Friday, 22nd November 2024

ಕಾಂಗ್ರೆಸ್ ಎಂಬ ಮೊಘಲ್ ಸಾಮ್ರಾಜ್ಯ

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ವಂಶಪಾರಂಪರ್ಯ ರಾಜಕಾರಣದ ಬಗೆಗಿನ ಅವರ ಧೋರಣೆ ಮೆದುವಾಗಿದೆ. ಕರ್ನಾಟಕದ ನೆಲೆಯಲ್ಲಿ ನೋಡುವುದಾದರೆ ಅವರ ಮಾತುಗಳು ಮಾಜಿ ಸಿಎಂ ಯಡಿಯೂರಪ್ಪ ಅವರ ಕಿವಿಗೆ ಕಾದ ಸೀಸದಂತೆ ಸುರಿದಿದ್ದರೆ, ಉಳಿದ ಬಹುತೇಕ ನಾಯಕರ ಕಿವಿಗೆ ಇಂಪಾಗಿ ಕೇಳಿಸಿದೆ.

ಕಳೆದ ವಾರ ಪ್ರಧಾನಿ ನರೇಂದ್ರಮೋದಿ ಅವರಾಡಿದ ಮಾತುಗಳು ಕುತೂಹಲಕಾರಿಯಾಗಿವೆ. ಸಂವಿಧಾನ ದಿನದಂದು ಅವರು ಆಡಿದ ಮಾತುಗಳು ಎರಡು
ಅಂಶಗಳನ್ನು ಸ್ಪಷ್ಟವಾಗಿ ಎತ್ತಿ ತೋರಿಸಿದ್ದಲ್ಲದೇ ಮೂರನೇ ಪ್ರಮುಖ ಸಂಗತಿಯೊಂದನ್ನು ತೆರೆದಿಟ್ಟಿದೆ.

ವಂಶಪಾರಂಪರ್ಯ ರಾಜಕಾರಣ ಈ ದೇಶಕ್ಕಂಟಿದ ಪಿಡುಗು, ಒಂದು ಕುಟುಂಬದ ಹಿಡಿತದಲ್ಲಿ ಒಂದು ಪಕ್ಷ ಇರುವುದು ಸರಿಯಲ್ಲ, ಹಾಗಂತ ಒಂದೇ ಕುಟುಂಬ ದವರು ರಾಜಕೀಯಕ್ಕೆ ಬರಬಾರದು ಎಂದಲ್ಲ, ಅರ್ಹತೆ ಇದ್ದರೆ, ಜನ ಬೆಂಬಲವಿದ್ದರೆ ಅಂತವರು ರಾಜಕಾರಣಕ್ಕೆ ಬರಬಹುದು ಎಂಬುದು ಅವತ್ತು ನರೇಂದ್ರ ಮೋದಿ ಅವರಾಡಿದ ಮಾತುಗಳ ತಾತ್ಪರ್ಯ. ಅಂದ ಹಾಗೆ ಇದೇ ನರೇಂದ್ರಮೋದಿ ಅವರು ಕೆಲವೇ ಕಾಲದ ಹಿಂದೆ ಐಎಎಸ್ ಪ್ರೊಬೆಶನರಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ: ವಂಶ ಪಾರಂಪರ್ಯ ರಾಜಕಾರಣ ಈ ದೇಶಕ್ಕಂಟಿದ ಶಾಪ. ಯಾಕೆಂದರೆ ವಂಶಪಾರಂಪರ್ಯ ರಾಜಕಾರಣದಲ್ಲಿ ಕೇವಲ ಅಧಿಕಾರ ಮಾತ್ರವಲ್ಲ, ಭ್ರಷ್ಟಾಚಾರವೂ ಹಸ್ತಾಂತರವಾಗುತ್ತದೆ ಎಂದು ಹೇಳಿದ್ದರು.

ಅವತ್ತು ಅವರು ಈ ಮಾತನಾಡುವ ಕಾಲಕ್ಕೆ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದವರು ಯಡಿಯೂರಪ್ಪ. ಅಷ್ಟೊತ್ತಿಗಾಗಲೇ ಅವರನ್ನು ಅಧಿಕಾರದಿಂದ ಇಳಿಸುವ ಕಸರತ್ತು ಶುರುವಾಗಿತ್ತಲ್ಲ? ಹೀಗಾಗಿ ಮೋದಿ ಅವರಾಡಿದ ಮಾತು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲ, ತಮ್ಮ ಪುತ್ರ ವಿಜಯೇಂದ್ರ ಅವರ ರಾಜಕೀಯ ಉನ್ನತಿಗಾಗಿ ಸ್ಕೆಚ್ ಹಾಕುತ್ತಿದ್ದ ಯಡಿಯೂರಪ್ಪ ಅವರ ಶಕ್ತಿಯನ್ನು ಉಡುಗಿಸಲು ಅಗತ್ಯವಾದ ಬಾಣದಂತೆ ಕೆಲಸ ಮಾಡಿತ್ತು.

ಈಗ ಮತ್ತೆ ನರೇಂದ್ರಮೋದಿ ಅವರು ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಗುಡುಗಿದ್ದಾರೆ. ಆದರೆ ವ್ಯತ್ಯಾಸವೆಂದರೆ, ಅರ್ಹತೆ ಇದ್ದರೆ, ಜನಬೆಂಬಲ ಇದ್ದರೆ ಕುಟುಂಬದ ಇತರರು ಕೂಡಾ ರಾಜಕೀಯಕ್ಕೆ ಬರಬಹುದು ಅಂತ ಈ ಸಲ ಸೇರಿಸಿದ್ದಾರೆ. ಅರ್ಥಾತ್, ವಂಶ ಪಾರಂಪರ್ಯ ರಾಜಕಾರಣದ ಬಗೆಗಿನ ಅವರ ಧೋರಣೆ ಮೆದುವಾಗಿದೆ. ಕರ್ನಾಟಕದ ನೆಲೆಯಲ್ಲಿ ನೋಡುವುದಾದರೆ ಅವರ ಮಾತುಗಳು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಿವಿಗೆ ಕಾದ ಸೀಸದಂತೆ ಸುರಿದಿದ್ದರೆ, ಉಳಿದ ಬಹುತೇಕ ನಾಯಕರ ಕಿವಿಗೆ ಇಂಪಾಗಿ ಕೇಳಿಸಿದೆ.

ಯಡಿಯೂರಪ್ಪ ಅವರ ಕಿವಿಗೆ ಯಾಕೆ ಕಾದ ಸೀಸದಂತೆ ಸುರಿದಿದೆ ಎಂದರೆ ರಾಜ್ಯ ಬಿಜೆಪಿಗೆ ತಮ್ಮ ಮಗ ವಿಜಯೇಂದ್ರ ಅಧಿಪತಿಯಾಗಬೇಕು ಎಂದವರು ಬಯಸಿದ್ದರು. ಅದಕ್ಕೆ ಪೂರಕವಾದ ತಯಾರಿಯನ್ನೂ ಮಾಡಿಕೊಂಡಿದ್ದರು. ಆದರೆ ಒಂದು ರಾಜಕೀಯ ಪಕ್ಷ ಒಂದು ಕುಟುಂಬವನ್ನು ನೆಚ್ಚಿಕೊಳ್ಳುವ ಪರಿಸ್ಥಿತಿ ಇರಬಾರದು ಎಂದು ಮೋದಿ ಹೇಳಿzರಲ್ಲ? ಈ ಮಾತು ಸಹಜವಾಗಿ ಯಡಿಯೂರಪ್ಪ ಅವರ ಉದ್ದೇಶವನ್ನು ಅಡ್ಡ ಮಲಗಿಸಿದೆ. ಉಳಿದ ಬಹುತೇಕ ನಾಯಕರಿಗೇಕೆ ಮೋದಿಯವರ ಮಾತು ಇಂಪಾಗಿ ಕೇಳಿಸುತ್ತಿದೆ ಎಂದರೆ, ರಾಜ್ಯ ಬಿಜೆಪಿಯ ಬಹುತೇಕ ನಾಯಕರು ಈಗ ಕುಟುಂಬ ರಾಜಕಾರಣದ ಅನುಯಾಯಿಗಳು. ಈ
ಪೈಕಿ ಕೆಲವರು ಈಗಾಗಲೇ ತಮ್ಮ ಕುಟುಂಬದವರನ್ನು ರಾಜಕಾರಣದೊಳಗೆ ನುಗ್ಗಿಸಿದ್ದಾರೆ, ಇನ್ನು ಹಲವರು ತಮ್ಮ ಮಕ್ಕಳು, ಸಹೋದರರು ಮತ್ತು ಕುಟುಂಬದ ಇತರರನ್ನು ವಿಧಾನಸಭೆ, ವಿಧಾನ ಪರಿಷತ್ತು, ಲೋಕಸಭೆ ಚುನಾವಣೆಗಳ ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ.

ಅಂದ ಹಾಗೆ ವಂಶ ಪಾರಂಪರ್ಯ ರಾಜಕಾರಣದ ಬೇರು ಎಲ್ಲ ರಾಜಕೀಯ ಪಕ್ಷಗಳಲ್ಲಿ ಹರಡಿಕೊಂಡಿದೆ. ಕಾಂಗ್ರೆಸ್‌ನಲ್ಲಿ ವಂಶಪಾರಂಪರ್ಯ ರಾಜಕಾರಣದ ಹಲವು ಕುರುಹುಗಳು ಮೇಲೆದ್ದು ನಿಂತಿವೆಯಾದರೆ, ಜೆಡಿಎಸ್ ಹೇಳಿ ಕೇಳಿ ಒಂದು ಕುಟುಂಬದ ಪಕ್ಷವಾಗಿ ನೆಲೆ ನಿಂತು ಬಿಟ್ಟಿದೆ. ಇಂತಹ ಸಂದರ್ಭದಲ್ಲಿ ನರೇಂದ್ರ ಮೋದಿ ಅವರಾಡಿದ ಮಾತುಗಳು ರಾಜ್ಯ ಬಿಜೆಪಿಯ ಬಹುತೇಕ ನಾಯಕರಿಗೆ ಬಲ ನೀಡಿ ದಂತಾಗಿದೆಯಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ವಂಶಪಾರಂಪರ್ಯ ರಾಜಕಾರಣದ ಅನಿವಾರ್ಯತೆಯನ್ನು ಬಣ್ಣಿಸಲೂ ಹಿಂಜರಿಯದಂತೆ ಮಾಡಿಬಿಟ್ಟಿವೆ.

ಇರಲಿ, ಹೀಗೆ ನರೇಂದ್ರಮೋದಿ ಅವರಾಡಿದ ಮಾತುಗಳು ನೀಡಿರುವ ಸಂದೇಶ ಎರಡು ಬಗೆಯಾದರೆ, ಒಳಾರ್ಥ ಬಗೆ, ಬಗೆಯಾಗಿ ಕಾಣಿಸಿಕೊಳ್ಳುತ್ತಿದೆ. ಈಗ ಮೋದಿಯವರ ಮಾತುಗಳ ಒಳಾರ್ಥಗಳನ್ನೇ ನೋಡೋಣ. ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಈ ಸಂದರ್ಭದ ಅವರೇಕೆ ಮಾತನಾಡಿದರು? ಹಾಗಂತ ಕೇಳಿಕೊಂಡು ರಾಜ್ಯ ರಾಜಕಾರಣದ ಹೊಸ್ತಿಲೊಳಗೆ ನುಗ್ಗಿದರೆ ಅಲ್ಲಿ ಕಾಣುವ ಚಿತ್ರ ಕುತೂಹಲಕಾರಿಯಾಗಿದೆ. ಮೊದಲನೆಯದಾಗಿ, ಬಿಜೆಪಿಯ ಮೇಲೆ ಅಽಪತ್ಯ ಸಾಽಸಲು ತಮ್ಮ ಪುತ್ರನನ್ನು ಮುಂದಿಟ್ಟುಕೊಳ್ಳಲು ಹೋದ ಯಡಿಯೂರಪ್ಪ ಅವರನ್ನು ಹಿಂದೆ ಸರಿಸಿದ ಮೇಲೆ ಕರ್ನಾಟಕದ ರಾಜಕಾರಣದಲ್ಲಿ ಗಟ್ಟಿಯಾಗಿ ನಿಲ್ಲಲು ದೇವೇಗೌಡರ ನೇತೃತ್ವದ ಜೆಡಿಎಸ್ ಜತೆಗಿನ ಹೊಂದಾಣಿಕೆ ಪಕ್ಷಕ್ಕೆ ಅಗತ್ಯವಿದೆ ಎಂಬುದು ಮೋದಿಯವರಿಗೆ ಗೊತ್ತಿದೆ.

ಆದರೆ ಮುಂದಿನ ದಿನಗಳಲ್ಲಿ ತಾವು ಯಾವ ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಹೊರಟಿದ್ದೇವೋ? ಆ ಪಕ್ಷ ಈಗಾಗಲೇ ವಂಶಪಾರಂಪರ್ಯ ರಾಜಕಾರಣದ ವಿಷಯದಲ್ಲಿ ಹಿಮಾಲಯ ಸದೃಶವಾಗಿ ಬೆಳೆದುನಿಂತುಬಿಟ್ಟಿದೆ. ಒಂದು ಕಾಲದಲ್ಲಿ ನೆಹರೂ ಅವರ ವಂಶಪಾರಂಪರ್ಯ ರಾಜಕಾರಣವನ್ನು ವಿರೋಧಿಸುತ್ತಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅಕ್ಕ ಪಕ್ಕದಲ್ಲೀಗ ಅವರ ಮಕ್ಕಳು, ಮೊಮ್ಮಕ್ಕಳು, ಸೊಸೆಯರು ಎದ್ದು ನಿಂತುಬಿಟ್ಟಿದ್ದಾರೆ.

ವಂಶಪಾರಂಪರ್ಯ ರಾಜಕಾರಣವನ್ನು ಸಾರಾಸಗಟಾಗಿ ವಿರೋಧಿಸುವುದೇ ಆದರೆ ಯಾವ ಕಾರಣಕ್ಕೂ ಭಾರತೀಯ ಜನತಾ ಪಕ್ಷ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಬಾರದು. ಅದೇ ರೀತಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಂದ ಬಿಜೆಪಿಯ ನಾಯಕರು ಎನ್ನಿಸಿಕೊಂಡವರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕುಟುಂಬದವರನ್ನು ಮೇಲೆತ್ತಿ ನಿಲ್ಲಿಸಲು ವಿದ್ಯುಕ್ತ ಕಸರತ್ತು ಆರಂಭಿಸಿದ್ದಾರೆ. ಹೀಗೆ ಕಸರತ್ತು ಆರಂಭಿಸಿದವರನ್ನು ತಡೆಯುವುದು ಎಂದರೆ ಸ್ಥಳೀಯವಾಗಿ ದುರ್ಬಲವಾಗುವುದು ಎಂದೇ ಅರ್ಥ. ಯಾಕೆಂದರೆ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದರೆ ಇದೇ ನಾಯಕರು ಟಿಕೆಟ್‌ಗಾಗಿ ತಮ್ಮ ಕುಟುಂಬದವರನ್ನು ಬೇರೆ ಪಕ್ಷಗಳಿಗೆ ಕಳಿಸಲೂ ಹಿಂಜರಿಯುವುದಿಲ್ಲ.

ಅರ್ಥಾತ್, ಅಧಿಕಾರ ರಾಜಕಾರಣಕ್ಕೆ ಈಗ ಯಾವ ಸಿದ್ಧಾಂತವಾಗಲೀ, ಪಕ್ಷ ನಿಷ್ಟೆಯಾಗಲಿ ಇಲ್ಲವೇ ಇಲ್ಲ, ಅಧಿಕಾರ ಬೇಕು ಎಂದರೆ ಬೇಕು ಅಷ್ಟೇ. ಎಲ್ಲ ರಾಜ್ಯಗಳಲ್ಲೂ ಇಂತಹದೇ ಮನಃಸ್ಥಿತಿ ಬೆಳೆಯುತ್ತಿರುವುದರಿಂದ ನರೇಂದ್ರಮೋದಿ ಅವರಾದರೂ ಅನಿವಾರ್ಯವಾಗಿ ಅದನ್ನು ಒಪ್ಪಿಕೊಳ್ಳಲೇಬೇಕು. ಹೀಗಾಗಿ ಈಗ ಅವರು ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಎರಡಲಗಿನ ವ್ಯಾಖ್ಯಾನ ಮಾಡಿzರೆ. ಅವರ ಈ ವ್ಯಾಖ್ಯಾನ ಕರ್ನಾಟಕದ ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಒಂದು ಸಂದೇಶ ರವಾನಿಸಿದ್ದರೆ, ಉಳಿದವರಿಗೆ ಮತ್ತೊಂದು ಬಗೆಯ ಸಂದೇಶ ರವಾನಿಸಿದೆ.

ನರೇಂದ್ರ ಮೋದಿ ಅವರ ಈ ಮಾತುಗಳನ್ನು ಗಮನಿಸುತ್ತ ಇನ್ನಷ್ಟು ಆಳಕ್ಕಿಳಿದರೆ ಮತ್ತೊಂದು ಮಹತ್ವದ ಸಂಗತಿ ಹೊಳೆಯತೊಡಗುತ್ತದೆ. ಅದೆಂದರೆ, ಭಾರತೀಯ ಜನತಾಪಕ್ಷ ಈಗ ದೊಡ್ಡ ಮಟ್ಟದಲ್ಲಿ ಬ್ರಿಟಿಷ್ ಸಾಮ್ರಾಜ್ಯಷಾಹಿಯ ರೂಪ ಪಡೆಯುತ್ತಿದೆ. ಇದನ್ನು ವಿಸ್ತೃತವಾಗಿ ಗಮನಿಸಬೇಕೆಂದರೆ ಕಾಂಗ್ರೆಸ್
ಪಕ್ಷವನ್ನೂ ಎಳೆ ತರಬೇಕು. ಹೀಗೆ ಎಳೆದು ತಂದು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಅಕ್ಕ ಪಕ್ಕದಲ್ಲಿ ನಿಲ್ಲಿಸಿದರೆ ಒಂದು ಮೊಘಲ್ ಸಾಮ್ರಾಜ್ಯದ ಮಾದರಿ, ಮತ್ತೊಂದು ಬ್ರಿಟಿಷ್ ಸಾಮ್ರಾಜ್ಯದ ಮಾದರಿಯಂತೆ ಕಂಗೊಳಿಸತೊಡಗುತ್ತವೆ.

ಅಂದ ಹಾಗೆ ಮೊಘಲ್ ಸಾಮ್ರಾಜ್ಯ ವಂಶಪಾರಂಪರ್ಯ ನೆಲೆಯದ್ದು, ಬಾಬರ್‌ನಿಂದು ಹಿಡಿದು ಬಹಾದ್ದೂರ್ ಷಾ ಜಫರ್ ತನಕ ನಡೆದು ಬಂದ ಮೊಘಲ್ ಸಾಮ್ರಾಜ್ಯ ತನ್ನ ಸಾಮಂತರ ಮೂಲಕ ದೇಶವನ್ನು ನಿಯಂತ್ರಣದಲ್ಲಿಟ್ಟುಕೊಂಡಿತ್ತು. ಇಂತಹ ಮೊಘಲ್ ಸಾಮ್ರಾಜ್ಯವನ್ನು ಬಡಿದುರುಳಿದ ಬ್ರಿಟಿಷರು ಕೂಡಾ ಕ್ರಮೇಣ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಸಂಸ್ಥಾನಗಳ ಜತೆ ಸಹಾಯಕ ಸೈನ್ಯ ಪದ್ಧತಿ ಒಪ್ಪಂದದ ಮೂಲಕ ದೇಶವನ್ನು ಆಳಿದರು. ಈ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕೂಡಾ ಮೊಘಲ್ ಸಾಮ್ರಾಜ್ಯದ ಪಡಿಯಚ್ಚಿನಂತಾಗಿದ್ದು ರಹಸ್ಯವೇನಲ್ಲ, ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ ಮತ್ತೀಗ ರಾಹುಲ್ ಗಾಂಧಿ.. ಹೀಗೆ ಒಂದು ಕುಟುಂಬದ ಅಧಿಪತ್ಯದ ಕಾಂಗ್ರೆಸ್
ಸಾಮ್ರಾಜ್ಯ ಬೆಳೆದು ಬಂದಿದೆ.

ಇಂತಹ ಸಾಮ್ರಾಜ್ಯವನ್ನು ಅಲುಗಾಡಿಸಿ ಮೇಲೆದ್ದು ನಿಂತಿರುವ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ನ ಮೊಘಲ್ ಮಾದರಿಯ ಸಾಮ್ರಾಜ್ಯ ಬೇಕಾಗಿಲ್ಲ. ಬದಲಿಗೆ ಸಹಾಯಕ ಸೈನ್ಯ ಪದ್ಧತಿಯ ಮೂಲಕ ದೇಶವನ್ನು ನಿಯಂತ್ರಣದಲ್ಲಿಟ್ಟುಕೊಂಡ ಬ್ರಿಟಿಷ್ ಸಾಮ್ರಾಜ್ಯದ ಮಾದರಿ ಬೇಕು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿನ ಪರಿಸ್ಥಿತಿ ಅವರಿಗೆ ಅಷ್ಟೊಂದು ಆಶಾದಾಯಕವಾಗಿ ಕಾಣುತ್ತಿಲ್ಲ. ಅದು ಉತ್ತರ ಪ್ರದೇಶವೇ ಇರಬಹುದು, ಕರ್ನಾಟಕವೇ ಇರಬಹುದು, ಇನ್ನು ಹಲ ರಾಜ್ಯಗಳಿರಬಹುದು. ಅಲ್ಲ ನರೇಂದ್ರಮೋದಿ ಅವರು ಬಯಸದ ಬೆಳವಣಿಗೆಗಳಾಗುತ್ತಾ, ಬಿಜೆಪಿಯ ಶಕ್ತಿ ಕ್ಷೀಣಿಸ ತೊಡಗಿದೆ.

ಹೀಗೆ ಕ್ಷೀಣಿಸುತ್ತಿರುವ ಬಿಜೆಪಿಯ ಶಕ್ತಿಯನ್ನು ಹೆಚ್ಚಿಸಬೇಕೆಂದರೆ ಅವರಿಗೆ ಕಾಣುತ್ತಿರುವ ಅತ್ಯುತ್ತಮ ದಾರಿ ಎಂದರೆ ಸಹಾಯಕ ಸೈನ್ಯ ಪದ್ಧತಿ ಒಪ್ಪಂದ. ಉದಾಹರಣೆಗೆ ಕರ್ನಾಟಕದಲ್ಲಿ ಜೆಡಿಎಸ್ ಜತೆ ಬಹಿರಂಗವಾಗಿಯೋ, ಅಂತರಂಗಿಕವಾಗಿಯೋ ಮೈತ್ರಿ ಮಾಡಿಕೊಳ್ಳುವುದು, ಆ ಮೂಲಕ ಅಽಕಾರ ರಾಜಕಾರಣ
ದಲ್ಲಿ ಯಥಾಸ್ಥಿತಿಯನ್ನು ಉಳಿಸಿಕೊಳ್ಳುವುದು. ಇದಕ್ಕೆ ಮತ್ತೊಂದು ರೂಪವೂ ಇದೆ. ಅದೆಂದರೆ ಕೆಲವರನ್ನು ಮೇಲ್ನೋಟಕ್ಕೆ ಶತ್ರುಗಳು ಎಂಬಂತೆ ನಡೆಸಿ ಕೊಳ್ಳುತ್ತಾ, ಆ ಮೂಲಕ ಅವರನ್ನು ಎತ್ತಿಕಟ್ಟಿ ಕಾಂಗ್ರೆಸ್ ಮತ ಬ್ಯಾಂಕನ್ನು ದೋಚಲು ಪ್ರೇರೇಪಣೆ ನೀಡುವುದು. ಓವೈಸಿಯಂತವರು ಇದಕ್ಕೆ ಉದಾಹರಣೆ. ಹೀಗೆ ಎಲ್ಲಿ ಸಹಾಯಕ ಸೈನ್ಯ ಪದ್ಧತಿಯ ಅಗತ್ಯವಿದೆಯೋ? ಅಲ್ಲ ಅದನ್ನು ಸಾಂಗೋಪಾಂಗವಾಗಿ ಮುಗಿಸುವುದು ನರೇಂದ್ರ ಮೋದಿಯವರ ಈಗಿನ ತುರ್ತು ಉದ್ದೇಶ.