ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್
drhsmohan@gmail.com
ವ್ಯಾಕ್ಸಿನ್ಗಳಿಗೆ ಮಾಡಿದಂತೆಯೇ ಸಿರಿವಂತ ದೇಶಗಳಾದ ಅಮೆರಿಕ, ಯುಕೆ ಸೇರಿದಂತೆ ಹಲವು ರಾಷ್ಟ್ರಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ಈ ವೈರಸ್ ವಿರುದ್ಧದ ಮಾತ್ರೆಗಳಿಗೆ ಬೇಡಿಕೆ ಸಲ್ಲಿಸಿ ಬಡ ದೇಶಗಳಿಗೆ ಮಾತ್ರೆಗಳು ಸಿಗದ ಹಾಗೆ ಮಾಡುತ್ತವೇನೋ?
ಕರೋನಾ ವೈರಸ್ ವಿರುದ್ಧ ಇತ್ತೀಚೆಗೆ ಕೆಲವು ಔಷಧಗಳು ಸುದ್ದಿಯಲ್ಲಿವೆ. ಅವುಗಳಲ್ಲಿ ಮುಖ್ಯವಾದವುಗಳು- ಮೆರ್ಕ್ ಕಂಪನಿಯ ಮೊಲ್ನುಪಿರಾವಿರ್ ಫೈಜರ್
ನವರ ಪಾಕ್ಸ್ ಲೋವಿಡ್. ಮೊದಲು ಮೊಲ್ನುಪಿರಾವಿರ್ ಬಗ್ಗೆ ನೋಡೋಣ. ಅಮೆರಿಕದ ಎಮೊರಿ ವಿಶ್ವ ವಿದ್ಯಾ ಲಯವು ಮಾರ್ಚ್ 2020ರಲ್ಲಿ NHC/ EIDD 2801 ಎಂಬ ಔಷಧದ ಬಗ್ಗೆ ಒಂದು ಸಂಶೋಧನಾತ್ಮಕ ಪ್ರಬಂಧ ಪ್ರಕಟಿಸಿತು. ಆಗ ಕರೋನಾ ವೈರಸ್ ವಿರುದ್ಧ ಯಾವ ಚಿಕಿತ್ಸೆಯೂ ಇರಲಿಲ್ಲ. ಆ ಸಂದರ್ಭದಲ್ಲಿ ಸಂಶೋಧಕರು ಇದು ಹಲವು ರೀತಿಯ ಕರೋನಾ ವೈರಸ್ ಗಳ ವಿರುದ್ಧ ಪರಿಣಾಮಕಾರಿ ಔಷಧವಾಗಬಲ್ಲದು.
ಹಾಗೆಯೇ SARS Co2 ವೈರಸ್ (ಅಂದರೆ ಕರೋನಾ ವೈರಸ್) ವಿರುದ್ಧ ಒಳ್ಳೆಯ ಸಫಲ ಔಷಧವಾಗಬಲ್ಲದು ಎಂದು ಆಗ ಬರೆದಿದ್ದರು. ಆನಂತರ ಎಮೊರಿಯು ಆ ಔಷಧವನ್ನು ರಿಡ್ಜ್ ಬ್ಯಾಕ್ ಬಯೋಥೆರಪೆಟಿಕ್ಸ್ ಎಂಬ ಬಯೋಟೆಕ್ನಾಲಜಿ ಸಂಸ್ಥೆಗೆ ಲೈಸೆನ್ಸ್ ಮಾಡಿಕೊಟ್ಟಿತು. ಆನಂತರ ರಿಡ್ಜ್ ಬ್ಯಾಕ್ ಕಂಪನಿಯು ಈ ಔಷಧದ ಪ್ರಯೋಗ ವೇಗವಾಗಿ ಮುಂದುವರಿಯಲೆಂದು ಮೆರ್ಕ್ ಕಂಪನಿಯ ಜತೆಗೆ ಸಹಯೋಗ ಮಾಡಿಕೊಂಡಿತು.
ಎಮೊರಿ ಸಂಶೋಧಕರು ಈ ಔಷಧವನ್ನು ಮೊಲ್ನುಪಿರಾವಿರ್ ಎಂದು ಹೆಸರಿಸಿದರು. ಕಳೆದ ತಿಂಗಳು ಮೆರ್ಕ್ ಮತ್ತು ರಿಡ್ಜ್ ಬ್ಯಾಕ್ ಕಂಪನಿಯವರು ಮೊಲ್ನು ಪಿರಾವಿರ್ ಔಷಧವು ಕರೋನಾ ಸೋಂಕು ಪೀಡಿತ ರೋಗಿಗಳು ಆಸ್ಪತ್ರೆಗೆ ಸೇರಬೇಕಾದ ಪ್ರಮೇಯವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು. ಈ ಔಷಧ ಬಹಳಷ್ಟು ಪರಿಣಾಮಕಾರಿಯಾದ್ದ ರಿಂದ ಒಂದು ಸ್ವತಂತ್ರ ಸಮಿತಿ ಈ ಔಷಧದ 3ನೇ ಟ್ರಯಲ್ ಅನ್ನು ಬೇಗನೇ ನಿಲ್ಲಿಸಲು ಸಲಹೆ ಕೊಟ್ಟಿತು. ಮೊದಲು ಪ್ರಯೋಗ ಮಾಡಿದ 400 ವ್ಯಕ್ತಿಗಳಲ್ಲಿ ಯಾರೂ ಮರಣ ಹೊಂದಲಿಲ್ಲ, ಹಾಗೆಯೇ ಗಮನಾರ್ಹವಾದ ಪಾರ್ಶ್ವ ಪರಿಣಾಮ ಗಳೂ ಕಂಡು ಬರಲಿಲ್ಲ.
ನವೆಂಬರ್ 4 ರಂದು ಈ ಔಷಧವನ್ನು ಅನುಮೋದನೆ ಮಾಡಿದ ಮೊದಲ ದೇಶ ಬ್ರಿಟನ್ ಆದರೆ ಸದ್ಯದಲ್ಲಿಯೇ ಅಮೆರಿಕದಲ್ಲಿ ಇದಕ್ಕೆ ಅನುಮತಿ ದೊರಕುತ್ತದೆ
ಎನ್ನಲಾಗಿದೆ. ಮಾತ್ರೆಯ ರೂಪದಲ್ಲಿ ಕೊಡಬಹುದಾದ ಮೊಲ್ನುಪಿರಾವಿರ್ ಔಷಧ, ಕೋವಿಡ್ ಕಾಯಿಲೆಯ ಚಿಕಿತ್ಸೆಯಲ್ಲಿ ಗಮನಾರ್ಹವಾದ ಪರಿಣಾಮ ಬೀರ ಬಲ್ಲದು ಎನ್ನಲಾಗಿದೆ. ಈಗ ಕೋವಿಡ್ ಚಿಕಿತ್ಸೆಗೆ ಉಪಯೋಗಿಸುತ್ತಿರುವ ಮಾನೋಕ್ಲೋನಲ್ ಆಂಟಿಬಾಡಿಗಳು ವೈರಸ್ ವಿರುದ್ಧದ ಔಷಧ ರೆಮ್ಡಿಸಿವರ್ ಗಳನ್ನು ಆಸ್ಪತ್ರೆಗಳಲ್ಲಿ ದಾಖಲಾಗಿ ಇಂಜೆಕ್ಷನ್ ಅಥವಾ ಡ್ರಿಪ್ಸ್ಗಳ ಮೂಲಕ ತೆಗೆದುಕೊಳ್ಳಬೇಕಾಗುತ್ತದೆ.
ಆದರೆ ಮೊಲ್ನುಪಿರಾವಿರ್ ಅನ್ನು ಮಾತ್ರೆಯ ರೂಪದಲ್ಲಿ ಸೇವಿಸಬೇಕಾದುದರಿಂದ ಇದು ಸುಲಭ. ಕೋವಿಡ್ ಕಾಯಿಲೆಯ ಲಕ್ಷಣ ಆರಂಭವಾಗಿ ೫ ದಿನಗಳ ಒಳಗೆ ಇದನ್ನು ಆರಂಭಿಸಿ 5 ದಿನಗಳ ಕೋರ್ಸ್ ತೆಗೆದುಕೊಳ್ಳಬೇಕು. ಚಿಕಿತ್ಸೆಗೆ ಮಾತ್ರವಲ್ಲದೆ ಕಾಯಿಲೆ ಬರದಂತೆ ತಡೆಯಬಹುದಾ ಎಂದು ಈಗ ಪರೀಕ್ಷಿಸಲಾಗುತ್ತಿದೆ.
ಮೊಲ್ನುಪಿರಾವಿರ್ ಔಷಧ ಕರೋನಾ ವೈರಸ್ನ ಎಲ್ಲ ಪ್ರಬೇಧಗಳಲ್ಲಿಯೂ ಪರಿಣಾಮಕಾರಿ ಎನ್ನಲಾಗಿದೆ. ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇದು ಎಲ್ಲ ರೀತಿಯ ಆರ್ಎನ್ಎ ವೈರಸ್ಗಳ ವಿರುದ್ಧ ಪರಿಣಾಮಕಾರಿ. ಹಾಗಾಗಿ ಈಗಿನ ಕರೋನಾ ವೈರಸ್ ಅಲ್ಲದೆ ಎಬೋಲಾ, ಹೆಪಟೈಟಿಸ್ ಸಿ, ನೋರೋ ವೈರಸ್, ಆರ್ಎಸ್ ವಿ ವೈರಸ್ ಈ ಎಲ್ಲವುಗಳ ಮೇಲೆ ಪರಿಣಾಮ ಬೀರಬಲ್ಲದು.
ಸಾಮಾನ್ಯವಾಗಿ ವ್ಯಾಕ್ಸಿನ್ಗಳಿಂದ ಉಂಟಾದ ಆಂಟಿಬಾಡಿಗಳು ಸ್ಪೈಕ್ ಪ್ರೋಟೀನ್ ಗಳ ವಿರುದ್ಧ ಕೆಲಸ ಮಾಡಿದರೆ, ಇದು ವೈರಸ್ ನ ಪ್ರತಿರೂಪ ಸೃಷ್ಟಿಸುವ ತಾಂತ್ರಿಕತೆಯನ್ನೇ ನಾಶ ಮಾಡುತ್ತದೆ. ಇದು ದೇಹದೊಳಗೆ ಪ್ರವೇಶಿಸಿದ ತಕ್ಷಣ NHC ಎಂಬ ವಸ್ತುವಿಗೆ ಬದಲಾಗುತ್ತದೆ. ಇದು ವೈರಸ್ನ ಪ್ರೂಫ್ ರೀಡಿಂಗ್ ತಾಂತ್ರಿಕತೆ ನಾಶಮಾಡಿ ವೈರಸ್ ತನ್ನ ಸಂತತಿ ವೃದ್ಧಿಸುವ ಪ್ರಕ್ರಿಯೆಯನ್ನೇ ನಾಶವಾಗಿಸಿಬಿಡುತ್ತದೆ. ಹೀಗೆ ಆರ್ಎನ್ಎ ವೈರಸ್ ನೊಂದಿಗೆ ತೀವ್ರ ಪ್ರತಿಕ್ರಿಯೆ ಹೊಂದಿರುವ ಇದು ಮನುಷ್ಯರ ಡಿಎನ್ಎ ಮೇಲೆ ಏನಾದರೂ ಪರಿಣಾಮ ಬೀರುತ್ತದೆಯೇ?ಎಂದು ಕೆಲವರಲ್ಲಿ ಸಂದೇಹ ಮೂಡಿದೆ. ಇದು ಈ ಔಷಧ ಮಾತ್ರವಲ್ಲ ವೈರಸ್ ವಿರುದ್ಧದ ಹೆಚ್ಚಿನ ಔಷಧಗಳ ಬಗೆಗೆ ಮೊದಲಿನಿಂದಲೂ ಇರುವ ಸಂದೇಹ- ಇದು ವ್ಯಕ್ತಿಯ ಜೀನ್ ನಲ್ಲಿ ಬದಲಾವಣೆ ಮಾಡುತ್ತದೆ ಎಂದು.
ಇತ್ತೀಚಿನ ಒಂದು ಅಧ್ಯಯನದಲ್ಲಿ ತುಂಬಾ ಹೆಚ್ಚಿನ ಪ್ರಮಾಣದ ಡೋಸ್ ನಲ್ಲಿ ದೀರ್ಘಕಾಲದವರೆಗೆ ಮೊಲ್ನುಪಿರಾರ್ವಿ ಕೊಟ್ಟಾಗ ಡಿಎನ್ಎದಲ್ಲಿ ಮ್ಯುಟೇಷನ್ ಉಂಟುಮಾಡು ವುದು ಕಂಡು ಬಂದಿದೆ. ಆದರೆ ಇದು ಕೋವಿಡ್ ರೋಗಿಗಳಲ್ಲಿ ಉಪಯೋಗಿಸುವ ಡೋಸ್ಗೆ ಹಾಗಾಗುವುದಿಲ್ಲ ಎಂದು ಖ್ಯಾತ ಜೀವಶಾಸ್ತ್ರಜ್ಞ
ಡೆರೆಕ್ ಲೋನ್ ಪ್ರತಿಷ್ಠಿತ ವಿಜ್ಞಾನ ಪತ್ರಿಕೆ Science ನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮೇಲಿನ ಅಧ್ಯಯನ ನಡೆದದ್ದು ಜೀವಕೋಶ ಗಳಲ್ಲಿ ಮಾತ್ರ, ಪ್ರಾಣಿ ಅಥವಾ ಮನುಷ್ಯರಲ್ಲಿ ಅಲ್ಲ. ಆಗ ಅಲ್ಲಿ ಒಂದು ತಿಂಗಳವರೆಗೆ ಕೊಡಲಾಗಿತ್ತು. ಈಗ ಮಾನವನಲ್ಲಿ ಉಪಯೋಗಿಸುವ ಡೋಸ್ ಮತ್ತು ಅವಧಿಯ ಸಮಯವನ್ನು ಗಮನ ದಲ್ಲಿಟ್ಟುಕೊಂಡು ಅಧ್ಯಯನ ಕೈಗೊಂಡಾಗ ಯಾವುದೇ ರೀತಿಯ ಡಿ ಎನ್ ಏ ಮ್ಯುಟೇಷನ್ ಕಂಡುಬಂದಿಲ್ಲ.
ಮೊಲ್ನುಪಿರಾವಿರ್ ಔಷಧದ ಕ್ಲಿನಿಕಲ್ ಟ್ರಯಲ್ ಬಗ್ಗೆ ಇತ್ತೀಚೆಗೆ ಭಾರತದ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯದ ವಿಷಯ ತಜ್ಞರ ಸಮಿತಿ (SEC) ಅಮೆರಿಕದ ಮೆರ್ಕ್ ಕಂಪನಿಯನ್ನು ಹೆಚ್ಚಿನ ಮಾಹಿತಿ ಕೇಳಿದೆ. ಭಾರತದಲ್ಲಿ ಈ ಮಾತ್ರೆಯನ್ನು ಡಾ ರೆಡ್ಡೀಸ್ ಲ್ಯಾಬ, ಹೆಟಿರೋಲ್ಯಾಬ, ನ್ಯಾಟ್ಕೋ ಫಾರ್ಮಾ,
ಅರಬಿಂದೊ ಫಾರ್ಮಾ, ಬಿಡಿಆರ್ ಫಾರ್ಮಾಸುಟಿ ಕಲ್ಸ ಉತ್ಪಾದನೆ ಮಾಡಲು ಮೆರ್ಕ್ ಕಂಪನಿ ಅನುಮತಿ ನೀಡಿದೆ.
ಇನ್ನು ಪಾಕ್ಸ್ ಲೋವಿಡ್. ಇದು ಮೇಜರ್ ಕಂಪನಿಯ ಇನ್ನೊಂದು ವೈರಸ್ ವಿರುದ್ಧದ ಔಷಧ. ಕೋವಿಡ್ ಕಾಯಿಲೆಯ ಮುಂದಿನ ತೊಡಕು ಅಥವಾ ರಿಸ್ಕ್ಗಳನ್ನು ತುಂಬಾ ಕಡಿಮೆ ಮಾಡುತ್ತದೆ ಈ ಔಷಧ ಎನ್ನಲಾಗಿದೆ. ಕಾಯಿಲೆಯ ರೋಗ ಲಕ್ಷಣಗಳು ಆರಂಭವಾಗಿ 3 ದಿನಗಳ ಒಳಗೆ ಇದನ್ನು ಸೇವಿಸಿದರೆ ಕಾಯಿಲೆ ಉಲ್ಬಣ ಗೊಂಡು ಆಸ್ಪತ್ರೆಗೆ ಸೇರಬೇಕಾದ ಪ್ರಮೇಯ ಶೇ.90 ಕಡಿಮೆಯಾಗುತ್ತದೆ ಎನ್ನಲಾಗಿದೆ. 400 ಜನರಿಗೆ ಇದನ್ನು ಕೊಟ್ಟು ಪರೀಕ್ಷಿಸಲಾಗಿದ್ದು, ಈ ಪೈಕಿ 3 ಜನರು ಮಾತ್ರ ಆಸ್ಪತ್ರೆ ಸೇರಬೇಕಾಯಿತು. ಯಾರ ಮರಣವೂ ಸಂಭವಿಸಿರಲಿಲ್ಲ.
ಅದೇ ಟ್ರಯಲ್ನಲ್ಲಿ ಅಷ್ಟೇ ಸಂಖ್ಯೆಯ ಜನರಲ್ಲಿ ಪ್ಲಾಸಿಬೋ (ಏನೂ ಔಷಧವಿಲ್ಲದ ಮಾತ್ರೆ ) ಗುಂಪಿನಲ್ಲಿ 27 ಜನರು ಆಸ್ಪತ್ರೆಗೆ ಸೇರಬೇಕಾಯಿತು, 7 ಜನರ ಮರಣ ಸಂಭವಿಸಿತು. ಫಾಕ್ಸ್ ಲೋವಿಡ್ ಔಷಧವನ್ನು ಇನ್ನೊಂದು ವೈರಸ್ ವಿರುದ್ಧದ ಔಷಧ ರಿಟೋನಾವಿರ್ ಜತೆಗೆ ಕೊಡಲಾಗುತ್ತದೆ. ಉದ್ದೇಶ ಎಂದರೆ ರಿಟೋ ನಾವಿರ್ ಔಷಧವು ಫಾಕ್ಸ್ ಲೋವಿಡ್ ಔಷಧ ಮಾನವ ದೇಹದಲ್ಲಿ ಬೇಗ ನಿಷ್ಕ್ರಿಯವಾಗುವುದನ್ನು ತಪ್ಪಿಸಿ ಅದರ ಪರಿಣಾಮ ದೀರ್ಘಕಾಲ ಉಳಿಯುವಂತೆ ಮಾಡುತ್ತದೆ.
ಫೇಜರ್ ಕಂಪನಿಯು ಕರೋನಾ ಸೋಂಕಿಗೆ ಒಳಗಾದ ನಂತರ ಕೋವಿಡ್ ಕಾಯಿಲೆ ಬರದಿರುವಂತೆ ಮಾಡಲು ಸಾಧ್ಯವೇ ಎಂದು ಈ ಔಷಧದ ಬಗ್ಗೆ ಪರೀಕ್ಷೆ ನಡೆಸುತ್ತಿದೆ. ಅದರ ಫಲಿತಾಂಶ 2022 ರ ಆದಿಭಾಗದಲ್ಲಿ ಬರುತ್ತದೆ ಎನ್ನಲಾಗಿದೆ. ಪಾಕ್ಸ್ ಲೋವಿಡ್ ಔಷಧವು ವೈರಸ್ನ ಪ್ರೋಟೀನ್ಗಳ ಭೇದಿಸುವ ಮೂಲಕ ಕರೋನಾ ವೈರಸ್ ವೃದ್ಧಿಗೊಳ್ಳುವುದನ್ನು ತಡೆಯುತ್ತದೆ. ವೈರಸ್ ನಮ್ಮ ದೇಹದೊಳಗೆ ಬಂದಾಗ ಅದು ಜೀವಕೋಶವನ್ನು ಪ್ರವೇಶಿಸಿ, ಅದರ ಆರ್ಎನ್ಎ ಪ್ರೋಟೀನ್ಗೆ ಬದಲಾಗುತ್ತದೆ. ಆಗ ವೈರಸ್ ತನ್ನ ಕೆಟ್ಟ ಪರಾಕ್ರಮ ತೋರಿಸುತ್ತದೆ. ಪ್ರೋಟೀನ್ಗಳು ಪಾಲಿಪೆಪ್ಟೈಡ್ಗಳೆಂಬ ಉದ್ದನೆಯ ಸರಳಿನ ರೀತಿ ಜೋಡಣೆಯಾಗಿರುತ್ತದೆ.
ಪ್ರೋಟಿಯೇಸ್ ಎಂಬ ಎನ್ಜೈಮ್ ಇದನ್ನು ಸಣ್ಣ ಸಣ್ಣ ತುಣುಕುಗಳಾಗಿ ಮಾರ್ಪಡಿಸುತ್ತದೆ. ಈ ಹಂತದಲ್ಲಿ ಪಾಕ್ಸ್ ಲೋವಿಡ್ ಔಷಧ ಕೆಲಸ ಮಾಡಿ ಪ್ರೋಟೀನ್ ಗಳು ತಮ್ಮ ಚಟುವಟಿಕೆ ಜಾಸ್ತಿ ಮಾಡದಂತೆ ನೋಡಿಕೊಳ್ಳುತ್ತದೆ. ಇತ್ತೀಚಿನ ಚಿಂತನೆ ಏನೆಂದರೆ ಪಾಕ್ಸ್ ಲೋವಿಡ್ ಮತ್ತು ಮೊಲ್ನುಪಿರಾವಿರ್ ಎರಡೂ ಭಿನ್ನ ರೀತಿಯಿಂದ ಕೆಲಸ ಮಾಡಿ ಕರೋನಾ ವೈರಸ್ ಅನ್ನು ನಾಶಮಾಡುವುದರಿಂದ ಎರಡನ್ನೂ ಒಟ್ಟಾಗಿ ಉಪಯೋಗಿಸಿದರೆ ರೋಗಿಗೆ ಅನುಕೂಲವಾಗುವುದೇ? ಏಕೆಂದರೆ ಎಚ್ ಐವಿ(ಏಡ್ಸ್ ಕಾಯಿಲೆಯ ವೈರಸ್) ಮತ್ತು ಹೆಪಟೈಟಿಸ್ ಸಿ ನಂತಹ ವೈರಸ್ ಕಾಯಿಲೆಗಳಲ್ಲಿ ಒಂದಕ್ಕಿಂತ ಜಾಸ್ತಿ ಔಷಧಗಳನ್ನು ಉಪಯೋಗಿಸ ಲಾಗುತ್ತಿದೆ.
ಮುಖ್ಯ ಉದ್ದೇಶ ಎಂದರೆ ಒಂದೇ ಔಷಧವನ್ನು ದೀರ್ಘಕಾಲ ಕೊಟ್ಟಾಗ ಅದರ ವೈರಸ್ ಆ ಔಷಧಕ್ಕೆ Resistance ಪಡೆದುಕೊಂಡು ಔಷಧವು ಕೆಲವು ಸಮಯದ ನಂತರ ಕೆಲಸ ಮಾಡುವುದಿಲ್ಲ. ಶ್ವಾಸಕೋಶದ ವೈರಸ್ಗಳು ದೇಹದಲ್ಲಿ ದೀರ್ಘ ಕಾಲ ಇರುವುದಿಲ್ಲವಾದರೂ, ಎರಡೂ ಔಷಧ ಗಳನ್ನು ಒಟ್ಟಾಗಿ ಕೊಟ್ಟು ಪರಿಣಾಮವನ್ನು ನಿರೀಕ್ಷಿಸುವ ಪ್ರಯೋಗಗಳು ಸದ್ಯದಲ್ಲಿಯೇ ನಡೆಯಲಿವೆ. ಅದರಲ್ಲಿಯೂ ಪ್ರತಿರೋಧ ಕಡಿಮೆ ಇರುವ ರೋಗಿಗಳಲ್ಲಿ ವೈರಸ್ ದೀರ್ಘಕಾಲ ಇದ್ದು
ಅಲ್ಲಿಯೇ ಮ್ಯುಟೇಷನ್ ಹೊಂದುವ ಸಾಧ್ಯತೆ ಇರುತ್ತದೆ. ಔಷಧಗಳು ದೇಹಕ್ಕೆ ಸರಿಯಾದ ಸಮಯಕ್ಕೆ ತಲುಪಿದಾಗ ಮಾತ್ರ ತಮ್ಮ ನಿರೀಕ್ಷಿತ ಪರಿಣಾಮ
ಬೀರಬಲ್ಲವು. ಈ ಔಷಧಗಳನ್ನು ಕಾಯಿಲೆಯ ಆರಂಭದ ಲಕ್ಷಣಗಳು ಕಾಣಿಸಿಕೊಂಡು ೩ ರಿಂದ ೫ ದಿವಸಗಳ ಒಳಗೇ ತೆಗೆದುಕೊಳ್ಳಬೇಕು.
ಯುರೋಪಿನ ಹೆಚ್ಚಿನ ದೇಶಗಳಲ್ಲಿ ಮನೆಯ ಕೋವಿಡ್ ಪರೀಕ್ಷೆ ಮಾಡಿಕೊಳ್ಳುವ ವ್ಯವಸ್ಥೆ ಎಲ್ಲ ಕಡೆ ಇದೆ. ಸಾಂಕ್ರಾಮಿಕ ಆರಂಭವಾಗಿ 20 ತಿಂಗಳಾದರೂ ಈ ವ್ಯವಸ್ಥೆ ಅಮೆರಿಕದ ಹೆಚ್ಚು ಭಾಗಗಳಲ್ಲಿ ಇಲ್ಲ. (ಭಾರತ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹೇಗೂ ಇಲ್ಲ.) ಹೌದು, ಇದಕ್ಕೆ PC ಪರೀಕ್ಷೆ ಮಾಡಿಸಿ ಫ-ಲಿತಾಂಶ ಬರಬೇಕು. ಅಮೆರಿಕದಲ್ಲಿ ವಿಮೆ ಮಾಡಿಸದವರಿಗೆ, ವಯಸ್ಸಾದ ಹಲವರಿಗೆ, ಮನೆ ಇಲ್ಲದವರಿಗೆ, ಇಂಗ್ಲಿಷ್ ಭಾಷೆ ಮಾತಾಡಲು ಬರದವರಿಗೆ-
ಇವರಿಗೆಲ್ಲ ಈ ರೀತಿಯ ಸೌಲಭ್ಯ ತುಂಬಾ ಕಷ್ಟ ಎನ್ನಲಾಗಿದೆ.
ಈ ವೈರಸ್ ವಿರುದ್ಧದ ಔಷಧಗಳು ಆಫ್ರಿಕಾ ಖಂಡದ ದೇಶಗಳಲ್ಲಿ ತುಂಬಾ ಉಪಯುಕ್ತವೆನಿಸಬಹುದು. ಏಕೆಂದರೆ ಅಲ್ಲಿ ಜನಸಂಖ್ಯೆಯ ಕೇವಲ ಶೇ.6 ಜನರಿಗೆ ಮಾತ್ರ ವ್ಯಾಕ್ಸಿನ್ ಲಭ್ಯವಾಗಿದೆ. ವ್ಯಾಕ್ಸಿನ್ಗಳಿಗೆ ಮಾಡಿದಂತೆಯೇ ಸಿರಿವಂತ ದೇಶಗಳಾದ ಅಮೆರಿಕ, ಯುಕೆಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ಈ ವೈರಸ್ ವಿರುದ್ಧದ ಮಾತ್ರೆಗಳಿಗೆ ಬೇಡಿಕೆ ಸಲ್ಲಿಸಿ ಬಡ ದೇಶಗಳಿಗೆ ಮಾತ್ರೆಗಳು ಸಿಗದ ಹಾಗೆ ಮಾಡುತ್ತವೇನೋ? ಆದರೆ ಮೆರ್ಕ್ ಕಂಪನಿಯವರು ಆಫ್ರಿಕಾದಲ್ಲಿನ
ಮತ್ತು ಇತರ ಭಾಗಗಳ ಬಡದೇಶಗಳಿಗೆ ದೊರಕಿಸಲು ವಿಶೇಷ ವ್ಯವಸ್ಥೆ ಮಾಡಿಕೊಂಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಅಡಿಯಲ್ಲಿ ಪೇಟೆಂಟ್ ಪೂಲ ಎಂದು ರಚಿಸಿಕೊಳ್ಳಲಾಗಿದೆ. ಇದರ ಮೂಲಕ ಹೆಚ್ಚು ಲಾಭವಿಲ್ಲದೆ, 100ಕ್ಕೂ ಹೆಚ್ಚು ದೇಶಗಳಿಗೆ ಮೊಲ್ನುಪಿರಾವಿರ್ನ ಜೆನೆರಿಕ್ ರೂಪವನ್ನು ತುಂಬಾ ಕಡಿಮೆ ಲಾಭದಲ್ಲಿ ಒದಗಿಸಲು ಮೆರ್ಕ್ ತಯಾರಾಗಿದೆ. ಪರಿಣಾಮ ಎಂದರೆ ಮೊಲ್ನುಪಿರಾವಿರ್ನ ಒಂದು ಕೋರ್ಸ್ ಔಷಧ ಅಭಿವೃದ್ಧಿಶೀಲ ದೇಶಗಳಿಗೆ 20 ಡಾಲರ್ ಗಳಲ್ಲಿ ದೊರಕಿದರೆ ಅಮೆರಿಕದಲ್ಲಿ 700 ಡಾಲರ್ ಗಳಾಗಲಿದೆ. ಈಗಾಗಲೇ ಜಗತ್ತಿನಾದ್ಯಂತ 50ಕ್ಕೂ ಹೆಚ್ಚು ಕಂಪನಿಗಳು ಜೆನೆರಿಕ್ ಔಷಧಗಳನ್ನು ಕಡಿಮೆ ಬೆಲೆಯಲ್ಲಿ ತಯಾರಿಸಿ ಕೊಡಲು ತಯಾರಾಗಿವೆ. ಅಷ್ಟಲ್ಲದೇ ಗೇಟ್ಸ್ ಫೌಂಡೇಶನ್ ಸಂಸ್ಥೆ ಜೆನೆರಿಕ್ ಔಷಧ ತಯಾರಿಸುವ ಕಂಪನಿಗಳಿಗೆ 120 ಮಿಲಿಯನ್ ಡಾಲರ್ ಸಹಾಯ ಕೊಡಲು ಒಪ್ಪಿದೆ. ಫೈಜರ್ ಕಂಪನಿ ಸಹಿತ ಈ ಪೇಟೆಂಟ್ ಪೂಲ್ ಮೂಲಕ ತನ್ನ ಪಾಕ್ಸ್ ಕೋವಿಡ್ ಔಷಧವನ್ನು ಬಡದೇಶಗಳಿಗೆ ಕಡಿಮೆ ದರದಲ್ಲಿ ಒದಗಿಸಲು ಒಪ್ಪಿದೆ.
ಇನ್ನಿತರ ಔಷಧಗಳು: ಇನ್ನೂ ಹಲವು ವೈರಸ್ ವಿರುದ್ಧದ ಔಷಧಗಳು ಬರಲಿವೆ. ಗೀಲಾಡ್ ಸೈನ್ಸಸ್ ಎಂಬ ಕಂಪನಿಯು ಈಗ ಇಂಜೆಕ್ಷನ್ ರೂಪದಲ್ಲಿ ಉಪಯೋಗವಾಗುತ್ತಿರುವ ರೆಮ್ ಡಿಸೆವಿರ್ ಔಷಧವನ್ನು ಮಾತ್ರೆಯ ರೂಪದಲ್ಲಿ ತರುವ ಸನ್ನಾಹದಲ್ಲಿದೆ. ಬಯೋಟೆಕ್ನಾಲಜಿ ಸಂಸ್ಥೆ ಏಟಿಯ ಫಾರ್ಮಾಸುಟಿಕಲ್ಸ್ ಕಂಪನಿಯು ಆಂಟಿ ವೈರಸ್ ಔಷಧ ತರುವ ಸನ್ನಾಹದಲ್ಲಿದೆ. ಇನ್ನೂ ಹಲವಾರು ಔಷಧಗಳು ಕ್ರಮೇಣ ಬರಬಹುದು.