ಶಶಾಂಕಣ
ಶಶಿಧರ ಹಾಲಾಡಿ
shashidhara.halady@gmail.com
ಮನೆ ಸುತ್ತ ಬೆಳೆದಿದ್ದ ಮರಗಳ ಜತೆಗಿನ ವರ್ಷಗಳ ಕಾಲ ಗೆಳೆತನ, ಸಾಂತ್ಯವು ಬಹು ಮಧುರ. ದೀರ್ಘಕಾಲದ ಈ ಗೆಳೆತನದ ಇನ್ನೂ ಹಲವು ಮಜಲುಗಳಿವೆ. ಒಂದೊಂದೂ ಮರದ ಕುರಿತು, ಗಿಡದ ಕುರಿತು, ಬಳ್ಳಿಯ ಕುರಿತು ಆತ್ಮೀಯವಾಗಿ ಹಂಚಿಕೊಳ್ಳುವಷ್ಟು ಸರಕುಗಳಿವೆ.
‘ಅಂಗಾರ ಅಂಗಾರ ಅಪ್ಪಯ್ಯ, ತಗ್ಗಿಗೆ ಬಿದ್ದರೆ ಕುಪ್ಪಯ್ಯ, ಒತ್ತಿ ಕಂಡರೆ ಕೆಂಪಯ್ಯ’ ಇದು ಹೆಬ್ಬಲಸಿನ ಹಣ್ಣಿನ ಬಗ್ಗೆ ಇರುವ ಒಂದು ಎದುರುಕಥೆ (ಒಗಟು). ಹೆಬ್ಬಲಸು ಗೊತ್ತು ತಾನೆ? ದಟ್ಟ ಕಾಡಿನಲ್ಲಿ ಮತ್ತು ಕಾಡಂಚಿನ ಊರುಗಳಲ್ಲಿ ಇರುವ ಬೃಹತ್ ಮರ.
ನಮ್ಮ ಮನೆ ಹತ್ತಿರ, ದರೆಗೆ ತಾಗಿಕೊಂಡು ಹೆಬ್ಬಲಸಿನ ಐದು ಮರಗಳಿದ್ದವು. ಇದರ ಕಾಯಿಯ ಗಾತ್ರ ಮಾತ್ರ ಹೆಸರಿಗೆ ವ್ಯತಿರಕ್ತ. ಪುಟಾಣಿ ಹಣ್ಣು ಇದು. ಹಲಸಿನ ಹಣ್ಣಿನ ಮಿನಿಯೇಚರ್ ಎನಿಸುವ ಹೆಬ್ಬಲಸಿನ ಹಣ್ಣನ್ನು, ನಗರದವರು, ಬಯಲುಸೀಮೆಯವರು ನೋಡಿರುವ ಸಾಧ್ಯತೆ ತೀರಾ ಕಡಿಮೆ. ಎತ್ತರವಾದ ಹೆಬ್ಬಲಸಿನ ಮರದ ತುದಿಯಲ್ಲಿ ಬಿಡುವ ನೂರಾರು ಹಣ್ಣುಗಳು ಬೆಳಗಿನ ಬಿಸಿಲಿಗೆ ಹೊಳೆಯುವ ಸೊಗಸನ್ನು ಕಂಡೇ, ಜನಪದರು ಮೇಲಿನ ಎದುರುಕಥೆಯನ್ನು ಕಟ್ಟಿರಬೇಕು.
ಬೇಸಿಗೆ ಕಾಲಿಡುವ ಸಮಯದಲ್ಲಿ, ಹೆಬ್ಬಲಸಿನ ಮರಗಳಲ್ಲಿ ನೂರಾರು ಹಣ್ಣುಗಳು ಮಾಗುತ್ತವೆ. ಎರಡು ಮುಷ್ಠಿ ಗಾತ್ರದ ಈ ಹಣ್ಣೊಂದರಲ್ಲಿ ಐವತ್ತರಿಂದ ನೂರು ತೊಳೆಗಳು. ಚಿನ್ನದ ಬಣ್ಣದ ಒಂದೊಂದೇ ತೊಳೆಯನ್ನು ಬಾಯಿಗೆ ಹಾಕಿಕೊಂಡು, ರುಚಿ ಸವಿದು, ಬೀಜ ಉಗಿಯಬೇಕು. ಸಾಮಾನ್ಯವಾಗಿ ಎತ್ತರವಾಗಿ ಬೆಳೆಯುವ ಹೆಬ್ಬಲಸಿನ ಮರದ ತುದಿಯಿಂದ ಬಲಿತ, ರುಚಿಕರ ಹಣ್ಣುಗಳನ್ನು ಸಂಗ್ರಹಿಸುವುದೇ ಒಂದು ಕಲೆ. ಏಕೆಂದರೆ, ಮರ ಹತ್ತಿ ಹಣ್ಣನ್ನು ಕೊಯ್ದು ಕೆಳಕ್ಕೆ
ಎಸೆದರೆ, ಮುದ್ದೆಯಾಗಿ ತೊಳೆಗಳೆಲ್ಲ ಮಣ್ಣು ಸೇರುತ್ತವೆ. ಬುಟ್ಟಿ ಅಥವಾ ಗೋಣಿಚೀಲ ಹಿಡಿದು ಮರಹತ್ತಿ ಕಾಯಿ ಕೊಯ್ದು ಕೆಳಗಿಳೀಸಿದರೆ ಮಾತ್ರ ರುಚಿ ರುಚಿಯಾದ ಹಣ್ಣನ್ನು ತಿನ್ನಬಹುದು.
ನಮ್ಮೂರಿನ ಕೆಲವು ಸಾಹಸಿ ಯುವಕರು, ಬಳ್ಳಿಗಳನ್ನು ಒಂದಕ್ಕೊಂದು ಬಿಗಿದು, ಮೂವತ್ತು ಅಡಿ ಉದ್ದದ ದಾರ ಮಾಡಿ, ಅದರ ಒಂದು ತುದಿಗೆ ಹಣ್ಣನ್ನು ಕಟ್ಟಿ, ಕೆಳಗೆ ನಿಂತವರ ಕೈಗೆ ಸಿಗುವಂತೆ ನಿಧಾನವಾಗಿ ಕೆಳಗಿಳಿಸು ತ್ತಿದ್ದರು! ಹೆಬ್ಬಲಸಿನ ಕಾಯಿಗಳನ್ನು ತಂದು, ಮನೆ ಎದುರಿನ ಹುಲ್ಲುಕುತ್ರಿಯ ಅಡಿ ಇಟ್ಟರೆ, ನಾಲ್ಕಾರು ದಿನಗಳಲ್ಲಿ ಹಣ್ಣಾಗುತ್ತದೆ. ಆದರೆ ಮರದಲ್ಲಿ ಹಣ್ಣಾದ ರುಚಿ ಇದಕ್ಕೆ ಬರುವುದಿಲ್ಲ. ಪ್ರತಿ ಬೇಸಿಗೆಯಲ್ಲೂ ಹತ್ತಾರು ಹೆಬ್ಬಲಸಿನ ಹಣ್ಣುಗಳನ್ನು ತಿಂದ ಸವಿರುಚಿಯ ನೆನಪು ಮನದಲ್ಲಿ ಸದಾ ಹಸಿರು. ಈ ಹಣ್ಣಿನ ಬೀಜ ಸಂಗ್ರಹಿಸಿ, ತಲೆಗೆ ಹಾಕುವ ಎಣ್ಣೆಯನ್ನು ತಯಾರಿಸುತ್ತಿದ್ದರೆಂದು ನಮ್ಮ ಅಮ್ಮಮ್ಮ ಹೇಳುತ್ತಿದ್ದರು. ಅದನ್ನು ದೀಪ ಬೆಳಗಲೂ ಉಪಯೋಗಿಸಬಹುದಿತ್ತು. ಇದೇ ರೀತಿ, ಹಿಂದಿನ ದಿನಗಳಲ್ಲಿ, ಅಂದರೆ ಸೀಮೆ ಎಣ್ಣೆ ಅಂಗಡಿಗಳಿಗೆ ಬರುವ ಮುಂಚೆ, ಹೊನ್ನೆ ಕಾಯಿಯಿಂದಲೂ ಎಣ್ಣೆ ಮಾಡಿ, ದೀಪ ಹಚ್ಚುತ್ತಿದ್ದರಂತೆ.
ಕಾಡಿನ ಅಂಚಿನಲ್ಲಿ ಬೆಳೆದು, ಗೆಳೆಯನಂತೆ ರುಚಿಕರ ಹಣ್ಣುಗಳನ್ನು ನೀಡುತ್ತಿದ್ದ ಇನ್ನೊಂದು ಮರವೆಂದರೆ ಚೇಂಪಿಮರ. ದ್ರಾಕ್ಷಿ ಹಣ್ಣಿನ ಗಾತ್ರ, ದಟ್ಟ ಗುಲಾಬಿ ಬಣ್ಣವಿರುವ ಚೇಂಪಿ ಹಣ್ಣುಗಳು ಬೇಸಿಗೆಯಲ್ಲಿ ಜಾಸ್ತಿ. ನಮ್ಮ ಶಾಲೆಗೆ ಹೋಗುವ ದಾರಿಯಲ್ಲಿ ಎರಡು ಕಡೆ ಚೇಂಪಿ ಮರಗಳಿದ್ದವು. ಒಂದು ಮರ ಕಟ್ಟೆಮಕ್ಕಿ ಉಬ್ಬಿನಿಂದಾಚೆ, ದಾರಿಯಿಂದ ಸ್ವಲ್ಪ ದೂರದಲ್ಲಿತ್ತು. ಇನ್ನೊಂದು ನಮ್ಮೂರಿನ ಹಂಚಿನ ಕಾರ್ಖಾನೆ ಹತ್ತಿರ ತಗ್ಗಿನಲ್ಲಿ, ಕುರುಚಲು ಗಿಡದ ನಡುವೆ ಬೆಳೆದಿತ್ತು. ಹೆಚ್ಚು ಎತ್ತರವಲ್ಲದ, ಸುಮಾರು 15-20 ಅಡಿ ಎತ್ತರದ ಚೇಂಪಿ ಮರಗಳಿಂದ ಹಣ್ಣುಗಳನ್ನು ಸಂಗ್ರಹಿಸುವಾಗ, ಅದರಲ್ಲಿದ್ದ ಮುಳ್ಳುಗಳಿಂದ ತಪ್ಪಿಸಿಕೊಳ್ಳಬೇಕಿತ್ತು. ಈ ಮುಳ್ಳುಗಳಿಂದಾಗಿ, ರೈತರು ಈ ಮರಗಳನ್ನು ತಮ್ಮ ಜಮೀನಿನಲ್ಲಿ ಇಷ್ಟಪಡುತ್ತಿರಲಿಲ್ಲ.
ಮಾಗಿದ ಚೇಂಪಿ ಹಣ್ಣುಗಳು ದ್ರಾಕ್ಷಿಯಂತೆಯೇ, ಕೆಲವು ಬಾರಿ ದ್ರಾಕ್ಷಿಗಿಂತಲೂ ಹೆಚ್ಚು ರುಚಿಕರ. ಈಗ ಚೇಂಪಿಮರಗಳು ಬಹುತೇಕ ನಮ್ಮೂರಿನ ಸರಹದ್ದಿನಿಂದ ಕಣ್ಮರೆಯಾಗಿವೆ. ಕಪ್ಪು ದ್ರಾಕ್ಷಿಯನ್ನೇ ತದ್ವತ್ ಹೋಲುವ, ಅದೇ ಬಣ್ಣ-ಗಾತ್ರದ ಮತ್ತೊಂದು ಹಣ್ಣು ಎಂದರೆ ಗರ್ಚನ ಹಣ್ಣು. (ಕವಳಿ ಕಾಯಿ). ರುಚಿ ಸಹ ಕಪ್ಪು
ದ್ರಾಕ್ಷಿಯನ್ನು ಹೋಲುತ್ತದೆ. ಗುಡ್ಡದಲ್ಲಿ, ಅಂದರೆ ದಟ್ಟ ಕಾಡು ಇರದ ಜಾಗದಲ್ಲಿ ಬೆಳೆಯುವ ಗರ್ಚನ ಗಿಡಗಳಲ್ಲಿ ಜೊಂಪೆ ಜೊಂಪೆ ಹಣ್ಣುಗಳು; ಮುಳ್ಳಿನ ಸಂದಿಯಿಂದ ಅವುಗಳನ್ನು ಬಿಡಿಸಿ ತಿನ್ನುವ ಮಜವೇ ಮಜ.. ವಿಶೇಷವೆಂದರೆ, ಮಲ್ಲಿಗೆ ಹೂವನ್ನು ಹೋಲುವ ಗರ್ಚನ ಹೂವುಗಳನ್ನು ಸಹಾ ನಾವು ಮಕ್ಕಳು ತಿನ್ನುತ್ತಿದ್ದೆವು. ಇದರ ಕಾಯಿಯನ್ನು, ಹೂವನ್ನು, ಎಲೆಯನ್ನು ಕಿತ್ತರೆ ಬಿಳಿ ಹಾಲಿನಂತರ ದ್ರವ ಸೂಸುತ್ತಿದ್ದುದು ಮತ್ತೊಂದು ಅಚ್ಚರಿ.
ಹುಳಿ ರುಚಿಯ ಹೂ ಬಿಡುವ ಗರ್ಚನ ಗಿಡವು, ಉಪ್ಪಿನ ಕಾಯಿ ಮಾಡಬಲ್ಲಂತಹ ಕಾಯಿಗಳನ್ನೂ ಕೊಡುತ್ತವೆ. ಆ ಕಾಯಿಗಳನ್ನು ಬುಟ್ಟಿಗಟ್ಟಲೆ ಸಂಗ್ರಹಿಸಿ ಉಪ್ಪಿನ ಕಾಯಿ ಮಾಡುವುದೆಂದರೆ, ಕೆಲವು ಹೆಂಗೆಳೆಯರಿಗೆ ಅತೀವ ಆಸಕ್ತಿ. ಅವರು ಉಪ್ಪಿನ ಕಾಯಿಗೆ ಕೊಯ್ದ ನಂತರ, ಗಿಡದಲ್ಲೇ ಉಳಿದ ಕಾಯಿಗಳು ಮಾಗಿದಾಗಲೇ ದ್ರಾಕ್ಷಿ ರುಚಿಯ ಹಣ್ಣುಗಳು ದೊರೆಯುವುದು. ಕುರುಚಲು ಗಿಡವಾಗಿ ಬೆಳೆಯುವ ಈ ಗಿಡಗಳನ್ನು ಹಾಗೆಯೇ ಬೆಳೆಯ ಗೊಟ್ಟರೆ, ಆರೆಂಟು ಅಡಿಯ ಪುಟ್ಟ ಮರವಾಗಿ ಬೆಳೆಯುತ್ತವೆ – ಬಿಳಿದಾಸವಾಳದ ಗಿಡದ ರೀತಿ.
ಗರ್ಚನ ಕಾಯಿಯ ಉಪ್ಪಿನ ಕಾಯಿಯನ್ನು ಇಷ್ಟಪಡುವ ನಮ್ಮೂರಿನ ಕೆಲವು ಹೆಂಗೆಳೆಯರು, ಆ ಮುಳ್ಳುಗಿಡವನ್ನು ರಕ್ಷಿಸಿ ಮರವಾಗಿ ಬೆಳೆಸುತ್ತಿದ್ದುದೂ ಉಂಟು- ಅಂದರೆ, ಗಿಡವನ್ನು ಕತ್ತರಿಸದೇ, ಕೆಲವು ಟೊಂಗೆಗಳನ್ನು ಮಾತ್ರ ತೆಗೆದು, ಎತ್ತರ ಬೆಳೆಯುವಂತೆ ಮಾಡುತ್ತಿದ್ದರು. ನಮ್ಮೂರಿನಿಂದ ತಟ್ಟುವಟ್ಟು ಮಾರ್ಗವಾಗಿ ಗುಡ್ಡೆಟ್ಟಿಗೆ ಹೋಗುವ ದಾರಿಯಲ್ಲಿ, ನೂರಾರು ಕಾಯಿಗಳನ್ನು ಬಿಡುತ್ತಿದ್ದ ಎರಡು ಗರ್ಚನ ಮರಗಳನ್ನು ನಾನು ಕಂಡಿದ್ದೆ. ಕಾಡಿನ ನಡುವೆ ಬೆಳೆಯತ್ತಿದ್ದ ಹಲವು ಕಾಟುಮಾವಿನ ಮರಗಳ ಕಥೆಯಂತೂ ಇನ್ನೂ ರುಚಿಕರ. ಒಂದೊಂದು ಮರದ ಹಣ್ಣು ಒಂದೊಂದು ರುಚಿ. ಆ ಪುಟಾಣಿ ಹಣ್ಣುಗಳಲ್ಲಿ, ಕೆಲವು ಈಗಿನ ಮಲ್ಲಿಕಾ ಹಣ್ಣಿನ ರುಚಿ!
ಬೇಸಗೆಯ ಬಿಸಿಲಿನಲ್ಲಿ ನೆರಳು ನೀಡುವ ಆ ಬೃಹತ್ ಮಾವಿನ ಮರದ ಅಡಿ ಹೋದರೆ, ಒಂದಾದರೂ ಹಣ್ಣು ಸಿಗಿದಿದ್ದರೆ ಹೇಳಿ! ಕೆಲವು ಮರಗಳ ಬುಡದಲ್ಲಿ ನೂರಾರು ಕಾಟು ಮಾವಿನ ಹಣ್ಣುಗಳು ಬಿದ್ದಿರುತ್ತಿದ್ದುದೂ ಇದೆ. ಈ ಹಣ್ಣುಗಳಲ್ಲಿ ಮಾಂಸಲ ಭಾಗ ಕಡಿಮೆ, ಗೊರಟನ್ನು ಚೀಪುತ್ತಾ, ಬಹು ರುಚಿಕರ ಎನಿಸುವ
ಆ ಹಣ್ಣುಗಳನ್ನು ತಿಂದು, ಗೊರಟನ್ನು ಎಸೆಯುವಾಗ ಒಂದು ನುಡಿಗಟ್ಟು ‘ಏ ಅಣ್ಣಾ, ಗೊರಟಿನ ಬೆನ್ನರ ಓಡು!’ ಎಂದು ಪಕ್ಕದಲ್ಲಿದ್ದವರಿಗೆ ಹೆಳುವ ಹಾಸ್ಯ. ಅವರು
ಅದನ್ನು ಕೇಳಿ ಸುಮ್ಮನಿರುತ್ತಾರಾ? ಇನ್ನೊಂದು ಹಾಸ್ಯಚಟಾಕಿ ಹಾರಿಸುತ್ತಾರೆ! ‘ಹೆಣ್ತಿನ ಮಾರಿ ಕುದುರೆ ತಂದುಕೊಡು!’ ಬೃಹತ್ ಮಾವಿನ ಮರದ ಅಡಿ ಹಣ್ಣು ಬಿದ್ದಿರದೇ ಇದ್ದರೆ, ಮರದ ಮೇಲಿರುವ ಅಳಿಲನ್ನು ಕೇಳಿಕೊಳ್ಳುವ ನುಡಿಗಟ್ಟೂ ಉಂಟು! ‘ಚಣಿಲಣ್ಣ, ಮಣಿಲಣ್ಣ, ನಂಗೊಂದು ಹಣ್, ನಿಂಗೊಂದು ಹಣ್ ದಡ್ಡೋ ಬುಡ್ಡೋ’.
ಮೇ ತಿಂಗಳಲ್ಲಿ ಆಗಾಗ ಬರುವ ಬೀಸುಗಾಳಿಯ ಸಮಯದಲ್ಲಿ ಇಂತಹ ದೊಡ್ಡ ಕಾಟುಮಾವಿನ ಮರಗಳ ಅಡಿ ಹೋಗಿ, ಗಾಳಿಗೆ ಬಿದ್ದಿದ್ದ ನೂರಾರು ಹಣ್ಣುಗಳನ್ನು ಬುಟ್ಟಿಯಲ್ಲಿ ಆಯ್ದು ತಂದು, ಅದರ ಗೊರಟುಗಳನ್ನು ಬೇರ್ಪಡಿಸಿ, ಅರೆಯುವ ಕಲ್ಲಿನಲ್ಲಿ ಹಾಕಿ ಅರೆದು, ರಸ ಮಾಡಿ, ಬೆತ್ತದ ಗೆರಸಿಯ ಮೇಲೆ ಹರಡಿ, ಒಣಗಿಸಿದರೆ, ಮಾವಿನ ಹಣ್ಚಟ್ ತಯಾರಾಗುತ್ತಿತ್ತು. ಹತ್ತಾರು ದಿನ ಈ ರೀತಿ ರಸವನ್ನು ಹಲವು ಪದರಗಳಾಗಿ ಹರಡಿ, ಒಣಗಿಸಿದರೆ, ಎರಡು ಅಥವಾ ಮೂರು ಸೆಂಟಿ
ಮೀಟರ್ ದಪ್ಪದ ಹಣ್ಚಟ್ ಸಿದ್ಧ.
ಮಳೆಗಾಲದಲ್ಲಿ ಇದರ ಚಟ್ನಿ, ಗೊಜ್ಜು ಮಾಡಿದರೆ, ಬಹು ರುಚಿಕರ. ಒಂದೆರಡು ಅಡಿ ಅಗಲ ಇರುವ ಈ ಹಣ್ಚೆಟ್ನ್ನು ದೂಪದ ಎಲೆಯಲ್ಲಿ ಸುತ್ತಿ, ಚೆನ್ನಾಗಿ ಒಣಗಿಸಿ ಇಡಬೇಕು. ಇಲ್ಲವಾದರೆ, ಎರಡು ಮೂರು ತಿಂಗಳುಗಳಲ್ಲಿ ಅದರಲ್ಲಿ ಪುಟಾಣಿ ಹುಳಗಳಾಗುತ್ತಿದ್ದವು! ಅಂದ ಹಾಗೆ, ನಮ್ಮೂರಿನ ಗೋವೆ ಹಣ್ಣು ಅಥವಾ
ಮಾವಿನ ಹಣ್ಣಿನಲ್ಲಿ ಒಮ್ಮೊಮ್ಮೆ ಅಪರೂಪಕ್ಕೆ ಕಾಣಸಿಗುವ ಬಿಳಿ ಪುಟಾಣಿ ಹುಳಗಳೆಂದರೆ, ರೈತ ಮಕ್ಕಳಿಗೆ ತೀರ ರೇಜಿಗೆ ಇಲ್ಲ! ಏಕೆಂದರೆ ‘ಹಣ್ಣಿನ ಹುಳ ಕಣ್ಣಿಗೆ ತಂಪು’ ಎಂಬ ಗಾದೆಯನ್ನು ಹೇಳುತ್ತಾ, ಹುಳವನ್ನು ಬಿಸಾಕಿ, ಹಣ್ಣನ್ನು ಸ್ವಾಹಾ ಮಾಡುವವರೂ ನಮ್ಮೂರಲ್ಲಿದ್ದಾರೆ.
ಇಂತಹ ಹಲವು ಗಿಡಮರಗಳೇ ನನ್ನ ಗೆಳೆಯರಾಗಿ ರೂಪುಗೊಂಡಿದ್ದವು ಎಂದು ನಾನು ಹೇಳಿದ್ದರಲ್ಲಿ ನಿಮಗೆ ಅತಿಶಯೋಕ್ತಿ ಕಂಡಿದ್ದರೆ, ಈ ಮುಂದಿನ ವಿವರ ಓದಿ ನೋಡಿ. ನಮ್ಮ ಮನೆ ಹಿಂದಿನ ಸೇಡಿಮಣ್ಣಿನ ದರೆಯನ್ನು ಹತ್ತಿ ಹೋದರೆ, ಒಂದು ಹಕ್ಕಲು ಇದೆ. ಒಂದೆರಡು ಎಕರೆ ವಿಸ್ತೀರ್ಣವಿರುವ ಆ ಜಾಗದಲ್ಲಿ ನೂರಾರು
ಗಿಡಮರಬಳ್ಳಿಗಳ ಸಂತೆ. ಹಕ್ಕಲು ಎಂದರೆ, ದೊಡ್ಡ ಮರಗಳಿಲ್ಲದ, ಮಧ್ಯಮ ಗಾತ್ರದ ಮರಗಳ ತಾಣ. ನಾನು ಹೈಸ್ಕೂಲಿಗೆ, ಕಾಲೇಜಿಗೆ ಹೋಗುವಾಗ ಇದು ನನಗೆ ಬಹು ಇಷ್ಟದ ಜಾಗ.
ಪರೀಕ್ಷೆಯ ಸಮಯದಲ್ಲಿ ಓದಲಿಕ್ಕೆಂದು ಒಂದರಿಂದ ಎರಡು ತಿಂಗಳುಗಳ ರಜಾ ಕೊಡುತ್ತಿದ್ದರಲ್ಲ, ಆಗ ನಾನು ಕುಳೀತು ‘ಓದುತ್ತಿದ್ದುದು’ ಇಲ್ಲೇ. ತಾಲೂಕು
ಕೇಂದ್ರದಲ್ಲಿದ್ದ ಕಾಲೇಜಿಗೆ ಹೋಗಲೆಂದು ಮಾಡಿದ್ದ ರೂಮನ್ನು ಖಾಲಿ ಮಾಡಿ, ಹಳ್ಳಿಗೆ ವಾಪಸಾದೆ ಎಂದರೆ, ಪರೀಕ್ಷೆಯ ತನಕ ನನ್ನ ಠಿಕಾಣಿ ಮನೆಯಲ್ಲೇ! ಎರಡು ಮೂರು ಕಿಮೀ ಸುತ್ತಮುತ್ತಲಿನಲ್ಲಿ ನನಗ್ಯಾರೂ ಸಹಪಾಠಿಗಳಿರಲಿಲ್ಲ. ಕಂಬೈನ್ಡ್ ಸ್ಟಡಿ ಮಾಡುವ ಅವಕಾಶವೂ ಆ ಹಳ್ಳಿಯ ಮೂಲೆಯಲ್ಲಿದ್ದ ನನಗಿರಲಿಲ್ಲ. ಪ್ರತಿ ದಿನ ಓದಲೆಂದು ದಪ್ಪನೆಯ ಇಂಗ್ಲಿಷ್ ಪುಸ್ತಕ ಹಿಡಿದು ಹಕ್ಕಲಿಗೆ ಬರುತ್ತಿದ್ದ ನನಗೆ, ಕಂಬೈನ್ಡ್ ಸ್ಟಡಿಗೆ ಸಹಕಾರ ನೀಡುತ್ತಿದ್ದುದೇ ಅಲ್ಲಿದ್ದ ಮರಗಳು.
ಹಕ್ಕಲಿನ ತುದಿಯಲ್ಲಿ ಕೆಲವು ಮಧ್ಯಮ ಗಾತ್ರದ ಮರಗಳಿದ್ದವು. ಬೆಳಿಗ್ಗೆ ತಿಂಡಿ ಮುಗಿಸಿ, ಹಕ್ಕಲಿಗೆ ಬಂದು 15 ಅಡಿ ಎತ್ತರವಿದ್ದ ಒಂದು ಮರವನ್ನು ಹತ್ತಿ ಕುಳಿತರೆ, ಮಧ್ಯಾಹ್ನದ ಊಟದ ತನಕವೂ ಅದೇ ನನ್ನ ಸ್ಟಡಿ ಟೇಬಲ್. ಕಾಲೇಜಿನ ಲೈಬ್ರರಿಯಿಂದ ತಂದ ದಪ್ಪನೆಯ ಫಿಸಿಕ್ಸ್ ಪುಸ್ತಕ ಹಿಡಿದು, ಪುಟಬಿಡಿಸಿ, ಆಗಸ ನೋಡುತ್ತಾ ಕುಳಿತಿರುತ್ತಿದ್ದೆ! ಇಂಗ್ಲಿಷ್ ಪಠ್ಯಗಳು ನನ್ನ ತಲೆಗೆ ಇಳಿಯುತ್ತಿದ್ದುದು ತುಂಬಾ ನಿಧಾನ. ಆ ದಪ್ಪನೆಯ ಇಂಗ್ಲಿಷ್ ಪುಸ್ತಕದ ಅಕ್ಷರಗಳಿಗಿಂತಾ,
ಸುತ್ತಮುತ್ತಲೂ ಹಾರಾಡುತ್ತಿದ್ದ ಹಕ್ಕಿಗಳ ಚಿಲಿಪಿಲಿಯೇ ನನಗೆ ಹೆಚ್ಚು ಅರ್ಥವಾಗುತ್ತಿತ್ತು.
ಅಲ್ಲಿ ಕುಳಿತು, ಹೊಸದಾಗಿ ರೂಢಿಸಿಕೊಂಡಿದ್ದ ಪಕ್ಷಿವೀಕ್ಷಣೆಯ ಹವ್ಯಾಸಕ್ಕೆ ಇಂಬುಕೊಡುತ್ತಿದ್ದ ನನ್ನ ಮನ, ಗಿಡಮರಗಳ ನಡುವೆ ಇದ್ದ ಆ ಸ್ನೇಹಮಯ ವಾತಾ ವರಣವನ್ನು ಬಹುವಾಗಿ ಇಷ್ಟಪಡುತ್ತಿತ್ತು. ಹದವಾದ ದಟ್ಟಣೆಯ ಮರಗಳಿಂದ ತುಂಬಿದ್ದ ಆ ಹಕ್ಕಲಿಗೆ ಭೇಟಿ ಕೊಡುತ್ತಿದ್ದ ಅದೆಷ್ಟೋ ಹಕ್ಕಿಗಳನ್ನು ಗುರುತಿಸುವ ಅವಕಾಶ. ಮಳೆಕೋಂಗಿಲ (ಪೈಡ್ ಹಾರ್ನ್ಬಿಲ್), ಚಪ್ಪು ಕೋಂಗಿಲ (ಗ್ರೇ ಹಾರ್ನ್ಬಿಲ್), ಮೀನು ಗೂಬೆ (ಫಿಶ್ ಔಲ್), ಭೂತ ಹಕ್ಕಿ, (ಗ್ರೇಟ್ ಹಾರ್ನ್ಡ್ ಔಲ್), ಚಿಟ್ಟ ಗೂಬೆ, ಟಿಕಲ್ಸ್ -ವರ್ ಪೆಕರ್, ಸ್ವರ್ಗದ ನೊಣ ಹಿಡುಕ, ಕಾಪರ್ ಸ್ಮಿತ್, ಬಿಳಿ ಎದೆಯ ಮಿಂಚುಳ್ಳಿ, ಗೋಲ್ಡನ್ ಓರಿಯಲ್, ಬ್ಲಾಕ್ ಹೆಡೆಡ್ ಓರಿಯಲ್, ಕಾಜಾಣ, ಪುಟ್ಟ ಕಾಜಾಣ, ಕಂದು ಕಾಜಾಣ, -ರೆಸ್ಟ್ ವ್ಯಾಗ್ ಟೇಲ್, ಹಲವು ಪ್ರಭೇದದ ಸನ್ಬರ್ಡ್, ಮಿನಿ ವಿಟ್ಗಳು – ಈ ರೀತಿ ಹಕ್ಕಿಗಳ ಮೆರವಣಿಗೆ ಆ ಹಕ್ಕಲಿನಲ್ಲಿ. ನಾನು ಮರದಲ್ಲಿ ಕುಳಿತಿರುವಾಗ, ನೆಲದ ಮೇಲೆ ನಕ್ಷತ್ರ ಆಮೆ ನಿಧಾನವಾಗಿ ತರಗಲೆಗಳ ನಡುವೆ ಚಲಿಸುವುದನ್ನು ಕಂಡದ್ದುಂಟು.
ಒಮ್ಮೆ ಅಲ್ಲೇ ನಾಗರಹಾವು ಹರಿದಾಡುವುದನ್ನೂ ನೋಡಿದ್ದರೂ, ಹೆದರಿಕೆ ಆಗಲಿಲ್ಲ. ಏಕೆಂದರೆ, ಸುತ್ತಲೂ ನನ್ನ ಗೆಳೆಯರಾಗಿರುವ ಮರಗಿಡಗಳಿದ್ದವಲ್ಲ! ಜತೆಗೆ ನಮ್ಮೂರಿನಲ್ಲಿ ಹಾವುಗಳು ಮನೆಗೆ ಭೇಟಿ ನೀಡುವುದು ತೀರಾ ಸಾಮಾನ್ಯ ಸಂಗತಿ. ಮನೆ ಸುತ್ತ ಬೆಳೆದಿದ್ದ ಮರಗಳ ಜತೆಗಿನ ವರ್ಷಗಳ ಕಾಲ ಗೆಳೆತನ, ಸಾಂತ್ಯವು ಬಹು ಮಧುರ. ದೀರ್ಘಕಾಲದ ಈ ಗೆಳೆತನದ ಇನ್ನೂ ಹಲವು ಮಜಲುಗಳಿವೆ. ಒಂದೊಂದೂ ಮರದ ಕುರಿತು, ಗಿಡದ ಕುರಿತು, ಬಳ್ಳಿಯ ಕುರಿತು ಆತ್ಮೀಯವಾಗಿ ಹಂಚಿಕೊಳ್ಳುವಷ್ಟು ಇನ್ನಷ್ಟು ಸರಕುಗಳಿವೆ.
ಇನ್ನೂ ದೀರ್ಘವಾದರೆ, ಇದನ್ನು ಓದುತ್ತಿರುವ ನಿಮಗೆ ಏಕತಾನತೆ ಕಾಡಬಹುದು ಎಂದು, ಇಲ್ಲಿಗೆ ಈ ಸ್ನೇಹಕಥನವನ್ನು ಮೊಟಕುಗೊಳಿಸುವೆ. ನಿಮ್ಮ ಸ್ನೇಹಿತರ ಪೈಕಿಯೂ ಕೆಲವಾದರೂ ಗಿಡಮರಗಳು ಇರಬೇಕಲ್ಲವೆ?