ತಿರುಪತಿ: ಆಂಧ್ರದ ರಾಯಲಸೀಮೆ ಪ್ರದೇಶದಲ್ಲಿ ವ್ಯಾಪಕ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಎಡೆ ಬಿಡದೆ ಮಳೆ ಸುರಿಯುತ್ತಿದ್ದು, ಈ ಅನಾಹುತಗಳಿಂದ ಮತ್ತೆ 12 ಮಂದಿ ಮೃತ ಪಟ್ಟಿದ್ದಾರೆ. ಇದರಿಂದ ಮೃತರ ಸಂಖ್ಯೆ 41ಕ್ಕೇರಿದೆ. ತಿರುಪತಿ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ತೆರಳುವ ರಸ್ತೆ ಮುಚ್ಚಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ ಗೊಂಡಿದೆ.
ಪ್ರವಾಹ ನೀರಿನಲ್ಲಿ ರಸ್ತೆಗಳು ಕೊಚ್ಚಿಕೊಂಡು ಹೋಗಿ ರಾಯಲಸೀಮೆ ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಹಲವು ಗ್ರಾಮ ಹಾಗೂ ಪಟ್ಟಣಗಳು ಸಂಪರ್ಕ ಕಡಿದುಕೊಂಡಿವೆ. ಇದು ತಗ್ಗು ಪ್ರದೇಶಗಳ ಜನರ ಆತಂಕಕ್ಕೆ ಕಾರಣವಾಗಿದೆ.
ಭಾನುವಾರ ರಾಜಂಪೇಟೆ ಮಂಡಲದಲ್ಲಿ ಮತ್ತೆ ಆರು ಶವಗಳು ಪತ್ತೆಯಾಗಿದ್ದು, ಚಿನ್ನಮಂಡೆಮ್ ಮಂಡಲದಲ್ಲಿ ಎರಡು ಶವ ಗಳು ಕಂಡುಬಂದಿವೆ. ನೆಲ್ಲೂರು ಜಿಲ್ಲೆಯಲ್ಲಿ ನಾಲ್ಕು ಮಂದಿ ಮಳೆ ಸಂಬಂಧಿ ದುರಂತಗಳಿಂದ ಮೃತಪಟ್ಟಿದ್ದು, 15 ಶವಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.