನ್ನೂ ಸಹ ನಿರ್ಮಿಸಿದ್ದರು.

OTT plat form ನಲ್ಲೂ ಕೂಡ ಅವರ ಚಿತ್ರಗಳು ಪ್ರದರ್ಶನ ಕಂಡು ಅನ್ಯಭಾಷಾ ಚಿತ್ರಗಳ ನಡುವೆ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದವು. ಚಿತ್ರರಂಗದ ವಿವಿಧ ಆಯಾಮದಲ್ಲಿ ತೊಡಗಿಸಿಕೊಂಡು ಸಾಕಷ್ಟು ಜನರಿಗೆ ಉದ್ಯೋಗವನ್ನೂ ಸೃಷ್ಟಿಸುತ್ತಾ
ಕಲ್ಪವೃಕ್ಷವಾಗಿದ್ದರು. ಗೋಶಾಲೆ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಮಾಡಿದ ಸಹಾಯಕ್ಕೆ ಲೆಕ್ಕವೇ ಇಲ್ಲ. ಸದಾ ಉತ್ಸಾಹದ ಚಿಲುಮೆಯಂತಿದ್ದ ಚೈತನ್ಯ ತುಂಬಿದ ಯುವಕ ಅಚಾನಕ್ಕಾಗಿ ಹೀಗೆ ಅಕ್ಟೋಬರ್ 29ರ ಶುಕ್ರವಾರದಂದು ತಮ್ಮ 46ನೇ ವಯಸ್ಸಿಗೇ ಇಲ್ಲವಾಗಿ ಹೋಗುತ್ತಾರೆ ಅನ್ನುವುದು ಕನಸು ಮನಸಿನಲ್ಲಿಯೂ ಎಣಿಸದ ಕನ್ನಡ ಜನತೆಗೆ ದಿಗ್ಭ್ರಮೆಯನ್ನುಂಟು ಮಾಡಿತ್ತು.

ತಮ್ಮ ಪ್ರೀತಿಪಾತ್ರರು ಇಲ್ಲವೆನ್ನುವ ಆಘಾತ ತಡೆಯಲು ಅಸಾಧ್ಯವೆನ್ನುವುದು ನಿಜವೇ ಆದರೂ ತಾನಾಗೇ ಬಂದ ಬದುಕು ತಾನಾಗೇ ಕೊನೆಯಾಗುವವರೆಗೂ ಕಾಯುವ ತಾಳ್ಮೆ ಹಾಗೂ ಧೃಡ ಮನಸ್ಸನ್ನು ಬೆಳೆಸಿಕೊಳ್ಳುವುದು ಅವರ ಅಭಿಮಾನಿಗಳಾಗಿ ತೋರುವ ಗೌರವ. ಅವರ ಕನಸುಗಳನ್ನೆಲ್ಲ ಒಂದೊಂದಾಗಿ ನೆರವೇರಿಸುತ್ತಾ ಬರಲಿ. ಅವರಂತೆ ಯೇ ಕನ್ನಡ ನಾಡು-ನುಡಿಗೆ ಹೆಮ್ಮೆ ತರುವಂತಹ ಕೆಲಸಗಳನ್ನು ಮಾಡಿ ಎಲ್ಲರಿಗೂ ಆದರ್ಶವಾಗಿ ಹೊರಹೊಮ್ಮುತ್ತಾ ಪ್ರತಿಯೊಬ್ಬ ಅಭಿಮಾನಿಯ ಎದೆ ಯಲ್ಲೂ ಶಾಶ್ವತವಾಗಿರುವಂತಾಗಲಿ ರಾಜಕುಮಾರನ ರಾಜಕುಮಾರ!

ಮೂವತ್ತು ವರ್ಷಗಳ ಹಿಂದೆ ಇಂಥದ್ದೇ 29ರ ರಾತ್ರಿ ಕಳೆದು ಬೆಳಗಿನ ಜಾವ ಮೂಡುವ ಹೊತ್ತಿನಲ್ಲಿ ಮತ್ತೊಬ್ಬ ಮಹಾನ್ ಕನಸುಗಾರನನ್ನು ಕಳೆದುಕೊಂಡು ಕಣ್ಣೀರ ಶೋಕದಲ್ಲಿ ಮುಳುಗಿಹೋಗಿತ್ತು ಕನ್ನಡ ನಾಡು. ನವೆಂಬರ್ 9, 1954ರಂದು ಹುಟ್ಟಿದ ನಾಗರಕಟ್ಟೆ ಶಂಕರ ತಮ್ಮ ಮೂವತ್ತೈದನೇ ವಯಸ್ಸಿಗೇ ಅಂತಹ ಧಾರುಣವಾದ ರಸ್ತೆ ಅಪಘಾತದಲ್ಲಿ ಕೊನೆಯು ಸಿರೆಳೆದಾಗ ಅದನ್ನು ಒಪ್ಪಿಕೊಳ್ಳಲೇ ಸಿದ್ಧರಿರಲಿಲ್ಲ ಕನ್ನಡದ ಅಭಿಮಾನಿಗಳು.

ಉತ್ತರ ಕನ್ನಡ ಜಿಲ್ಲೆ, ಹೊನ್ನಾವರ ತಾಲೂಕಿನ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಆನಂದಿ ಹಾಗೂ ಸದಾನಂದ ನಾಗರಕಟ್ಟೆ ದಂಪತಿಗೆ ಜನಿಸಿದ ಶ್ಯಾಮಲ, ಅನಂತ ಹಾಗೂ ಶಂಕರ ಎಂಬ ಮೂರು ಮಕ್ಕಳಲ್ಲಿ ಅನಂತ ನಾಗರಕಟ್ಟೆ ವಿದ್ಯಾಭ್ಯಾಸಕ್ಕೆಂದು ಮುಂಬೈಗೆ ತನ್ನ ಚಿಕ್ಕಪ್ಪನ ಮನೆಗೆ ತೆರಳಿದ ಕೆಲ ವರ್ಷಗಳ ನಂತರ ತನ್ನಣ್ಣನನ್ನೇ ಹಿಂಬಾಲಿಸುತ್ತಾರೆ ಶಂಕರ. ಅಲ್ಲಿ ಮರಾಠಿ ಭಾಷೆಯೂ ಕರಗತವಾಗುತ್ತದೆ. ಹಾಗೆಯೇ ನಾಟಕಗಳಲ್ಲಿ ತೊಡಗಿಕೊಳ್ಳುವ ಅವಕಾಶ ಒದಗಿ ಬರುತ್ತದೆ. ಅಲ್ಲಿ ನಾಗರಕಟ್ಟೆ
ನಾಗ್ ಆಗಿ ಚುಟುಕಾಗುತ್ತದೆ. ಸದಾ ಆಟ-ಪಾಠ- ಓಟಗಳಲ್ಲಿ ಮುಂದಾಗಿದ್ದ ಶಂಕರ್, ನಾಟಕಗಳಲ್ಲೂ, ಸಂಭಾಷಣೆಗಳಲ್ಲೂ ಸಹ ಸದಾ ಮುಂದು.

ಗಿರೀಶ್ ಕಾರ್ನಾಡ್ ನಿರ್ದೇಶನದ ಒಂದಾನೊಂದು ಕಾಲದಲ್ಲಿ ಸಿನೆಮಾದಲ್ಲಿ ಪುಟ್ಟ ಪಾತ್ರವೊಂದರ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪದಾರ್ಪಣೆ ಮಾಡಿದ ಶಂಕರ್‌ನಾಗ್ ಮುಂದೆ ತಮ್ಮದೇ ನಿರ್ದೇಶನದಲ್ಲಿ ಮಿಂಚಿನ ಓಟ ಚಿತ್ರದಲ್ಲಿ ಅಣ್ಣ ಅನಂತ ನಾಗ್ ರೊಂದಿಗೆ ನಟಿಸುತ್ತಾರೆ. ಆ ಚಿತ್ರಕ್ಕೆ ಅವರಿಗೆ ಬೆಸ್ಟ್ ಡೈರೆಕ್ಟರ್ ಹಾಗೂ ಬೆಸ್ಟ್ ಫಿಲ್ಮ್ ಅವಾರ್ಡುಗಳು ಬರುತ್ತದೆ. ಮುಂದೆ ಅರ್.ಕೆ. ನಾರಾಯಣ್‌ರ ಕೃತಿಯನ್ನು ಆಧರಿಸಿ ಮಾಲ್ಗುಡಿ ಡೇಸ್ ಅನ್ನು ದೂರದರ್ಶನಕ್ಕಾಗಿ ನಿರ್ದೇಶಿಸುತ್ತಾರೆ.

ಅದರ ಮೂಲಕ ಹಲವಾರು ಉತ್ತಮ ಕಲಾವಿದರನ್ನು ಚಿತ್ರಜಗತ್ತಿಗೆ ಪರಿಚಯಿಸುತ್ತಾರೆ. ನೋಡಿ ಸ್ವಾಮಿ ನಾವಿರೋದೇ ಹೀಗೆ ಎಂದು ಹೇಳುತ್ತಾ, ರೊಮ್ಯಾಂಟಿಕ್ ಹಿಟ್ ಗೀತೆಗಳನ್ನು ಕೊಟ್ಟ ಗೀತ ಚಿತ್ರದ ಸಂಜು ಆಗಿ ಎಲ್ಲರ ಮನಗೆದ್ದು, ಯಾವುದೇ ಮಾರ್ಷಲ್ ಆರ್ಟ್ ಕಲಿಯದಿದ್ದರೂ ಕರಾಟೆ ಕಿಂಗ್ ಅನ್ನುವ ಬಿರುದನ್ನು ಹೊಂದಿ, ಆಟೋ ರಾಜ ನಾಗಿ ಇಂದಿಗೂ ಎಲ್ಲ
ಆಟೋ ಚಾಲಕರ ಕಣ್ಮಣಿಯಾಗಿದ್ದಾರೆ. ಆಕ್ಸಿಡೆಂಟ್ ಚಿತ್ರ ನಿರ್ದೇಶನಕ್ಕೆ ರಾಷ್ಟ್ರಪ್ರಶಸ್ತಿ ಗಳಿಸಿದ ಶಂಕರ್‌ನಾಗ್ ಮುಂದೆ ಭೀಕರ ವಾದ ಆಕ್ಸಿಡೆಂಟಿನಲ್ಲೇ ಬದುಕಿನ ಅಂತ್ಯವನ್ನು ಕಾಣುತ್ತಾರೆ ಎಂಬುದನ್ನು ಯಾರು ತಿಳಿದಿದ್ದರು? ಸತ್ತ ಮೇಲೆ ಮಲಗೋದು ಇದ್ದೇ ಇದೆ.

ಇದ್ದಾಗ ಸೋಮಾರಿಯಾಗದೆ ಎದ್ದು ಕೆಲಸ ಮಾಡ್ಬೇಕು ಅನ್ನುವ ಮಾತನ್ನು ಹೇಳುತ್ತಾ ಅದೆಷ್ಟು ಜನರಿಗೆ ಚಿತ್ರರಂಗವನ್ನು
ಪರಿಚಯಿಸಿಸುತ್ತಾ, ಜತೆಗೆ ದುಡಿಯುವುದನ್ನು, ಬೆಳೆಯುವುದನ್ನು ಕಲಿಸಿದರು. ಅತಿ ವೇಗವಾಗಿ ಡ್ರೈವ್ ಮಾಡುತ್ತಿದ್ದ ಶಂಕರ್ ಅಷ್ಟೇ ವೇಗವಾಗಿ ರಿವರ್ಸ್ ಗೇರ್ ನಲ್ಲೂ ಡ್ರೈವ್ ಮಾಡುವುದರಲ್ಲಿ ಪರಿಣಿತರಾಗಿದ್ದರು. ಸಂಕೇತ್ ಸ್ಟುಡಿಯೋ ಜತೆಗೆ ಅವರದೇ ಫಾರ್ಮ್ ಹೌಸ್ ನಲ್ಲಿ ಕಂಟ್ರಿ ಕ್ಲಬ್ ಎಂಬ ಅದ್ಭುತವಾದ conceptನ ಕನಸು ಕಂಡಿದ್ದರು. ಅದಕ್ಕಾಗಿ ಕೇರಳದಿಂದ ವಿಶೇಷ ಕಟ್ಟಿಗೆ, ಹೆಂಚುಗಳನ್ನು ತರಿಸಿದ್ದರು.

ಕ್ಲಬ್ಬಿಗೆ ಬಂದಾಕ್ಷಣ ಮಾದರಿ ಹಳ್ಳಿಗೆ ಬಂದಂತಿರಬೇಕು. ಆದ್ದರಿಂದಲೇ ಅದಕ್ಕೆ ಕಂಟ್ರಿ ಕ್ಲಬ್ ಎಂಬ ಹೆಸರನ್ನು ಆಯ್ಕೆ ಮಾಡ ಲಾಗಿತ್ತು. ಕ್ಲಬ್ಬು ಕೇವಲ ಕ್ಲಬ್ಬಾಗದೇ ಸಾಂಸ್ಕೃತಿಕ ಚಟುವಟಿಕೆಗಳ ಗೂಡಾಗಬೇಕೆಂಬುದು ಶಂಕರ್‌ರ ಹಂಬಲವಾಗಿತ್ತು. ವೃತ್ತಿ ನಿರತರಿಗೆ ವೀಕೆಂಡ್ ರಿಲ್ಯಾಕ್ಸೇಷನ್‌ಗಾಗಿ ಸಣ್ಣ ಕಾಟೇಜುಗಳು, ಚಿಲ್ಡ್ರನ್ ಕಾರ್ನರ್, ಒಂದು ಚಿಕ್ಕ ಆಸ್ಪತ್ರೆ. ಆ ಪುಟ್ಟ ಊರಿನ ಜನರಿಗೆ ದಿನದಲ್ಲಿ ಎರಡು ಗಂಟೆ ಉಚಿತ ಚಿಕಿತ್ಸೆ, ಕ್ಲಬ್ಬಿನ ಕಾರ್ಮಿಕರಿಗೆ ವಸತಿ ಯೋಜನೆ, ಅವರ ಮಕ್ಕಳಿಗೋಸ್ಕರ ಎರಡು ಮಿನಿ ಬಸ್ಸುಗಳನ್ನು ಖರೀದಿಸುವ ಯೋಜನೆಯನ್ನು ಹೊಂದಿತ್ತು.

ಎಂಭತ್ತರ ದಶಕದಲ್ಲೇ ನಂದಿಬೆಟ್ಟದ ಕೆಳಗೆ ಕೆನಡಾದಲ್ಲಿರುವಂತೆ ಅಮ್ಯೂಸ್‌ಮೆಂಟ್ ಪಾರ್ಕು, ಆಟಗಳು, ಆಟಿಕೆಗಳು, ಗಾರ್ಡನ್ನು, ತಿಂಡಿ-ತಿನಿಸುಗಳ ಅಂಗಡಿಗಳು ಹೀಗೆ ಸಾವಿರಾರು ಜನರು ತಮ್ಮ ಕುಟುಂಬದೊಡನೆ ಬಂದು ಹೋಗುವಂತಹ ಪಿಕ್ನಿಕ್ ಸ್ಪಾಟ್ ಅನ್ನು ನಿರ್ಮಿಸುವ ಕನಸಿತ್ತು. ಅದರ ಮೆರುಗನ್ನು ಹೆಚ್ಚಿಸಲು ನಂದಿ ಬೆಟ್ಟಕ್ಕೆ ಹೋಗಲು ಒಂದು ರೋಪ್ ವೇಯನ್ನು ನಿರ್ಮಿಸಿ, ಅದರ ಪಕ್ಕದಲ್ಲಿರುವ ಬೆಟ್ಟದ ಮೇಲೆ ರಸ್ತೆಗಳನ್ನು ಮಾಡಿ ಪಂಚತಾರಾ ಹೋಟೇಲನ್ನು ನಿರ್ಮಿಸಿದರೆ ಕರ್ನಾಟಕದ ಕೀರ್ತಿ ವಿದೇಶಗಳಿಗೂ ಹರಡುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳುತ್ತಾ, ಜರ್ಮನಿಯ ಇಟ್ಟಿಗೆ ಮಾಡುವ ಟೆಕ್ನಿಕ್ಕನ್ನು ಅಳವಡಿಸಿಕೊಂಡು ಕಡಿಮೆ ದರದಲ್ಲಿ ಮಧ್ಯಮವರ್ಗದ ಜನರಿಗೆ ನಿಲುಕುವಂತೆ ಮಾಡಬೇಕು ಹಾಗೇ ಆಸ್ಟ್ರಿಯನ್
ಟೆಕ್ನಾಲಜಿ ಬಳಸಿ ಗಾಳಿ, ಮಳೆ, ಭೂಕಂಪಗಳನ್ನು ಪ್ರತಿರೋಧಿಸುವ ಶಕ್ತಿಯುಳ್ಳ, ಸುಮಾರು ಐವತ್ತು ವರ್ಷ ಬಾಳಿಕೆ ಬರುವಂಥ pre fabricated ಶೀಟುಗಳನ್ನು ಬಳಸಿ ಒಂದು ತಿಂಗಳಲ್ಲಿ ಕನಿಷ್ಠ ಒಂದು ಸಾವಿರ ಮನೆಗಳನ್ನು ಕೇವಲ ನಲವತ್ತೈದು ಸಾವಿರ ರುಪಾಯಿಗಳಲ್ಲಿ ನಿರ್ಮಿಸಬಹುದು.

ಇದರಿಂದ ಕೊಳಚೆ ಪ್ರದೇಶದಲ್ಲಿರುವ ಜನರಿಗೆ, ಬಡವರಿಗೆ, ಕಡು ಬಡವರಿಗೆ ಬಹಳ ಉಪಯುಕ್ತವಾಗುತ್ತದೆ ಹಾಗೆಯೇ ಕೊಳಚೆ
ಪ್ರದೇಶಗಳ ನಿರ್ಮೂಲನಕ್ಕೂ ದಾರಿಯಾಗುತ್ತದೆ. ಇದೆಲ್ಲಕ್ಕೂ ಕಳಸಪ್ರಾಯದಂತೆ ಇಂದು ಬೆಂಗಳೂರಿನಲ್ಲಿ ನಾವೆಲ್ಲರೂ ಬಳಸುತ್ತಿರುವ ಟ್ರಾಫಿಕ್ ಫ್ರೀ ಮೆಟ್ರೋ ರೈಲನ್ನು ಜಾರಿಗೆ ತರುವ ಯೋಜನೆ ಕೂಡ ಮೂವತ್ತು ವರ್ಷಗಳಷ್ಟು ಹಿಂದೆಯೇ ಹೊಂದಿದ್ದರು ಎನ್ನುವ ಸಂಗತಿ ನಿಜಕ್ಕೂ ವಿಸ್ಮಯವೇ ಸರಿ.

ಬಿಜಾಪುರದ ಲೋಕಾಪುರದಲ್ಲಿ ನಡೆಯಲಿದ್ದ ಚಿತ್ರೀಕರಣಕ್ಕೆ 1990ರ ಸೆಪ್ಟಂಬರ್ 29 ಮಧ್ಯರಾತ್ರಿಯೇ ತಮ್ಮ ಆರು ವರ್ಷದ ಮಗಳು ಹಾಗೂ ಪತ್ನಿಯೊಂದಿಗೆ ಹೊರಟುಬಿಟ್ಟಿದ್ದಾರೆ. ಚಿತ್ರದುರ್ಗ ದಾಟಿ ದಾವಣಗೆರೆಗೆ ತಲುಪುವ ನಡುವೆ ಟೇಲ್ ಲ್ಯಾಂಪ್
ಇಲ್ಲದೇ ಸಾಗುತ್ತಿದ್ದ ಟ್ರಕ್ ಒಂದರ ಹಿಂಬದಿಗೆ ರಭಸವಾಗಿ ಚಲಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಡ್ರೈವರ್ ಹಾಗೂ ಶಂಕರ್ ನಾಗ್ ಕೊನೆಯುಸಿರೆಳೆದಿದ್ದಾರೆ.

ವಿಧಿಯಾಟವೇನು ಬಲ್ಲವರು ಯಾರು? ಮುಂದೇನು ಎಂದು ಹೇಳುವರು ಯಾರು?