Sunday, 22nd September 2024

ಮತ್ತೆ ಹುಟ್ಟಿಬಾರದಿರಿ, ನಾರಾಯಣಾಚಾರ್ಯರೇ !

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

journocate@gmail.com

ಆಚಾರ್ಯರ ಸಾವು ನನಗೆ ಖೇದವನ್ನುಂಟುಮಾಡಲಿಲ್ಲ. ಅವರ ನಿರ್ಗಮನಕ್ಕೆ ತೋರಿದ ನಿರ್ಲಕ್ಷ್ಯ ನೋವುಂಟು ಮಾಡಿದೆ. ಅಪರಿಚಿತ ಶವವಾಗಿ ಚಿತೆ ಏರಬೇಕಾ ದಂಥ ಬದುಕು ನಡೆಸಿದವರಿಗೆ ರಾಜಮರ್ಯಾದೆ ತೋರುವ ನಮ್ಮ ಸರ್ಕಾರ ವಜ್ರದಷ್ಟು ಬೆಲೆಬಾಳುವವರನ್ನು ಕಡೆಗಾಣಿಸಿದೆ.

ಇಂ ಗ್ಲಿಷ್‌ನಲ್ಲಿ ನಾನು philistine ಎಂಬ ಪದವನ್ನು ಆಗಾಗ್ಗೆ ಬಳಸುತ್ತಿರುತ್ತೀನಿ. ಒಂದೇ ಶಬ್ದವನ್ನು ಮತ್ತೆ ಮತ್ತೆ ಬಳಸುವುದು ಹಿತವೇನಲ್ಲ. ಆ ರೀತಿ ಬಳಸುವ ಪದ ಸವಕಲಾಗುತ್ತ ಹೋಗುತ್ತದೆ. ಸವಕಲಾದ ಪದ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ದುರ್ಬಲ ವಾದ ಶಬ್ದದ ಬಳಕೆಯಿಂದ ಹೇಳಬೇಕಾದ್ದನ್ನು ಹೇಳಲು ಸಾಧ್ಯವಾಗುವುದಿಲ್ಲ. ಹೇಳಿದರೂ, ಅದರ ಪರಿಣಾಮ ಕಡಿಮೆ. ಆದರೂ, ಈ ಒಂದು ಪದವನ್ನು ನಾನು ಬಳಸುವುದು ಆಯ್ಕೆಯ ಸ್ವಾತಂತ್ರ್ಯದಿಂದಲ್ಲ, ಅನಿವಾರ್ಯ ದಿಂದಾಗಿ. ಅದನ್ನು ಬಳಸುವಂಥ ಸಂದರ್ಭ ಬರುತ್ತಲೇ ಇರುತ್ತದೆ.

ಫಿಲಿಸ್ಟೀನ್ (ಅಥವಾ ಫಿಲಿಸ್ಟೈನ್) ಪದಕ್ಕೆ ಬೃಹತ್ ಇತಿಹಾಸವೇ ಇದೆ. ಆಸಕ್ತಿಯುಳ್ಳವರು ಗೂಗಲ್‌ನ ಮೊರೆ ಹೋಗಬಹುದು. ಅಭಿರುಚಿಹೀನರನ್ನು ಫಿಲಿಸ್ಟೀನ್ ಎಂದು ಕರೆಯಲಾಗುತ್ತದೆ. ಕಲೆಯಲ್ಲಿ ಆಸಕ್ತಿಯಿಲ್ಲ ದಿರುವುದು, ಸದಭಿರುಚಿಯಿಲ್ಲದಿರುವುದು. ಬುದ್ಧಿಯನ್ನು ಪ್ರಚೋದಿಸುವ ವಿಷಯಗಳ ಕುರಿತು ತಟಸ್ಥ ರಾಗಿರುವುದು, ಇವುಗಳೆಲ್ಲವೂ ಫಿಲಿಸ್ಟಿನಿಸಮ್ಮನ್ನು ಪ್ರತಿನಿಧಿಸುತ್ತವೆ. ರಾಜ್ಯದಲ್ಲಿ ಎಸ್. ರಮೇಶ್ ಎಂಬ ಮಂತ್ರಿ ಮಹಾಶಯರೊಬ್ಬರಿದ್ದರು. ಅವರೊಮ್ಮೆ ಧಾರವಾಡಕ್ಕೆ ಭೇಟಿ ನೀಡಿದರು.

ವರಕವಿ ದ. ರಾ. ಬೇಂದ್ರೆ ಅವರ ಊರಿದೆಂದು ಯಾರೋ ಅವರ ಕಿವಿಯಲ್ಲಿ ಉಸುರಿದರು. ಸಿಕ್ಕ ಮಾಹಿತಿ ಯಿಂದ ಚುರುಕುಗೊಂಡ ಗಣ್ಯರು ಶಾಲೊಂದು ಏರ್ಪಾಡಾಗಲಿ ಎಂದು ಸಹಾಯಕರಿಗೆ ಸೂಚಿಸಿದರು. ಬೇಂದ್ರೆ ಈಗಿಲ್ಲ, ಅವರು ತೀರಿಕೊಂಡಾಗಿದೆ ಎಂದು ಅವರಿಗೆ ತಿಳಿಸಲಾಯಿತು. ಆದರೇನಂತೆ, ವಿಶಾಲ ಹೃದಯದ ರಮೇಶ್, ಅವರ ಮಡದಿಗೆ ಗೌರವ ಸಲ್ಲಿಸೋಣವಂತೆ, ಹಾರತುರಾಯಿಯ ವ್ಯವಸ್ಥೆಯಾಗಲಿ ಎಂದರು. ಎಂದೋ ಕಣ್ಮರೆಯಾದ ರಮೇಶ್‌ರನ್ನು ಪ್ರಸ್ತಾವಿಸಲು ಕಾರಣವಿದೆ. ರಮೇಶರ ಅಂದಿನ ಖಾತೆ ಕನ್ನಡ ಮತ್ತು ಸಂಸ್ಕೃತಿ. ವೈರುಧ್ಯ ಅವರಿಗೂ, ಅವರ ಖಾತೆಗೂ ಸಂಬಂಧವಿಲ್ಲದಿದ್ದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಉತ್ತರಹಳ್ಳಿಯನ್ನು ಪ್ರತಿನಿಧಿಸುತ್ತಿದ್ದ ಅವರ ಹೆಸರಿನ ಮುಂದೆ ‘ಸ್ಲಮ’ ಸೇರಿ ಕೊಂಡಿತ್ತು. ಆ ಬಗ್ಗೆ ಅವರ ತಕರಾರೇನೂ ಇರಲಿಲ್ಲ. ಅಂತಹ ಗುಣವಾಚಕವನ್ನು ಹೊತ್ತ ಅವರು ಬ್ರಾಹ್ಮಣ ಕುಲದಲ್ಲಿ ಜನ್ಮ ತಾಳಿದ್ದರು.

ಅವರ ವೈಯಕ್ತಿಕ ಏಳಿಗೆಗೆ ಕಾರಣವಾದ ಕಾಂಗ್ರೆಸ್ ಪಕ್ಷವೇ ಅದೇ ಹೆಸರಿನ ಮತ್ತಿಬ್ಬರು- ರಮೇಶ್ ಕುಮಾರ್ ಮತ್ತು ರಮೇಶ್ ಜಾರಕಿಹೊಳಿ- ರಾಜಕಾರಣಿಗಳ ಅಭಿವೃದ್ಧಿಗೂ ಕಾರಣವಾಯಿತು. ಕಾಂಗ್ರೆಸ್ ಪಕ್ಷದಿಂದ ಕತ್ತೆ ಚುನಾವಣೆಗೆ ನಿಂತರೂ ಗೆಲ್ಲುತ್ತದೆ ಎಂಬ ಮಾತೂ ಸವಕಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸು ವವರು ಬಹುತೇಕ ಕತ್ತೆಗಳೆಂದು ಸಾರಾಸಗಟಾಗಿ ಹೇಳಿದರೆ ಉಳಿದ ಪಕ್ಷಗಳು ಹಿರಿಹಿರಿ ಹಿಗ್ಗಲಿಕ್ಕೆ ನಾನೇ ಕಾರಣ ಒದಗಿಸಿದಂತಾಗುತ್ತದೆ. ಅವುಗಳ ಸಂತಸಕ್ಕೆ ನನ್ನ ಅಲ್ಪಕಾಣಿಕೆಯನ್ನೂ ನೀಡಲಾರೆ. ಸಾಹಿತ್ಯ ಮತ್ತು ಸಂಗೀತದಲ್ಲಿ ಅಭಿರುಚಿ ಇಲ್ಲದವರನ್ನು ಸಂಸ್ಕೃತದ ಸುಭಾಷಿತವೊಂದು ಬಾಲ-ಕೊಂಬು ಗಳಿಲ್ಲದ ಮೃಗಗಳೆಂದು ವರ್ಣಿಸುತ್ತದೆ.

ಅಂಥವರು ಹುಲ್ಲನ್ನು ತಿನ್ನದಿರುವುದು ಪ್ರಾಣಿಗಳ ಪುಣ್ಯ ಎಂದು ಸುಭಾಷಿತದ ಮುಂದುವರಿದ ಭಾಗ ಹೇಳುತ್ತದೆ. ಇದು ಕಟುವಾಸ್ತವ. ವಾಸ್ತವದ ಅರಿವನ್ನು ಹೆಜ್ಜೆಹೆಜ್ಜೆಗೂ ಮೂಡಿಸುವ ಸಂಸ್ಕೃತ ಭಾಷೆಯನ್ನು ಕೊಲ್ಲುವುದಕ್ಕೆ ನಮ್ಮ ದೇಶದಲ್ಲಿ ಪರವಾನಗಿ ಬೇಕಿಲ್ಲ. ಸಂಸ್ಕೃತವನ್ನು ಸಂಹರಿಸುವುದೆಂದರೆ ಅದರ ಸಂಹಾರ ಭಾಷೆಗೆ ಸೀಮಿತವಾಗುವುದಿಲ್ಲ. ವ್ಯಾಪಕವಾದ ಒಂದು ಸಮಗ್ರ ಪುರಾತನ ಸಂಸ್ಕೃತಿಯನ್ನು ಸಂಹಾರ ಮಾಡುವುದು ಹಂತಕರ ಗುರಿ. ಸಂಸ್ಕೃತಿಯ ನಾಶವಾಗಬೇಕಾದರೆ ಸಂರಕ್ಷಣೆಗೆ ಟೊಂಕಕಟ್ಟಿನಿಂತವರನ್ನು ಮುಗಿಸಬೇಕು. ಮೊನ್ನೆ, ಸ್ನೇಹಿತರೊಬ್ಬರು ತಾವು ಕಂಡದ್ದನ್ನು ಹಂಚಿಕೊಂಡ ವಿಚಾರವಿದು. ದಾಂಪತ್ಯದಲ್ಲಿ ವಿರಸವೆಂದು ರೂಪವಂತ ಗೃಹಿಣಿ, ಗಂಡನ ವಿರುದ್ಧ ಪೊಲೀಸಿಗೆ ದೂರುತ್ತಾಳೆ.

ಗಂಡನನ್ನು ಠಾಣೆಗೆ ಕರೆಸಿದ ಇನ್ಸ್‌ಪೆಕ್ಟರ್ ಆತನನ್ನು ಪೋಲಿಸ್ ಭಾಷೆಯಲ್ಲಿ ದಂಡಿಸುತ್ತಾನೆ. ಅವನ ಉದ್ದೇಶ ಸಮಸ್ಯೆಯನ್ನು ಬಗೆಹರಿಸುವುದಲ್ಲ. ದೂರುತಂದ ಕ್ಷಣದ ದೂರು ನೀಡಿದವಳ ಮೇಲೆ ಅವನ ಕಣ್ಣು ಬಿದ್ದಿದೆ. ಅವನದ್ದೇನಿದ್ದರೂ, ಅವಳನ್ನು ಬುಟ್ಟಿಗೆ ಹಾಕಿಕೊಳ್ಳುವ ಹವಣಿಕೆ. ಆ ದುರುದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ, ಅವಳಿಗೆ ತನ್ನ ಚಪ್ಪಲಿಯನ್ನು ಕಳಚಿಕೊಂಡು ಗಂಡನಿಗೆ ಥಳಿಸಲು ಆಜ್ಞೆ ಮಾಡುತ್ತಾನೆ. ಭಯದಿಂದಲೇ ಅವಳು ಅವನ ಆದೇಶವನ್ನು ಪಾಲಿಸುತ್ತಾಳೆ. ಅಲ್ಲಿಗೆ ದಾಂಪತ್ಯ ಮುರಿದುಬಿತ್ತು. ಇನ್ಸ್ ಪೆಕ್ಟರ್‌ನ ರೊಟ್ಟಿಯೂ ಜಾರಿ ತುಪ್ಪದ ಕೊಪ್ಪರಿಗೆಗೇ ಬಿತ್ತು.

ಇದು ನಮ್ಮ ಕುರೂಪ ವ್ಯವಸ್ಥೆಯ ಮುಖ. ಇದು ಎಲ್ಲಿ ನಡೆದzಂಬುದು ಮುಖ್ಯವಲ್ಲ. ಭಾರತದ ಯಾವುದೇ ಭಾಗ ದದರೂ ಘಟಿಸಬಹುದು, ಘಟಿಸುತ್ತಿದೆ. ಯಾವುದೇ ವ್ಯಾಜ್ಯಕ್ಕೆ ಪರಿಹಾರ ಬಯಸುವವರು ಹೋಗಬಾರದ ಎರಡು ಸ್ಥಳಗಳಿವೆ: 1. ಪೊಲೀಸ್ ಸ್ಟೇಶನ್ 2. ನ್ಯಾಯಾಲಯ. ಸ್ವಾವಲಂಬಿಗಳ ಬೆಂಬಲಕ್ಕೆ ದೈವಕೃಪೆ ಇರುತ್ತದೆ ಎಂಬ ಮಾತೊಂದಿದೆ. ಕಾನೂನನ್ನು ಕೈಗೆತ್ತಿಕೊಳ್ಳುವ ರೌಡಿಗಳಿಗೆ ಈ ಮಾತಿನಲ್ಲಿ ಅದಮ್ಯ ನಂಬಿಕೆ! ನಮ್ಮ ಸಮಾಜ ಇದಕ್ಕಿಂತ ಹೆಚ್ಚು ನಗ್ನವಾಗಲಾರದು. ದಂಪತಿಯ ನಡುವಿನ ವೈಮನಸ್ಯವೊಂದನ್ನು ಪೊಲೀಸ ನೊಬ್ಬ ತನ್ನ ತೀಟೆ ತೀರಿಸಿಕೊಳ್ಳುವುದಕ್ಕಾಗಿ ಬಳಸಿಕೊಳ್ಳಬಲ್ಲವನಾದರೆ, ಶ್ರೀಸಾಮಾನ್ಯನಿಗೆ ಯಾರು ರಕ್ಷಣೆ ಕೊಡಬಲ್ಲರು? ಪತ್ನಿಯೇ ಪತಿಗೆ ಥಳಿಸಲಿಕ್ಕೆ ಪೊಲೀಸ್ ಅನುವು ಮಾಡಿಕೊಡುತ್ತಾನೆ.

ಮತ್ತೆಂದೂ ಅವರಿಬ್ಬರೂ ಒಟ್ಟುಗೂಡಿ ಜೀವನ ನಡೆಸಬಾರದೆಂಬುದು ಅವನ ಲೆಕ್ಕಾಚಾರ. (ಪತಿಯೂ ಒಬ್ಬ ಸಮವಸ ತೊಟ್ಟವನೇ ಅಂತೆ.) ಸಂಸ್ಕೃತಿಯ ಸಂಕೇತವಾದ ದಾಂಪತ್ಯವನ್ನೇ ಸಂರಕ್ಷಿಸಲಿಕ್ಕಾಗದ ನಮ್ಮ ವ್ಯವಸ್ಥೆಯಲ್ಲಿ ಅಮೂರ್ತವಾದ ಸಂಸ್ಕೃತಿಯನ್ನು ರಕ್ಷಿಸಲೆಂಬ ನಿರೀಕ್ಷೆಯೇ ತಪ್ಪು. ಆ ಇನ್ಸ್‌ಪೆಕ್ಟರ್ ಅದಾವ ತಾಲಿಬಾನ್ ಉಗ್ರರಿಗಿಂತ ವಿಭಿನ್ನ? ಉಗ್ರರು ಅಂದೇಟಿಗೆ ಮನಸ್ಸಿಗೆ ಬಂತು. ತಾಲಿಬಾನ್ ಹೆಸರನ್ನು ಫೇಸ್‌ಬುಕ್‌ನಲ್ಲಿ ಮುಕ್ತವಾಗಿ ಬಳಸುವಂತಿಲ್ಲ. ಅದು ಝುಕರ್‌ಬರ್ಗ್ ನಿಯಂತ್ರಿತ ಫೇಸ್ಬುಕ್‌ನ ನಡವಳಿಕಾ ನಿಯಮ. ಆದರೆ, ವೀಕ್ಷಕರ ಸೂಕ್ಷ್ಮ ಸಂವೇದನೆಯ ಮೇಲೆ ಆಕ್ರಮಣ ಮಾಡುವಂಥ ಸಹಸ್ರಾರು
ವೀಡಿಯೋಗಳು ಯಾವುದೇ ಅಡೆತಡೆಯಿಲ್ಲದೆ ಪ್ರಸಾರಗೊಳ್ಳುತ್ತವೆ.

ಎಳೆಯ ಮಕ್ಕಳು ಬೀಡಿ ಸೇದುವುದರಿಂದ ಹಿಡಿದು, ಅಪ್ರಾಪ್ತ ಶಾಲಾಬಾಲಕಿ ಮುಕ್ತವಾಗಿ ಹೆಂಡ ಕುಡಿಯುವುವರೆಗೆ, ಮುನಿಸಿಕೊಂಡ ಭಾರತೀಯ ನಾರಿ ಯೊಬ್ಬಳು ಧರಿಸಿದ ಚಡ್ಡಿಯನ್ನು ತೆಗೆದು ಗಂಡೊಬ್ಬನ ಬಾಯಿಗೆ ತುರುಕುವ ಭೀಭತ್ಸ ದೃಶ್ಯದವರೆಗೂ… ಇಂಥದ್ದಿಲ್ಲವೆಂತಿಲ್ಲ. ಇವಾವು ದಕ್ಕೂ ಝುಕರ್‌ಬರ್ಗ್‌ನ ನಿಯಮಗಳು ಅಡ್ಡಿಬರುವುದಿಲ್ಲ. ಅವನ ಕಣ್ಣಿಗೆ ಇವೆಲ್ಲ ಸಭ್ಯತೆಯ ಎಲ್ಲೆಯನ್ನು ಮೀರಿದಂತೆ ಕಾಣುವುದಿಲ್ಲ. ಏಕೆಂದರೆ ಇವಕ್ಕಿಂತ ಗಲೀಜಾದ ವೀಡಿಯೊಗಳು ಹರಿದಾಡುತ್ತಿವೆ. ರಮೇಶ್ ಜಾರಕಿಹೊಳಿ ಅಂಥಾ ಅಸಭ್ಯನಲ್ಲ ಎನ್ನಿಸುವಂಥ ವಿಡಿಯೊಗಳು.

ಇವೆಲ್ಲವೂ ಸೂಕ್ಷ್ಮ ಸಂವೇದನೆಯ ಮೇಲಿನ ಅವಿರತ ದಾಳಿಯೇ. ಸಾಂಸ್ಕೃತಿಕ ದಾಳಿಗೆ ಅಕ್ಷರರೂಪ ಒದಗಿಸಿದ್ದು ಮಿಷನರಿಗಳು ತಂದ ಪ್ರಿಂಟಿಂಗ್ ಪ್ರೆಸ್. 16ನೇ ಶತಮಾನದ ಮಧ್ಯಭಾಗದ ಮೊದಲ ಮುದ್ರಣ ಯಂತ್ರ ಪೋರ್ಚುಗಲ್‌ನಿಂದ ಬಂತಾದರೂ ಅದು ವ್ಯವಸ್ಥಿತರೂಪ ಪಡೆದುಕೊಂಡಿದ್ದು ಹದಿನೆಂಟನೇ ಶತಮಾನದ ಆರಂಭದಲ್ಲಿ -ಝೇಕಲ್ಬರ್ಗ್ ಎಂಬ ಡೆನ್ಮಾರ್ಕ್ ಮಿಷನರಿಯಿಂದ. ಆಗಿ ನಿಂದಲೂ ಭಾರತೀಯ ಮಾಧ್ಯಮದ ಮೇಲಿನ ಐರೋಪ್ಯರ ಬಿಗಿಮುಷ್ಟಿ ಸಡಿಲವಾಗಿಯೇ ಇಲ್ಲ. ಎಂಭತ್ತರ ದಶಕದಲ್ಲೂ ನ್ಯೂ ಇನಫಾರ್ಮೇಶನ್ ಆರ್ಡರ್ (ನೂತನ ಮಾಹಿತಿ ವಿಧಿ) ಎಂಬ ಪರಿಕಲ್ಪನೆಯ ಮಾತು ಚಾಲನೆಯಲ್ಲಿತ್ತು.
ಪಾಶ್ಚಿಮಾತ್ಯ ಸುದ್ದಿ ಸಂಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಆಶಯ ಅದಾಗಿತ್ತು. ಆದರೆ, ಅದು ಆಶಯವಾಗಿಯೇ ಉಳಿಯಿತು. ಮರು ದಶಕದಲ್ಲಿ ಇಂಟರ್ನೆಟ್ ಕ್ರಾಂತಿಯುಂಟಾಗಿ ಸುದ್ದಿ ವಿತರಣೆಯಲ್ಲಿನ ಅಸಮಾನತೆ ಸರಿದೂಗಬಹುದೆಂಬ ಒಂದು ಆಶಾಕಿರಣ ಕಂಡಿತಾದರೂ ಮಾಧ್ಯಮದ ಮೇಲಿನ ಅಮೆರಿಕದ ಹಿಡಿತ ಬಿಗಿಯಾಯಿತೇ ಹೊರತು ಕಡಿಮೆಯಾಗಲಿಲ್ಲ.

ನಾವೆಲ್ಲರೂ, ಗೂಗಲ್, ಫೇಸ್ಬುಕ್ ಮತ್ತು ವಾಟ್ಸಪ್ ಮತ್ತಿತರ ದೈತ್ಯಶಕ್ತಿಗಳ ಕೈಗೊಂಬೆಗಳಾಗಿದ್ದೇವೆ. ಕೈಯಲ್ಲಿನ ಮೊಬೈಲ್ ಫೋನ್ ನಮ್ಮ ಜುಟ್ಟನ್ನು ಹಿಡಿದಿದೆ. ಏನೆಲ್ಲ ವಿಚಾರಗಳು ಅಂಗೈಯಲ್ಲಿದ್ದರೂ, ಅದರ ಆಯ್ಕೆಯಲ್ಲಿನ ಅವಿವೇಕತನದಿಂದ ಅಭಿರುಚಿಹೀನತೆ ವ್ಯಾಪಕವಾಗಿದೆ. ಇಂತಹ ವಿವೇಕರಾಹಿತ್ಯ ಕಾಲಘಟ್ಟ ದಲ್ಲಿ, ಭಗವಂತ ಕೆ.ಎಸ್.ನಾರಾಯಣಾಚಾರ್ಯ ಅವರನ್ನು ತನ್ನೆಡೆಗೆ ಬರಮಾಡಿಕೊಂಡಿದ್ದಾನೆ. ಅತೀ ವಿಶಿಷ್ಟವಾಗಿ ನಾನೇನಾದರೂ ಹೇಳಲು ಹೊರಟಾಗ ಲೆಲ್ಲ ಮಿಲನ್ ಕುಂದೇರಾ ಅದನ್ನು ಬೇರೊಂದು ರೀತಿಯಲ್ಲಿ ಈಗಾಗಲೇ ಹೇಳಿರುವುದು ನೆನಪಾಗುತ್ತದೆ. ಪುಟ್ಟ ಮಗುವನ್ನು ಕಳೆದುಕೊಂಡ ತಾಯಿ ತನಗೆ ತಾನೇ ಈ
ರೀತಿ ಸಾಂತ್ವನಗೊಳಿಸಿಕೊಳ್ಳುತ್ತಾಳೆ: ನೀನೇ ನನ್ನ ಸರ್ವಸ್ವವಾಗಿದ್ದಿ. ನೀನು ನನ್ನನ್ನು ಎಷ್ಟು ಸಂಪೂರ್ಣವಾಗಿ ಆವರಿಸಿಕೊಂಡಿದ್ದಿ ಎಂದರೆ, ನಾನು ನಿನಗೋ ಸ್ಕರ ಈ ಕೃತ್ರಿಮ ಜಗತ್ತಿನೊಂದಿಗೆ ರಾಜಿ ಮಾಡಿಕೊಳ್ಳುತ್ತಿದ್ದೆ.

ರಾಜಿಯಾಗುವುದು ನನಗೆ ನೀನು ದಯಪಾಲಿಸಿದ ವ್ಯವಸ್ಥೆ. ವಾಸ್ತವದಲ್ಲಿ ನನಗೆ ಅಂತಹ ಒಡಂಬಡಿಕೆ ಒದಗಿಬರುವುದಿಲ್ಲ. ನೀನಿಲ್ಲದ ಜಗತ್ತಿನಲ್ಲಿ, ನನಗೆ ಹಿತ ವಲ್ಲದ ಒಡಂಬಡಿಕೆ ಅಗತ್ಯವಿಲ್ಲ. ಆದ್ದರಿಂದ ನಿನ್ನ ಸಾವು ನನ್ನನ್ನು ಬಂಧನಮುಕ್ತಗೊಳಿಸಿದೆ. ಇನ್ನು ನಾನು ನನ್ನ ನಿಯಮಗಳನ್ನು ರೂಪಿಸಿಕೊಂಡು ಬಾಳುವೆ. ನಿನ್ನ ಸಾವನ್ನು ನಾನು ಉಡುಗೊರೆಯಾಗಿ ಪರಿಗಣಿಸಿದ್ದೀನಿ.  ಆಚಾರ್ಯರ ಸಾವು ನನಗೆ ಖೇದವನ್ನುಂಟುಮಾಡಲಿಲ್ಲ. ಅವರ ನಿರ್ಗಮನಕ್ಕೆ ನಮ್ಮ ದೇಶ, ನಮ್ಮ ರಾಜ್ಯ ತೋರಿದ ಬಂಡೆಗಲ್ಲಿನ ನಿರ್ಲಕ್ಷ್ಯ ನೋವುಂಟುಮಾಡಿದೆ. ಅಪರಿಚಿತ ಶವವಾಗಿ ಚಿತೆ ಏರಬೇಕಾದಂಥ ಬದುಕು ನಡೆಸಿದವರಿಗೆ ರಾಜಮರ್ಯಾದೆ ತೋರುವ ನಮ್ಮ ರಾಜ್ಯ ಸರ್ಕಾರ ಕೊಹಿನೂರ್ ವಜ್ರದಷ್ಟು ಬೆಲೆಬಾಳುವ ಆಚಾರ್ಯರನ್ನು ಕಡೆಗಾಣಿಸಿದೆ. ಯಾವುದೋ ಅಡ್ನಾಡಿ ನಾಯಕ ಅದಾವುದೋ ಮುಖಹೀನ ಬಣವನ್ನು ಸಂಪ್ರೀತಗೊಳಿಸಲು ಅವರ ಜೀವಿತಾವಧಿಯಲ್ಲಿ ಅವರಿಗೆ ನೀಡಿದ ದುರುದ್ದೇಶಪೂರಿತ ಕಿರುಕುಳವನ್ನು ಮೀರಿಸುವಂತೆ ಸದರೀ ಸರಕಾರ
ಅವರ ಬಗ್ಗೆ ಮರಣೋತ್ತರವಾಗಿ ಅನಾದರ ತೋರಿದೆ. ಈ ಅನಾದರ ಹಿಂದೂ ಸಮಾಜಕ್ಕೆ ತೋರಿದ ಅಗೌರವ.

ಸಭ್ಯಸಮಾಜಕ್ಕೆ ತೋರಿದ ಅನಾದರ. ಕತ್ತೆಗಳನ್ನು ನಿಲ್ಲಿಸಿ ಗೆಲ್ಲಿಸುವ ಒಣಜಂಭದ ಪ್ರದರ್ಶನವಿದು. ಭಂಡಗೆಟ್ಟ ಮಾಧ್ಯಮಗಳ ಬಗ್ಗೆ ಹೇಳುವುದೇನೂ ಉಳಿದಿಲ್ಲ.
Alround philistinism on full view. ಸತ್ತವರನ್ನು ಮತ್ತೆ ಹುಟ್ಟಿ ಬನ್ನಿ ಎಂದು ಹೇಳುವ ಪದ್ಧತಿ ಅಲ್ಲಲ್ಲಿ ಕಾಣುತ್ತೇವೆ. ಆಚಾರ್ಯರು ನನ್ನ ಮಾತು ಕೇಳಿಸಿ ಕೊಳ್ಳುತ್ತಿದ್ದರೆ, ನನ್ನ ವಿನಯಪೂರ್ವಕ ವಿನಂತಿ: ದಯವಿಟ್ಟು ಈ ಸಮಾಜಕ್ಕೆ ಮತ್ತೆ ಮರಳಬೇಡಿ. ನೀವು ಪ್ರತಿಪಾದಿಸಿದ ಗೀತೆಯೇ ಹೇಳುವಂತೆ, ಮರಣ ಶೋಕಿಸಲು ಅವಕಾಶ ನೀಡಬಾರದು. ನಿಮಗೆ ಕೃಷ್ಣನ ದಿವ್ಯ ಸಾನ್ನಿಧ್ಯ ಸಿಗಲಿ. ನಿಮ್ಮ ಅಸಾಧಾರಣ ಸಾಧನೆಗೆ ಸಿಗದಿದ್ದರೆ, ಇನ್ನಾರಿಗೂ ಅದು ಸಿಗದು. ಯಾವುದೇ ಸರ್ಕಾರ ಕೊಡಲಾಗದಷ್ಟು ಮನ್ನಣೆಯನ್ನು ನೀವು ಎಂದೋ ಗಳಿಸಿದ್ದಿರಿ. ನಿಮ್ಮಂಥ ಪುಣ್ಯವಂತರ ದರ್ಶನ ಪಡೆಯಲು ಸದ್ಯ ಗಣ್ಯರಾರೂ ಬರಲಿಲ್ಲವಲ್ಲ. ಬಂದಿದ್ದರೆ, ಅಪಚಾರವಾಗುತ್ತಿತ್ತು. ಹೋಗಿ ಬನ್ನಿ, ಆಚಾರ್ಯರೇ. ನಿಮಗೊಂದು ಸಾಷ್ಟಾಂಗ ನಮನ.