ಚಂಡೀಗಢ: ನಡೆಯಲಿರುವ ವಿಧಾನಸಭೆ ಚುನಾವಣೆ(2022) ಗಾಗಿ ಆಮ್ ಆದ್ಮಿ ಪಕ್ಷ ಸಿದ್ಧತೆ ಜೋರಾಗಿ ನಡೆದಿರುವಾಗಲೇ ಎಎಪಿ ಹಾಲಿ ಶಾಸಕಿ ಪಕ್ಷದ ಪ್ರಾಥಮಿಕ ಸದಸ್ಯ ತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದು ಪಕ್ಷಕ್ಕೆ ಹಿನ್ನಡೆಯಾಗಿದೆ.
ಭಟಿಂಡಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕಿ ರುಪಿಂದರ್ ಕೌರ್ ರೂಬಿ ಅವರು ಪಕ್ಷದ ಸದಸ್ಯತ್ವ ತೊರೆಯಲು ಮುಂದಾಗಿರು ವುದಾಗಿ ಘೋಷಿಸಿ, ತಮ್ಮ ರಾಜೀನಾಮೆ ಪತ್ರ ವನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸಿದ್ದಾರೆ.
ಪಕ್ಷದ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್ , ಭಗವಂತ್ ಮಾನ್ ಅವರನ್ನು ಸಂಬೋಧಿಸಿ ತಮ್ಮ ರಾಜೀನಾಮೆ ಬಗ್ಗೆ ತಿಳಿಸಿ ದ್ದಾರೆ. ದಯವಿಟ್ಟು ನನ್ನ ರಾಜೀನಾಮೆ ಪತ್ರವನ್ನು ಸ್ವೀಕರಿಸಿ, ಸಮ್ಮತಿಸಿ ಎಂದು ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಬಹುಮತ ಗಳಿಸಿತ್ತು. ಶಿರೋಮಣಿ ಅಕಾಲಿ ದಳ-ಭಾರತೀಯ ಜನತಾ ಪಕ್ಷದ ಮೈತ್ರಿ ಸರ್ಕಾರವನ್ನು ಕೆಳಗಿಳಿಸಿ, ದಶಕದ ಬಳಿಕ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಪೈಪೋಟಿ ನೀಡಿದ್ದ ಆಮ್ ಆದ್ಮಿ ಪಕ್ಷ ಎರಡನೇ ಸ್ಥಾನ ಗಳಿಸಿತ್ತು. 117 ಸದಸ್ಯ ಬಲದ ವಿಧಾನಸಭೆಯಲ್ಲಿ ಎಎಪಿ 20 ಸ್ಥಾನ ಪಡೆದುಕೊಂಡಿತ್ತು. ಶಿರೋಮಣಿ ಅಕಾಲಿ ದಳಕ್ಕೆ 15 ಕ್ಷೇತ್ರದಲ್ಲಿ ಮಾತ್ರ ಗೆಲುವು ಲಭಿಸಿದ್ದರೆ, ಬಿಜೆಪಿ 3 ಸ್ಥಾನ ಗೆದ್ದು ಕೊಂಡಿತ್ತು.