Friday, 22nd November 2024

ಬಾಕಿ ಕೂಲಿ ಕೇಳಿದ್ದಕ್ಕೆ ಕಾರ್ಮಿಕನ ಕೈ ಕತ್ತರಿಸಿದ ಮಾಲೀಕ

ರೇವಾ, ಮಧ್ಯಪ್ರದೇಶ: ರೇವಾ ಜಿಲ್ಲೆಯಲ್ಲಿ ಕಾರ್ಮಿಕನೊಬ್ಬ ತನ್ನ ಬಾಕಿ ಕೂಲಿಯನ್ನು ಕೇಳಿದ್ದಕ್ಕೆ ಮಾಲೀಕರು ಕಾರ್ಮಿಕನ ಕೈ ಕತ್ತರಿಸಿದ್ದಾರೆ. ಈ  ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ರೇವಾ ಜಿಲ್ಲಾ ಕೇಂದ್ರದಿಂದ 40 ಕಿ.ಮೀ. ದೂರದಲ್ಲಿರುವ ಸಿರ್ಮೌರ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಡೊಲ್ಮಾವು ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಪೊಲೀ ಸರು ಹೇಳಿದರು.

ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತ ಅಶೋಕ್‌ ಸಾಕೇತ್‌, ಪಾಡ್ರಿ ಗ್ರಾಮದ ನಿವಾಸಿ. ಡೊಲ್ಮಾವು ಗ್ರಾಮದ ಗಣೇಶ ಮಿಶ್ರಾ ಅವರ ನಿರ್ಮಾಣ ಕೆಲಸದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಬಾಕಿ ಕೂಲಿಯ ಸಂಬಂಧ ಸಾಕೇತ್‌ ಮತ್ತು ಮಿಶ್ರಾ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಮಿಶ್ರಾ ಮತ್ತು ಆತನ ಕಡೆಯವರು ಹರಿತ ಆಯುಧದಿಂದ ಸಾಕೇತ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಮಿಶ್ರಾ ಸಾಕೇತ್‌ ಕೈ ಕತ್ತರಿಸಿದ್ದಾರೆ ಎಂದು ಸಹಾಯಕ ಪೊಲೀಸ್‌ ಅಧೀಕ್ಷಕ ಶಿವಕುಮಾರ್‌ ವರ್ಮಾ ಹೇಳಿದರು.

ಗಾಯಗೊಂಡ ಕಾರ್ಮಿಕನನ್ನು ಪೊಲೀಸರು ಸಂಜಯ ಗಾಂಧಿ ಸ್ಮಾರಕ ಆಸ್ಪತ್ರೆಗೆ ರವಾನಿಸಿದರು. ಅಲ್ಲಿಯ ವೈದ್ಯರ ತಂಡ ಶಸ್ತ್ರ ಚಿಕಿತ್ಸೆಯ ಮೂಲಕ ಕಾರ್ಮಿಕನಿಗೆ ಕೈಯನ್ನು ಮರುಜೋಡಿಸಿದರು. ಬಹಳ ರಕ್ತ ಹೋಗಿದ್ದರಿಂದ ಕಾರ್ಮಿಕನ ಸ್ಥಿತಿ ಗಂಭೀರ ವಾಗಿದೆ ಎಂದು ಶಿವಕುಮಾರ್ ಹೇಳಿದರು.