ಟೆಂಡರ್ ಇಲ್ಲದೇ ಕಾಮಗಾರಿಗೆ ಆದೇಶ
4ಜಿ ಕಾಯಿದೆ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳು
ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ನಗರಗಳ ಅಭಿವೃದ್ಧಿಯ ಮಹತ್ವಾಕಾಂಕ್ಷೆಯೊಂದಿಗೆ ಆರಂಭವಾಗಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಗಬೇಕಿರುವ ಕಾಮಗಾರಿಗಳನ್ನು 4ಜಿ ನಿಯಮದಡಿ ನಿರ್ಮಿತಿ ಕೇಂದ್ರದಿಂದ ಮಾಡಿಸುವ ಮೂಲಕ ಕಾನೂನು ಮೀರಿದ್ದಾರೆ ಎನ್ನುವ ಅನು ಮಾನ ಶುರುವಾಗಿದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಸ್ಮಾರ್ಟ್ ಸಿಟಿಯ ಮೂಲಕ ಆಯ್ದ ನಗರಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರಾಜಧಾನಿ ಬೆಂಗಳೂರನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವುದರಿಂದ, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಪ್ರತಿ ವರ್ಷ ಇಂತಿಷ್ಟು ಅನುದಾನ ಬಿಡುಗಡೆಯಾಗುತ್ತಿದೆ.
ಈ ಯೋಜನೆಯಲ್ಲಿ ಜಾರಿಗೊಳಿಸುವ ಕಾಮಗಾರಿಗಳನ್ನು ನಿರ್ವಹಿಸಲೆಂದೇ ಪ್ರತ್ಯೇಕ ಇಲಾಖೆಯನ್ನು ಸೃಜಿಸಲಾಗಿದೆ. ಆದರೆ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿರುವ ಕಾಮಗಾರಿ ಯನ್ನು ಟೆಂಡರ್ ಕರೆಯದೆ ನಿರ್ಮಿತಿ ಕೇಂದ್ರದ ಮೂಲಕ ನಿರ್ವಹಿಸಿ ಅನುದಾನ
ಬಿಡುಗಡೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಉದ್ಯಾನವನ ಹಾಗೂ ಮ್ಯೂಸಿಯಂ ನಿರ್ಮಾಣಕ್ಕಾಗಿ ಸ್ಮಾರ್ಟ್ ಸಿಟಿಯ ಅನುದಾನವನ್ನು ಬಳಸಿಕೊಂಡು, ನಿರ್ಮಿತಿ ಕೇಂದ್ರ ದಿಂದ ಕಾಮಗಾರಿ ಮಾಡಿರುವ ದಾಖಲೆಗಳು ಲಭ್ಯವಾಗಿದೆ.
2.45 ಕೋಟಿ ರು. ವೆಚ್ಚದಲ್ಲಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ನಿಮ್ಹಾನ್ಸ್ ಕ್ಯಾಂಪಸ್ ಹಿಂಭಾಗದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಸ್ಥೆಗಳ ಕಟ್ಟಡದ ದುರಸ್ಥಿಯನ್ನು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಮಾಡಬೇಕಿತ್ತು. ಇದಕ್ಕಾಗಿ ಟೆಂಡರ್ ಕರೆದು, ಟೆಂಡರ್ನಲ್ಲಿ ಆಯ್ಕೆಯಾದ ಗುತ್ತಿಗೆದಾರರಿಗೆ ಕಾಮಗಾರಿ ನೀಡಬೇಕಿತ್ತು. ಆದರೆ ಈ ಯಾವ ನಿಮಯವನ್ನೂ ಪಾಲಿಸದೇ, ಕೆಟಿಪಿಪಿ ಕಾಯಿದೆಯಲ್ಲಿರುವ 4ಜಿ ವಿನಾಯಿತಿ ಬಳಸಿಕೊಂಡು ‘ವರ್ಕ್ ಆರ್ಡರ್’ ನೀಡಲಾಗಿದೆ. ಇದು ಕಾನೂನು ವಿರುದ್ಧ ಎನ್ನುವ ಮಾತುಗಳನ್ನು ಕೇಳಿಬಂದಿದೆ.
ಅನಗತ್ಯ ಖರ್ಚು: ಸ್ಮಾರ್ಟ್ ಸಿಟಿ ಯೋಜನೆಯ ಕೆಲಸಗಳನ್ನು ಮಾಡಬೇಕು ಎನ್ನುವ ಕಾರಣಕ್ಕಾಗಿಯೇ ಸ್ಮಾರ್ಟ್ ಸಿಟಿ ಬೋರ್ಡ್ ಮಾಡಿ ಎಂಜಿನಿಯರ್ಗಳನ್ನು ಆಯ್ಕೆ ಮಾಡಿ, ಅವರಿಗೆ ಸಂಬಳ, ಸಾರಿಗೆ ನೀಡಲಾಗುತ್ತಿದೆ. ಆದರೆ ಸ್ಮಾರ್ಟ್ ಸಿಟಿ ಯೋಜನೆಯ ಕೆಲಸವನ್ನು ಅಲ್ಲಿಂದ ಮಾಡಿಸದೆ, ನಿರ್ಮಿತಿ ಕೇಂದ್ರಕ್ಕೆ ನೀಡಿರುವುದು ಸರಿಯಲ್ಲ. ಈ ರೀತಿ ನೀಡಿರುವುದರ ಹಿಂದೆ ಅಕ್ರಮದ
ವಾಸನೆಯಿದೆ ಎನ್ನುತ್ತಾರೆ ಅಧಿಕಾರಿಗಳು. ಈ ರೀತಿ ಮಾಡುವುದಕ್ಕೆ ಪ್ರಮುಖವಾಗಿ, ಯಾವುದೇ ಯೋಜನೆ ಬಗ್ಗೆ ಟೆಂಡರ್ ಕರೆದರೆ, ಸರಕಾರ ಅಥವಾ ಬೋರ್ಡ್ ನಿಗದಿಪಡಿಸಿದಷ್ಟು ಮೊತ್ತಕ್ಕೆ ಗುತ್ತಿಗೆದಾರರು ಹಣ ನೀಡುವುದಿಲ್ಲ. ಆದ್ದರಿಂದ ಅಧಿಕಾರಿಗಳಿಗೆ ‘ಸಂದಾಯ’ವಾಗುವುದಿಲ್ಲ ಎನ್ನುವ ಕಾರಣಕ್ಕೆ 4ಜಿ ವಿನಾಯಿತಿಯಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎನ್ನುವ
ಆರೋಪ ಕೇಳಿ ಬಂದಿದೆ.
ಏನಿದು ೪ಜಿ ಕಾಯಿದೆ?
ಕೆಟಿಪಿಪಿ ಕಾಯಿದೆ ಅನ್ವಯ 4ಜಿ ನಿಮಯವನ್ನು ಬಳಸಿಕೊಂಡು, ಟೆಂಡರ್ ಇಲ್ಲದೆ ಕಾಮಗಾರಿಗೆ ಅನುದಾನ ಬಿಡುಗಡೆ
ಮಾಡಬಹುದು. ಆದರೆ 4ಜಿಯನ್ನು ಪ್ರವಾಹ, ಬರಗಾಲ ಅಥವಾ ತುರ್ತು ಪರಿಸ್ಥಿತಿಯ ಸಮಯದಲ್ಲಿ ಮಾತ್ರ, ಅಗತ್ಯಕ್ಕೆ
ತಕ್ಕಂತೆ ಬಳಸಬಹುದು. ಆದರೆ, ಸ್ಮಾರ್ಟ್ ಸಿಟಿ ಸುಪರ್ದಿಯಲ್ಲಿರುವ ಈ ಯೋಜನೆಯಲ್ಲಿ ಯಾವುದೇ ತುರ್ತು ಇಲ್ಲದಿದ್ದರೂ
4ಜಿ ನಿಯಮದನ್ವಯ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
***
ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸೇರಿಕೊಂಡು ಈ ಅಕ್ರಮ ಮಾಡಿದ್ದಾರೆ. ಮೋದಿಯವರ ಕನಸಿನ ಕೂಸಾದ ಸ್ಮಾರ್ಟ್ ಸಿಟಿ ಯೋಜನೆಯನ್ನು ನಿರ್ಮಿತಿ ಕೇಂದ್ರ , ಸ್ಮಾರ್ಟ್ ಸಿಟಿ ಅಧಿಕಾರಿಗಳು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡು ಯೋಜನೆಯ ದಿಕ್ಕು ತಪ್ಪಿಸುತ್ತಿದ್ದಾರೆ.
– ಮರಿಲಿಂಗಗೌಡ ಮಾಲೀ ಪಾಟೀಲ್
ಸಾಮಾಜಿಕ ಕಾರ್ಯಕರ್ತ