Sunday, 15th December 2024

ಅದಮ್ಯ ಧೈರ್ಯದಿಂದ ನಾವು ವಿಶ್ವವನ್ನೇ ಗೆಲ್ಲಬಲ್ಲೆವು

ಸಕಾಲಿಕ

ವಿಜಯ್‌ ದರ್‌ಡ

ದೇಶದ ಆರ್ಥಿಕತೆಗೆ ಮತ್ತು ಪ್ರಧಾನಮಂತ್ರಿಗಳು ಗಡಿಭಾಗದಲ್ಲಿ ಸೈನಿಕರೊಂದಿಗೆ ಆಚರಿಸಿದ ದೀಪಾವಳಿಗೆ ಜನ ಸಾಮಾನ್ಯರ ಸ್ವಯಂಪ್ರೇರಿತ ಬೆಂಬಲ ಪ್ರಧಾನಮಂತ್ರಿಗಳು ದೇಶದ ಪ್ರತಿನಿಧಿಯಾಗಿ ಪ್ರತಿಯೊಂದು ವಿಚಾರದಲ್ಲೂ ತೋರುವ ನಡೆ ಸಾಂಕೇತಿಕವಾಗಿ ಇಡೀ ದೇಶದ ಜನರ ಭಾವನೆಗಳನ್ನು ಪ್ರತಿನಿಧಿಸುತ್ತದೆ.

ನನಗೆ ತಿಳಿವಳಿಕೆ ಬಂದಾಗಿನಿಂದ ದೀಪಾವಳಿ ನನಗೆ ತುಂಬಾ ಇಷ್ಟದ ಹಬ್ಬ. ಈ ಹಬ್ಬದ ದಿನಗಳಲ್ಲಾಗುವ ಶಕ್ತಿಯ ಪ್ರಸರಣೆಯತ್ತ
ನಾನು ಆಕರ್ಷಿತನಾಗಿದ್ದೇನೆ. ಧಾರ್ಮಿಕವಾಗಿ ಈ ಹಬ್ಬಕ್ಕೆ ಅದರದೇ ಆದ ಮಹತ್ವವಿದೆ, ವೈಜ್ಞಾನಿಕ ದೃಷ್ಟಿಕೋನದಿಂದ ಬೆಳಕಿನ ಶಕ್ತಿಯ ವಿನಃ ಬದುಕನ್ನು ಊಹಿಸಿಕೊಳ್ಳು ವಂತಿಲ್ಲ. ಶಕ್ತಿಯ ಆಧಿಕ್ಯ ಒಬ್ಬ ವ್ಯಕ್ತಿಯ ಯಶಸ್ಸನ್ನು ಎತ್ತರಕ್ಕೇರಿಸುವ ಕೆಲಸವನ್ನು ಸಶಕ್ತವಾಗಿ ಮಾಡುತ್ತದೆ. ದೀಪಾವಳಿ ಎಂದರೆ ಹೊಸ ಭರವಸೆಗಳ ಹಬ್ಬ. ಬೆಳಕಿನ ಹಬ್ಬದ ಪ್ರಮುಖ ಸಂಕೇತ ಮತ್ತು ಸಂದೇಶ ನಮ್ಮೆಲ್ಲರ ಬದುಕಿನಲ್ಲಿರುವ ತಮಸ್ಸನ್ನು ಹೊಡೆದೋಡಿಸುವುದು. ಅದಕ್ಕಾಗಿಯೇ ನಾನು ದೀಪಾವಳಿಯನ್ನು ಸಾಂಪ್ರದಾಯಿಕ ವಾಗಿ ಆಚರಿಸುತ್ತೇನೆ ಮತ್ತು ಸಂತೋಷದಲ್ಲಿ ಮುಳುಗೇಳುತ್ತೇನೆ.

ಕಳೆದ ಸಾಲಿನ ದೀಪಾವಳಿಯ ಸಂದರ್ಭದಲ್ಲಿ ಕರೋನಾವೈರಸ್ ಕರಿಛಾಯೆ ಇತ್ತು. ನಮ್ಮಲ್ಲಿರುವ ಶಕ್ತಿ ಅದೆಷ್ಟು ಅಗಾಧವೆಂದರೆ, ಎಲ್ಲ ಸಮಸ್ಯೆಗಳನ್ನು ಮೀರಿ ಎದ್ದು ನಿಲ್ಲುವುದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ಈ ಬಾರಿಯ ದೀಪಾವಳಿಯಲ್ಲಿ ನಾವೆಲ್ಲರೂ ಒಟ್ಟಾಗಿ ಸಂತೋಷದ ಭಾವವನ್ನು ವ್ಯಕ್ತಪಡಿಸಿದೆವು. ಬೆಳಕಿನ ಹಬ್ಬದ ಸಂತೋಷ ನಮ್ಮಲ್ಲಿ ಹುಮ್ಮಸ್ಸನ್ನು ತುಂಬಿತು. ವೈಯಕ್ತಿಕವಾಗಿ ಹೇಳಬೇಕೆಂದರೆ ಈ ಬಾರಿ ಜನರೆಲ್ಲರೂ ಸ್ವಯಂಪ್ರೇರಿತರಾಗಿ ದೇಶದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ದೊಡ್ಡಮಟ್ಟದಲ್ಲಿ ಮುಂದಾದರು.

ಮಾರುಕಟ್ಟೆಯನ್ನು ಬಲಪಡಿಸುವಲ್ಲಿ ಪ್ರತಿಯೊಬ್ಬರೂ ತಮ್ಮ ಕೈಲಾದ ಕೊಡುಗೆಯನ್ನು ಕೊಡುತ್ತಲೇ ಬಂದರು. ಇದರಲ್ಲಿ ಸರಕಾರದ ಪಾಲೂ ಇದೆ. ಆದರೆ ಜನಸಾಮಾನ್ಯ ಖರ್ಚುಮಾಡುವ ಹಣದ ಪ್ರಮಾಣ ಮಾರುಕಟ್ಟೆಯನ್ನು ಬಲಿಷ್ಟವಾಗಿಸುವ ಕೆಲಸವನ್ನು ಮಾಡುತ್ತದೆ. ಈ ಬಾರಿ ದೀಪಾವಳಿಯ ಹಂಗಾಮಿನಲ್ಲಿ ಜನ ಕಾರು, ಬೈಕು ಕೊಂಡರು. ಬಟ್ಟೆಬರೆ, ಡ್ರೈಫ್ರೂಟ್ಸ್
ಸೇರಿದಂತೆ ಅನೇಕ ವಸ್ತುಗಳನ್ನು ಕೊಂಡರು. ಎಲ್ಲೆಡೆ ಮಾರುಕಟ್ಟೆಗಳಲ್ಲಿ ಜನಸಾಗರವೇ ಮುಗಿಬಿದ್ದಿತ್ತು.

ಪರಿಣಿತರ ಪ್ರಕಾರ ಈ ಬಾರಿ ಅಂದಾಜು ಮಾಡಲಾಗಿದ್ದ ದೀಪಾವಳಿಯ ಸಂದರ್ಭದ ಮಾರುಕಟ್ಟೆ ವಹಿವಾಟು ಒಟ್ಟಾರೆಯಾಗಿ ರೂ:೧.೨೫ ಲಕ್ಷ ಕೋಟಿ. ಮಾರುಕಟ್ಟೆಯಲ್ಲಿ ೧೫ ಟನ್ ಚಿನ್ನ ಬಿಕರಿಯಾಯಿತು, ವಜ್ರದ ಮಾರುಕಟ್ಟೆಯಲ್ಲಂತೂ ಭರಪೂರ ವ್ಯಾಪಾರ. ಮಾರುಕಟ್ಟೆ ಪರಿಣಿತರ ಪ್ರಕಾರ ಕಳೆದ ೭೫ ವರ್ಷಗಳಲ್ಲಿ ಮೊದಲ ಬಾರಿಗೆ ವಜ್ರದ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ವಹಿವಾಟು ಈ ಬಾರಿಯ ದೀಪಾವಳಿ ಸಂದರ್ಭ ದಲ್ಲಿ ನಡೆದಿದೆ.

ಈ ಬಾರಿಯ ದೀಪಾವಳಿಯಲ್ಲಿ ನಾನು ಇನ್ನೊಂದು ವಿಶೇಷವನ್ನು ಗಮನಿಸಿದೆ. ತಮಗಿಂತ ಆರ್ಥಿಕವಾಗಿ ಕೆಳಮಟ್ಟದಲ್ಲಿರು ವವರ ಹಬ್ಬದ ಸಂಭ್ರಮವನ್ನು ಹೆಚ್ಚಿಸುವಲ್ಲಿ ಜನ ಸಾಕಷ್ಟು ಮುತುವರ್ಜಿ ವಹಿಸಿದರು. ಆಹಾರ, ಬಟ್ಟೆ, ಸಿಹಿತಿಂಡಿಗಳನ್ನು ಹಂಚಿ ಖುಷಿ ಪಟ್ಟರು. ಅನೇಕ ಮಂದಿ ಅನಾಥಾಶ್ರಮಗಳಿಗೆ, ಬಾಲಾಶ್ರಮಗಳಿಗೆ ಹೋದರು, ನಿರ್ಗತಿಕರ ನೆರವಿಗೆ ಮುಂದಾದರು. ಸಹಾನುಭೂತಿಯ ಸೇವೆ ನಮ್ಮ ಸಮಾಜದ ಸಾಂಪ್ರದಾಯಿಕ ಗುಣವಿಶೇಷಣ.

ಕರೋನಾ ವಿರುದ್ಧದ ಹೋರಾಟ ಜನರ ನಡುವಿನ ಸಂಬಂಧಗಳನ್ನು ಬೆಸೆಯುವ ಕೆಲಸವನ್ನು ಮಾಡಿದೆ ಎಂಬುದನ್ನು ಮರೆಯುವಂತಿಲ್ಲ. ದುರ್ಬಲರಿಗೆ ಸಹಾಯಹಸ್ತ ಚಾಚುವ ಸೂರ್ತಿ ಈ ಬಾರಿ ದುಪ್ಪಟ್ಟು ಹೆಚ್ಚಿತ್ತು. ಈ ಬಾರಿ ಜನ ಬೀದಿಬದಿಯ
ವ್ಯಾಪಾರಿಗಳೊಂದಿಗೆ ಚೌಕಾಶಿಗೆ ಇಳಿಯಲಿಲ್ಲ, ಅವರು ಹೇಳಿದ್ದಕ್ಕಿಂತ ಹೆಚ್ಚಿನದನ್ನೇ ಕೊಟ್ಟರು. ಈ ರೀತಿಯಲ್ಲಿ ನೀವೆಲ್ಲರೂ ಕೂಡ ಸಹಾಯಹಸ್ತವನ್ನು ಚಾಚಿದ್ದೀರಿ ಎಂಬುದು ನನ್ನ ಭಾವನೆ. ಈ ಬಾರಿಯ ದೀಪಾವಳಿಯಲ್ಲಿ ಸುಡುಮದ್ದುಗಳ ಕಿವಿ ಗಡಚಿಕ್ಕುವ ಸದ್ದು ಕೂಡ ಅಷ್ಟಾಗಿ ಇರಲಿಲ್ಲ. ಜನ ಸಾಂಕೇತಿಕವಾಗಿ ಪಟಾಕಿಗಳನ್ನು ಸಿಡಿಸಿದರು. ಬಹುತೇಕ ಮಂದಿ ಪಟಾಕಿ
ಕೊಳ್ಳಲೇ ಇಲ್ಲ. ಪಟಾಕಿಗಳನ್ನು ಸಿಡಿಸಿ ವಾತಾವರಣ ಪ್ರದೂಷಣೆ ಮಾಡುವುದು ಸರಿಯಲ್ಲ ಎಂಬುದು ಅವರ ಭಾವನೆ, ಜತೆಗೆ ಜನರ ಪ್ರಾಣದೊಂದಿಗೆ ಆಟವಾಡುವುದು ಬೇಡ ಎಂಬ ಎಚ್ಚರಿಕೆ.

ವಾತಾವರಣದ ಬಗ್ಗೆ ಜನರಿಗೆ ವಿಶೇಷವಾದ ಕಾಳಜಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ.
ಹೌದು, ಕಳೆದ ಬಾರಿಯಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರು ಗಡಿಭಾಗಕ್ಕೆ ಹೋಗಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು. ಇದು ೨೦೧೪ರಿಂದಲೂ ಜಾರಿಯಲ್ಲಿರುವ ಸಂಪ್ರದಾಯ. ಈ ಬಾರಿ ಪ್ರಧಾನಮಂತ್ರಿಗಳು ನೌಶೇರಾ ಪ್ರಾಂತ್ಯಕ್ಕೆ ಹೋಗಿದ್ದರು. ಪ್ರಧಾನ ಮಂತ್ರಿಗಳು ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿದ್ದಾರೆಂಬುದು ಭಾರತೀಯರೆಲ್ಲರೂ ಹೆಮ್ಮೆಪಡಬೇಕಾದ ಸಂಗತಿ. ಪ್ರಧಾನಮಂತ್ರಿಗಳು ದೇಶದ ಪ್ರತಿನಿಧಿಯಾಗಿ ಪ್ರತಿಯೊಂದು ವಿಚಾರದಲ್ಲೂ ತೋರುವ ನಡೆ
ಸಾಂಕೇತಿಕವಾಗಿ ಇಡೀ ದೇಶದ ಜನರ ಭಾವನೆಗಳನ್ನು ಪ್ರತಿನಿಧಿಸುತ್ತದೆ.

ಹೀಗಾಗಿ ಅವರು ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದು ದೀಪಾವಳಿಯ ಹಿರಿಮೆ- ಹುರುಪುಗಳನ್ನು ಇಮ್ಮಡಿ ಮಾಡಿತ್ತು. ಪ್ರಾಕೃತಿಕ ವಿಕೋಪಗಳನ್ನು ಎದುರಿಸಿ ನಮ್ಮ ಸೈನಿಕರು ಗಡಿಕಾಯುತ್ತಾರೆ. ದೇಶದ ಗೌರವವನ್ನು ಹಿಡಿದೆತ್ತುವಲ್ಲಿ, ತ್ರಿವರ್ಣ
ಧ್ವಜ ರಾರಾಜಿಸುವಂತೆ ಮಾಡುವಲ್ಲಿ ಅವರುಗಳು ತಮ್ಮ ಜೀವ ತೆರುವುದಕ್ಕೂ ಹಿಂಜರಿಯುವುದಿಲ್ಲ. ತಮ್ಮ ಹೆತ್ತವರಿಂದ, ಮಡದಿ-ಮಕ್ಕಳು ಮತ್ತು ಅವಲಂಬಿತ ಕುಟುಂಬದಿಂದ ಸಾವಿರಾರು ಮೈಲು ದೂರದಲ್ಲಿರುವ ಕಾರಣ ಸಹಜವಾಗಿಯೇ ಸೈನಿಕರಿಗೆ ದೀಪಾವಳಿ ಆಚರಿಸುವುದಕ್ಕೆ ಆಗುವುದಿಲ್ಲ.

ದೀಪಾವಳಿ, ರಮ್ಜಾನ್,  ಬೈಶಾಖಿ, ಕ್ರಿಸ್ಮಸ್, ಹೋಲಿ, – ಹೀಗೆ ಹಬ್ಬಗಳು ಯಾವುದೇ ಇರಲಿ ಅವರು ಗಡಿರಕ್ಷಣೆಯಲ್ಲಿ ನಿರಂತರ
ಕೆಲಸ ಮಾಡುತ್ತಲೇ ಇರುತ್ತಾರೆ. ಪರಿಸ್ಥಿತಿ ಹೀಗಿರುವಾಗ ನಮ್ಮ ಪ್ರಧಾನಮಂತ್ರಿಗಳು ಗಡಿಭಾಗಕ್ಕೆ ಹೋಗಿ ಸೈನಿಕರೊಂದಿಗೆ ದೀಪಾವಳಿ ಆಚರಿಸುವುದರ ಮೂಲಕ ಅವರಲ್ಲಿ ಹುರುಪು, ಉತ್ಸಾಹಗಳನ್ನು ತುಂಬುವ ಕೆಲಸವನ್ನು ಮಾಡಿದ್ದಾರೆ.
ಒಲಿಂಪಿಕ್‌ನಲ್ಲಿ ದೇಶದ ಹಿರಿಮೆಯನ್ನು ಎತ್ತಿಹಿಡಿದ, ಪದಕಗಳನ್ನು ಗೆದ್ದುಬಂದ ಕ್ರೀಡಾಳುಗಳನ್ನು ಭೇಟಿಮಾಡುವಾಗಲೂ ಪ್ರಧಾನಮಂತ್ರಿಗಳಲ್ಲಿ ಅವರಲ್ಲಿ ಧೈರ್ಯ ಮತ್ತು ಹುರುಪನ್ನು ತುಂಬುವ ಕೆಲಸವನ್ನು ಮಾಡುತ್ತಾರೆ. ದೇಶದ ರೈತರು ಮತ್ತು
ಉದ್ಯಮಿಗಳೊಂದಿಗೆ ಸಂವಹನ ನಡೆಸುವಾಗಲೂ ಇದೇ ಭಾವ ಎದ್ದು ಕಾಣುತ್ತದೆ. ಕ್ರೀಡಾಪಟುಗಳು ದೇಶಕ್ಕಾಗಿ ಆಟವಾಡುತ್ತಾರೆ. ಇಡೀ ದೇಶಕ್ಕೆ ಬೇಕಾದ ಆಹಾರವಸ್ತು, ಹಣ್ಣು-ತರಕಾರಿಗಳನ್ನು ಬೆಳೆಯಲು ರೈತ ಬೆವರು ಸುರಿಸುತ್ತಾನೆ.

ಅವರಿಗಿರುವ ಪ್ರಾಕೃತಿಕ ವಿಕೋಪವೆಂದರೆ ಅದು ಬರ, ಪ್ರವಾಹ ಮತ್ತು ಕೀಟಬಾಧೆ. ಅದೊಂದು ಕಾಲವಿತ್ತು, ಆವಾಗ ನಾವು
ಆಹಾರಧಾನ್ಯಗಳಿಗಾಗಿ ಅನ್ಯದೇಶಗಳನ್ನು ಅವಲಂಬಿಸಿದ್ದೆವು. ಆದರೆ ಈಗ ಕಾಲ ಬದಲಾಗಿದೆ, ನಾವಿಂದು ಸ್ವಯಂಪೂರ್ಣತೆ ಯನ್ನು ಸಾಧಿಸಿದ್ದೇವೆ. ಎಲ್ಲ ತೊಡಕುಗಳ ಮಧ್ಯೆಯೂ ನಮ್ಮ ಉದ್ಯಮಗಳು ಉದ್ಯೋಗ ಸೃಷ್ಟಿ ಮಾಡುತ್ತಿವೆ. ಮೋದೀಜಿಯವರ
ಘೋಷಣೆ ‘ಮೇಕ್ ಇನ್ ಇಂಡಿಯಾ’ ಮತ್ತು ‘ಮೇಡ್ ಇನ್ ಇಂಡಿಯಾ’ ಗಳನ್ನು ಸಾಕಾರಗೊಳಿಸುವುದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಪ್ರತಿಯೊಂದು ವಿಭಾಗದಲ್ಲೂ ಹುರುಪನ್ನು ತುಂಬಿ, ಪ್ರಚೋದಿಸಿ, ಶಕ್ತಿಸಂಚಯನ ಮಾಡಿ ಉತ್ತಮ ಫಲಿತಾಂಶ ವನ್ನು ದಾಖಲಿಸುವುದು ಸಣ್ಣ ಮಾತಲ್ಲ.

ಒಂದೆಡೆ ಮೋದೀಜಿಯವರು ಹಿಮಾಲಯದ ತುದಿಯಿಂದ ದೇಶಾದ್ಯಂತ ಇರುವ ದೇವ-ದೇವತೆಗಳಿಗೆ ನಮನಗಳನ್ನು ಸಲ್ಲಿಸುವ
ಕೆಲಸವನ್ನು ಭಕ್ತಿಯಿಂದ ಮಾಡುತ್ತಿದ್ದರೆ, ಇನ್ನೊಂದೆಡೆ ಸಂಸ್ಕೃತಿಯ ಉಳಿವಿಗೂ ಕಾರಣರಾಗುತ್ತಿದ್ದಾರೆ. ಜತೆಜತೆಗೆ ವ್ಯಾಟಿಕನ್ ಸಿಟಿಯಲ್ಲಿ ಪೋಪ್ ರನ್ನು ಆಲಂಗಿಸಿ ಆತ್ಮೀಯತೆಯ ಭಾವ ಪ್ರಸರಣವಾಗುವಂತೆ ಮಾಡುತ್ತಾರೆ. ಇದು ನಮ್ಮ ದೇಶದ ಸಾಂಸ್ಕೃತಿಕ ಮೌಲ್ಯಗಳ ಸಾರ. ವಿಶ್ವ ಸೌಹಾರ್ದ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಚಿಂತನೆಯ ಜತೆಗೆ ವಸುಧೈವ
ಕುಟುಂಬಕಂ ಎಂಬ ಭಾವನ್ನು ಎಲ್ಲೆಡೆ ಪಸರಿಸುವಲ್ಲಿ ಇದು ಅತ್ಯಂತ ಪೂರಕವಾಗಿದೆ. ಲೋಕಮತ್ ಮೀಡಿಯಾ ಸಮೂಹ ಇತ್ತೀಚೆಗೆ ನಾಗಪುರದಲ್ಲಿ ರಾಷ್ಟ್ರೀಯ ಅಂತರ-ಧರ್ಮೀಯ ಸಮಾವೇಶವನ್ನು ಆಯೋಜಿಸಿತ್ತು. ಅಲ್ಲಿ ಭಾಗವಹಿಸಿದ್ದ ಸಂತರು ಮತ್ತು ಧಾರ್ಮಿಕ ಮುಖಂಡರು ಶಾಂತಿ ಮತ್ತು ಐಕಮತ್ಯದ ಸಂದೇಶಗಳನ್ನು ದೇಶಕ್ಕೆ ಸಾರಿದ್ದರು.

ಎಲ್ಲ ಬಣ್ಣಗಳೂ ನಮ್ಮವೇ, ಎಲ್ಲ ಧರ್ಮಗಳೂ ನಮ್ಮವೇ, ಎಲ್ಲರೂ ನಮ್ಮವರೇ, ಈ ಜಗತ್ತೇ ನಮ್ಮದು ಇಲ್ಲಿ ವಾಸಿಸುವ
ಜನರೆಲ್ಲರೂ ನಮ್ಮವರು ಎಂಬುದೇ ಭಾರತೀಯರ ಮೂಲಭೂತ ಗುಣಲಕ್ಷಣ. ಪರಸ್ಪರ ಗೌರವಭಾವ ತೋರುವ ಗುಣ ನಮ್ಮಲ್ಲಿ ಅಂತರ್ಗತವಾಗಿಯೇ ಇದೆ. ನಾವು ಭಾರತೀಯರು ಇನ್ನೊಬ್ಬರಿಗೆ ಖುಷಿಯನ್ನು ಹಂಚುವಲ್ಲಿ ಸದಾ ಮುಂಚೂಣಿಯಲ್ಲಿರುತ್ತೇವೆ.

(ಪತ್ರಕರ್ತರು ಮತ್ತು ಮಾಜಿ ರಾಜ್ಯಸಭಾ ಸದಸ್ಯರು ಲೋಕಮತ್ ಮೀಡಿಯಾ ಗ್ರೂಪ್‌)