Thursday, 12th December 2024

ಓದಿನ ಭರದಲ್ಲಿ ಕಳೆದ ಸ್ವಚಿಂತನೆ

Reading

ಅಭಿಮತ

ಸಂದೀಪ್ ಶರ್ಮಾ

ಪುಸ್ತಕ ವ್ಯಾಪಾರ ಕೂಡ ರಾಜಕಾರಣವೇ ಆಗಿಬಿಟ್ಟಿದೆ. ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಬರೆಯುವ ಗೀಳು ಹೆಚ್ಚುತ್ತಿದೆ. ಹಣ
ಮಾಡುವ ಸಲುವಾಗಿ ಮತ್ತು ಮಾರುಕಟ್ಟೆ ಅನುಗುಣವಾಗಿ ಲೇಖಕ, ಪ್ರಕಾಶಕ ಮತ್ತು ವಿಮರ್ಶಕ ಎಲ್ಲರೂ ಸೇರಿ ಪ್ಯಾಕೇಜ್ ಮಾಡಿ ಮಾರುಕಟ್ಟೆಗೆ ಬಿಡುವ ಪ್ರವೃತ್ತಿ ಬೆಳೆಯುತ್ತಿದೆ.

‘ಜನಪ್ರಿಯ’ವೆಂಬ ಕಾರಣಕ್ಕಷ್ಟೇ ಪುಸ್ತಕವನ್ನು ಓದಿದರೆ, ಒಂದಿಡೀ ತಲೆಮಾರು ಒಂದೇ ರೀತಿ ಯೋಚಿಸಲಾರಂಭಿಸುತ್ತದೆ. ವಿಭಿನ್ನ ಚಿಂತನಾ ಮಾರ್ಗವನ್ನು ಕಳೆದುಕೊಂಡು ಬಿಡುತ್ತೇವೆ. ಸಾಮಾನ್ಯವಾಗಿ, ಇಂತಹ ಕೃತಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಹಾಗಾಗಿ, ಓದುಗನು ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವಾಗ, ಈ ಬೌದ್ಧಿಕ ಜಾಲಕ್ಕೆ ಸಿಕ್ಕಿಹಾಕಿಕೊಳ್ಳದಂತೆ ಎಚ್ಚರ ವಹಿಸುವುದು ಇಂದಿನ ದಿನಗಳಲ್ಲಿ ಅತ್ಯವಶ್ಯ.

19ನೇ ಶತಮಾನದ ಜರ್ಮನ್ ತತ್ವಶಾಸಜ್ಞ ಆರ್ಥರ್ ಸ್ಕೋಪೆನ್ಹಾವರ್ ಅವರ ನಿಲುವು ಗಳಲ್ಲಿ ಸ್ವಾರಸ್ಯಕರ ಅಂಶಗಳು ನಮಗೆ ಕಾಣಸಿಗುತ್ತವೆ. ಅದೇನೆಂದರೆ, ಅತಿಯಾದ ಓದು ಒಂದು ಅರ್ಥಹೀನ ಕ್ರಿಯೆ, ಓದಿನ ಜತೆಗೆ ನಿಖರ ಸ್ವಚಿಂತನೆ ಕೂಡ ಅಗತ್ಯ. ಓದಿಗೆ ಅತ್ಯುತ್ಕೃಷ್ಟ ಪುಸ್ತಕಗಳನ್ನಷ್ಟೇ ಆರಿಸಿಕೊಳ್ಳುವುದು ಮುಖ್ಯ. ಪೂರಕ ಪಠ್ಯಗಳ ಬದಲಾಗಿ ಮೂಲ ಪುಸ್ತಕಗಳ ಅಧ್ಯಯನ ನಿಜವಾದ ಅಧ್ಯಯನ. ಶ್ರೇಷ್ಠ ಕೃತಿಗಳ ಮರು ಓದು ಸ್ವಚಿಂತನೆಗೆ ಪ್ರೇರಕ ಹಾಗೂ ಕಳಪೆ ಗುಣಮಟ್ಟದ ’ಜನ ಪ್ರಿಯ’ ಪುಸ್ತಕಗಳು ನಮ್ಮ ಆಲೋಚನೆಗಳಿಗೆ ಹಾನಿಕಾರಕ ಎನ್ನುತ್ತಾನೆ ಆತ. ಒಂದು ಪುಸ್ತಕದಲ್ಲಿ ಪ್ರಕಟವಾಗಿರುವ ಆಲೋಚನೆ, ನೀರಿನೊಳಗೆ ಮೀನಿನ ಈಜುವಿಕೆಯ ಗುರುತುಗಳಿಗೆ ಸಮಾನ.

ಅಂದರೆ, ಸಾಹಿತಿ ಕಂಡದ್ದನ್ನು ಓದುಗ ಕೂಡ ಕಾಣಲು ಅವನ ದೃಷ್ಟಿಕೋನದ ಅಗತ್ಯವೂ ಇದೆ. ಲಹರಿಯ ಓಘವನ್ನೂ ಅವಲಂಬಿಸಿದೆ. ಆದ್ದರಿಂದ, ಲೇಖಕನ ಯೋಚನೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಅದನ್ನು ನಾವು ಸ್ವತಃ ಸಂಶ್ಲೇಷಿಸಿ ಜೀರ್ಣಿಸಿಕೊಳ್ಳಬೇಕಾಗುತ್ತದೆ. ಹೌದು! ಪುಸ್ತಕ ಓದಿದಷ್ಟೂ ನಮ್ಮ ಜ್ಞಾನ ವೃದ್ಧಿಸುತ್ತದೆ, ವಿವೇಚನೆಯಿಂದಿರಲು ಸಹಕರಿಸುತ್ತದೆ
ಎನ್ನುವುದು ಸಾಮಾನ್ಯ ಗ್ರಹಿಕೆ. ಅದರಂತೆಯೇ, ಪುಸ್ತಕ ಗಳ ಬೇಟೆ, ಅಧ್ಯಯನ, ಸಂಗ್ರಹ ಕೂಡ ಹೆಚ್ಚಿನ ಚಿಂತಕರ ಮತ್ತು ಹವ್ಯಾಸಿ ಓದುಗರ ನೆಚ್ಚಿನ ಹವ್ಯಾಸವು ಕೂಡ.

ಸ್ಕೋಪೆನ್ಹಾವರ್ ಪ್ರಕಾರ, ಅತಿಯಾದ ಓದು ನಮ್ಮ ಸ್ವಚಿಂತನ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಯಾಕೆಂದರೆ, ಇನ್ನೊಬ್ಬರ ಕೃತಿಗಳನ್ನು ಓದುವಾಗ ನಮ್ಮ ಮನಸ್ಸು ಆ ಕೃತಿಕಾರನ ಯೋಚನಾಲಹರಿಯ ಹಾದಿಯಲ್ಲಿಯೇ ಸಾಗುತ್ತದೆ. ಕಥೆಯಾಗಿರಬಹುದು ಅಥವಾ ಲೇಖನಗಳಾಗಿರಬಹುದು. ಅಲ್ಲಿ, ಚಿಂತನೆಯನ್ನು ನಮಗಾಗಿ ಮೊದಲೇ ಸಿದ್ಧಪಡಿಸಲಾಗಿರುತ್ತದೆ. ಅತಿಯಾಗಿ ಇನ್ನೊಬ್ಬರ ಗ್ರಂಥಗಳಲ್ಲಿ ಸಮಯ ಕಳೆಯುವವನು, ಸ್ವಚಿಂತನ ಸಾಮರ್ಥ್ಯವನ್ನು ಕ್ರಮೇಣವಾಗಿ ಕಳೆದು ಕೊಳ್ಳುತ್ತಾನೆ ಹಾಗೂ ಅನ್ಯರ ಹೇಳಿಕೆಗಳನ್ನು ಪ್ರತಿ ಬಾರಿ ಹೇಳಿದ್ದನ್ನೇ ಹೇಳಿಕೊಂಡು ಧೋರಣೆಯನ್ನಾಗಿಸಿ ಕೊಳ್ಳುತ್ತಾನೆ. ಆದುದರಿಂದ, ಓದು ಮತ್ತು ಅದರ ಅಧ್ಯಯನದೊಂದಿಗೆ ಸಮಾನಾಂತರವಾದ ಸ್ವಚಿಂತನೆಯೂ ಮುಖ್ಯ.

ಮಾರುಕಟ್ಟೆಯಲ್ಲಿ ಲಭ್ಯ ಪುಸ್ತಕಗಳಲ್ಲಿ ಹೆಚ್ಚಿನವುಗಳನ್ನು ಹಣ, ಪ್ರಸಿದ್ಧಿ, ಪ್ರಶಸ್ತಿ ಮತ್ತು ಗಮನ ಸೆಳೆಯುವ ಉದ್ದೇಶದಿಂದಷ್ಟೇ ಬರೆಯಲಾಗುತ್ತಿದೆ. ಆದ್ದರಿಂದ ಪುಸ್ತಕಗಳನ್ನು ಖರೀದಿಸುವಾಗ ಮತ್ತು ಓದುವಾಗ ಸೂಕ್ತ ಆಯ್ಕೆ ಬಹಳ ಮುಖ್ಯ. ಮೌಲಿಕವಾದ
ಸಮಯ ಹಾಗೂ ಅನಿಶ್ಚಿತ ಜೀವನವನ್ನು ಕಳಪೆ ಪುಸ್ತಕಗಳನ್ನು ಓದುವುದರಲ್ಲಿಯೇ ಕಳೆಯಬಾರದು. ಹಾಗೆಯೇ, ಯಾವುದೇ ವಿಷಯವನ್ನು ಓದುವಾಗ, ಮೂಲಕೃತಿಯನ್ನು ಓದುವುದು ಬಹಳ ಮುಖ್ಯ.

ಆದರೆ, ನಾವು ಸಾಮಾನ್ಯವಾಗಿ ಆ ಕೃತಿಯ ಕುರಿತಾದ ಅನ್ಯರ ಪ್ರತಿಕ್ರಿಯೆಗಳ ಮೂಲಕ ಪ್ರವೇಶಿಸುತ್ತೇವೆ. ಇದು ಪೂರ್ವ ಗ್ರಹಪ್ರೇರಿತ ಓದಾಗು ತ್ತದೆ. ಅದೇ ರೀತಿ,  ಶ್ರೇಷ್ಠ ಪ್ರಾಚೀನ ಕೃತಿಗಳ ಪುನರ್ಮ ನನ ಕೂಡ ಅಗತ್ಯ. ಅವುಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಸಾಕಾಗುವುದಿಲ್ಲ. ಬದಲಾಗಿ, ಅವುಗಳನ್ನು ಏಕಾಗ್ರತೆ ಮತ್ತು ಕಾಳಜಿಯಿಂದ ಪುನರಾವರ್ತನೆ ಮಾಡಿದಷ್ಟೂ ಹೊಸ ಹೊಳಹುಗಳು, ವ್ಯಾಖ್ಯಾನಗಳು ನಮಗೆ ಸಿಗುತ್ತವೆ.

ಕಳಪೆ ಗುಣಮಟ್ಟದ ಪುಸ್ತಕಗಳು ಬೌದ್ಧಿಕ ವಿಕಾಸಕ್ಕೆ ಹಾನಿಕಾರಕ, ಲೌಕಿಕ ಜಗತ್ತಿಗೂ ವ್ಯರ್ಥ. ಇಲ್ಲಿ ಸ್ಕೋಪೆನ್ಹಾವರ್ ಅವರ ಮುಖ್ಯ ಆಪಾದನೆಯೆಂದರೆ, ಇಂದಿನ ಜನರು ವರ್ತಮಾನ ಕಾಲಘಟ್ಟದಲ್ಲಿ ಪ್ರಕಟವಾಗುತ್ತಿರುವ ಪುಸ್ತಕಗಳತ್ತ ಮಾತ್ರ ಧ್ಯಾನ ಹರಿಸುತ್ತಿದ್ದಾರೆ. ಅದು ಕೂಡ ತಮ್ಮ ವ್ಯವಹಾರ eನ ಮತ್ತು ವಿದ್ವತ್ತನ್ನು ಪ್ರದರ್ಶಿಸಲು ಮಾತ್ರವೇ ವಿನಃ ತಮ್ಮ ಬುದ್ಧಿವಂತಿಕೆ
ಯನ್ನು ಹೆಚ್ಚಿಸಿಕೊಳ್ಳಲು ಅಲ್ಲ. ಅಂದರೆ, ಓದಿನ ನಂಟು ಕೇವಲ ಹಣ ಮತ್ತು ಹೆಸರುಗಳಿಸುವುದಕ್ಕಷ್ಟೇ ಸೀಮಿತವಾ ಗಿದೆ. ಈ ಬಾಹ್ಯ ತೋರಿಕೆಗಳ ನಡುವೆ, ಸ್ಕೋಪೆನ್ಹಾವರ್ ನಮಗೆ ಪ್ರಾಚೀನ ಶ್ರೇಷ್ಠ ಕೃತಿಗಳ ನಿಧಾನಗತಿಯ ಮರು ಓದಿನ ಅಗತ್ಯವನ್ನು ಒತ್ತಿ ಹೇಳುತ್ತಾರೆ.

ಕೊನೆಯದಾಗಿ, ಓದುವ ಹವ್ಯಾಸ ಆಧುನಿಕ ಜಗತ್ತಿನ ಒತ್ತಡಗಳಿಂದ ನಮ್ಮನ್ನು ಪಾರು ಮಾಡಲು ಸಹಾಯಕ. ಆದರೆ, ಇಂದಿನ ತೋರಿಕೆಯ ಜಗತ್ತಿನಲ್ಲಿ, ಪುಸ್ತಕ ಸಂಗ್ರಹ ಕೂಡ ಒಂದು ಸಾಮಾಜಿಕ ಪ್ರತಿಷ್ಠೆಯ ಸಂಕೇತವಾಗಿ ಯಷ್ಟೇ ಉಳಿದಿದೆ. ಹಾಗಾಗ ದಂತೆ, ಯಾವುದೇ ಪುಸ್ತಕ ವನ್ನು ಖರೀದಿಸುವಾಗ, ಅದನ್ನು ಓದಲು ಬೇಕಾಗುವ ಸಮಯದ ಲಭ್ಯತೆಯನ್ನು ಕೂಡ ಪರಿಗಣಿಸು ವುದು ಅಷ್ಟೇ ಮಹತ್ವದ ಅಂಶ. ಯಾಕೆಂದರೆ, ಕೇವಲ ಪುಸ್ತಕ ಖರೀದಿಯಿಂದ ಮತ್ತು ಸಂಗ್ರಹದಿಂದ ಅದರಲ್ಲಿರುವ ಜ್ಞಾನ ನಮ್ಮ ಸ್ವಾಧೀನವಾಗುವುದಿಲ್ಲ.

(ಲೇಖಕರು ಸಿವಿಲ್ ಎಂಜಿನೀಯರ್ ಮತ್ತು ಹವ್ಯಾಸಿ ಬರಹಗಾರ)