Sunday, 22nd September 2024

ಜಗತ್ತಿನ ಜತೆ ಒಯ್ಯದ ಅಭಿವೃದ್ದಿಯ ’ಹೆದ್ದಾರಿ ತಡೆ’ !

Agriculture

ವಿಶ್ಲೇಷಣೆ

ಪೃಥೆ ಮುನ್ನಿ

ಕೃಷಿ ತಂತ್ರಜ್ಞಾನದಲ್ಲಿ ಇಂದಿಗೂ ಭಾರತ ಹಿಂದುಳಿದಿದೆ. ಇದನ್ನು ದುರಂತ, ಭಾರತದ ಕೃಷಿಕನಿಗೆ ಇದನ್ನು ಅರ್ಥ ಮಾಡಿಸುವಷ್ಟರಲ್ಲಿ ರಾಜಕೀಯ ಪ್ರೇರಿತ ಪ್ರಹನಗಳು ನಡೆದುಹೋದವು. ಏಕಾಏಕಿ ಸಂಸತ್‌ನಲ್ಲಿ ಮೂರೂ ತಿದ್ದುಪಡಿಗಳನ್ನು ವಾಪಸು ಪಡೆದದ್ದೂ ಆಗಿದೆ.

ಗುಜರಾತ್‌ನಲ್ಲಿ 2007ರ ರಾಜ್ಯ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದಾಗ ಬಹುತೇಕ ರಾಷ್ಟ್ರೀಯ ಮಾಧ್ಯಮಗಳು ಹಿಂದೂ- ಮುಸ್ಲಿಂ ಸಂಘರ್ಷವನ್ನಷ್ಟೇ ಕೇಂದ್ರೀಕರಿಸಿದವು. ಜಾಗತಿಕವಾಗಿ ಬೆಳೆದು ನಿಂತಿರುವ ಭಾರತದ ಪ್ರಧಾನಿ ಮೋದಿಯನ್ನು ಅವು ಕಲ್ಪಿಸಿ ಕೊಳ್ಳಲೂ ಸಾಧ್ಯವಿರಲಿಲ್ಲ. ಆದರೆ ಎಕನಾಮಿಕ್ಸ್ ಟೈಮ್ಸ್‌ನಂಥ ಎಲ್ಲೋ ಕೆಲವು ಮಾಧ್ಯಮಗಳಷ್ಟೇ ಮೋದಿ ಆ ರಾಜ್ಯದಲ್ಲಿ ಜಾರಿಗೊಳಿಸಿದ್ದ ಕ್ಷಿಪ್ರ ಕೈಗಾರಿಕಾ ಕ್ರಾಂತಿ ಹಾಗೂ ಕೃಷಿ-ನೀರಾವರಿಯಲ್ಲಿನ ಅಭಿವೃದ್ಧಿ ಯನ್ನು ಎತ್ತಿ ತೋರಿಸಿದವು.

ಇಂದಿಗೂ ಗುಜರಾತ್ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯ. ವಿದೇಶಿ ಹೂಡಿಕೆಯಿಂದ ಆರಂಭಿಸಿ ಬಾಹ್ಯಾಕಾಶ ತಂತ್ರಜ್ಞಾನದ ವರೆಗಿನ ಎಲ್ಲದ ರಲ್ಲೂ ಗುಜರಾತ್ ದಾಪುಗಾಲಿಡುತ್ತಿದೆ. ಆದಾಗ್ಯೂ, ರಾಜಕೀಯ ವಿಶ್ಲೇಷಕರಿಂದ ಸಂಪೂರ್ಣ ನಿರ್ಲಕ್ಷಿತ ಕೃಷಿ ಕ್ಷೇತ್ರದಲ್ಲಿನ ಅಭಿವೃದ್ಧಿಯೇ ಮೋದಿಯವರ
ಯಶಸ್ಸಿನ ರಹಸ್ಯ ಅಡಗಿದೆ ಎಂಬುದು ಇತ್ತೀಚಿನ ಅಧ್ಯಯನವೊಂದರ ಸಾರ. ಮೋದಿಗೆ ಗೊತ್ತು ಕೃಷಿ-ನೀರಾವರಿಯಲ್ಲಿನ ಬೆಳೆವಣಿಗೆಯೇ ದೇಶದ ಅಭಿವೃದ್ಧಿಯ ಸೂಚ್ಯಂಕವೆಂಬುದು. ಹೀಗಾಗಿಯೇ ಹಲವು ತಾಂತ್ರಿಕ ಅಂಶಗಳನ್ನೂ ಒಳಗೊಂಡ ನೂತನ ಕೃಷಿ ಕಾಯಿದೆಗಳನ್ನು ಜಾರಿಗೊಳಿಸ ಹೊರಟಿದ್ದರು ಎನ್ನುತ್ತಾರೆ ವಿಶ್ಲೇಷಕರು.

ಕೃಷಿ ತಂತ್ರಜ್ಞಾನ ದಲ್ಲಿ ಇಂದಿಗೂ ಭಾರತ ಹಿಂದುಳಿದಿದೆ. ಅದೇ ಸಾಂಪ್ರದಾಯಿಕ, ದಲ್ಲಾಳಿಗಳ ಆಧಾರಿತ ಮಾರುಕಟ್ಟೆ ವ್ಯವಸ್ಥೆ ಕೃಷಿಯನ್ನು ಆಳುತ್ತಿದೆ. ಇದನ್ನು ತಪ್ಪಿಸಿ ಕೃಷಿಯಲ್ಲೂ ವಿದೇಶಿ ಹೂಡಿಕೆಯನ್ನು ಆಕರ್ಷಿಸಿ, ಹೊಸ ವ್ಯಾಖ್ಯಾನವನ್ನು ಬರೆಯಲು ಅಡಿಯಿ ಡಲಾಗಿತ್ತು. ದುರಂತ, ಭಾರತದ ಕೃಷಿಕನಿಗೆ ಇದನ್ನು ಅರ್ಥ ಮಾಡಿಸುವಷ್ಟರಲ್ಲಿ ರಾಜಕೀಯ ಪ್ರೇರಿತ ಪ್ರಹನಗಳು ನಡೆದುಹೋದವು. ಏಕಾಏಕಿ ಸಂಸತ್‌ನಲ್ಲಿ ಮೂರೂ ತಿದ್ದುಪಡಿಗಳನ್ನು ವಾಪಸು ಪಡೆದದ್ದೂ ಆಗಿದೆ. ಈ ಹಿಂದೆಯೇ ಅಶೋಕ್ ಗುಲಾಟಿ, ತುಷಾರ್ ಶಾ ಮತ್ತು ಗಂಗಾ ಶ್ರೀಧರ್ ಅವರು 2000ರ ನಂತರ ಗುಜರಾತ್ ನಲ್ಲಾದ ಕೃಷಿ ಬೆಳವಣಿಗೆಗಳ ಬಗೆಗೆ ಸವಿವಿರ ಬರೆದಿದ್ದರು.

ಗುಜರಾತ್‌ನ ಕೃಷಿ ಸಾಧನೆ ಭಾರತದಲ್ಲಿ ಇದುವರೆಗಿನ ಅತ್ಯುತ್ತಮ ಬೆಳವಣಿಗೆಗಳಲ್ಲೊಂದು ಎಂಬುದು ಅವರ ಸ್ಪಷ್ಟ ಅಭಿಮತವಾಗಿತ್ತು. 2000-01 ಮತ್ತು 2007-08ರ ನಡುವೆ ಅಲ್ಲಿನ ಕೃಷಿ ಮೌಲ್ಯ ವರ್ಷಕ್ಕೆ ಶೇ.9.6ರಷ್ಟು ಅಸಾಧಾರಣ ಬೆಳವಣಿಗೆ ಕಂಡಿತ್ತು. ಗಮನಿಸಬೇಕಾದ ಅಂಶವೆಂದರೆ 2002ರಲ್ಲಿ ಗುಜರಾತ್ ಅನ್ನು ಬಿಟ್ಟೂಬಿಡದಂತೆ ಬರಗಾಲ ಕಾಡಿತ್ತು. ಆ ನಡುವೆಯೂ ಅಲ್ಲಿನ ಕೃಷಿ ಬೆಳವಣಿಗೆ ಭಾರತದ ಕೃಷಿ ಬೆಳವಣಿಗೆಯ ದರಕ್ಕಿಂತ ಎರಡು ಪಟ್ಟು ಹೆಚ್ಚಿತ್ತು. ಇನ್ನೂ ಆಸಕ್ತಿದಾಯಕ ಸಂಗತಿಯೆಂದರೆ ಸೋಕಾಲ್ಡ್ ‘ಹಸಿರು ಕ್ರಾಂತಿ’ಯ ಉತ್ತುಂಗದಲ್ಲಿ ಪಂಜಾಬ್ ಸಾಧಿಸಿತ್ತೆನ್ನಲಾದ ಕೃಷಿ ಬೆಳವಣಿಗೆಗಿಂತ ಹೆಚ್ಚು ವೇಗವಾಗಿ ಗುಜರಾತ್ ಮೋದಿ ಅವಽಯಲ್ಲಿ ಸಾಧನೆ ತೋರಿತ್ತು.

ಈವರೆಗೆ ಜಗತ್ತಿನ ಯಾವುದೇ ಭಾಗದ ಕೃಷಿ ಕ್ಷೇತ್ರ ಎಂಟು ವರ್ಷಗಳಲ್ಲಿ ಶೇ.9.6 ಬೆಳವಣಿಗೆ ಕಂಡ ಉದಾಹರಣೆಗಳಿಲ್ಲ. ಗುಜರಾತ್‌ನ ಬಹುಪಾಲು ಜನಸಂಖ್ಯೆ ಇನ್ನೂ ಗ್ರಾಮೀಣ ಪ್ರದೇಶದಲ್ಲೇ ಕೇಂದ್ರೀಕೃತವಾಗಿದೆ. ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಅಲ್ಲಿನ ನಗರಗಳು ಹೇಳಿಕೊಳ್ಳುವ ವಿಸ್ತಾರ ಪಡೆದಿಲ್ಲ. ಹೀಗಾಗಿ ಸಹಜವಾಗಿ ಕೃಷಿಯಲ್ಲಿನ ಈ ಮೆಗಾ-ಬೂಮ್ ಲಕ್ಷಾಂತರ ಸಂತೃಪ್ತ ಮತದಾರರನ್ನು ಮೋದಿಗೆ ಸೃಷ್ಟಿಸಿಕೊಟ್ಟಿತ್ತು. ಅದು ಮೋದಿಯ ಪುನರಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಪ್ರಧಾನಿಯಾಗುತ್ತಿದ್ದಂತೆ ಮೋದಿ ನಡೆಯ ಚಹರೆಗಳೇ ಬದಲಾಗಿದ್ದವು.

ಜಾಗತಿಕ ಸಂಬಂಧಕ್ಕೆ ಆದ್ಯತೆ ಕೊಟ್ಟಂತೆ ಕಂಡ ಮೋದಿ, ಕರೋನಾ ಪೂರ್ವ ದಿನಗಳಲ್ಲಿ, ಮೊದಲ ಅವಧಿಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡತೆ ದೇಶ ಸುತ್ತಿದ್ದರು. ಮಾಧ್ಯಮ ವಿಶ್ಲೇಷಕ ಇದನ್ನು ಅರ್ಥೈಸಿದ್ದೇ ಬೇರೆ. ವೃಥಾ ಪೋಲಿನ ಸುತ್ತಾಟದಲ್ಲಿ ಮೋದಿ ಅವಧಿ ಕಳೆದಿದ್ದರೆಂದು ಬಿಂಬಿಸಲಾಯಿತು. ಅವರ ದಿರಸುಗಳು, ವಿಮಾನ ಪ್ರಯಾಣ ವೆಚ್ಚ, ವಾಸ್ತವ್ಯ ಇಂಥವುಗಳೇ ಮಾಧ್ಯಮಗಳು ಕಂಡ ಚಿತ್ರಣಗಳಾಗಿ ಬಿಟ್ಟವು. ಮೋದಿ ಯಾವತ್ತಿಗೂ ಖಾಸಗಿ ಮಾಧ್ಯಮಗಳನ್ನು ತಮ್ಮ ವಿದೇಶ ಪ್ರವಾಸಕ್ಕೆ ಪ್ರೋತ್ಸಾಹಿಸದ ಕಾರಣ, ಮಾಧ್ಯಮ ಮಂದಿಗೆ ಪುಂಗಲು ಬೇರೇನೂ ವಿಷಯಗಳಿರಲಿಲ್ಲವೇನೋ? ಆದರೆ, ದೇಶಗಳ ಜತೆಗಿನ ಸಂಬಂಧ ಸುಧಾರಣೆಯ ಫಲವಾಗಿ, ೨೦೧೪ನೇ ಇಸವಿಗೂ ಮುನ್ನ ಭಾರತದ ಬಗೆಗೆ ಮುಂದುವರಿದ ದೇಶಗಳಲ್ಲಿ ಇದ್ದ ಭಾವನೆ ಇಂದು ತಿರುಗು ಮುರುಗಾಗಿದೆ. ಭಾರತ ವನ್ನೂ ಯಾವುದೇ ಮುಂದುವರಿದ ದೇಶಗಳು ಇಂದು ಲಘುವಾಗಿ ಪರಿಗಣಿಸಲಾಗದು.

ಚೀನಾ ದಂಥ ದೇಶಗಳಿಗೆ ಮಣೆ ಹಾಕುತ್ತಿದ್ದ ಅದೆಷ್ಟೋ ಜಾಗತಿಕ ಕಂಪನಿಗಳು ನಿಧಾನಕ್ಕೆ ಅಲ್ಲಿಂದ ಕಾಲ್ಕಿತ್ತು ಭಾರತಕ್ಕೆ ಅಡಿಯಿಡಲಾರಂಭಿಸಿವೆ. ಕೈಗಾರಿಕಾ ಬೆಳವಣಿಗೆಯ ಜತೆಜತೆಗೇ ಕೃಷಿ ಬೆಳವಣಿಗೆಯೂ ಅನಿವಾರ್ಯ. ಏಕೆಂದರೆ ಗುಜರಾತ್ ಮಾತ್ರವೇ ಅಲ್ಲ, ಭಾರತವೇ ಹಳ್ಳಿಗಳ ದೇಶ, ಇಂದಿಗೂ ಕೃಷಿಯೇ ಪ್ರಧಾನ ಉದ್ಯೋಗ. ಹೀಗಾಗಿ ಆಧುನಿಕ ಸನ್ನಿವೇಶಕ್ಕೆ ತಕ್ಕಂತೆ ಕೃಷಿಯನ್ನು ಬದಲಿಸುವ ಅನಿವಾರ್ಯ ನಮ್ಮ ಮುಂದಿದೆ. ಹೀಗಾಗಿ ಮಾರುಕಟ್ಟೆಯಂಥ ವಿಚಾರದಲ್ಲಿ ಉದಾರೀಕರಣ ತೀರಾ ಅಗತ್ಯವಾಗಿದೆ. ಅದಕ್ಕಾಗಿ ರೂಪುಗೊಂಡಿದ್ದೇ ಈ ತಿದ್ದುಪಡಿಯಾದ ಕೃಷಿ ಕಾಯಿದೆಗಳು.

ಮತ್ತೆ ಗುಜರಾತ್ ವಿಚಾರಕ್ಕೆ ಬಂದರೆ, ಇಂದಿಗೂ ಅದು ಬರಪೀಡಿತ. ಶೇ.70 ಪ್ರದೇಶವನ್ನು ಅರೆ-ಶುಷ್ಕ ಮತ್ತು ಶುಷ್ಕ ಎಂದು ವರ್ಗೀಕರಿಸಲಾಗಿದೆ. ಪರಿಸರ ಹೋರಾಟಗಾರರು, ಚಳವಳಿಗಾರರ ಭಾರೀ ವಿರೋಧದ ನಡುವೆಯೂ ಜಾರಿಗೊಂಡ ಸರ್ದಾರ್ ಸರೋವರ ಯೋಜನೆ ಇಂದು ಗುಜರಾತ್‌ನ ಕೃಷಿಯ ಚಿತ್ರಣ ವನ್ನೇ ಬದಲಿಸಿದ್ದು ಸುಳ್ಳಲ್ಲ. ಅದರ ಕಾಲುವೆ ಜಾಲವನ್ನು ಸ್ವತಃ ನೋಡಿದರೆ ಅರ್ಥವಾದೀತು. ಇನ್ನೂಪೂರ್ಣಪ್ರಮಾಣದಲ್ಲಿ ಕಾಲುವೆಗಳು ನೀರು ಹರಿಸಲು ಸಜ್ಜುಗೊಂಡಿರದ್ದರೂ ಪ್ರಸ್ತುತ 0.1 ಮಿಲಿಯನ್ ಹೆಕ್ಟೇರ್‌ಗಳಿಗೆ ಮಾತ್ರ ನೀರುಣಿಸುತ್ತಿವೆ. ಇನ್ನು ರಾಜ್ಯದಲ್ಲಿ ಶೇ.೮೨ಕ್ಕಿಂತ ಕಡಿಮೆ ನೀರಾವರಿಯು ಕೊಳವೆ ಬಾವಿಗಳಿಂದ ಬರುತ್ತದೆ.

1990ರ ದಶಕದ ಮಧ್ಯಭಾಗದಲ್ಲಿ, 31 ತಾಲೂಕುಗಳಲ್ಲಿ ಅಂತರ್ಜಲವೂ ಕುಸಿದು, ನೈಸರ್ಗಿಕ ಮರುಪೂರಣವೂ ಇಲ್ಲದಂತಾಗಿ ರೈತಾಪಿ ಕಂಗಾಲಾಗಿದ್ದರು. ಸರ್ದಾರ್ ಸರೋವರ, ಅಂತರ್ಜಲದ ಶೋಷಣೆ ತಪ್ಪಿಸಿದ್ದು ಮಾತ್ರವಲ್ಲ, ಭೂಮಿಯೊಳಗಣ ಜಲಮಟ್ಟ ವೃದ್ಧಿಸಿದೆ. ನಂತರದ ದಿನಗಳಲ್ಲಿ ಸ್ಥಳೀಯ ಮಟ್ಟದ ಸಂಸ್ಥೆಗಳೊಂದಿಗೆ ವಿಕೇಂದ್ರೀಕೃತ ನೀರು ಕೊಯ್ಲು ಪ್ರಾರಂಭಿಸಿತ್ತು ಆಗಿನ ಮೋದಿ ಸರಕಾರ. ಚೆಕ್ ಡ್ಯಾಂಗಳು, ಗ್ರಾಮದ ಪುಟ್ಟ ನೀರ ನಿರ್ಮಿತಿಗಳು, ಬೋರಿ-ಬಂಡ್‌ಗಳಂಥ (ಮರಳಿಂದ ತುಂಬಿದ ಗೋಣಿ ಚೀಲವನ್ನು ಅಡ್ಡವಿಟ್ಟು ನೀರು ನಿಲ್ಲಿಸುವ ವ್ಯವಸ್ಥೆ) ಕ್ರಮ ಜಾರಿಗೊಂಡವು. ಹೀಗಾಗಿ 2007ರ ಚುನಾವಣಾ ಪ್ರಚಾರದ ಸಮಯದಲ್ಲಿ, ಕಾಂಗ್ರೆಸ್ ಘೋಷಣೆ ‘ಚಕ್ ದೇ, ಚಕ್ ದೇ ಗುಜರಾತ್’ ಆಗಿದ್ದು ಕಾಕತಾಳಿಯ ವಾಗಿ ಕಂಡಿತೇ? ಅದನ್ನು ರ‍್ಯಾಲಿಗಳಲ್ಲಿ ಮಾತುಗಾರ ಮೋದಿ ‘ಚೆಕ್ ಡ್ಯಾಮ, ಚೆಕ್ ಡ್ಯಾಮ್ ಗುಜರಾತ್’ ಎಂದು ಬದಲಿಸಿಕೊಂಡದ್ದು ಇತಿಹಾಸ.

IFPRI ಅಧ್ಯಯನದ ಪ್ರಕಾರ 2000ದ ನಂತರದ ಅವಧಿಯಲ್ಲಿ ಒಟ್ಟು 10700 ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. 32000 ಹೆಕ್ಟೇರ್‌ನಲ್ಲಿ ಬರ-ನಿರೋಧಕ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಆದರೆ ತರುವಾಯ, ಮೋದಿ ಸರಕಾರ ಗುಜರಾತ್‌ನಲ್ಲಿ ಅದಕ್ಕೂ ಹತ್ತು ಪಟ್ಟು ಹೆಚ್ಚು ಚೆಕ್ ಡ್ಯಾಂಗಳನ್ನು ನಿರ್ಮಿಸಿತ್ತು. ಸೌರಾಷ್ಟ್ರ ಮತ್ತು ಕಛ್‌ನ ಕೃಷಿ ಬೆಳವಣಿಗೆಯಲ್ಲಿ ಚೆಕ್‌ಡ್ಯಾಮ್‌ಗಳ ಪಾತ್ರ ದೊಡ್ಡದು. ಕಳೆದ ಐದು ವರ್ಷಗಳಲ್ಲಿ ಸಮೃದ್ಧ ಮಾನ್ಸೂನ್ ಅನ್ನು ಆ ಜಿಲ್ಲೆಗಳು ಕಾಣು ತ್ತಿವೆ ಎಂದರೆ ಚೆಕ್‌ಡ್ಯಾಮ್‌ಗಳ ಮ್ಯಾಜಿಕ್ ಕಲ್ಪಿಸಿಕೊಳ್ಳಿ.

ಅಲ್ಲಿಗ ಉತ್ತಮ ನೀರಿನ ಲಭ್ಯತೆಯೊಂದಿಗೆ ಹಾಲು ಮತ್ತು ಜಾನುವಾರುಗಳ ಉತ್ಪನ್ನಗಳ ಸುಗ್ಗಿ. ರೈತ ಆ ಮೂಲಕ ಸಬಲನಾಗಿದ್ದಾನೆ. ಗುಜರಾತ್ ಹನಿ ನೀರಾ ವರಿಯನ್ನು ಉತ್ತೇಜಿಸಿದೆ, ಅರೆ- ಶುಷ್ಕ ಜಿಲ್ಲೆಗಳಲ್ಲಿ ನೀರನ್ನು ಸಂರಕ್ಷಿಸಲು ಇದು ಅಗತ್ಯವಾಗಿತ್ತು. ಇಸ್ರೇಲ್ ನೆರವನ್ನು ಅಂದೇ ಗುಜರಾತ್ ಪಡೆದಿತ್ತು. ಇತರ ರಾಜ್ಯಗಳಂತೆ ಸಬ್ಸಿಡಿ ಮತ್ತು ಸಾಲಗಳ ಪ್ರಕ್ರಿಯೆ ಅಲ್ಲಿ ಕಷ್ಟವಿಲ್ಲ. ತ್ವರಿತ-ಟ್ರ್ಯಾಕ್ ವ್ಯವಸ್ಥೆ ಜಾರಿಗೊಂಡಿದೆ. ರೈತರಿಂದ ಆರಂಭದಲ್ಲಿ ಶೇ.5 ರಷ್ಟು ಕೊಡುಗೆ
ನೀಡುತ್ತಾರೆ. ನಂತರ ಸರಕಾರಿ ಸ್ವಾಮ್ಯದ ಕಂಪನಿಗಳು ಶೇ.50 ಸಬ್ಸಿಡಿ ಒದಗಿಸುತ್ತದೆ. ಉಳಿದ ಶೇ.45ರ ಬಾಕಿಗೆ ಬ್ಯಾಂಕ್ ಸಾಲ ನೀಡುತ್ತದೆ. ಹೀಗಾಗಿ ಸುಲಭದಲ್ಲಿ ಲಕ್ಷಾಂತರ ಎಕರೆ ಪ್ರದೇಶ ಹನಿ ನೀರಾವರಿಗೆ ಒಳಪಟ್ಟಿದೆ. ಇನ್ನು ಗ್ರಾಮೀಣ ರಸ್ತೆಗಳು ಕೃಷಿಗೆ ಪ್ರಮುಖ ಹೂಡಿಕೆ ರಸ್ತೆ ಜಾಲ ಗಳಲ್ಲಿಯೂ ಕ್ರಾಂತಿ ಮಾಡಲಾಗಿತ್ತು. ಅಲ್ಲೀಗ ಶೇ.98.7 ಹಳ್ಳಿಗಳು ಪಕ್ಕಾ ರಸ್ತೆ ಸಂಪರ್ಕ ಹೊಂದಿವೆ. ಜ್ಯೋತಿ ಗ್ರಾಮ ಯೋಜನೆ ಗುಣಮಟ್ಟದ ವಿದ್ಯುತ್ ಒದಗಿಸಿ ನೀರಾವರಿಗೆ ಬೆಂಬಲ ಒದಗಿಸಿತ್ತು.

ಗೃಹ ಬಳಕೆ ಮತ್ತು ಪಂಪ್‌ಸೆಟ್‌ಗಳಿಗೆ ಪ್ರತ್ಯೇಕ ವಿದ್ಯುತ್ ಫೀಡರ್‌ಗಳಿ ಅಲ್ಲಿವೆ. ಸ್ಥಿರವಾದ ವೋಲ್ಟೇಜ್ ರೈತರ ಪಂಪ್‌ಸೆಟ್‌ಗಳನ್ನು ಪೊರೆಯುತ್ತಿವೆ. ಒಟ್ಟಾರೆ ನೀರಾವರಿ ಪ್ರದೇಶವು ವರ್ಷಕ್ಕೆ ಶೇ.4.4ರ ದರದಲ್ಲಿ ವಿಸ್ತರಿಸುತ್ತಿದೆ. ಇನ್ನು ಖಾಸಗಿ ಬೀಜ ಕಂಪನಿಗಳನ್ನು ಉತ್ತೇಜಿಸಿದ ಪರಿಣಾಮ, ಬೆಳೆ ತಂತ್ರಜ್ಞಾನ ಊಹೆಗೆ ಮೀರಿದ ವೇಗ ಪಡೆದಿದೆ. ಬಾಜ್ರಾದಿಂದ ಹಿಡಿದು ಹರಳಿನವರೆಗೆ ವೈವಿಧ್ಯ ತಳಿ ಸಂಶೋಧನೆಗಳಾಗುತ್ತಿದೆ. 30ಕ್ಕೂ ಹೆಚ್ಚು ಬೀಜ ಕಂಪನಿಗಳು ಗುಜರಾತ್‌ನಲ್ಲೀಗ ಸಕ್ರಿಯವಾಗಿದ್ದು ಚೀನಾಕ್ಕೂ ಅವು ರಫ್ತು ಮಾಡುವ ಮಟ್ಟಿಗೆ ಬೆಳೆದಿವೆ.

ಹತ್ತಿಯೊಂದನ್ನೇ ಉದಾಹರಣೆ ಯಾಗಿ ತೆಗೆದುಕೊಂಡರೆ ಭಾರತದ ಹತ್ತಿ ಬೆಳೆ ಪ್ರದೇಶದ ಕೇವಲ ಶೇ.26 ಭಾಗ ಹೊಂದಿರುವ ಗುಜರಾಥ್, ಉತ್ಪಾದನೆಯ ಶೇ.35.5 ಅನ್ನು ಕೊಡುಗೆಯಾಗಿ ನೀಡುತ್ತಿದೆ. ಮಾರುಕಟ್ಟೆಯನ್ನು ಮುಕ್ತಗೊಳಿಸುವುದೆಂದರೆ, ಬೇರೆಯ ವರ ಆಧಿಪತ್ಯಕ್ಕೆ ಒಪ್ಪಿಸುವುದೆಂದೇನೂ ಅಲ್ಲ. ವೃಥಾ ಕಪೋಲ ಕಲ್ಪಿತ ಆತಂಕ ಸೃಷ್ಟಿಯಿಂದ ನಮ್ಮ ಅಭಿವೃದ್ಧಿಗೆ ನಾವೇ ಕಲ್ಲು ಹಾಕಿಕೊಳ್ಳುತ್ತಿದ್ದೇವೆ. ಬದಲಾದ ಜಗತ್ತಿಗೆ ತಕ್ಕಂತೆ ನಮ್ಮ ಸುಸ್ಥಿರತೆ ವ್ಯಾಖ್ಯಾನಗಳೂ ಬದಲಾಗಬೇಕು. ಚೀನಾ ದಂಥ ದೇಶಗಳು ನಾಗಾಲೋಟದಲ್ಲಿ ಓಡುತ್ತಿವೆ ನೆನಪಿಡಿ.