Saturday, 23rd November 2024

ಸೂಪರ್ ಓವರ್​ನಲ್ಲಿ ರೋಚಕ ಜಯ: ಸೆಮಿಫೈನಲ್​ಗೆ ಕರ್ನಾಟಕ

ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ 2ನೇ ಕ್ವಾರ್ಟರ್ ಫೈನಲ್​ನಲ್ಲಿ ಕರ್ನಾಟಕ ತಂಡವು ಬೆಂಗಾಲ್ ವಿರುದ್ದ ಸೂಪರ್ ಓವರ್​ನಲ್ಲಿ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮನೀಷ್ ಪಾಂಡೆ ಬಳಗವು ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ.
ಟಾಸ್ ಗೆದ್ದ ಬೆಂಗಾಲ್ ತಂಡದ ನಾಯಕ ಸುದಿಪ್ ಚಟರ್ಜಿ ಬೌಲಿಂಗ್ ಆಯ್ದುಕೊಂಡರು. ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆದಿರ ಲಿಲ್ಲ. ಕೇವಲ 4 ರನ್​ಗಳಿಸಿ ಆರಂಭಿಕ ಆಟಗಾರ ಶರತ್ ವಿಕೆಟ್ ಒಪ್ಪಿಸಿ ಹೊರ ನಡೆದರು. ಬಳಿಕ ಜೊತೆಗೂಡಿದ ರೋಹನ್ ಕದಮ್ ಹಾಗೂ ನಾಯಕ ಮನೀಷ್ ಪಾಂಡೆ 32 ರನ್​ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ರೋಹನ್ 30 ರನ್​ಗಳಿಸಿ ಔಟಾದರೆ, ಮನೀಷ್ ಪಾಂಡೆ 29 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು.
ಕೊನೆಯ ಓವರ್​ನಲ್ಲಿ ಬೆಂಗಾಲ್ ತಂಡಕ್ಕೆ ಗೆಲ್ಲಲು 20 ರನ್​ಗಳು ಬೇಕಿತ್ತು. ಆದರೆ ವಿದ್ಯಾಧರ್ ಪಾಟೀಲ್ ಎಸೆದ ಅಂತಿಮ ಓವರ್​ನ ಮೊದಲೆರಡು ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ರಿತ್ವಿಕ್ ಚೌಧರಿ ಪಂದ್ಯದ ಚಿತ್ರಣ ಬದಲಿಸಿದರು.

14ನೇ ಓವರ್​ನಲ್ಲಿ 87 ರನ್​ಗಳಿಸಿ 3 ಪ್ರಮುಖ ವಿಕೆಟ್​ ಕಳೆದುಕೊಂಡಿದ್ದ ಕರ್ನಾಟಕ ತಂಡದ ರನ್​ಗತಿಯನ್ನು ಹೆಚ್ಚಿಸಿದ್ದು, 4ನೇ ಕ್ರಮಾಂಕದಲ್ಲಿ ಆಡಿದ ಕರುಣ್ ನಾಯರ್. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕರುಣ್ 3 ಸಿಕ್ಸ್ ಹಾಗೂ 4 ಬೌಂಡರಿಯೊಂದಿಗೆ ಅರ್ಧಶತಕ ಪೂರೈಸಿದರು.

ಇದೇ ವೇಳೆ ಕರುಣ್​ಗೆ ಸಾಥ್ ನೀಡಿದ ಅಭಿನವ್ ಮನೋಹರ್ 9 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ 19 ರನ್​ ಚಚ್ಚಿದರು. ಇನ್ನು ಅನಿರುದ್ಧ್ ಜೋಶಿ ಕೂಡ 10 ಎಸೆತಗಳಲ್ಲಿ 16 ರನ್​ ಬಾರಿಸಿದರು. ಅಂತಿಮವಾಗಿ ಅಜೇಯರಾಗಿ ಉಳಿದ ಕರುಣ್ ನಾಯರ್ 29 ಎಸೆತಗಳಲ್ಲಿ 55 ರನ್​ ಬಾರಿಸುವ ಮೂಲಕ ತಂಡದ ಮೊತ್ತವನ್ನು 5 ವಿಕೆಟ್ ನಷ್ಟಕ್ಕೆ 160ಕ್ಕೆ ತಂದು ನಿಲ್ಲಿಸಿದರು.

ಗುರಿ ಬೆನ್ನತ್ತಿದ ಬೆಂಗಾಲ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕರ್ನಾಟಕ ತಂಡ ಯಶಸ್ವಿಯಾಗಿತ್ತು. ಆರಂಭಿಕ ಆಟಗಾರ ಅಭಿಷೇಕ್​ ದಾಸ್​ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ ವಿದ್ಯಾಧರ್ ಪಾಟೀಲ್ ಕರ್ನಾಟಕ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಬೆನ್ನಲ್ಲೇ ಶ್ರೀವಾತ್ಸವ್ ಗೋಸ್ವಾಮಿಯನ್ನು ಕೆಸಿ ಕಾರ್ಯಪ್ಪ ರನೌಟ್ ಮಾಡಿ ಪೆವಿಲಿಯನ್​ಗೆ ಕಳುಹಿಸಿದರು.

ಸುದಿಪ್ ಚಟರ್ಜಿ 12 ರನ್​ಗಳಿಸಿ ಔಟಾದರೆ, ಕೈಫ್ ಅಹಮದ್ 20 ರನ್​ಗಳಿಸಿದ್ದ ವೇಳೆ ಸುಚಿತ್ ಎಸೆತದಲ್ಲಿ ಬೌಲ್ಡ್ ಆದರು. ಬೆನ್ನಲ್ಲೇ ಶಹಬಾಜ್ ಅಹಮದ್ ವಿಕೆಟ್ ಉರುಳಿಸಿ ಸುಚಿತ್ ಮತ್ತೊಂದು ಯಶಸ್ಸು ತಂದು ಕೊಟ್ಟರು. ಮತ್ತೊಂದೆಡೆ ಕ್ರೀಸ್​ ಕಚ್ಚಿದ ನಿಂತಿದ್ದ ವೃತಿಕ್ ಚಟರ್ಜಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತವನ್ನು 14 ಓವರ್​ ವೇಳೆಗೆ 100ರ ಗಡಿ ದಾಟಿಸಿದರು.

ಅಂತಿಮ 6 ಓವರ್​ಗಳಲ್ಲಿ ಬೆಂಗಾಲ್ ತಂಡಕ್ಕೆ 59 ರನ್​ಗಳ ಅವಶ್ಯಕತೆಯಿತ್ತು. ಅದಾಗಲೇ 5 ವಿಕೆಟ್ ಉರುಳಿ ಸಿದ್ದ ಕರ್ನಾಟಕವು ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಅಪಾಯಕಾರಿಯಾಗಿ ಪರಿಣಮಿಸಿದ್ದ ವೃತಿಕ್ ಅವರ ವಿಕೆಟ್ ಪಡೆಯುವ ಮೂಲಕ ದರ್ಶನ್ ಕರ್ನಾಟಕ ತಂಡಕ್ಕೆ ಅಮೂಲ್ಯ ಯಶಸ್ಸು ತಂದುಕೊಟ್ಟರು.

ಇನ್ನು ಕೊನೆಯ 18 ಎಸೆತಗಳಲ್ಲಿ 33 ರನ್​ಗಳ ಟಾರ್ಗೆಟ್ ಪಡೆದ ಬೆಂಗಾಲ್ ತಂಡಕ್ಕೆ ಅಂತಿಮ 2 ಓವರ್​ನಲ್ಲಿ ಗೆಲ್ಲಲು ಕೇವಲ 26 ರನ್​ಗಳ ಅವಶ್ಯಕತೆಯಿತ್ತು. 19ನೇ ಓವರ್ ಎಸೆದ ದರ್ಶನ್ ಎಂಬಿ ಕೇವಲ 6 ರನ್​ ನೀಡಿ 1 ವಿಕೆಟ್ ಪಡೆದರು. ಕೊನೆಯ ಓವರ್​ನಲ್ಲಿ ಬೆಂಗಾಲ್ ತಂಡಕ್ಕೆ ಗೆಲ್ಲಲು 20 ರನ್​ಗಳು ಬೇಕಿತ್ತು. ಆದರೆ ವಿದ್ಯಾಧರ್ ಪಾಟೀಲ್ ಎಸೆದ ಅಂತಿಮ ಓವರ್​ನ ಮೊದಲೆರಡು ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ರಿತ್ವಿಕ್ ಚೌಧರಿ ಪಂದ್ಯದ ಚಿತ್ರಣ ಬದಲಿಸಿದರು.

ಕೊನೆಯ 2 ಎಸೆತಗಳಲ್ಲಿ 3 ರನ್​ ಬೇಕಿತ್ತು. 5ನೇ ಎಸೆತದಲ್ಲಿ 2 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ಸಮಗೊಳಿಸಿದರು. ಇನ್ನು ಕೊನೆಯ ಎಸೆತದಲ್ಲಿ 1 ರನ್ ಬೇಕಿದ್ದ ವಳೆ ಆಕಾಶ್ ದೀಪ್ ರನ್ನು ಮನೀಷ್ ಪಾಂಡೆ ಡೈರೆಕ್ಟ್ ಹಿಟ್​ ಮೂಲಕ ರನೌಟ್ ಮಾಡಿ ಪಂದ್ಯವನ್ನು ಟೈ ಮಾಡಿದರು. ಅದರಂತೆ ಪಂದ್ಯವು ಸೂಪರ್​ ಓವರ್​ನತ್ತ ಸಾಗಿತು.

ಸೂಪರ್​ ಓವರ್ ಬೌಲಿಂಗ್ ಮಾಡಿದ ಕೆಸಿ ಕಾರ್ಯಪ್ಪ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ. 2ನೇ ಎಸೆತದಲ್ಲಿ ಕೈಫ್ ಅಹಮದ್ ಅವರ ವಿಕೆಟ್ ಪಡೆದರು. ಮೂರನೇ ಎಸೆತದಲ್ಲಿ ಶ್ರೀವಾತ್ಸವ್ ಗೋಸ್ವಾಮಿ ಭರ್ಜರಿ ಬೌಂಡರಿ ಬಾರಿಸಿದರು. 4ನೇ ಎಸೆತದಲ್ಲಿ ಗೋಸ್ವಾಮಿ ರನೌಟ್ ಆಗುವ ಮೂಲಕ ಬೆಂಗಾಲ್ ತಂಡದ ಸೂಪರ್ ಓವರ್​ 2 ಎಸೆತಗಳು ಬಾಕಿ ಇರುವಂತೆ ಕೊನೆಗೊಂಡಿತು.

ಸೂಪರ್ ಓವರ್​ನಲ್ಲಿ 6 ರನ್​ಗಳ ಟಾರ್ಗೆಟ್ ಪಡೆದ ಕರ್ನಾಟಕ ಪರ ಮನೀಷ್ ಪಾಂಡೆ ಹಾಗೂ ಕರುಣ್ ನಾಯರ್ ಕಣಕ್ಕಿಳಿದರು. ಮೊದಲ ಎಸೆತದಲ್ಲಿ 2 ರನ್​ ಕಲೆಹಾಕಿದ ಮನೀಷ್ ಪಾಂಡೆ, 2ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಈ ಸಿಕ್ಸ್​ನೊಂದಿಗೆ ಕರ್ನಾಟಕ ತಂಡವು ಸೂಪರ್ ಓವರ್​ ಫೈಟ್​ನಲ್ಲಿ ಗೆದ್ದು ಸೆಮಿಫೈನಲ್​ ಪ್ರವೇಶಿಸಿತು.