ಆಡಳಿತಾಧಿಕಾರಿಯಾಗಿ ಸಂಪೂರ್ಣ ವಿಫಲರಾದ ರಾಕೇಶ್ ಸಿಂಗ್
ವಿಜಯಭಾಸ್ಕರ್ ಅವಧಿಯಲ್ಲಿ ಅತ್ಯುತ್ತಮ ಆಡಳಿತದ ಮಾದರಿ
ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು
ಬಿಬಿಎಂಪಿ ಸದಸ್ಯರ ಅನುಪಸ್ಥಿತಿಯಲ್ಲಿಯೂ ಹೇಗೆ ಉತ್ತಮ ಕೆಲಸ ಮಾಡಬಹುದು ಎಂದು ತೋರಿಸಿಕೊಡುವ ಅವಕಾಶವಿದ್ದ ಆಡಳಿತಾಧಿಕಾರಿ, ಹುದ್ದೆ ನಿರ್ವಹಣೆಯಲ್ಲಿ ರಾಕೇಶ್ ಸಿಂಗ್ ಸಂಪೂರ್ಣ ವಿಫಲವಾಗಿ ದ್ದಾರೆ.
ನಾಲ್ಕಾರು ಹೆಚ್ಚುವರಿ ಹೊಣೆಗಾರಿಕೆಗಳನ್ನು ಹೊಂದಿರುವ ಕಾರಣದಿಂದಲೋ ಏನೋ ಅವರು ಬಿಬಿಎಂಪಿ ಆಡಳಿತದಲ್ಲಿ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಇದು ಬಿಬಿಎಂಪಿ ಆಡಳಿತದ ಮೇಲೆ ಪರಿಣಾಮ ಬೀರುತ್ತಿದ್ದು, ಸಾರ್ವಜನಿಕರು ಆಡಳಿತಾ ಧಿಕಾರಿಗಳ ಆಡಳಿತ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿನ ಆಡಳಿತಾಧಿಕಾರಿ ಮಾದರಿಯಲ್ಲಿ ರಾಕೇಶ್ ಸಿಂಗ್ ಕೆಲಸ ಮಾಡಬಹುದು ಎಂದು ಕೊಳ್ಳಲಾಗಿತ್ತಾದರೂ, ಇವರು ಸಾರ್ವಜನಿಕ ಸಂಪರ್ಕಕ್ಕೆ ಸಿಗದೆ ಗಗನ ಕುಸುಮವಾಗಿ ದ್ದಾರೆ ಎಂದು ಟೀಕಿಸಿದ್ದಾರೆ.
ಸತತವಾಗಿ ಸುರಿದ ಮಳೆಯಿಂದ ನಗರದಾದ್ಯಂತ ಅನೇಕ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿವೆ. ಕೆಲವು ಅಪಾರ್ಟ್ಮೆಂಟ್ಗಳೇ ಮುಳುಗಿ ಹೋಗಿದ್ದು, ಅಲ್ಲಿನ ನಿವಾಸಿಗಳು ಪರದಾಡುವಂತಾಗಿತ್ತು. ಆದರೆ, ಬಿಬಿಎಂಪಿ ಆಡಳಿತಾ ಧಿಕಾರಿ ರಾಕೇಶ್ ಸಿಂಗ್ ಅವರು ಅಲ್ಲೆಲ್ಲೂ ಕಾಣಿಸಿಕೊಂಡು ಜನರ ನೆರವಿಗೆ ನಿಂತ ಉದಾಹರಣೆ ಇಲ್ಲ. ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿ ಕೆಲಸ ಮಾಡಿದ ಬಗ್ಗೆಯೂ ಯಾವುದೇ ವರದಿಗಳಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಬಿಎಂಪಿ ಸದಸ್ಯರ ಅಧಿಕಾರವಧಿ ಮುಕ್ತಾಯವಾಗಿ ಈಗಾಗಲೇ ಒಂದು ವರ್ಷಕ್ಕೂ ಜಾಸ್ತಿಯಾಗಿದೆ. ಅವರ ಅನುಪಸ್ಥಿತಿಯಲ್ಲಿ ಆಡಳಿತಾಧಿಕಾರಿ ಅವರು ನಗರದ ಜನರ ಸಮಸ್ಯೆಗಳಿಗೆ ನೇರ ಉತ್ತರದಾಯಿಯಾಗಿರುತ್ತಾರೆ. ಈ ಹಿಂದೆ ಆಡಳಿತಾಧಿಕಾರಿಯಾಗಿದ್ದ ಟಿ.ಎಂ.ವಿಜಯಭಾಸ್ಕರ್ ಅವರು ಆಡಳಿತಾಧಿಕಾರಿ ಹೇಗಿರಬೇಕು ಎಂಬ ಬಗ್ಗೆ ಮಾದರಿಯಾಗಿದ್ದರು. ಸಾಮಾನ್ಯ ಜನರಿಗೂ ಲಭ್ಯರಿರುವ ಮೂಲಕ ಸದಾ ಬಿಬಿಎಂಪಿಯ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
ಅವರು ಅಧಿಕಾರದಲ್ಲಿದ್ದಾಗ ಶೇ.೯೦ಕ್ಕಿಂತ ಅಧಿಕ ಬಜೆಟ್ ಅನುಷ್ಠಾನಗೊಳಿಸಿದ ಖ್ಯಾತಿಯೂ ಅವರಿಗೆ ಲಭ್ಯವಾಗಿತ್ತು. ಆದರೆ, ಅವರ ಹಾದಿಯಲ್ಲಿ ರಾಕೇಶ್ ಸಿಂಗ್ ನಡೆದಿಲ್ಲ.
ಮುಖ್ಯ ಆಯುಕ್ತರ ಮೇಲೆಯೇ ಅವಲಂಬನೆ
ಬಿಬಿಎಂಪಿ ಕೌನ್ಸಿಲ್ ಅನುಪಸ್ಥಿತಿಯಲ್ಲಿ ಆಡಳಿತಾಧಿಕಾರಿ ಮೇಯರ್ ಸ್ಥಾನದಲ್ಲಿ ನಿಂತು ಕೆಲಸ ಮಾಡಬೇಕು. ಈ ಹಿಂದೆ ವಿಜಯ ಭಾಸ್ಕರ್ ಅವರು ಅದೇ ರೀತಿ ಕಾರ್ಯನಿರ್ವಹಿಸಿದ್ದರು. ಆದರೆ, ರಾಕೇಶ್ ಸಿಂಗ್ ಅವರು ಬಿಬಿಎಂಪಿ ವಿಚಾರದಲ್ಲಿ ಅಷ್ಟೊಂದು ತಲೆಯನ್ನೇ ಕೆಡಿಸಿಕೊಂಡಿಲ್ಲ. ಅವರಿಗೆ ಪ್ರಬಲವಾದ ಎರಡು ಪ್ರಮುಖ ಇಲಾಖೆ ಗಳ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗಳಿದ್ದು, ಜಲಸಂಪನ್ಮೂಲ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಕಡೆಗೆ ಹೆಚ್ಚಿನ ಗಮನ ನೀಡಿದ್ದಾರೆ. ಹೀಗಾಗಿ, ಮುಖ್ಯ ಆಯುಕ್ತ ಗೌರವ್ ಗುಪ್ತ ಅವರೇ ಬಿಬಿಎಂಪಿಯ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ.
ಅವರ ಮೇಲೆ ಆಡಳಿತ ಪಕ್ಷದ ಮಾಜಿ ಸದಸ್ಯರೇ ಅನೇಕ ಆರೋಪಗಳನ್ನು ಮಾಡುತ್ತಿದ್ದು, ಬಿಬಿಎಂಪಿ ಆಡಳಿತ ಯಂತ್ರ ಸರಿದಾರಿಯಲ್ಲಿ ನಡೆಯುತ್ತಿಲ್ಲ ಎಂದು ಕಿಡಿಕಾರುತ್ತಿದ್ದಾರೆ. ಹೀಗಿದ್ದೂ ರಾಕೇಶ್ ಸಿಂಗ್ ಅವರು ಮಾತ್ರ ಬಿಬಿಎಂಪಿ ಆಡಳಿತದ ಕಡೆಗೆ ಗಮನ ನೀಡುತ್ತಿಲ್ಲ.
ರಾಕೇಶ್ ಸಿಂಗ್ ಜವಾಬ್ದಾರಿಗಳು
ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ
ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ
‘ಪರ್ಸೆಂಟೇಜ್’ ಆರೋಪದ ತನಿಖಾಧಿಕಾರಿ
ಬಿಬಿಎಂಪಿ ಆಡಳಿತಾಧಿಕಾರಿ
ಬಿಬಿಎಂಪಿ ಕಾಯಿದೆ ಅನುಷ್ಠಾನ ಸಮಿತಿ