Saturday, 23rd November 2024

ಸಿಎಪಿಎಫ್ ಹುತಾತ್ಮ ಯೋಧರ ಕುಟುಂಬಕ್ಕೆ ಪರಿಹಾರ ಹಣ 35 ಲಕ್ಷಕ್ಕೆ ಏರಿಕೆ

ನವದೆಹಲಿ: ಅರೆಸೇನಾ ಪಡೆಗಳ ಯೋಧರು ಕಾರ್ಯಾಚರಣೆಗಳಲ್ಲಿ ಮೃತಪಟ್ಟರೆ ಅವರ ಹತ್ತಿರದ ಸಂಬಂಧಿಗಳಿಗೆ ನೀಡಲಾ ಗುವ ಪರಿಹಾರ ಹಣವನ್ನು ಕೇಂದ್ರ ಸರ್ಕಾರ 35 ಲಕ್ಷ ರೂಪಾಯಿಗೆ ಹೆಚ್ಚಿಸಿದೆ.

ಇದೇ ನವೆಂಬರ್ 1ರಿಂದ ಈ ಹೊಸ ಸೌಲಭ್ಯ ಅಳವಡಿಕೆ ಆಗಲಿದೆ. ಪ್ಯಾರಾ ಮಿಲಿಟರಿ ಪಡೆಗಳ ಯೋಧರಿಗೆ ಸಮಾನ ಪರಿಹಾರ ನೀಡುವ ಸೌಲಭ್ಯವನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಎನ್ಕೌಂಟರ್, ಗುಂಡಿನ ಕಾಳಗ ಇತ್ಯಾದಿ ಕಾರ್ಯಾಚರಣೆಗಳಲ್ಲಿ ಹುತಾತ್ಮರಾಗುವ ಅರೆಸೇನಾ ಪಡೆಗಳ ಯೋಧರಿಗೆ  35 ಲಕ್ಷ ರೂ ಪರಿಹಾರ ಹಣದ ಸೌಲಭ್ಯ, ಬೇರೆ ಕಾರಣಗಳಿಂದ ಮೃತಪಡುವ ಯೋಧರಿಗೆ ಸಾಮಾನ್ಯ ಪರಿಹಾರ ಹಣ ಸಿಗುವುದು ಮುಂದುವರಿಯಲಿದೆ.

ಭಾರತದಲ್ಲಿ ಅರೆಸೇನಾ ಪಡೆಗಳು ಅಥವಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಹಲವಿವೆ. ಕೇಂದ್ರ ಮೀಸಲು ಪೊಲೀಸ್ ಪಡೆ , ಕೇಂದ್ರ ಔದ್ಯಮಿಕ ಭದ್ರತಾ ಪಡೆ , ಇಂಡೋ ಟೆಬೆಟನ್ ಬಾರ್ಡರ್ ಪೊಲೀಸ್ ಪಡೆಗಳು ಅದರಲ್ಲಿ ಸೇರುತ್ತವೆ. ಸಿಆರ್ಪಿಎಫ್ ಮತ್ತು ಐಟಿಬಿಪಿ ಪಡೆಗಳ ಯೋಧರು ಮೃತಪಟ್ಟರೆ ಅವರ ಕುಟುಂಬದವರಿಗೆ 25 ಲಕ್ಷ ರೂ ಪರಿಹಾರ ನೀಡಲಾಗುತ್ತಿತ್ತು. ಏರ್ಪೋರ್ಟ್ ಇತ್ಯಾದಿ ಕಡೆ ನಿಯೋಜನೆ ಆಗುವ ಸಿಐಎಸ್‌ಎಫ್ ಪಡೆಗಳ ಯೋಧರಿಗೆ ಕೇವಲ 15 ಲಕ್ಷ ಪರಿಹಾರ ಸಿಗುತ್ತಿತ್ತು. ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಇದೆ ಎಂದು ಹುತಾತ್ಮ ಯೋಧರ ಕುಟುಂಬದವರು ಆಕ್ಷೇಪ ಎತ್ತಿದ್ದರು.

ಜೊತೆಗೆ, ಭಾರತ್ ಕೆ ವೀರ್ ಎಂಬ ವಿಶೇಷ ಯೋಜನೆ ಕೈಗೊಳ್ಳಲಾಗಿದೆ. ಇದರಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಯಾವುದೇ ಸಿಬ್ಬಂದಿ ಮೃತಪಟ್ಟರೂ ಅವರ ಕುಟುಂಬದವರಿಗೆ ದಾನಿಗಳು ನೇರವಾಗಿ ಹಣ ನೀಡುವ ಅವಕಾಶ ಕಲ್ಪಿಸಲಾಗಿದೆ.