ವೇದಾಂತಿ ಹೇಳಿದ ಕಥೆ
ಶಶಾಂಕ್ ಮುದೂರಿ
ರಾಜಕುಮಾರಿ ಮೀರಾಬಾಯಿಗೆ ಇಬ್ಬರು ಅತ್ತೆಯರಿದ್ದರು. ಅವರಿಬ್ಬರಿಗೂ ಮೀರಾಬಾಯಿಯನ್ನು ಕಂಡರೆ ತುಂಬಾ ಇಷ್ಟ. ಬಾಲಕಿಯಾಗಿದ್ದಾಗ, ಮೀರಾಬಾಯಿ ಆಗಾಗ ಅವರ ಮನೆಗೆ ಹೋಗಿ, ಒಂದೆರಡು ವಾರ ಇದ್ದು ಬರುತ್ತಿದ್ದಳು. ಅಲ್ಲಿನ ಪರಿಸರದಲ್ಲಿ ಬೆರೆತು, ಜೀವನಪಾಠ ಕಲಿಯುತ್ತಿದ್ದಳು.
ಕಿರಿ ಅತ್ತೆಯ ಮನೆಯಲ್ಲಿ ಮೀರಾಬಾಯಿ ಗಮನಿಸಿದ್ದೆಂದರೆ, ಅತ್ತೆ ಮತ್ತು ಮಾವ ಇಬ್ಬರಿಗೂ ಬಡವರ ಮೇಲೆ ಇದ್ದ ಅನುಕಂಪ ಮತ್ತು ಕರುಣೆ. ಅಗತ್ಯ ಇರುವ ಎಲ್ಲರಿಗೂ ಆ ಮನೆಯಲ್ಲಿ ಸಹಾಯ ದೊರೆಯುವುದು ಖಚಿತ. ಬಡವರಿಗೆ, ಹಸಿದವರಿಗೆ ಊಟ ನೀಡು ವುದು ಆ ಮನೆಯಲ್ಲಿ ಸಾಮಾನ್ಯ. ದೂರದ ಊರಿಗೆ ಹೋಗುವ ಯಾತ್ರಿಕರು ಬಳಲಿದ್ದರೆ, ಅವರಿಗೆ ಆಹಾರ ನೀಡಿ, ತಂಗಲು ಅವಕಾಶ ಮಾಡಿಕೊಡುತ್ತಿದ್ದರು. ಅದಕ್ಕಾಗಿಯೇ ಅವರು ಒಂದು ದೊಡ್ಡ ಛತ್ರವನ್ನು ಕಟ್ಟಿಸಿದ್ದರು. ಯಾತ್ರಿಕರು, ಅಲೆಮಾರಿಗಳು ಮತ್ತು ವ್ಯಾಪಾರಿಗಳು ಅಲ್ಲಿ ಕೆಲವು ದಿನ ಇದ್ದು ವಿಶ್ರಾಂತಿ ತೆಗೆದುಕೊಂಡು, ತಮ್ಮ ಪಯಣವನ್ನು ಮುಂದುವರಿಸ ಬಹುದಿತ್ತು.
ಈ ರೀತಿಯ ಸೇವೆ ಎಲ್ಲವೂ ಉಚಿತವಾಗಿತ್ತು. ಮೀರಾಬಾಯಿ ಗಮನಿಸಿದಂತೆ, ತನ್ನ ಕಿರಿ ಅತ್ತೆಯ ಈ ಪರೋಪಕಾರಿ ಕೆಲಸಗಳಿಗೆ ಆಕೆಯ ಗಂಡ ತುಂಬು ಬೆಂಬಲ ನೀಡುತ್ತಿದ್ದನು. ‘ನನ್ನ ಗಂಡ ನನಗೆ ಇಷ್ಟೊಂದು ಬೆಂಬಲ ನೀಡುತ್ತಿದ್ದಾನೆ, ನೋಡಿದೆಯಾ ಮೀರಾ. ಈ ರೀತಿಯ ಪುಣ್ಯದ ಕೆಲಸಗಳನ್ನು ಮಾಡಲು ಅವರ ಸಹಾಯ ಇಲ್ಲದಿದ್ದರೆ ನನ್ನಿಂದ ಆಗುತ್ತಿರಲಿಲ್ಲ. ಆ ದೇವರೇ ಅವರಿಗೆ ಅಂತಹ ಪರೋಪಕಾರಿ ಬುದ್ಧಿಯನ್ನು ಕೊಟ್ಟಿರಬೇಕು. ಬೇರೆಯವರಿಗೆ ಸಹಾಯ ಮಾಡಬೇಕೆಂಬ ನನ್ನ ಮನಸ್ಸಿನ ಆಸೆಯನ್ನು ಅರಿತು, ಅದಕ್ಕಾಗಿ ಪೂರ್ಣ ಬೆಂಬಲ ನೀಡುತ್ತಿದ್ದಾರೆ.
ಇಷ್ಟು ಒಳ್ಳೆಯ ಗಂಡನನ್ನು ಕೊಟ್ಟಿದ್ದಕ್ಕೆ, ಆ ದೇವರಿಗೆ ನಾನು ಸದಾ ಋಣಿ’ ಎನ್ನುತ್ತಿದ್ದಳು ಮೀರಾಬಾಯಿಯ ಆ ಕಿರಿ ಅತ್ತೆ. ಕಿರಿ ಅತ್ತೆಯ ಮನೆಯಲ್ಲಿ ಕೆಲವು ದಿನ ಇದ್ದು, ಮೀರಾ ಬಾಯಿಯು ದೊಡ್ಡತ್ತೆಯ ಮನೆಗೆ ಹೋಗುವ ಪರಿಪಾಠ. ಅಲ್ಲೂ ಮೀರಾಬಾಯಿಯನ್ನು ಆಕೆಯ ದೊಡ್ಡತ್ತೆ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಳು. ಈ ರೀತಿ ಮೀರಾಬಾಯಿ ಹಲವು ಬಾರಿ ಅವರ ಮನೆಗೆ ಹೋಗುವುದಿತ್ತು. ಒಮ್ಮೆ ಹೀಗೆ ಹೋಗಿದ್ದಾಗ, ಮೀರಾ ಬಾಯಿಗೆ ಒಂದು ವಿಚಾರ ಗಮನಕ್ಕೆ ಬಂತು. ಏನೆಂದರೆ, ಆಕೆಯ ದೊಡ್ಡ ಮಾವ ಮಾತ್ರ ಜಿಪುಣಾಗ್ರೇಸರ ಎಂದು. ಒಮ್ಮೆ ದೊಡ್ಡ ತ್ತೆಯು ರೋಗಿಗಳಿಗೆ, ಬಡವರಿಗೆ ಹಳೆಯ ಬಟ್ಟೆಗಳನ್ನು ಕೊಟ್ಟು ಕಳಿಸಿದಳು. ಆ ಬಡವರು, ದೊಡ್ಡತ್ತೆಗೆ ನಮಸ್ಕರಿಸಿ, ‘ನಿಮ್ಮ ಸಹಾಯ ವನ್ನು ಎಂದಿಗೂ ಮರೆಯುವುದಿಲ್ಲ’ ಎಂದು ಹೇಳಿ ಹೋದರು.
ಈ ವಿಚಾರ ತಿಳಿದ ಕೂಡಲೇ, ಆಕೆಯ ಗಂಡ ಕಿಡಿಕಿಡಿಯಾದ. ‘ನಿನಗೆ ಯಾರೂ ಹೇಳುವವರು ಕೇಳುವವರು ಇಲ್ಲವೆ? ಅವುಗಳನ್ನು ಅವರಿಗೆ ಯಾಕೆ ಕೊಟ್ಟೆ, ನಮ್ಮ ಕೆಲಸದವರಿಗೆ ಅವನ್ನು ಕೊಟ್ಟರೆ, ಗದ್ದೆ ತೋಟದಲ್ಲಿ ಇನ್ನಷ್ಟು ಕೆಲಸ ಮಾಡಿ, ಇನ್ನಷ್ಟು ಬೆಳೆ ಬೆಳೆಯುತ್ತಿದ್ದರು’ ಎಂದು ಕೋಪಗೊಂಡ. ದೊಡ್ಡತ್ತೆ ಮನೆಯಲ್ಲಿ ಒಂದೆರಡು ವಾರ ಕಾಲ ಕಳೆದ ನಂತರ, ಮೀರಾಬಾಯಿ ದೊಡ್ಡತ್ತೆಯನ್ನು ಈ ವಿಚಾರದ ಕುರಿತು ಕೇಳಿದಳು. ದೊಡ್ಡತ್ತೆ ಹೇಳಿದಳು ‘ಮೀರಾ, ಈ ರೀತಿಯ ಗಂಡ ದೊರೆತದ್ದರಿಂದ ನನಗೆ ಎಷ್ಟು ಒಳ್ಳೆಯದಾಗಿದೆ ಗೊತ್ತಾ! ನನ್ನ ಗಂಡನ ಜಿಪುಣ ಬುದ್ಧಿಯನ್ನು ಕಂಡು, ಆ ದೇವರನ್ನು ನಾನು ಕ್ಷಣ ಕ್ಷಣದಲ್ಲೂ ಸ್ಮರಿಸುವಂತಾಗಿದೆ. ನನ್ನ ಮನಸ್ಸಿನಂತೆ ವರ್ತಿಸಲು ನನ್ನ ಗಂಡ ಅವಕಾಶ ನೀಡಿದ್ದರೆ, ನಾನು ಆ ದೇವರನ್ನು ಮರೆತೇ ಬಿಡುತ್ತಿದ್ದೇ ನೇನೋ!
ನನ್ನ ಗಂಡನ ಜಿಪುಣ ಗುಣವನ್ನು ಕಂಡು ನನ್ನ ಮನದಲ್ಲಿ ಆಗುತ್ತಿರುವ ದುಗಡವನ್ನು ಆ ದೇವರು ಮಾತ್ರ ಅರ್ಥ ಮಾಡಿಕೊಳ್ಳ ಬಲ್ಲ. ನನಗೆ ಬದುಕುವ ಶಕ್ತಿ ನೀಡುತ್ತಿರುವುದು ದೇವರು ಎಂಬ ದಿವ್ಯ ಶಕ್ತಿ. ದೇವರೇ ನನ್ನನ್ನು ಕ್ಷಣ ಕ್ಷಣದಲ್ಲೂ ಕೈ ಹಿಡಿಯುತ್ತಿದ್ದಾನೆ. ಪ್ರತಿ ಕ್ಷಣವೂ ದೇವರನ್ನು ಜಪಿಸುವಂತೆ ಮಾಡಲು ಅವಕಾಶ ನೀಡಿದ ಇಂತಹ ಗಂಡನನ್ನು ಕೊಟ್ಟಿದ್ದಕ್ಕೆ ನಾನು ಆ ದೇವರಿಗೆ ಚಿರಋಣಿ.’ ಮೀರಾಬಾಯಿಯ ಕಣ್ಣಾಲಿಗಳು ತೇವಗೊಂಡವು. ಅವಳು ಬದುಕಿನಲ್ಲಿ ಒಂದು ಪಾಠವನ್ನು ಕಲಿತಳು. (ತದೇಕಚಿತ್ತದಿಂದ ದೇವರ ಸ್ಮರಣೆ ಮಾಡುವ ವ್ಯಕ್ತಿಯನ್ನು ಎಲ್ಲೇ ಕರೆದುಕೊಂಡು ಹೋಗಿ ಬಿಡಲಿ, ಅವರಿಗೆ ಎಷ್ಟೇ ಕಷ್ಟ ಬರಲಿ, ಎಷ್ಟೇ ಅನಾನುಕೂಲ ಆಗಲಿ, ಅವರು ದೇವನಾಮ ಸ್ಮರಣೆಯನ್ನು ಮಾತ್ರ ಬಿಡುವುದಿಲ್ಲ ಎಂಬ ನೀತಿ ಈ ಕಥೆಯಲ್ಲಿದೆ. ಹಿಡಿದ ಗುರಿಯನ್ನು ಸಾಧಿಸುವ ಛಲಕ್ಕೂ ಈ ಕಥೆ ಒಂದು ಉದಾಹರಣೆ.