ಮಿಶ್ರಾ ಕೃಷಿ
ಕವಿತಾ ಮಿಶ್ರಾ
mishraformkvt@gmail.com
ಮಗಳು ಹುಟ್ಟಿದ್ದಾಳೆ ಅಂದ್ರೆ ಅಂದು ಹತಾಶೆ, ಅಭದ್ರತೆ, ನಮ್ಮ ವಂಶವೇ ಕೊನೆಯಾ ದೀತೇನೋ ಎನ್ನುವ ಗಾಢಾಂಧಕಾರ. ಸಾಲದ್ದಕ್ಕೆ ಭೌತಿಕವಾಗಿಯೂ ಮಳೆ ಬಾರದ ವಾತಾವರಣ. ಆದ್ರೂ ನನ್ನ ತಂದೆಯೇ ನನ್ನ ಹೀರೋ ಅಂತ ತನ್ನ ಸಹಪಾಠಿಗಳ ಜತೆ ಹೇಳಿಕೊಂಡು ಹಿರಿಹಿರಿ ಹಿಗ್ಗುತ್ತಾಳೆ ಯಾವುದೇ ಮಗಳು.
ಎಷ್ಟೇ ದೊಡ್ಡ ವ್ಯಕ್ತಿಗಳು ತನ್ನನ್ನ ಬಂದು ಚುಡಾಯಿಸಿದರೂ ನನ್ನ ತಂದೆ ನನ್ನ ಜತೆ ಇದ್ದೇ ಇರುತ್ತಾನೆ ಅನ್ನುವ ನಂಬಿಕೆ ಆ ಹೆಣ್ಣು ಜೀವಕ್ಕೆ. ಆಕೆ ಊಹಿಸಿಯೂ ಇರುವುದಿಲ್ಲ, ನಾನು ಹುಟ್ಟುತ್ತಲೇ ಗಾಢಾಂಧಕಾರ ನಮ್ಮ ಮನೆಗೆ ಕವಿದಿದೆ ಅಂತ ಮನೆಯವರು, ಬಂಧು ಬಾಂಧವರು ತಿಳಿದಿದ್ದರು ಎನ್ನುವ ಕಹಿಸತ್ಯದ ಕಪಟವನ್ನು…
ಆದರೆ ಅದೇ ಹೆಣ್ಣೊಬ್ಬಳು ತನ್ನ ಜೀವನದಲ್ಲಿ ಏನೋ ಒಂದು ಸಾಧನೆ ಮಾಡಿದಾಗ ತನ್ನ ಮನೆಯವರಷ್ಟು ಸಂತೋಷವನ್ನು ಇನ್ಯಾರೂ ಪಡುವುದಕ್ಕೆ ಸಾಧ್ಯ ಇಲ್ಲ. ಸಮಾಜದಲ್ಲಿ ಇಂತಹಾ ಅದೆಷ್ಟೋ ಘಟನೆಗಳನ್ನು ನೋಡಿದ ಹೆಣ್ಣು ಮಕ್ಕಳು, ತಾವು ಸ್ತ್ರೀ ವಾದಿಗಳು ಅನ್ನುವ ಹಣೆಪಟ್ಟಿಯನ್ನ ಹಚ್ಚಿಕೊಂಡು ಪುರುಷರ ವಿರುದ್ಧ ಸೆಟೆದು ನಿಲ್ಲುತ್ತಾರೆ. ಆದ್ರೆ ನಾವು ಹೆಂಗೆಳೆಯರು ಪುರುಷರ ವಿರುದ್ಧ ಮಾತನಾಡುವುದರ ಬದಲು ಅವರಿಗಿಂತ ಹೆಚ್ಚು ಸಾಧನೆ ಮಾಡಿ ತೋರಿಸು ವುದಕ್ಕೆ ಸಾಧ್ಯತೆ ಇದೆ.
ಅದು ನಾವು ಅವರ ವಿರುದ್ಧ ಸಾಧನೆಗಳ ಮೂಲಕ ತೋರುವ ಸಾತ್ವಿಕ ಹೋರಾಟ, ಯಾಕೆಂದರೆ ಬಾಡಿಗೆ ವಾಹನ ಬುಕ್ ಮಾಡಿದಾಗಲೂ ಬರೋ ವ್ಯಕ್ತಿ ಗಂಡು ಅನ್ನುವ ಸತ್ಯವನ್ನು ನಾವು ಮರೆಯುವಂತಿಲ್ಲ. ಅಯ್ಯೋ ದೇವರೆ… ನನಗೆ ಇನ್ನು ಯಾವ ಜನುಮದಲ್ಲೂ ಹೆಣಾಗಿ ಹುಟ್ಟುವ ದೌರ್ಭಾಗ್ಯ ಕರುಣಿಸಬೇಡ ಅಂತ ಮನಸ್ಸಿನಲ್ಲೇ ನೊಂದು ಕೊಂಡು, ದೇಹವೇ ಭಾರವಾಗಿ ಮಣ್ಣಿನ ಋಣವನ್ನು ತೀರಿಸಿ ಹೊರಟಾಗ ಮಣ್ಣು ನನ್ನ ಮೇಲೆ ಬೀಳುವುದಕ್ಕೆ ನಿರಾಕರಿಸಿತ್ತು. ಬದಲಾಗಿ ನನ್ನ ಮುಷ್ಟಿಯಲ್ಲಿ ಹಿಡಿಮಣ್ಣನ್ನು ಇರಿಸಿ ನನ್ನ ಕೈ ಹಿಡಿದಿತ್ತು. ಯಾರಾ ದರೂ ‘ಹೆಣ್ಣಾಗಿ ಹುಟ್ಟಲೇಬಾರದು’ ಅಂತ ಅಂದುಕೊಂಡಿದ್ದರೆ ಮನಸ್ಸನ್ನು ಬದಲಾಯಿಸಿಬಿಡಿ.
ನಾನೊಬ್ಬಳು ಹೆಣ್ಣಾಗಿ ಕಷ್ಟಗಳ ಸರಮಾಲೆಯನ್ನೇ ಧರಿಸಿ, ಬದುಕಿ, ಸಂತೃಪ್ತಳಾಗಿದ್ದೇನೆ. ‘ಆಕಿ ಮನಿಯೊಳಾಗ ಮುಸ್ರಿ ತಿಕ್ಕೂಂತ
ಕೂರ್ಬೇಕು. ಹೊರಾಗೆಲ್ಲೂ ಹೋಗಂಗಿಲ್ಲ’. ಇನ್ನೂ ಈ ಮಾತುಗಳು ನನ್ನ ಕಿವಿಯಲ್ಲಿ ರಿಂಗಣಿಸುತ್ತಿವೆ. ಅಂದಿನ ನೋವು ಮತ್ತು ಆತ್ಮವಿಶ್ವಾಸವೇ ಇಂದು ಸಮಾಜದೆದುರು ಯಶಸ್ವೀ ಕೃಷಿ ಮಹಿಳೆ ಎಂದು ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ವ್ಯಾಸಂಗ ಮಾಡಬೇಕು. ಕೈ ತುಂಬಾ ಸಂಬಳ ಪಡೆದು, ಹೆತ್ತ ಮನೆಗೂ ಗಂಡನ ಮನೆಗೂ
ಶೋಭೆ ಯಾಗುವಂತೆ ಇರಬೇಕು, ಸಮಾಜದಬ್ಬಳು ಪ್ರತಿಭಾವಂತ ಹೆಣ್ಣಾಗಿ ಗುರುತಿಸಿಕೊಳ್ಳಬೇಕು ಎನ್ನುವ ಆಸೆ ಎಲ್ಲ ಹೆಣ್ಣು ಮಕ್ಕಳಂತೆ ಕಾಡುತಿತ್ತು.
ಕಂಪ್ಯೂಟರ್ ಎಂಜಿನಿಯರಿಂಗ್ ಮುಗಿಸುವ ಸಮಯಕ್ಕೆ ಕನಸುಗಳಿಗೆ ನೇಣು ಬೀಳುವಂಥ ಮಾಂಗಲ್ಯ ನನ್ನ ಪಾಲಾಗಿತ್ತು.
ಈಗಿನ ಸಮಾಜ ಊಹೆಯನ್ನೂ ಮಾಡಲಾಗದ ಊರು. ಹೆಣ್ಣಿಗೆ ರಕ್ಷಣೆ ನೀಡುವ ಹೆಸರಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಬಂಧಿ ಮಾಡಲಾಗಿತ್ತು. ಮನೆಯ ಗಂಡಸರನ್ನು ಬಿಟ್ಟರೆ ಉಳಿದ ಗಂಡಸರು ಬಂದರೆ ಮುಖ ಮುಚ್ಚಿ ನಮ್ಮ ಅಡುಗೆ ಮನೆಯ ನಾಲ್ಕು ಗೋಡೆಗೆ ಸುಣ್ಣದಂತೆ ಸೇರಬೇಕಿತ್ತು. ಕನಸುಗಳ ಮಂಜುಗಡ್ಡೆ ಅಲ್ಲಿನ ಜನರ ಪ್ರಖರವಾದ ಪುರುಷ ಸಮಾಜದೆ ದುರು ಕರಗಿ ಬೆತ್ತಲಾಗಿತ್ತು. ಆದರೂ ಛಲ ಬಿಡದೆ ಯಾರಿಗೂ ಹೇಳದೆ ಸಂದರ್ಶನ ವೊಂದನ್ನು ಮುಗಿಸಿ ನಲವತ್ತು ಸಾವಿರ ಸಂಬಳ ಬರುವ ಕೆಲಸವನ್ನು ನನ್ನದಾಗಿಸಿ ಕೊಂಡು ಗಂಡನ ಬಳಿ ಹೇಳುವಾಗ ಒಂದು ವಿಷಯ ಮರೆತಿದ್ದೆ.
ಗಂಡನ ತಂದೆ ತಾಯಿ ಅವನ ಜತೆ ಇರುವಾಗ ಹೆಂಡತಿ ಮಾತನಾಡುವಂತಿರಲಿಲ್ಲ. ಅಲ್ಲಿದ್ದವರ ಕಣ್ಣುಗಳು ಕೆಂಪಾಗಿ ‘ಕೆಲಸಕ್ಕೆ ಹೋತಾಳಂತೆ ಮುಸ್ರಿ ತಿಕ್ಕು ಬೇಕಾದಷ್ಟು ಕೆಲ್ಸ ಅದಾವು’ ಅಂದಾಗ ಮನಸ್ಸು ಜರ್ಝರಿತವಾಗಿತ್ತು. ನಾಲ್ಕು ಗೋಡೆಯ ಹೊರ ತಾಗಿ ಯಾವ ಗೋಡೆಗೂ ಕಿವಿ ಇಲ್ಲ ಅನ್ನುವುದನ್ನು ಖಾತ್ರಿಪಡಿಸಿಕೊಂಡು ಗಂಡನ ಬಳಿ, ‘ಎದರೂ ದೂರ ಹೋಗಿ ಜೀವನ ನಡೆಸೋಣ’ ಎಂದು ಕೇಳಿದಾಗ ಅವನೂ ಅಸಹಾಯಕನಾಗಿ ನಿಂತಿದ್ದ.
ಅಮ್ಮನ ಬಳಿ ಹೋಗಿ, ನಾನೂ ನಿನ್ನ ಜತೆಯೇ ಇರುತ್ತೇನೆ ಅಂತ ಹೇಳಿದ್ರೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂದಿದ್ದಳು. ಜತೆಗಾರ ಗಂಡನೂ ಜತೆಗಿಲ್ಲ, ಹೆತ್ತ ತಾಯಿಯೂ ಕುಲದಿಂದ ಹೊರಗೆ ಹಾಕಿದ್ದಳು. ನಾನೊಬ್ಬಳು ಆತ್ಮವಿರುವ ಕೀಲಿ ಗೊಂಬೆಯಾಗಿದ್ದೆ.
ಅದೊಂದು ದಿನ ಗಂಡನ ದೃಷ್ಟಿಯಲ್ಲಿ ನನ್ನ ದೃಷ್ಟಿಯನ್ನು ಲೀನವಾಗಿಸಿ ಆಸೆಗಳನ್ನು ಹೇಳಿಕೊಂಡಾಗ, ನೀನು ಅಲ್ಲಿ ಮಾಡುವ
ಕೆಲಸವನ್ನ ಕೃಷಿಯ ಮಾಡು ಎನ್ನುವ ಮಾತು ಹೊರಬಿತ್ತು. ಎಂಟು ಎಕರೆ ಕಲ್ಲುಗಳೇ ತುಂಬಿಕೊಂಡಿದ್ದ ಭೂಮಿ ನನಗೆ ದೊರೆತಿತ್ತು.
ಎಲ್ಲಿ ಹುಡುಕಿದರೂ ಮರೀಚಿಕೆಗಳು ತುಂಬಿದ್ದವೇ ಹೊರತು ನೀರ ಚಿಲುಮೆಗಳ ಗುರುತಿಲ್ಲ. ಮೊದಲು ಹನ್ನೆರಡು ಬೋರ್ ವೆಲ್‌ಗಳನ್ನು ತೆಗೆದಾಗ ಒಂದು ಹನಿ ನೀರೂ ಕಾಣುವ ಲಕ್ಷಣವಿಲ್ಲ. ಮತ್ತೆ ತೋಡಬೇಕೆಂದರೆ ಹಣ ಖಾಲಿಯಾಗಿತ್ತು. ತವರು ಮನೆಯಲ್ಲಿ ನೀಡಿದ್ದ ಎಲ್ಲ ಒಡವೆಗಳನ್ನೂ ನೀರಿಗಾಗಿ ಪಾಲು ಮಾಡಿದ್ದೆ. ಒಡವೆಗಳನ್ನೆಲ್ಲ ನೀರಿಗಾಗಿ ಮಾರಿದ ನಂತರ ನನ್ನ
ಬಳಿ ಉಳಿದಿದ್ದು ಎರಡು ಬಂಗಾರದ ಬಳೆಗಳು ಮಾತ್ರ. ಅದನ್ನೂ ಮಾರಿ, ಕೊನೆಯ ಬೋರ್‌ವೆಲ್ ತೆಗೆಯುವ ಸಮಯಕ್ಕೆ ಮಣ್ಣನ್ನು ಹಿಡಿದು, ಭೂಮಾತೆಯೂ ಒಂದು ಹೆಣ್ಣು ಎಂದು ನಂಬಿ ಕಣ್ಣಲ್ಲಿ ನೀರು ಇಳಿಸುತ್ತಿರುವಾಗ ಸಿಹಿ ಸುದ್ದಿ ಬಂತು.
ಒಂದೂವರೆ ಇಂಚು ನೀರು ಉಕ್ಕಿ ಬಂದಿತ್ತು. ಮೊದಲ ಎರಡು ಮೂರು ವರ್ಷಗಳ ಕಾಲ ಕೃಷಿಯಲ್ಲಿ ಲಾಭ ದೊರೆತಿತ್ತು. ಲಕ್ಷಗಟ್ಟಲೆ ಹಣ ಸಂಪಾದನೆಯೂ ಆಗಿತ್ತು. ಇಪ್ಪತ್ಮೂರು ಲಕ್ಷ ರೂಪಾಯಿಗಳನ್ನ ಹೂಡಿ ದಾಳಿಂಬೆ ಬೆಳೆದು ಬೆಂಗಳೂರಿಗೆ ಕಳುಹಿಸಿzಗ ಅದಕ್ಕೆ ರೋಗ ಬಂದಿದೆ ಅನ್ನುವ ಕಹಿಸುದ್ದಿ ತಿಳಿದು ಮನೆಯ ಗೊಬ್ಬರಗುಂಡಿಯ ಪಾಲಾಗಿತ್ತು. ಆ ವಿಷಯ
ತಿಳಿದಾಗ ರಾತ್ರೋ ರಾತ್ರಿ ಮನೆಯ ಮುಂದೆ ಸಾಲ ನೀಡಿದ್ದ ಮಹೋದಯರೆಲ್ಲ ಜಮಾಯಿಸಿದ್ದರು.
ಲಾಭ ಇದ್ದಾಗ ಮಾತನಾಡಿಸುವ ಜನರೆಲ್ಲ ಮೂಗುಮುರಿದರು. ‘ಓದಿದ ಈಕಿಗೆ ಧೀಮಾಕು ಕಮ್ಮಿ ಇಲ್ಲ’ ಎನ್ನುವ ಮಾತುಗಳು ಮೂಲೆ ಮೂಲೆಯಲ್ಲಿ ಕೇಳುತ್ತಿತ್ತು. ಆ ಬಾಧೆಯನ್ನ ತಡೆಯಲಾರದೆ ಸಾವಿನ ಕದ ತಟ್ಟಿದ್ದೆ. ಆ ಸಮಯಕ್ಕೆ ಗಂಡ ತನ್ನ ಅವನ ಉಳಿತಾಯದ ಹಣವನ್ನೆ ನನ್ನ ಮೇಲೆ ವಿನಿಯೋಗ ಮಾಡಿ ಬದುಕಿಸಿದ್ದ. ಆರೋಗ್ಯ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಗಂಡ ಮತ್ತೊಂದು ಹೊಸ ಕನಸನ್ನು ಕಟ್ಟಿಕೊಟ್ಟಿದ್ದ. ಎಲ್ಲಿಂದಲೋ ಸಾಲ ತಂದು ಮತ್ತೆ ಕೃಷಿ ಮಾಡುವಂತೆ ಸೂರ್ತಿ ನೀಡಿದ್ದ.
ದೇಹಕ್ಕೆ ಆತ್ಮವಾಗಿ ನಿಂತಿದ್ದ. ಸಾಧನೆಯ ಜ್ವಾಲೆ ಮತ್ತೆ ಉರಿದಿತ್ತು. ಕೃಷಿಯಲ್ಲಿ ಮುಂಚೆ ಮಾಡಿದ್ದ ತಪ್ಪುಗಳು ನನ್ನ ಅರಿವಿಗೆ ಬಂದಿತ್ತು.
೪೫ ಡಿಗ್ರಿ ತಾಪಮಾನ, ಒಂದು ಇಂಚು ನೀರು ಇರುವ ಪ್ರದೇಶದಲ್ಲಿ ೨೧೦೦ ಶ್ರೀಗಂಧ, ೫೦೦ ದಾಳಿಂಬೆ ಗಿಡ, ೬೦೦ ಮಾವಿನ ಗಿಡ,
೬೦೦ ಫೇರಲೆ, ೪೫೦ ಸೀತಾಫಲ, ೫೦ ಬೆಟ್ಟದ ನೆಲ್ಲಿಕಾಯಿ, ೧೦೦ ಹುಣಸೆ, ೧೦೦ ಕರಿಬೇವು, ೧೦೦ ನಿಂಬೆ, ೮೦೦ ಸಾಗವಾನಿ, ೧೦೦ ತೆಂಗಿನ ಮರಗಳ ಜತೆ ಕುರಿ, ಕೋಳಿ, ಜೇನಿನ ಸಂಗಡ ಹೈನುಗಾರಿಕಾ ಕೃಷಿಯನ್ನು ಮಾಡಿದ್ದು, ಇವತ್ತು ನನ್ನ ಭೂಮಿಯಲ್ಲಿ
ಬೆಳೆದ ಶ್ರೀಗಂಧ ಇಡೀ ದೇಶಕ್ಕೆ ತನ್ನ ಅಸ್ತಿತ್ವ ತೋರುತ್ತಿದೆ.
ಅಂದು ಹೆಣ್ಣೊಬ್ಬಳು ಹುಟ್ಟಿದಾಗ ಮನೆಯಲ್ಲಿ ಆವರಿಸಿದ್ದ ಕಾರ್ಮೋಡ, ಇಂದು ಅದೇ ಹೆಣ್ಣು ಕೃಷಿ ಮಾಡುವಾಗ ಕರಗಿ ಸಂತಸದ ಮಳೆಯಾಗಿ ಸುರಿದು ಬದುಕೆಂಬ ಆಗಸವನ್ನು ಸ್ವಚ್ಛಂದಗೊಳಿಸಿದೆ. ವೈಜ್ಞಾನಿಕವಾಗಿ ಚಿಂತನೆ ನಡೆಸಿ ಕೃಷಿ ನಡೆಸಿದರೆ
ಭೂತಾಯಿ ಕೈಬಿಡುವುದಿಲ್ಲ ಅನ್ನುವುದಕ್ಕೆ ಇನ್ನೂ ದೊಡ್ಡ ಸಾಕ್ಷಿ ಬೇಕೆ? ಸಾಧನೆ ಎಂದರೆ ಅದು ಕೇವಲ ಒಂದೆರಡು ದಿನಗಳಲ್ಲಿ ಸಿದ್ಧಿಸುವಂತಹದ್ದಲ್ಲ. ಅದೊಂದು ತಪಸ್ಸು.
ಹಣ ಇದ್ದವರು ಹಣದಲ್ಲಿ ಜೂಜು ಆಡಿದರೆ, ಕೃಷಿಕರು ಮಣ್ಣಿನ ಜತೆ ಜೂಜು ಆಡುತ್ತಾರೆ. ಪಂಚಭೂತಗಳೇ ಇಲ್ಲಿ ಆಟಗಾರರು,
ರೈತರು ಭೂತ ವರ್ತಮಾನದ ದಾಳಗಳು. ರೈತನ ರಟ್ಟೆಯಲ್ಲಿ ಎಲ್ಲಿಯವರೆಗೆ ಬಲ ಇರುತ್ತದೆಯೊ ಅಲ್ಲಿಯವರೆಗೆ ಅವನು ಹಣ
ಸಂಪಾದನೆ ಮಾಡುವುದಕ್ಕೆ ಸಾಧ್ಯ, ನಂತರ ಅವನಿಗೆ ಆದಾಯವೂ ಇರದಂತೆ ಆಗಿಬಿಡುತ್ತದೆ. ತಮ್ಮಮಕ್ಕಳೂ ವೈದ್ಯರಾಗಬೇಕು, ಎಂಜಿನಿಯರ್ ಆಗಬೇಕು ಅಂತ ಶ್ರಮಪಡುವ ಅದೆಷ್ಟೋ ರೈತರು ತಮ್ಮ ಬಾಳನ್ನೇ ಕಷ್ಟದಲ್ಲಿ ತೇಯುತ್ತಾರೆ, ಆದರೆ ಕೃಷಿಕನ ಜೀವನವೂ ವಯಸ್ಸಾದ ನಂತರ ಶ್ರೀಮಂತಿಕೆಯಿಂದ ಕೂಡಿರುವುದಕ್ಕೆ ಸಾಧ್ಯ.
ಯಾವುದೋ ಒಂದು ದಂಧೆಯಿಂದಲ್ಲ ಕೃಷಿಯಿಂದ ಮಾತ್ರ. ಅದು ಹೇಗೆ ಅನ್ನುವುದನ್ನು ಮುಂದಿನ ಅಂಕಣದಲ್ಲಿ ತಿಳಿಸುತ್ತೇನೆ.