Friday, 22nd November 2024

ಮಮತಾ ಬ್ಯಾನರ್ಜಿ ಮುಂದಿನ ಪ್ರಧಾನಿಯಾಗಲಿ: ಬಿಜೆಪಿ ವ್ಯಂಗ್ಯ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ  ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಸ್ಥಳೀಯ ಬಿಜೆಪಿ ಹೇಳಿದೆ.

2024ರ ಲೋಕಸಭೆ ಚುನಾವಣೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ತೃಣಮೂಲ ಕಾಂಗ್ರೆಸ್ (TMC) ಪ್ರಧಾನಿ ಅಭ್ಯರ್ಥಿ ಯನ್ನಾಗಿ ಘೋಷಿಸಬೇಕು ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ವ್ಯಂಗ್ಯವಾಡಿದ್ದಾರೆ.

ಭ್ರಷ್ಟ ಪೊಲೀಸ್ ಅಧಿಕಾರಿಗಳನ್ನು ಮತ್ತು ಮಂತ್ರಿಗಳನ್ನು ಉಳಿಸಲು ಮಮತಾ ಬ್ಯಾನರ್ಜಿ ಧರಣಿ ನಡೆಸಿದ್ದರು ಎಂದು ಸುಕಾಂತ ಮಜುಂದಾರ್ ಆರೋಪಿಸಿದ್ದಾರೆ. ನಮ್ಮ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆಗಿರುತ್ತಾರೆ. ಮಮತಾ ಬ್ಯಾನರ್ಜಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳಲು ವಿಪಕ್ಷಗಳು ಸಿದ್ಧವೇ?, ಇದನ್ನು ಮೊದಲು ನಿರ್ಧಾರ ಮಾಡಿಕೊಳ್ಳಲಿ ಎಂದು ಸುಕಾಂತ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಟಿಎಂಸಿ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿ ರೂಪಿಸಲು ಮುಂದಾಗುತ್ತಿದ್ದಾರೆ. ಇದಕ್ಕಾಗಿಯೇ ತಮ್ಮ ಜನರನ್ನು ವಿವಿಧ ರಾಜ್ಯ ಗಳಿಗೆ ಕಳುಹಿಸುತ್ತಿದ್ದಾರೆ. ಹಿಂಸಾಚಾರ ರಾಜಕೀಯ ಮಾಡುವ ಮೂಲಕವೇ ಅವರು ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ ಎಂದು ಮಜುಂದಾರ್ ಹೇಳಿದ್ದಾರೆ.

ಮಾಜಿ ಕ್ರಿಕೆಟಿಗ ಮತ್ತು ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್, ಅವರ ಪತ್ನಿ ಪೂನಂ ಆಜಾದ್ ಮತ್ತು ಮಾಜಿ ಹರ್ಯಾಣ ಕಾಂಗ್ರೆಸ್ ನಾಯಕ ಅಶೋಕ್ ತನ್ವರ್ ಅವರು ಕಳೆದ ಮಂಗಳವಾರ ಹಾಗೂ ಭಾರತೀಯ ವಿದೇ ಶಾಂಗ ಸೇವೆಯ ಮಾಜಿ ಅಧಿಕಾರಿ ಪವನ್ ವರ್ಮಾ ಅವರು ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಟಿಎಂಸಿ ನಿರಂತರವಾಗಿ ಕಾಂಗ್ರೆಸ್‌ಗೆ ಹೊಡೆತ ನೀಡುತ್ತಿದೆ. ಇತ್ತೀಚೆಗೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಹಲವು ನಾಯಕರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿ ದ್ದಾರೆ.

ಪವನ್ ವರ್ಮಾ ಮತ್ತು ಕೀರ್ತಿ ಆಜಾದ್ ಅವರಲ್ಲದೆ, ಅಕ್ಟೋಬರ್ 2019 ರಲ್ಲಿ ಕಾಂಗ್ರೆಸ್ ತೊರೆದು ತಮ್ಮ ಪಕ್ಷವನ್ನು ಸ್ಥಾಪಿಸಿದ ಅಶೋಕ್ ತನ್ವರ್ ಕೂಡ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಸೇರಿದ್ದಾರೆ.