ದಾಸ್ ಕ್ಯಾಪಿಟಲ್
ಟಿ.ದೇವಿದಾಸ್
dascapital1205@gmail.com
ಹೊಡೆದು ಬುದ್ಧಿ ಕಲಿಸುವ ಕಾಲವಿದಲ್ಲ. ಶಿಕ್ಷೆಗೆ ಪುಕಾರುಗಳು! ಒಳ್ಳೆಯ ಮಾತು ಅರ್ಥವಾಗುವುದಿಲ್ಲ! ಬುದ್ಧಿವಾದ ದೌರ್ಬಲ್ಯವೆನ್ನುವ ದುರ್ಬುದ್ಧಿ! ಕೊನೆಯ ಪಕ್ಷ ಭಯವನ್ನೂ ಹುಟ್ಟಿಸಲಾರದು.
ಇದು ಪ್ರಾರಬ್ಧವೋ ಇಚ್ಛಾಪ್ರಾರಬ್ಧವೋ ದುರದೃಷ್ಟವೋ ದುರಂತವೋ ಗೊತ್ತಾಗುತ್ತಿಲ್ಲ. ವಿದ್ಯಾರ್ಥಿಗಳ ಒಟ್ಟು ಚರ್ಯೆಯೇ ಬದಲಾಗಿ ಹೋಗಿದೆ. ತಂದೆ-ತಾಯಿ, ಮನೆ, ಶಾಲೆ, ಸಮುದಾಯ, ಶಿಕ್ಷಣ, ಶಿಕ್ಷಕ, ಕಲಿಕೆ, ಸಮಯ ಪಾಲನೆ, ಗೌರವ ಭಾವ- ಇವೆಲ್ಲ ಮೊಬೈಲ್ ಹುಚ್ಚಿನಲ್ಲಿ ಕೊಚ್ಚಿಹೋಗಿವೆ. ಮಕ್ಕಳ ಮನಸ್ಥಿತಿಯೇ ಸಂಪೂರ್ಣ ಬದಲಾಗಿ ಹೋಗಿದೆ.
ಶಾಲೆಯನ್ನು ಬಿಡಿ ಮನೆಯ ಮಕ್ಕಳ ವರ್ತನೆ ದಾರಿ ತಪ್ಪಿದೆ. ಪೋಷಕರ ಮಾತಿಗೆ ನಯಾಪೈಸೆ ಕಿಮ್ಮತ್ತಿಲ್ಲ. ಅವರನ್ನೇ ಬ್ಲ್ಯಾಕ್‌ಮೇಲ್ ಮಾಡಿ ತನಗೆ ಬೇಕಾದ ಹಾಗೆ ಬಗ್ಗಿಸಿಕೊಳ್ಳಬಲ್ಲಷ್ಟು ಮಕ್ಕಳು ಬೆಳೆದಿದ್ದಾರೆ. ಮಗ ಏನೇ ಮಾಡಿದರೂ ಸುಮ್ಮನಿದ್ದು ಸಹಿಸಿಕೊಂಡು, ಅತಿ ಪ್ರೀತಿ ತೋರುವ ತಾಯಿ, ಮಗಳಿಗಾಗಿ ಬೇಕು ಬೇಡವಾದುದ್ದನ್ನು ಕ್ಷಣಮಾತ್ರ ಒದಗಿಸುವ ಅತಿ ವ್ಯಾಮೋಹದ ತಂದೆ- ಇಬ್ಬರನ್ನೂ ತಮಗೆ ಬೇಕಾದಂತೆ ಎನ್ ಕ್ಯಾಶ್ ಮಾಡಿಕೊಂಡ ಮಕ್ಕಳ ಕಲಿಕೆಯ ಹಳಿ ತಪ್ಪದೆ ಇದ್ದಿತೇ? ಮಕ್ಕಳಿಗೆ ಮೊಬೈಲನ್ನು ಕೊಡಬಾರದೆನ್ನುತ್ತಿದ್ದ ನಾವೇ ಮಕ್ಕಳಿಗೆ ಹೊಸ ಮೊಬೈಲನ್ನೂ, ಸಿಮ್ಮನ್ನೂ ಕೊಡಿಸಿ ಪ್ರತ್ಯೇಕ ರೂಮು ಮಾಡಿಕೊಟ್ಟು ಹಳಿ ತಪ್ಪಿಸಿ ದೆವು.
ಕನಿಷ್ಠವೆಂದರೂ ಒಂದೂವರೆ ವರ್ಷ ಅದಕ್ಕಂಟಿಕೊಂಡೇ ಮಕ್ಕಳು ಶಾಲೆಯಿಂದ ದೂರವುಳಿದರು. ಮಕ್ಕಳು ಓದ್ತಾರೆಂತ ಪೋಷಕರು ನಿಟ್ಟುಸಿರು ಬಿಟ್ಟರು. ಅಪ್ಪ ಅಮ್ಮನನ್ನು ಗೆದ್ದೆವು ಎಂದು ಮಕ್ಕಳು ವಿಜಯದ ಪತಾಕೆ ಹಾರಿಸಿದರು. ಆನೆ ನಡೆದದ್ದೇ ದಾರಿ ಅಂತಾರಲ್ಲ, ಹಾಗೆ ತಾವು ನಡೆದದ್ದೇ ಸರಿಯೆಂದೂ, ಜೀವನದಲ್ಲಿ ಎಲ್ಲಕ್ಕಿಂತ ಮೊಬೈಲ್ ಮುಖ್ಯ ಎಂಬ ವಾತಾವರಣ ಮತ್ತು ಮನಸ್ಥಿತಿಯನ್ನು ಬೆಳೆಸಿದೆವು! ಕಲಿಕೆಯಷ್ಟೇ ಹಳಿ ತಪ್ಪದ್ದಲ್ಲ! ಮಕ್ಕಳ ಗುಣಸ್ವಭಾವವೇ ಬದಲಾಗಿ ಹೋಯಿತು!
ಮನೆಯೇ ಮಗುವಿನ ಮೊದಲ ಶಾಲೆ, ಜನನಿ ತಾನೆ ಮೊದಲ ಗುರುವು- ಎಂಬ ಕಾಲದಲ್ಲಿ ಬೆಳೆದ ಪೋಷಕರಿಗೆ ತಮ್ಮ ಮಕ್ಕಳಲ್ಲಿ ಅಸಹಜವಾಗಿ ಬೆಳೆದ ವಿಪರೀತಗಳನ್ನು ನಿಯಂತ್ರಿಸಲು ಸಾಧ್ಯವಾಗದಿರುವುದು ಬಲುದೊಡ್ಡ ವಿಪರ್ಯಾಸ! ನಗರಗಳಲ್ಲಿ ವಾಸಿಸುವ ಪೋಷಕರಿಗೆ ಕೆಲಸದ ಒತ್ತಡ, ಅಲ್ಲಿ ಮಕ್ಕಳದೇ ದರ್ಬಾರ್! ಹಳ್ಳಿಗಳದ್ದು ಬೇರೆಯದೇ ಕಥೆ. ನೆಟ್ ವರ್ಕ್ ಸಮಸ್ಯೆ! ಒಂದೋ ಮನೆಯನ್ನು ಬಿಟ್ಟು ಹೊರಬರಬೇಕು. ಇಲ್ಲ ನೆಟ್‌ವರ್ಕಿಗಾಗಿ ಸಂಬಂಧಿಕರ ಮನೆ ಸೇರಬೇಕು. ಹೊಲತೋಟಗಳಲ್ಲಿ ದುಡಿಯುವ ಪೋಷಕರಿಗೆ ಕತ್ತಲಾಗಿ ಮನೆ ಸೇರಿ ಮಕ್ಕಳು ಎಲ್ಲಿದ್ದಾರೆ, ಏನು ಮಾಡ್ತಿzರೆ ಅಂತ ಕೇಳುವುದಕ್ಕೂ ವ್ಯವಧಾನ ವಿಲ್ಲ!
ಸ್ನಾನ ಮಾಡಿ ಉಂಡುಟ್ಟು ಮಲಗಿದರೆ ಸಾಕೆನ್ನುವಷ್ಟರಲ್ಲಿ ಮಕ್ಕಳ ವಿದ್ಯಾಭ್ಯಾಸ ಮರೆತೇ ಹೋಗಿರುತ್ತದೆ. ಪರಿಸ್ಥಿತಿ ಹೀಗಿದೆ. ಮಕ್ಕಳು ಏನು ಮಾಡ್ತಾರೆ
ಅಂತ ನೋಡುವ ಸಾಮಾನ್ಯ ಕಾಳಜಿಯೂ ತಮಗಿಲ್ಲವಾಗಿತ್ತು ಎಂಬುದು ಗೊತ್ತಾಗಿದ್ದು ಈಗ ಶಾಲೆಯಿಂದ ದೂರು ಬಂದಾಗಲೇ! ಮೊಬೈಲ್ ಹುಚ್ಚು ಹೆಚ್ಚಾಗಿ ಇನ್ನು ಶಾಲೆಯೇ ಬೇಡವೆಂಬಷ್ಟು ಮಕ್ಕಳಲ್ಲಿ ವಿಚಿತ್ರವಾದ ನಡೆವಳಿಕೆಗಳು ಬೆಳೆದುಬಿಟ್ಟಿವೆ. ಇಂಥ ಮಕ್ಕಳು ಈಗ ಶಾಲೆಯನ್ನು ಸೇರಿzರೆ ಒಲ್ಲದ ಮನಸ್ಸಿನಿಂದ. ಕಲಿಕೆಯಲ್ಲಿ ನಿರಾಸಕ್ತಿ, ವಿಪರೀತವೆನಿಸುವ ದುರ್ವರ್ತನೆಗಳು, ಮೊಂಡುತನ, ಏಕಾಗ್ರತೆಯ ಕೊರತೆ, ಜಡಮನಸ್ಸು, ಚಟುವಟಿಕೆಯಿಲ್ಲದೆ ಯಾವುದಕ್ಕೂ ಸ್ಪಂದಿಸದ ಹದತಪ್ಪಿ ಬೆಳೆದ ದೇಹ! ಅಬ್ಬಾ, ಒಂದೇ ಎರಡೇ.
ಇಂಥದ್ದರ ಮಧ್ಯೆ ಕಲಿಕೆಯೆಂಬುದು ಬಹುದೂರದ ಮಾತು! ಹೊಡೆದು ಬುದ್ಧಿ ಕಲಿಸುವ ಕಾಲವಿದಲ್ಲ. ಶಿಕ್ಷೆಗೆ ಪುಕಾರುಗಳು! ಒಳ್ಳೆಯ ಮಾತು ಅರ್ಥವಾಗುವುದಿಲ್ಲ! ಬುದ್ಧಿವಾದ ದೌರ್ಬಲ್ಯವೆನ್ನುವ ದುರ್ಬುದ್ಧಿ! ಶಿಕ್ಷೆಗೆ ಮರ್ಯಾದೆಯಿಲ್ಲ. ಕೊನೆಯ ಪಕ್ಷ ಭಯವನ್ನೂ ಹುಟ್ಟಿಸಲಾರದು. ಇನ್ನು ಒಳ್ಳೆಯ ಮಾತು? ನೋ ಚಾ. ಓದುವುದು, ಬರೆಯುವುದು ಮರೆತು ಹೋಗಿ ಕೆಲವು ತಿಂಗಳುಗಳು ಕಳೆದಿವೆ. ಓದುವುದನ್ನೇ ಮರೆತವರಿಗೆ ಬರೆಯುವುದು ಹೇಗೆ ಸಾಧ್ಯ? ಬರೆಯುವುದನ್ನು ಮರೆತವರಿಗೆ ಓದುವುದು ಅಸಾಧ್ಯ? ಓದು ಮತ್ತು ಬರಹ ಮರೆತ ಮಕ್ಕಳಿಗೆ ಹೇಗೆ ಕಲಿಸೋದು? ಅಕ್ಷರಾಭ್ಯಾಸದಿಂದ ಬ್ರಹ್ಮಸೃಷ್ಟಿಯಾಗಬೇಕಿದೆ!
ಹಿಂದೆ ಹೋದರೆ ಮುಂದೆ ಹೋಗೋದು ಹೇಗೆ! ಆದರೆ, ಪೋಷಕರಿಗಿದು ಅರ್ಥವಾಗುವುದಿಲ್ಲ. Of course ಪೋಷಕರಿಗೆ ಯಾವುದೂ ಅರ್ಥವಾಗುವುದೇ ಇಲ್ಲವೆಂಬಷ್ಟು ಅಜ್ಞಾನ! ಓದೋಕೆ ಬರೆಯೋಕೆ ಬರಲ್ಲ ಎಂದರೆ ವಾದಕ್ಕಿಳಿಯುತ್ತಾರೆ. ಕರೋನಾ ಅಲ್ವಾ ಸಾರ್, ಶಾಲೆಯೇ ನಡೆಯದೆ ಮಕ್ಕಳು ಹಾಳಾಗಿದ್ದಾರೆ. ಮುಂದೆ ಸರಿಯಾಗ್ತಾನೆ ಬಿಡಿ ಎಂಬ ಅವಿವೇಕ! ಬೇಜವಾಬ್ದಾರಿಯ ಮಾತುಗಳು! ಸತ್ಯ ಒಪ್ಪಿಕೊಳ್ಳೋಕೆ ಅವರ ಮನಸ್ಸೊಪ್ಪದು. ವಿಚಾರ ಮಾಡೋ ಶಕ್ತಿ ಅವರಲ್ಲಿಲ್ಲ.
ಇನ್ನು ಶಾಲಾ ದಾಖಲಾತಿಯಂತೂ ತೀರಲಾರದ ಅದ್ವಾನವನ್ನು ಮುಟ್ಟಿದೆ. ಶಾಲೆಯನ್ನು ಬಿಟ್ಟವರೂ ದಾಖಲಾತಿಯಲ್ಲಿದ್ದಾರೆ. ತರಗತಿಯಿಂದ ತರಗತಿಗೆ ಜಂಪ್
ಆಗುವ ಅದೃಷ್ಟವೂ ಕೆಲವರಿಗೆ! ಎಲ್‌ಕೆಜಿ ಇಲ್ಲದೇ ಯುಕೆಜಿ ಕಲಿಯದೇ ನೇರವಾಗಿ ಒಂದನೆಯ ತರಗತಿಗೆ! ಒಂಬತ್ತನೆಯ ತರಗತಿಯನ್ನು ಸರಿಯಾಗಿ ಓದಿರದವರು ಹತ್ತನೆಯ ತರಗತಿಗೆ! ಕಲಿಕಾಪ್ರಗತಿ ಮಾನದಂಡವೇ ಹಳಿತಪ್ಪಿತು! ೨೦೧೯ ಮಾರ್ಚ್ ೨೨ರಂದು ಜನತಾ ಕರ್ಫ್ಯೂ. ಅಲ್ಲಿಂದ ಮುಂದಕ್ಕೆ ಶಾಲೆಗಳು ಭೌತಿಕವಾಗಿ ನಡೆದದ್ದೇ ಬೆರಳಣಿಕೆಯಷ್ಟು ದಿನಗಳು. ಕಾಲೇಜುಗಳು, ವಿವಿ ಕ್ಲಾಸುಗಳೂ ಅಷ್ಟಕ್ಕಷ್ಟೇ. ಈಗ ಎರಡು ತಿಂಗಳ ಹಿಂದೆ ಶಾಲಾ ಕಾಲೇಜುಗಳು ಆರಂಭವಾಗಿದೆಯಷ್ಟೇ. ಹೆಚ್ಚು ಕಡಿಮೆ ವರ್ಷಕ್ಕೂ ಮೀರಿ ಮಕ್ಕಳು ಶಾಲೆಗೆ ಬರಲಿಲ್ಲ.
ಭೌತಿಕವಾದ ತರಗತಿಯನ್ನು ನೋಡಲೇ ಇಲ್ಲ. ಕಲಿಯುವುದು ಮರೆತುಹೋಗಿದೆ. ಕಲಿಸುವುದು ಆಲಸ್ಯವಾಗಿದೆ. ಸಂಬಳ ಕಡಿಮೆಯಾಗಿದೆ. ಆನ್‌ಲೈನ್ ಕ್ಲಾಸಿಗೆ ಮೊಬೈಲ್ ಕೊಡಿಸಿದ ಪೋಷಕರು ಮಕ್ಕಳಿಂದ ಮಾನಸಿಕವಾಗಿ ದೂರಾದರು. ಮಕ್ಕಳ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವ ಅವರದ್ದು ಜಾಣಬುದ್ಧಿ. ಹೊಸ ಮೊಬೈಲ್, ಸಿಮ್ ಕೊಡಿಸಿ ಅವರ ಪಾಡಿಗೆ ಅವರನ್ನು ಬಿಟ್ಟು ಪೋಷಕರು ನಿರುಂಬಳರಾದರು. ಮಕ್ಕಳಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿಬಿಟ್ಟಿತು. ಮೊಬೈಲನ್ನು ಬೇಕಾಬಿಟ್ಟಿ ಬಳಸುವುದಕ್ಕೆ ಪೋಷಕರೇ ಅನುಮತಿ ಕೊಟ್ಟು ಅವರೇನೇ ಮಾಡಿದರೂ ನೋಡಿ ಸಂತೋಷ ಪಟ್ಟ ಪೋಷಕರೇ ಈಗ ಮಕ್ಕಳಿಗೆ ಅಂಟಿಕೊಂಡ ಮೊಬೈಲ್ ಹುಚ್ಚನ್ನು ಬಿಡಿಸಲಾಗದೇ ಕೈಚೆಲ್ಲಿದ್ದಾರೆ!
ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸುವ ಪೋಷಕರ ಔದಾರ್ಯದ ಪ್ರತಿಫಲದ ದುರಂತವಿದು! ಆನ್‌ಲೈನ್ ಕ್ಲಾಸಿಗೆ ಮೊಬೈಲು ಬೇಕು ಎಂಬುದು ಸತ್ಯವಾದರೂ ನಿಯಂತ್ರಣ ಪೋಷಕರ ಕೈಯ ಇರಬೇಕಿತ್ತು, ಇಟ್ಟುಕೊಳ್ಳಬೇಕಿತ್ತು. ಕೊನೆಯ ಪಕ್ಷ ಮಕ್ಕಳ ವರ್ತನೆ ಮತ್ತು ಮೊಬೈಲ್ ಬಳಕೆಯ ಬಗ್ಗೆ ನಿಗಾ ಇಡಬೇಕಿತ್ತು. ಯಾವ ರಗಳೆಯು ಬೇಡವಾಗಿ, ಕೊನೆಕೊನೆಗೆ ಮಕ್ಕಳ ಉಸಾಬರಿಯೇ ಸಾಕೆಂದ ಪೋಷಕರಿಗೆ ಒಂದು ಸಾರಿ ಶಾಲೆ ಸುರುವಾಗಿ ಬಿಟ್ಟಿದ್ದರೆ ಸಾಕೆಂಬ
ಮನಸ್ಥಿತಿಯನ್ನು ಮುಟ್ಟಿದ್ದರು. ಹೆತ್ತವರಿಗೇ ತಮ್ಮ ಮಕ್ಕಳ ವರ್ತನೆಯನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗದೇ ಇzಗ ಇನ್ನು ಶಾಲೆಗಳು ಏನು ಮಾಡೀತು? ಬೈಯ್ಯುವ ಹಾಗಿಲ್ಲ, ನಾಕು ಪೆಟ್ಟು ಹಾಕುವಂತಿಲ್ಲ, ಬರೆದು ಪ್ರಾಕ್ಟೀಸ್ ಮಾಡು ಎನ್ನುವಂತಿಲ್ಲ, ಆದರೆ ಅಂಕಗಳು ಮಾತ್ರ ನೂರಕ್ಕೆ
ನೂರು, ಇಲ್ಲ ತೊಂಬತ್ತೊಂಬತ್ತೇ ಬರಬೇಕು! ಓದುವ, ಬರೆಯುವ ಆಸಕ್ತಿಯೇ ಸತ್ತು ಹೋಗಿದೆಯೇನೋ ಎಂಬ ದುರವಸ್ಥೆಗೆ ಮಕ್ಕಳು ತಲುಪಿಯಾಗಿದೆ. ಮೂಗುದಾಣ ಹರಿದುಹೋಗಿದೆ!
ಈ ಸ್ಥಿತಿಯಲ್ಲಿ ಎಲ್ಲ ತರಗತಿಗಳು ಆರಂಭವಾಗಿದೆ. ಅಂದಮಾತ್ರಕ್ಕೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದೇನೂ ಅರ್ಥವಲ್ಲ. ವಾತಾವರಣವೂ ಪದೇಪದೆ
ವ್ಯತ್ಯಯವಾಗುತ್ತಿದೆ. ಒಂದೇ ಸಮನೆ ಕಳೆದ ತಿಂಗಳಿಂದ ಎಡೆ ವೈರಲ್ ಫಿವರ್ ಆರಂಭವಾಗಿದೆ. ಮಕ್ಕಳು ಮರಿ ಅಂತಿಲ್ಲ, ದೊಡ್ಡವರಲ್ಲೂ ದೇಹಾರೋಗ್ಯ ಹದಗೆಡುತ್ತಿದೆ. ಕಫ, ಕೆಮ್ಮು, ವಿಪರೀತ ನೆಗಡಿ, ಬಿಟ್ಟು ಬಿಟ್ಟು ಜ್ವರ, ಮೈಕೈನೋವು ಜೋರಾಗಿ ಹೊಡೆದು ಮಲಗಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ಮಕ್ಕಳು ಶಾಲೆಗೆ ಬರಲಾರರು. ಬರಕೂಡದು.
ಕರೋನಾ ಸೋಂಕು ಎಷ್ಟೇ ಕಡಿಮೆಯೆಂದರೂ ಶಾಲೆ ಮುಚ್ಚಿಸುವುದಕ್ಕೆ ಇಷ್ಟು ಸಾಕು ಎಂಬ ಭಯ ಪೋಷಕರಲ್ಲಿ! ಶಿಕ್ಷಕರಲ್ಲಿ! ಎಷ್ಟನೇ ಅಲೆ ಬಂದರೂ ಶಾಲೆಯನ್ನು ಮಾತ್ರ ಮುಚ್ಚುವುದಿಲ್ಲ ಎಂಬ ದೃಢಸಂಕಲ್ಪದೊಂದಿಗೆ ಏನೂ ಆಗದಂತೆ ಮುಂಜಾಗ್ರತೆ ವಹಿಸುತ್ತೇವೆ ಎಂದು ಸರಕಾರ ನಿರ್ಧರಿಸಿದಂತೆ ಕಾಣುತ್ತಿದೆ. ಸರಕಾರದ ಈ ನಿರ್ಧಾರ ಮತ್ತು ಅನುಷ್ಠಾನ ಹಳಿ ತಪ್ಪಿದ ಕಲಿಕೆಗೆ ಸಂಜೀವಿನಿಯಾಗಬೇಕಿದೆ. ಆದರೆ, ತಪ್ಪಿಹೋದ ಕಲಿಕೆ ಹಳಿಗೆ ಮರಳಿ ಬರುವುದಾಗಲೀ, ಹಳಿಗೆ ತರುವುದಾಗಲೀ ಅಷ್ಟು ಸುಲಭದ ಮಾತಲ್ಲ!