ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
journocate@gmail.com
ಅಯ್ಯಂಗಾರರ ಕ್ರಮಬದ್ಧ ಜೀವನಶೈಲಿಯನ್ನು ನಾನು ಅಳವಡಿಸಿಕೊಂಡಿಲ್ಲ. ಆದರೂ, ದೀರ್ಘಾಯುಷಿ ಆಗುವುದಾದರೆ, ಖುಷ್ವಂತ್ ರೀತಿ ಬದುಕಿ ದೊರಕಬಹುದಾದ ಮತ್ತೊಂದು ನಾಲ್ಕು ವರ್ಷ ನನಗೆ ಬೇಡ.
ನಿಮ್ಮ ಅದೃಷ್ಟ ತೀರಾ ಕೈಕೊಡದೆ, ಇದ್ದುದರಲ್ಲಿ ಪರವಾಗಿಲ್ಲಪ್ಪ ಅನ್ನುವಂಥ ಕಂಟ್ರಾ ಕ್ಟರ್ ಸಿಕ್ಕಿದರೆ, ಒಂದು ಮನೆ ಕಟ್ಟಲು ಒಂದೋ ಎರಡೋ ವರ್ಷ ಬೇಕಾಗುತ್ತೆ. ಮನೆಕಟ್ಟಿ (ಇನ್ನೂ ಬದುಕಿದ್ದರೆ) ನೋಡು ಎಂಬ ನಾಣ್ಣುಡಿಯೇ ಇಲ್ಲವೇ. ಆಯುಸ್ಸಿನ ಗಣನೀಯ ಭಾಗ ವನ್ನು ಕಸಿದು ನಿತ್ರಾಣ ಮಾಡುವ ಮನೆಕಟ್ಟುವಿಕೆಯನ್ನು ಮಗು ಸಮಸ್ಯೆಯೇ ಅಲ್ಲವೆಂಬಂತೆ ಅದರ ಚಿತ್ರ ಬಿಡಿಸಿ ತೋರಿಸುತ್ತದೆ.
ಮಕ್ಕಳು ಬರೆಯುವ ಚಿತ್ರಗಳೇ ಹಾಗೆ. ಎಂಟೋ ಹತ್ತು ಗೆರೆಗಳಲ್ಲಿ ಮನೆಯ ಚಿತ್ರ ರೆಡಿ. ಭ್ರಮಾಲೋಕದಲ್ಲಿ ವಿಹರಿಸುವಾಗ ಎಲ್ಲರೂ ಬಯಸುವ ಬೆಟ್ಟದ ಮೇಲಿನ ಮನೆ, ಪಕ್ಕದಲ್ಲಿ ನಾಲ್ಕಾರು ಮರ, ಹಚ್ಚ ಹಸಿರು, ಒಂದು ಝರಿ, ನೀಲಿ ಆಕಾಶ, ಒಟ್ಟಿನಲ್ಲಿ ಸುಂದರ ಜಗತ್ತಿನ ಒಂದು ತುಂಡನ್ನು ನಿಮ್ಮ ಮುಂದಿಡಲು ಮಗು ತೆಗೆದುಕೊಳ್ಳುವ ಸಮಯ 40 ನಿಮಿಷ. ಮಗುವಾಗಿ ನಾವು, ಬಾಲ ಕೃಷ್ಣನಂತೆ, ಬಾಯಲ್ಲ ಲ್ಲದಿದ್ದರೂ ಇಷ್ಟಗಲ ಹಾಳೆಯಲ್ಲಿ ಪ್ರಪಂಚವನ್ನು ಕುಗ್ಗಿಸಿಬಿಡುತ್ತೇವೆ.
ಬಾಲ್ಯದ ಗ್ರಹಿಕಾ ಸಾಮರ್ಥ್ಯದ ಪರಿಮಿತಿ ಹಿಗ್ಗುವುದಿಲ್ಲ, ಕುಗ್ಗುತ್ತದೆ. ಬಾಹ್ಯದ ಎಲ್ಲ ಸಂಗತಿಗಳು ಅವುಗಳ ಅಣುರೂಪ್ಯ ಸಾರಾಂಶಗಳಾಗಿ ನಮ್ಮನ್ನು ಪ್ರವೇಶಿಸುವುತ್ತದೆ. ಬ್ರಹ್ಮಾಂಡದ ಮಾತು ಬೇಡ, ಭರತವರ್ಷದ ಸಹಸ್ರಾರು ಕೋಟಿ ಕೌತುಕಗಳು ಸಾವಿರ ಜನ್ಮದಲ್ಲೂ ನಮ್ಮ ಅರಿವಿಗೆ ನಿಲುಕುವುದಿಲ್ಲ. ಅದು ಬಿಡಿ, ನಮ್ಮ ದೇಶದ ಭೂಪಟವನ್ನೂ ನಾವು ನೆಟ್ಟಗೆ ಬಿಡಿಸಲಾರೆವು. ಅದೂ ಬೇಡ, ನಮ್ಮ ರಸ್ತೆಯ ನಾಲ್ಕು ಮರಗಳ ಪ್ರಭೇದವೇ ನಮಗೆ ತಿಳಿದಿರುವುದಿಲ್ಲ. ನೆರೆಹೊರೆಯವರ ಪರಿಚಯ ಬೇಡ, ನಮ್ಮ ಕುಟುಂಬ ವರ್ಗದವರ ಪರಿಚ ಯವೂ ಬೇಡ, ನಾವೇ ನಮಗೆ ತಿಳಿದಿಲ್ಲ. ದಾಸರ ನಂತರ ಮತ್ತೊಬ್ಬ ಹರಿದಾಸರು ಮನುಷ್ಯ ನನ್ನು ತೃಣಸಮಾನವೆನ್ನುವುದಕ್ಕೆ ನಮ್ಮ ಪ್ರಜ್ಞೆಯನ್ನಾವರಿಸಿರುವ ದಟ್ಟ ಕತ್ತಲೂ ಕಾರಣ.
ಪತಂಗ ಮತ್ತಿತರ ಕೀಟಗಳ ಮುಸುಡಿಯ ತುದಿಯಲ್ಲಿ ಸೊಂಡಿಲಿನಂಥ, ಪ್ರಬಾಸಿಸ್ ಎಂದು ಕರೆಯಲಾಗುವ ನಳಿಕೆ ಇರುತ್ತದೆ. ನಾರುತ್ತಿ ರುವ ಹಣ್ಣಿನ ರಸವನ್ನೂ, ಹೂವಿನ ಮಕರಂದವನ್ನೂ ಹೀರುವುದಕ್ಕೆ ಈ ಪುಟ್ಟ ನಳಿಕೆ ರಚನೆ ಯಾಗಿದೆ. ನಮ್ಮ ಕಣ್ಣುಗಳು ಎಷ್ಟೇ ದೂರದ ವಸ್ತುವನ್ನು ನೋಡಬಲ್ಲವಾದರೂ ಅವುಗಳಿಗೆ ಕಂಡ ವಸ್ತುಗಳ ರುಚಿಯನ್ನು ನಮಗೆ ತೋರಿಸಬಲ್ಲ ಸಾಮರ್ಥ್ಯ ತೀರಾ ಕಡಿಮೆ.
ವಿದ್ಯ ಮಾನಗಳು ನಮಗೆ ದಕ್ಕುವುದೇ ಅತಿಸಣ್ಣ ಹೋಮಿಯೋ ಪತಿ ಗುಳಿಗೆಗಳಾಗಿ! ‘ನಾರಾಯಣ ನಿನ್ನ ಸ್ಮರಣೆಯ ಸಾರಾಮೃತವು ಎನ್ನ ನಾಲಿಗೆಗೆ ಬರಲಿ’, ಎನ್ನುವಾ ಗಲೂ ದಾಸರು ಅರ್ಥಪೂರ್ಣವಾಗಿ ಬೇಡುತ್ತಿರುವುದು ಅಮೃತದ ಸಾರವನ್ನಷ್ಟೆ. ಮಂಡಿಗೆ ತಿನ್ನಲು ಮನಸ್ಸಿಗಷ್ಟೇ ಸಾಧ್ಯ. ದ್ವಂದ್ವ, ಚಕ್ಷುದ್ವಯಕ್ಕೆ ಹೊಂದಿಕೊಂಡಿದೆ. ಕಣ್ಣಿನ ಅಸಾಧಾರಣ ಸಾಮರ್ಥ್ಯವೇ ಅದರ ದೌರ್ಬಲ್ಯವೂ ಹೌದು. ಸರಿತಪ್ಪುಗಳ ವಿವೇಚನೆ ಕಣ್ಣುಗಳಿಗಿಲ್ಲ. ನಮಗೆ ಕಣ್ಣುಗಳ ಮೇಲೆ ನಿಯಂತ್ರಣವೂ ಇಲ್ಲ. ಹೆದ್ದಾರಿ ಪ್ರವೇಶಿಸಲು ಬಯಸುವ ಸಂಚಾರೀ ಮನಸ್ಸಿನ ಸುಂಕದಕಟ್ಟೆಯೇ ಕಣ್ಣು.
ಸುಂಕ ಹೆಚ್ಚಾದಷ್ಟೂ ಪಯಣದ ಗುರಿ ಪಲ್ಲಟ. ಕಡಿಮೆ ಸುಂಕ ತೆತ್ತರೂ ಗಿಟ್ಟುವುದು ಹೆಚ್ಚೇನಿಲ್ಲ. ದೃಷ್ಟಿ ದೋಷವನ್ನು ಬಗೆಹರಿಸಿದರಷ್ಟೆ ದಿವ್ಯ ದೃಷ್ಟಿ ಪ್ರಾಪ್ತಿ. ಕಣ್ಣುಗಳ ಪರಮೋದ್ದೇಶವೇ ನಮ್ಮನ್ನು ಮೋಸಗೊಳಿಸುವುದು. ಕಣ್ಣೆಳೆದುಕೊಂಡ ಹೋದ ಕಡೆಗೆ ವಾಲುತ್ತೇವೆ,
ಬೀಳುತ್ತೇವೆ. ಬಿದ್ದ ಜಾಗ ಜೋನಿ ಬೆಲ್ಲದ ಬಾಣಲೆಯೇ ಇರಬಹುದು, ನೊಣವಷ್ಟೇ ಇಷ್ಟಪಡುವ ವಸ್ತುವೂ ಇರಬಹುದು. ಅಲ್ಲೇ ಕಚ್ಚಿಕೊಳ್ಳು ತ್ತೇವೆ. ಅಲ್ಲಿನ ಅಸಹಾಯಕ ಸ್ಥಿತಿಯಲ್ಲೇ ಬಿದ್ದುಕೊಂಡು ಥಿಯರಿಗಳನ್ನು ಹೆಣೆಯುತ್ತೇವೆ.
ಅಂತಹ ಒಂದು ಥಿಯರಿ: ಜೀವನಪಯಂತ ಶಿಸ್ತನ್ನು ಬೆಳೆಸಿಕೊಂಡಿದ್ದ ಬಿಕೆಎಸ್ ಅಯ್ಯಂಗಾರ್ 95 ವರ್ಷ ಬದುಕಿದ್ದರು; ಮಾನಿನಿ-ಮದಿರೆ ಯರರೆಡನ್ನೂ ಅನುಭೋಗಿ ಸಿದ ಖುಷ್ವಂತ್ ಸಿಂಗ್ 99 ವರ್ಷ ಜೀವಿಸಿದರು. ನೀವೇ ನಿರ್ಧರಿಸಿ, ಯಾವುದು ಉತ್ತಮ ಅಂತ.
ಈ ಥಿಯರಿಯ ಪ್ರತಿಪಾದಕರಿಗೆ ಅಯ್ಯಂಗಾರರ ಯೋಗಸಾಧನೆ ಯಾಗಲೀ, ಖುಷ್ವಂತರ ಬರೆವಣಿಗೆಯಾಗಲೀ ಪರಿಚಯ ಇರುವುದಿಲ್ಲ. ಅವರಿಬ್ಬರ ಸುಽರ್ಘ ಜೀವಿತಾ ವಽಯ ವೈವಿಧ್ಯಗಳನ್ನು ಅವರ ಒಟ್ಟು ಆಯುಸ್ಸಿನ ಎರಡಂಕಿಯ ಸಂಖ್ಯೆಗೆ ಕುಗ್ಗಿಸುವುದೇ ಅವರ ಉದ್ಯೋಗ.
ಅದುಮದುಮಿ ಚೀಲಕ್ಕೆ ತೌಡು ತುಂಬುವಂಥ ಕೆಲಸ. ಅಯ್ಯಂಗಾರರ ಕ್ರಮಬದ್ಧ ಜೀವನಶೈಲಿಯನ್ನು ನಾನು ಅಳವಡಿಸಿಕೊಂಡಿಲ್ಲ. ಆದರೂ, ದೀರ್ಘಾಯುಷಿ ಆಗುವುದದಾದರೆ, ಖುಷ್ವಂತ್ ರೀತಿ ಬದುಕಿ ದೊರಕಬಹುದಾದ ಮತ್ತೊಂದು ನಾಲ್ಕು ವರ್ಷ ನನಗೆ ಬೇಡ. ಅವರು ಕಾಂಗ್ರೆಸ್ ಪಕ್ಷದ ಭಟ್ಟಂಗಿಯಾಗಿದ್ದರು. ಆರೋಗ್ಯವೇ ಭಾಗ್ಯ ಎಂದು ನಂಬಿ ರಿಸ್ಕ್ ತೆಗೆದುಕೊಳ್ಳದ ಪತ್ರಕರ್ತ ಅಽಕಾರಸ್ಥರನ್ನು
ಎದುರುಹಾಕಿಕೊಳ್ಳಲಾರ.
ಯೋಗ ನಗರಿ ಮೈಸೂರಿಗೆ ಆ ಪಟ್ಟವನ್ನು ದೊರಕಿಸಿ ಕೊಡುವುದರಲ್ಲಿ ಅಯ್ಯಂಗಾರರ ಪಾತ್ರವೂ ಮಹತ್ವದ್ದು. ನಮ್ಮದು ಯೋಗ ರಾಜಧಾನಿಯೆಂದು ಅರಿವಿಗೆ ಬರುವುದು ವಿಶ್ವ ಯೋಗ ದಿನವಾದ ಜೂನ್ 21ರಂದು ಮಾತ್ರವಲ್ಲ. ವರ್ಷದ ಯಾವುದೇ ದಿನದಂದು ನಗರದ ಯಾವುದೇ ಫಿಜಿಯೊ ಥೆರಪಿ ಕೇಂದ್ರಕ್ಕೆ ಭೇಟಿ ನೀಡಿದರೆ, ಒಬ್ಬರಲ್ಲಾ ಒಬ್ಬರು ಯೋಗಾಸನಾ ಸಂತ್ರಸ್ತರು ನಿಮಗೆ ಕಾಣಸಿ ಗುತ್ತಾರೆ. ಡಿಜಿಟಲ್ ಯುಗ ಹೆಚ್ಚು ಹೆಚ್ಚು ಜನಪ್ರಿಯ ವಾದಂತೆ, ಹೆಚ್ಚು ಹೆಚ್ಚು ಜನ ಯೋಗದಲ್ಲಿ ಆಸಕ್ತಿ ಬೆಳೆಸಿಕೊಂಡು ಕಲಿಯಲಾ ರಂಭಿಸಿದ ಮೊದಲ ವಾರದಲ್ಲೇ ಯೋಗ ಕೇಂದ್ರದಿಂದ ಫಿಜಿಯೊ ಥೆರಪಿ ಕೇಂದ್ರಕ್ಕೆ ಎಡತಾಕುವ ಸಾಧ್ಯತೆ ಹೆಚ್ಚು.
ಯೋಗವಿರಬ ಹುದು, ಜಿಮ್ ಇರಬಹುದು, ಜಾಗಿಂಗ್ ಇರಬಹುದು, ಯಾವುದೇ ಕ್ರೀಡೆ ಇರಬಹುದು, ಹೆಚ್ಚಿನ ಮಂದಿ ಅದರಲ್ಲಿ ಆಸಕ್ತಿ ತೋರುವುದು ಸಕಾರಣಗಳಿಗಲ್ಲ. ಯಾವನದ್ದೋ ಎದೆಯ ಸುತ್ತಳತೆ, ಯಾವಳದ್ದೋ ಲತೆಯಂಥ ಸೊಂಟ, ಮತ್ತಾರದ್ದೋ ರಟ್ಟೆಯ ಗಾತ್ರ… ಹೀಗೆ. ಕೇವಲ 30 ದಿನದಲ್ಲಿ ಇಂಗ್ಲಿಷ್ ಕಲಿಯಲೂ ಆಗದು, ಆರೇ ದಿನದಲ್ಲಿ ಸಿಲ್ವೆಸ್ಟರ್ ಸ್ಟಾಲೋನ್ ನ ಬೈಸೆಪ್ಸೂ ಸಿಗದು, ಜೇನ್ -ಂಡಾಳ ಫಿಗರ್ಅಂತೂ ಮರೀಚಿಕೆಯೇ. ದಿಢೀರ್ ಆಗಿ ಮಾಂಸ ಖಂಡಗಳ ದಾಸ್ತಾನನ್ನೇ ತನ್ನದಾಗಿಸಿಕೊಳ್ಳಲು ಹೋಗಿ
ಮೊದಲನೇ ದಿನವೇ ಜಿಮ್ನಾಯಸಿಯಮ್ಮಿನ ಎಲ್ಲ ಪರಿಕರಗಳನ್ನು ಎಡ್ಡಾದಿಡ್ಡಿ ಬಳಸಿ, ಬೇಽ ಕಿತ್ತುಕೊಂಡು ವ್ಯಾಯಾಮಕ್ಕೆ ಶಾಶ್ವತ ರಜಾ ಕೊಟ್ಟ ಯುವಕರ ಸಂಖ್ಯೆ ಕಡಿಮೆ ಏನಲ್ಲ.
ಇದಾವುದನ್ನೂ ಸ್ವಸಂತೋಷಕ್ಕೆ ಮಾಡುವ ಜನ ಕಡಿಮೆಯೇ. ಮಾಡುವುದನ್ನೂ, ಮಾಡಿ ಬೆಳೆಸಿದ ದೇಹದಾರ್ಢ್ಯವನ್ನೂ ಜನ ನೋಡ ಬೇಕು. ನೋಟ ಪರರಿಗೆ ಅನ್ನೋ ಮಾತು ಸುಮ್ನೆ ಹುಟ್ಕೊಂಡ್ತೇ? ನಿಷ್ಕಾಮ ಕರ್ಮದ ಸಾಧ್ಯತೆಯನ್ನೇ ತಳ್ಳಿಹಾಕುವ ಒಂದು ಚಟುವಟಿಕೆ ಯಿದ್ದರೆ ಅದು ವ್ಯಾಯಾಮ ವೇ ಇರಬೇಕು. ಪರೀಕ್ಷೆಗೆ ಮುನ್ನವೇ ಉತ್ತಮ ಫಲಿತಾಂಶದ ತವಕ ಹುಟ್ಟಿಸುವ ಚಟುವಟಿಕೆಯೂ ಇದೇನೇ. ಬೆವರಿಳಿಸುವುದು, ರಕ್ತಬಸಿಯುವುದು ಅವನ ವೃತ್ತಿಧರ್ಮ. ಸಿನಿಮಾ ತಾರೆಯರ ಭೋಪರಾಕು ಅವನಿಗಿಲ್ಲ.
ಸೇವಾವಧಿಯಲ್ಲಿ ಅಸುನೀಗುವ ಬಹುತೇಕ ಯೋಧರ ಸಾವು ಅಕಾಲಿಕವೂ, ಬರ್ಬರವೂ ಆಗಿರುತ್ತದೆ. ಅವರ ಸ್ನಾಯುಬಲಕ್ಕೆ ಸಿಗ ಬೇಕಾದ ಬೆಲೆ ಸಿಗುವುದೇ ಇಲ್ಲ. ನಿಜಜೀವನದ ಶೌರ್ಯಸಾಹಸಗಳ ಬೆಲೆ ಒಂದೆರಡು ಹೂಗುಚ್ಛಗಳಲ್ಲಿ ಕಟ್ಟಲ್ಪಡುತ್ತವೆ. ತ್ಯಾಗದ ಬದುಕಿನತ್ತ ವಾಲಲು ಅವರೆಂದೂ ನಮಗೆ ಸೂರ್ತಿಯಾಗಲಾರರು. ಏಕೆಂದರೆ, ಅವರಾರೂ ಆರು ಪ್ಯಾಕಿನ ಆಬ್ಸ್ ಗಳಿಸಲು ಸೇನೆ
ಸೇರುವುದಿಲ್ಲ. ಸಾಯಬಲ್ಲೆನೆಂಬ ಅರಿವಿದ್ದೂ ಸೇನೆ ಸೇರುತ್ತಾರೆ. ಶತ್ರುವಿನ ದಾಳಿಯಲ್ಲಿ ಉರಿದು ಬೂದಿಯಾಗ ಬಹುದೆಂಬ ತಿಳು ವಳಿಕೆಯಿದ್ದೂ ಮುನ್ನುಗ್ಗುತ್ತಾರೆ. ಅವರು ಧೃಢಕಾಯರಾಗುವುದು ಸಾವಿನ ಭಯದಿಂದಲ್ಲ, ಸ್ವಮೋಹದಿಂದಲೂ ಅಲ್ಲ. ಆದರೂ ಅವರು ನಮಗೆ ಆದರ್ಶರಾಗುವುದಿಲ್ಲ, ಪರದೆಯ ನಾಯಕರುಗಳಿಗೆ ನಮ್ಮ ತನುಮನಧನ ಆತ್ಮಗಳು ಬಿಕರಿಯಾಗುತ್ತವೆ.
ಜಾಹೀರಾತಿಗೂ ನಿಲುಕದ ದೇಹಗಳವು. ಶಾರೀರಿಕ ಮಹತ್ವವನ್ನು ಮೀರಿದ ಆತ್ಮಗಳವು. ಕಣ್ಣಿಗೆ ಕಾಣದ ಆತ್ಮಗಳಿಗೆ ಡಿಜಿಟಲ್ ಜಗತ್ತಿನಲ್ಲಿ ಬೆಲೆ ಇನ್ನೂ ಕಡಿಮೆ. ಜನಸಂಖ್ಯೆಯ ಬೆಳವಣಿಗೆಯನ್ನು ಕುಬ್ಜವಾಗಿಸುವಷ್ಟು ವೇಗದಲ್ಲಿ ಡಿಜಿಟಲ್ ಜಗತ್ತಿನ ಬಿಂಬಗಳು
ಉತ್ಪತ್ತಿಯಾಗುತ್ತಿವೆ. ಪ್ರವಾಹದಲ್ಲಿ ಕೊಚ್ಚಿಹೋಗುವ ದೇಹಗಳಂತೆ ಮಾನವ ಶರೀರಗಳ ಬಗೆಬಗೆಯ ಬಿಂಬಗಳು. ಜೀವನವೆಂದರೆ ಜೀವಿತವಲ್ಲದ್ದು ಎಂಬಂತೆ. ಅವಾಸ್ತವವೇ ಸದ್ಯದ ವಾಸ್ತವ.
ದೇಹಗಳ ನಿತ್ಯ ವಹಿವಾಟಿನಲ್ಲಿ ಬುದ್ಧಿ ಶೀತಾವಾಸವನ್ನು ಸೇರಿದೆ. ಗ್ರಹಿಕಾ ಕ್ರಮ ಹಿಗ್ಗುವುದಿಲ್ಲ, ಕುಗ್ಗುತ್ತದೆ ಎಂದು ಹೇಳಿದ್ದು ಈ ಅರ್ಥದಲ್ಲಿ. ಬುದ್ಧಿಮತ್ತೆ ಕುಂಠಿತವಾದಂತೆ ಸಮಸ್ಯೆ ಸ್ವರೂಪ ಗ್ರಹಿಸಲಾಗುವುದಿಲ್ಲ. ಸಮಸ್ಯೆಗಳು ಸಮಸ್ಯೆಗಳೇ ಎಂಬ ಉದಾಸೀನತೆಯನ್ನು ಈಗಾಗಲೇ ಮೈಗೂಡಿಸಿಕೊಂಡಿದ್ದೇವೆ. ಯಾವುದೇ ಸಮಸ್ಯೆಯಯನ್ನು ಎತ್ತಿಹಿಡಿಯುವಲ್ಲಿ ಸಾಮಾಜಿಕ ಜಾಲತಾಣ ತಕ್ಕಮಟ್ಟಿಗೆ
ಕಾರ್ಯ ಸಾಧಿಸುತ್ತಿದೆಯಾದರೂ, ನಮ್ಮನ್ನು ಅದರಿಂದ ವಿಮುಖರನ್ನಾಗಿಸಲೂ ಅದೇ ಮಾಧ್ಯಮ ಜತೆಜತೆಯಾಗಿ ಕೆಲಸ ಮಾಡುತ್ತಿದೆ.
ಏರುತ್ತಿರುವ ಜಾಗತಿಕ ತಾಪಮಾನಕ್ಕೆ ಕಡಿವಾಣ ಹಾಕಲೇಬೇಕಿದೆ. ಸಮಸ್ಯೆಗೆ ಸರಕಾರ ಸ್ಪಂದಿಸಬೇಕಾದ ಮಟ್ಟಿಗೆ ಸ್ಪಂದಿಸುತ್ತಿಲ್ಲ. ನಮ್ಮಿಂದ ಆಯ್ಕೆಯಾದ ಸರಕಾರಗಳು. ನಮ್ಮಂತೆಯೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿವೆ. ನಮ್ಮೆಲ್ಲರ ಒಟ್ಟಾರೆ ಹೊಣೆಗೇಡಿತನದಿಂದ ನಾವು ಹಾಳುಗೆಡ ವಿರುವ ವ್ಯವಸ್ಥೆಯಲ್ಲಿ ಜಲಸಂಪತ್ತೂ ಸೇರಿದೆ. ಸಮುದ್ರದಲ್ಲಿನ ಆಮ್ಲಾಂಶ ಹೆಚ್ಚಿದೆ. ಹೆಚ್ಚುವರಿ ಆಮ್ಲದ ವಿರುದ್ಧ
ಸಮುದ್ರಜೀವಿಗಳೂ ಅಗತ್ಯ ಮಾರ್ಪಾಟು ಹೊಂದುತ್ತಿವೆ.
ಸಣ್ಣ ವಯಸ್ಸಿನಲ್ಲೇ ನಮ್ಮಿಂದ ದೂರವಾದ ಪುನೀತ್ ರಾಜ್ ಕುಮಾರ್ ಅವರ ನಿಧನ ಅನೇಕ ಜನರ ಧೃತಿಗೆಡಿಸಿದೆ. ಅಷ್ಟು ಫಿಟ್ ಆಗಿದ್ದ ಅಪ್ಪುವಿಗೆ ಹೇಗೆ ಹೃದಯಾಘಾತವಾಗಲು ಸಾಧ್ಯ ಎಂದು ಕಂಗಾಲಾದ ಜನ ಹೃದಯ ತಪಾಸಣೆಗೆ ದೌಡಾಯಿಸುತ್ತಿದ್ದಾರೆ. ಸಾವಿಗೆ ಕೋವಿಡ್ ಮಾತ್ರ ಕಾರಣವಾಗಲ್ಲದು, ಕೋವಿಡ್ ನಿಯಂತ್ರಣಕ್ಕೆ ಬರುತ್ತಿರುವಂತೆ ಕಾಣುತ್ತಿರುವುದರಿಂದ ಚಿಂತೆಗೆ ಕಾರಣವಿಲ್ಲ, ತಾವು ಅಮರರು ಎಂಬ ಭ್ರಮೆಯಲ್ಲಿದ್ದ ಬಹುತೇಕರನ್ನು ಪುನೀತರ ಮರಣ ಅಲುಗಾಡಿಸಿದ್ದು, ಅವರಲ್ಲಿ ಉದ್ವೇಗವನ್ನುಂಟು ಮಾಡಿದೆ.
ನಿರುದ್ವೇಗವಾಗಿ ನಾವೆಲ್ಲರೂ ಚಿಂತಿಸಿ ದಿಟ್ಟ ಹೆಜ್ಜೆಗಳನ್ನಿಡಬೇಕಾದ ಸಮಯವಿದು. ಗ್ರಹಿಕೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ಒಟ್ಟಾಗಿ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಆರು ಪ್ಯಾಕ್ ಆಬ್ಸ್ ಇಲ್ಲದಿದ್ದರೆ ಪರವಾಗಿಲ್ಲ. ನಿಸರ್ಗವೇ, ಪಾತರಗಿತ್ತಿಗೆ ದಾರಿ ತೋರಿದಂತೆ, ಯಾವುದಾದರೂ ಭದ್ರತೆಯನ್ನೊದಗಿಸುತ್ತದೆ. ಆದರೆ ಸ್ವಲ್ಪ ಬುದ್ಧಿ ಮತ್ತು ವಿವೇಚನೆ ಬೇಕು. ಅದು ಹೇಗೆ ಖುಷ್ವಂತ್ ಸಿಂಗ್ ಸ್ಕಾಚ್ ಕುಡಿದೂ ಅದನ್ನು ಕುಡಿಯದ ಬಿಕೆಎಸ್ರಿಗಿಂತ ನಾಲ್ಕು ವರ್ಷ ಹೆಚ್ಚು ಬದುಕಿದರು ಎಂಬ ತರ್ಕ ಮುಂದಿಡಲು ಬೇಕಾದ ಬುದ್ಧಿಗಿಂತ ತುಸು ಹೆಚ್ಚೇ ಬೇಕು.