ವೇದಾಂತಿ ಹೇಳಿದ ಕಥೆ
ಶಶಾಂಕ್ ಮುದೂರಿ
ಜುನೈದ್ ಎಂಬ ಓರ್ವ ಸೂಫಿ ಸಂತ ತನ್ನ ಶಿಷ್ಯರೊಂದಿಗೆ ಮಾರುಕಟ್ಟೆಯ ಬೀದಿಯಲ್ಲಿ ನಡೆಯುತ್ತಿದ್ದರು. ಯಾವ ಜಾಗದಲ್ಲೇ ಆಗಲಿ, ಅಲ್ಲಿನ ವಾತಾವರಣವನ್ನು ಕಂಡು, ಅದರ ಅಂತರಾಳವನ್ನು ಶೋಧಿಸಿ, ಆ ತಿರುಳನ್ನು ತನ್ನ ಬೋಧನೆಗಳಿಗೆ ಉಪಯೋಗಿಸುವ ಕಲೆ ಅವರಿಗೆ ಕರಗತವಾಗಿತ್ತು.
ಎಲ್ಲರೂ ಮಾರುಕಟ್ಟೆಗೆ ಬಂದರು. ಓರ್ವ ರೈತನು ತನ್ನ ಹಸುವನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ. ಆದರೆ ಆ ಹಸು ಹಠಮಾರಿ. ತಲೆ ಅಲ್ಲಾಡಿಸುತ್ತಾ, ತಾನು ಎಲ್ಲಿಗೂ ಬರುವುದಿಲ್ಲ ಎಂದು ತಂಟೆ ಮಾಡುತ್ತಿತ್ತು. ಹಸುವು ಪ್ರತಿಭಟನೆಯ ರೂಪದಲ್ಲಿ ಬೀದಿಯ ಮೇಲೆ ಮಲಗಿತ್ತು. ಆದರೂ ಅದರ ಕುತ್ತಿಗೆಗೆ ಬಿಗಿದಿದ್ದ
ಹಗ್ಗವನ್ನು ಬಲವಾಗಿ ಜಗ್ಗಿದ ರೈತನು, ಆ ಹಸುವನ್ನು ಅಕ್ಷರಶಃ ಎಳೆದುಕೊಂಡು ಹೋಗುತ್ತಿದ್ದ. ಸೂಫಿ ಸಂತ ಅವನನ್ನು ಕಂಡು ‘ಒಂದು ನಿಮಿಷ ನಿಲ್ಲು ’ ಎಂದು ವಿನಂತಿಸಿ, ತನ್ನ ಶಿಷ್ಯರತ್ತ ತಿರುಗಿ ಹೇಳಿದ ‘ ಈ ಹಸು ಮತ್ತು ವ್ಯಕ್ತಿಯ ಸುತ್ತಲೂ ನಿಲ್ಲಿ, ನಾನು ನಿಮಗೆ ಏನೋ ಒಂದನ್ನು ತಿಳಿಸಿಕೊಡುತ್ತೇನೆ’ ಎಂದರು.
ಹಸುವನ್ನು ಹಿಡಿದಿದ್ದ ವ್ಯಕ್ತಿಯೂ ನಿಂತುಕೊಂಡ. ಆ ಹಸು ಪ್ರತಿದಿನ ಇದೇ ರೀತಿ ಹಠಮಾರಿತನ ತೋರಿಸುತ್ತಿತ್ತು. ಪ್ರತಿ ದಿನ ಆ ಹಸುವನ್ನು ಎಳೆಯುವುದೇ ಆತನ ಶ್ರಮದಾಯಕ ದಿನಚರಿಯಾಗಿತ್ತು. ಈ ಗುರುಗಳು ತನ್ನ ಹಸುವಿನ ಕುರಿತು ಏನನ್ನು ಹೇಳಬಹುದು, ತನ್ನ ದಿನನಿತ್ಯದ ಕರ್ಮವಾಗಿರುವ ಇದರ ಹಠಮಾರಿತನ ವನ್ನು ಇವರು ಬೋಧನೆಗೆ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬ ಕುತೂಹಲ ಅವನಿಗೂ ಇತ್ತು.
ಸೂಫಿ ಸಂತರು ತನ್ನ ಶಿಷ್ಯರನ್ನು ಕೇಳಿದರು ‘ನಿಮಗೆ ಒಂದು ಪ್ರಶ್ನೆ. ಈ ಒಂದು ಸಂದರ್ಭವನ್ನು ನೋಡಿ. ಹಸು ನಡೆಯದೇ ಹಠ ಹಿಡಿದಿರುವುದರಿಂದಾಗಿ, ಈ ವ್ಯಕ್ತಿ ಅದನ್ನು ಎಳೆದುಕೊಂಡೇ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇಲ್ಲಿ ಯಾರು ಯಾರಿಗೆ ಕಟ್ಟು ಬಿದ್ದಿದ್ದಾರೆ? ಹಸುವು ವ್ಯಕ್ತಿಗೆ ಕಟ್ಟು ಬಿದ್ದಿದೆಯೋ ಅಥವಾ ವ್ಯಕ್ತಿಯು ಹಸುಗೆ ಕಟ್ಟು ಬಿದ್ದಿರುವನೆ?’ ಒಬ್ಬ ಶಿಷ್ಯ ಹೇಳಿದ ‘ಹಸುವು ಈ ವ್ಯಕ್ತಿಗೆ ಕಟ್ಟುಬಿದ್ದಿದೆ. ಏಕೆಂದರೆ, ಈ ವ್ಯಕ್ತಿಯು ಹಸುವಿನ ಯಜಮಾನ. ಯಜಮಾನ ಎಲ್ಲೆಲ್ಲಿ ಹೋಗುತ್ತಾನೋ, ಹಸುವು ಅವನನ್ನು ಅನುಸರಿಸಬೇಕು. ಇಲ್ಲಿ ವ್ಯಕ್ತಿಯು ಸಾಹುಕಾರ ಇದ್ದಂತೆ ಮತ್ತು ಹಸುವು ಅವನ ಗುಲಾಮ ಇದ್ದಂತೆ’.
ಸೂಫಿ ಸಂತರು ಶಿಷ್ಯನ ಮಾತನ್ನು ಕೇಳಿ ನಸುನಗುತ್ತಾ, ‘ಈಗ ನೋಡಿ ಒಂದು ಚಮತ್ಕಾರ’ ಎನ್ನುತ್ತಾ ಆ ವ್ಯಕ್ತಿಯ ಕೈಯಿಂದ ಹಗ್ಗವನ್ನು ತೆಗೆದುಕೊಂಡರು. ಹಸುವು ನೆಲದ ಮೇಲೆ ತನ್ನ ಮೂತಿ ಊರಿ, ಹಠಮಾಡಿ ಮಲಗಿಕೊಂಡೇ ಇತ್ತು. ಸಂತರು ಒಂದು ಚಾಕುವಿನಿಂದ ಹಗ್ಗವನ್ನು ಕತ್ತರಿಸಿದರು. ಮಲಗಿದ್ದ ಹಸುವು ತಕ್ಷಣ ಎದ್ದು, ಬೀದಿಯುದ್ದಕ್ಕೂ ಓಡುತ್ತಾ ಹೋಗಿ, ತಪ್ಪಿಸಿಕೊಂಡಿತು. ಆ ರೈತನು‘ಅಯ್ಯೋ, ನನ್ನ ಹಸು ತಪ್ಪಿಸಿ ಕೊಂಡು ಹೋಯಿತು’ ಎನ್ನುತ್ತಾ ಹಸುವಿನ ಹಿಂದೆ ಓಡತೊಡಗಿದ.
ಅದನ್ನು ಕಂಡು ಗುರು, ಶಿಷ್ಯರು ಎಲ್ಲರೂ ನಕ್ಕರು. ಗುರು ಹೇಳಿದರು, ‘ಶಿಷ್ಯರೇ, ಏನಾಗುತ್ತಿದೆ ನೋಡಿ! ಈಗ ತಾನೆ ಆ ಮನುಷ್ಯನನ್ನು ಹಸುವಿನ ಯಜಮಾನ ಎಂದಿರಿ. ಹಸುವು ಅವನನ್ನು ಹಿಂಬಾಲಿಸಬೇಕು ಎಂದು ನಿಮಗೆ ಅನಿಸಿತು. ಈಗ ನೋಡಿ, ಯಾರು ಯಜಮಾನರು ಅಂತ. ಹಸುವನ್ನು ಆ ವ್ಯಕ್ತಿಯು ಹಿಂಬಾಲಿಸು ತ್ತಿದ್ದಾನೆ. ಆದರೆ ಆ ಹಸುವಿಗೆ ಅವನ ಮೇಲೆ ಲವಲೇಶವೂ ಭಯ ಇಲ್ಲ, ಆಸಕ್ತಿಯೂ ಇಲ್ಲ. ನಿಜ ಹೇಳಬೇ ಕೆಂದರೆ, ಹಸುವು ಅದರ ಯಜಮಾನನನ್ನು ತನ್ನ ಹಿಂದೆ ಹಿಂಬಾಲಿಸುವಂತೆ ಮಾಡಿದೆ!’ ಶಿಷ್ಯರು ಓಡುತ್ತಿದ್ದ ಹಸುವನ್ನೂ, ಅದರ ಹಿಂದೆ ಗಾಬರಿಯಿಂದ ಓಡುತ್ತಿದ್ದ ಹಸುವಿನ ಯಜಮಾನನನ್ನೂ ನೋಡಿ ಮುಸಿ ಮುಸಿ ನಗತೊಡಗಿದರು.
‘ಶ್’ ಎಂದ ಸಂತರು ಶಿಷ್ಯರನ್ನು ಉದ್ದೇಶಿಸಿ ‘ನಿಮ್ಮ ಮನಸ್ಸು ಸಹ ಇದೇ ರೀತಿ ವರ್ತಿಸುತ್ತದೆ, ಗಮನಿಸಿದ್ದೀರಾ?’ ಎಂದು ಹೇಳಿ, ಕಣ್ಣು ಮಿಟುಕಿಸಿದರು. ‘ಮನಸ್ಸಿನಲ್ಲಿ ಸುಳಿದಾಡುವ ನಾನಾ ರೀತಿಯ ಉಪಯೋಗವಿಲ್ಲದ ಯೋಚನೆಗಳು ಒಂದು ರೀತಿಯಲ್ಲಿ ನಿಷ್ಪ್ರಯೋಜಕ. ಆದರೆ ನಿಮಗೆ ಅದು ಕ್ಷಣಿಕ ಆಸಕ್ತಿ
ಹುಟ್ಟಿಸುವುದರಿಂದ, ಅದನ್ನು ಮನಸ್ಸಿನೊಳಗೇ ಬಂಧಿಸಿ, ಅದರ ಕುರಿತು ಯೋಚಿಸುತಾ ಇದ್ದೀರಿ. ಉಪಯೋಗವಿಲ್ಲದ ಅಂತಹ ಯೋಚನೆಗಳು ಮನಸ್ಸಿನಲ್ಲಿ ಅನವಶ್ಯಕ ಗೊಬ್ಬರವನ್ನು ಸೃಷ್ಟಿಸುತ್ತದೆ.
ಅಂತಹ ವಿಷಯಗಳ ಕುರಿತು ನೀವು ಆಸಕ್ತಿ ಕಳೆದುಕೊಂಡರೆ, ಆ ಕ್ಷಣದಿಂದಲೇ ಅವು ಅದೃಶ್ಯವಾಗಲು ತೊಡಗುತ್ತವೆ – ಈ ಹಸು ತಪ್ಪಿಸಿಕೊಂಡು ಓಡಿದ ರೀತಿ’. ಶಿಷ್ಯರು ಕಣ್ಮರೆಯಾದ ಹಸುವನ್ನೇ ನೋಡುತ್ತಾ ತಲೆ ಆಡಿಸಿದರು.