Friday, 22nd November 2024

ಪರಿಷತ್ ಚುನಾವಣೆ ಬಿಟ್ ಬೇರೆಲ್ಲ ಮಾಡುತ್ತಿರುವ ಬಿಜೆಪಿ

ವಿಶ್ವವಾಣಿ ವಿಶೇಷ

ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಹತ್ತಿರವಿದ್ದರೂ ಅಭ್ಯರ್ಥಿ ಅಂತಿಮವಾಗಿಲ್ಲ
ಬಿಟ್‌ಕಾಯಿನ್ ವಿವಾದದಲ್ಲಿಯೇ ಮುಳುಗಿದ ಕಮಲ ಪಡೆಯ ನಾಯಕರು

ಬೆಂಗಳೂರು: ಭಾರಿ ವಿವಾದ ಸೃಷ್ಟಿಸಿರುವ ಬಿಟ್ ಕಾಯಿನ್ ಪ್ರಕರಣದಿಂದ ಸರಕಾರಕ್ಕೆ ಆಗುತ್ತಿರುವ ಮುಜುಗರ ತಪ್ಪಿಸಿ ಕೊಳ್ಳುವ ಭರದಲ್ಲಿ ಬಿಜೆಪಿ ನಾಯಕರು ಮೇಲ್ಮನೆ ಚುನಾವಣೆಯನ್ನೇ ಮರೆತಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಡಿ.10ರಂದು ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನವೆಂಬರ್ 23 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ ವಾಗಿದೆ. ಆದರೆ ಬಿಜೆಪಿ ನಾಯಕರು ಇಲ್ಲಿಯವರೆಗೆ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ಕುರಿತಂತೆ ಯಾವುದೇ ಚರ್ಚೆಗಳನ್ನು ನಡೆಸಿಲ್ಲ. ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ವಿವಾದದಲ್ಲಿ ಕಾಂಗ್ರೆಸ್ ನಾಯಕರು ಕೇವಲ ಕರ್ನಾಟಕ ಬಿಜೆಪಿ ನಾಯಕರ ಹೆಸರು ಮಾತ್ರವಲ್ಲದೇ, ಕೇಂದ್ರ ನಾಯಕರ ಹೆಸರನ್ನೂ ಸೇರಿಸುವ ಆತಂಕ ವಿದೆ. ಆದ್ದರಿಂದ ಬಿಜೆಪಿಯ ಬಹುತೇಕರು, ಬಿಟ್ ಕಾಯಿನ್‌ನಲ್ಲಿ ನಮ್ಮ ಪಕ್ಷದವರು ನಿರ್ದೋಷಿಗಳು ಎನ್ನುವ ವಾದವನ್ನು ಮಂಡಿಸುತ್ತಿದ್ದಾರೆ. ಈಗಾಗಲೇ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿರುವುದಾಗಿ ಬೊಮ್ಮಾಯಿ ಅವರು ಹೇಳಿದ್ದರೂ, ಈ ಪ್ರಕ್ರಿಯೆಗೆ ವೇಗ ಸಿಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.

ಸಭೆಗಳು ನಡೆಯುತ್ತಿಲ್ಲ: ಸಾಮಾನ್ಯವಾಗಿ ಯಾವುದೇ ಚುನಾವಣೆಗಳು ಬಂದರೂ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಸಾಲು ಸಾಲು ಸಭೆ ನಡೆಯುವುದು ಸಹಜ. ಬಿಜೆಪಿಯಲ್ಲಿ ಪಕ್ಷದ ವರಿಷ್ಠರೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದರೂ, ರಾಜ್ಯ ಬಿಜೆಪಿ ಯಿಂದ ಕೆಲ ಔಪಚಾರಿಕ ಸಭೆಯಾದರೂ ನಡೆಯುತ್ತವೆ. ಆದರೆ ಈ ಬಾರಿ ಈ ರೀತಿ ಸಭೆಗಳು ನಡೆಯುತ್ತಿಲ್ಲ. ಇನ್ನೊಂದು ವಾರ ದಲ್ಲಿ ನಾಮಪತ್ರ ಸಲ್ಲಿಸಬೇಕಾಗಿದ್ದರೂ, ಮುಖ್ಯಮಂತ್ರಿ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಬಹುತೇಕರು ಬಿಟ್‌ಕಾಯಿನ್ ವಿವಾದದಲ್ಲಿ ಸರಕಾರವನ್ನು ರಕ್ಷಿಸುವಲ್ಲಿಯೇ ಮಗ್ನರಾಗಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರು ಎರಡು ಮೂರು ಜಿಲ್ಲೆಗಳಲ್ಲಿ ಇರುವುದರಿಂದ ಓಡಾಟ ಹೆಚ್ಚಿರುತ್ತದೆ. ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿ, ಘೋಷಿಸಿದ ಬಳಿಕ ಮತಯಾಚನೆಗೆ ಹೆಚ್ಚು ಸಮಯದ ಅಗತ್ಯವಿರುತ್ತದೆ. ಆದರೆ ಅಭ್ಯರ್ಥಿಯ ಹೆಸರನ್ನೇ ಅಂತಿಮಗೊಳಿಸದೇ, ಕೊನೆ ಕ್ಷಣದಲ್ಲಿ ಹೆಸರು ಘೋಷಿಸಿದರೆ ಚುನಾವಣಾ ಸಮಯದಲ್ಲಿ ಸಮಸ್ಯೆ ಯಾಗಲಿದೆ ಎನ್ನುವ ಆತಂಕವನ್ನು ಪರಿಷತ್ ಚುನಾವಣೆಯ ಕೆಲ ಬಿಜೆಪಿ ಟಿಕಟ್ ಆಕಾಂಕ್ಷಿಗಳು ವ್ಯಕ್ತಪಡಿಸಿದ್ದಾರೆ.

ಚುನಾವಣೆ ಮೇಲೆ ಪರಿಣಾಮ
ಮುಂದಿನ ಚುನಾವಣಾ ದಿಕ್ಸೂಚಿ ಎಂದೇ ಹೇಳಲಾಗುವ ವಿಧಾನ ಪರಿಷತ್ ಚುನಾವಣೆಯ ಮತದಾನಕ್ಕೆ ಮೂರು ವಾರ ಬಾಕಿ ಯಿರುವಾಗಲೇ, ಬಿಟ್ ಕಾಯಿನ್ ವಿವಾದ ಕಾವು ಪಡೆದುಕೊಂಡಿರುವುದು ಚುನಾವಣಾ ಸಮಯದಲ್ಲಿ ಪಕ್ಷಕ್ಕೆ ಹಿನ್ನಡೆ ಯಾಗುವುದೇ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಸ್ಥಳೀಯ ಸಂಸ್ಥೆ ಚುನಾವಣೆಯಾಗಿರುವುದರಿಂದ ಪಕ್ಷದ ಹೊರತಾಗಿರುವ ಕೆಲ ಮತಗಳು ಕೈಜಾರುವ ಸಾಧ್ಯತೆಯಿದೆ ಎನ್ನುವ ಆತಂಕವನ್ನು ಕೆಲ ಆಕಾಂಕ್ಷಿಗಳು ಹೊರಹಾಕಿದ್ದಾರೆ.