ಹೆಚ್ಚಿನ ಮತ ಗಳಿಕೆ ಸಾಧ್ಯವಿದ್ದರೂ ಎರಡನೇ ಅಭ್ಯರ್ಥಿ ಕಣಕ್ಕಿಳಿಸಿದ ಬಿಜೆಪಿ
ವಿಶೇಷ ವರದಿ: ಜಿತೇಂದ್ರ ಕುಂದೇಶ್ವರ ಮಂಗಳೂರು
ದಕ್ಷಿಣ ಕನ್ನಡ ದ್ವಿಸದಸ್ಯ ವಿಧಾನ ಪರಿಷತ್ ಕಣದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಎಸ್ಡಿಪಿಐ ಕಣದಲ್ಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಿರಾಯಾಸವಾಗಿ ಕ್ಷೇತ್ರಗಳನ್ನು ಉಳಿಸಿಕೊಳ್ಳಲಿದೆ. ಬಿಜೆಪಿಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ನಿಂದ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆ ಮಾಲೀಕ ಮಂಜುನಾಥ ಭಂಡಾರಿ ಮತ್ತು ಎಸ್ ಡಿಪಿಐಯಿಂದ ಶಾಫಿ ಬೆಳ್ಳಾರೆ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಕೋಟ ಶ್ರೀನಿ ವಾಸ ಪೂಜಾರಿ ಮತ್ತು ಕಾಂಗ್ರೆಸ್ಸಿನ ಪ್ರತಾಪಚಂದ್ರ ಶೆಟ್ಟಿ ಕಳೆದ ಬಾರಿ ಗೆದ್ದಿದ್ದರು.
ದ್ವಿಸದಸ್ಯ ಕ್ಷೇತ್ರದಲ್ಲಿ ಇಬ್ಬರೂ ಗೆಲ್ಲುವ ಅವಕಾಶ ಇರುವುದರಿಂದ ಅತಿ ಹೆಚ್ಚು ಜನ ಪ್ರತಿನಿಧಿಗಳ ಬೆಂಬಲ ಇರುವ ಬೆಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಸಹಜವಾಗಿಯೇ ಗೆಲ್ಲಲಿದ್ದಾರೆ. ಇದಕ್ಕೆ ಯಾವ ಲೆಕ್ಕಾಚಾರಗಳ ಅಗತ್ಯ ಇಲ್ಲ. ಎಸ್ಡಿಪಿಐ ಗೆಲ್ಲುವ ಉದ್ದೇಶಕ್ಕೆ ಸ್ಪರ್ಧೆ ಮಾಡುತ್ತಿಲ್ಲ. ತಮ್ಮ ಮತಗಳು ಕಾಂಗ್ರೆಸ್ಸಿಗೆ ಬೀಳದಂತೆ ಮಾಡಲು ಓಟುಗಳನ್ನು ಹಿಡಿದಿಟ್ಟುಕೊಳ್ಳಲು ಸ್ಪರ್ಧೆ ನಡೆಸಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು ೨,೫೧೧ ಮತಗಳಿದ್ದು, ಅದರಲ್ಲಿ ಬಿಜೆಪಿ ಬೆಂಬಲಿತರು ೧,೬೦೩, ಕಾಂಗ್ರೆಸ್ ಬೆಂಬಲಿತರು ೭೭೪ ಇದ್ದಾರೆ. ಎಸ್ಡಿಪಿಐ ೧೭, ಜೆಡಿಎಸ್ ೧, ಪಕ್ಷಗಳಲ್ಲಿ ಗುರುತಿಸಿಕೊಳ್ಳದ ೧೧೬ ಮಂದಿ ಜನಪ್ರತಿನಿಧಿಗಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ೩,೫೨೯ ಮತಗಳಿದ್ದು, ಅದರಲ್ಲಿ ಬಿಜೆಪಿ ಬೆಂಬಲಿತರು ೨,೧೫೨, ಕಾಂಗ್ರೆಸ್ ಬೆಂಬಲಿತರು ೧.೧೦೯ ಇದ್ದಾರೆ. ಎಸ್ಡಿಪಿಐ ೧೮೦, ಜೆಡಿಎಸ್ ೧೪, ಪಕ್ಷಗಳಲ್ಲಿ ಗುರುತಿಸಿಕೊಳ್ಳದ ೭೫ ಮಂದಿ ಜನಪ್ರತಿನಿಧಿಗಳಿದ್ದಾರೆ. ಒಟ್ಟು ಚಲಾವಣೆಯಾದ ಮತಗಳಲ್ಲಿ ಮೂರನೇ ಒಂದಕ್ಕಿಂತ ಹೆಚ್ಚು ಮತಗಳು ಬಂದರೆ ಅಭ್ಯರ್ಥಿ ವಿಜಯಿಯಾಗುತ್ತಾರೆ. ಒಟ್ಟು ೬,೦೪೦ ಮತಗಳಿವೆ.
ಬಿಜೆಪಿ ಬೆಂಬಲಿತರು ೩,೭೫೫ ಮಂದಿ ಇರುವುದರಿಂದ ಬಿಜೆಪಿ ಗೆಲುವು ಅತ್ಯಂತ ಸುಲಭ. ಇಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದ ಎರಡನೇ ಅಭ್ಯರ್ಥಿಗೂ ಗೆಲ್ಲಲು ಅವಕಾಶ ಇರುವುದರಿಂದ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಎಸ್ಡಿಪಿಐ ಪಕ್ಷಕ್ಕಿಂತ ದೊಡ್ಡ ಸಂಖ್ಯೆ ಯಲ್ಲಿ ಹೆಚ್ಚಿನ ಜನಪ್ರತಿನಿಧಿಗಳು (೧,೮೮೨) ಇರುವುದರಿಂದ ಗೆಲುವು ನಿರೀಕ್ಷಿತವಾಗಿದೆ.
ಬಿಜೆಪಿಗೆ ಹೆಚ್ಚಿನ ಮತ ಗಳಿಕೆ ಸಾಧ್ಯತೆ ಹಿನ್ನೆಲೆಯಲ್ಲಿ ಎರಡನೇ ಅಭ್ಯರ್ಥಿ ಇಳಿಸಿದ್ದರೆ ಕಣದಲ್ಲಿ ರಂಗು ಬರುತ್ತಿತ್ತು. ಆದರೆ ಬಿಜೆಪಿ ಆ ಸಾಹಸಕ್ಕೆ ಮುಂದಾಗಿಲ್ಲ. ಸಹಕಾರಿ ರಂಗದ ದಿಗ್ಗಜ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಪಕ್ಷೇತರನಾಗಿ ಸ್ಪರ್ಧಿಸುವ ಘೋಷಣೆ ಮಾಡಿ, ಕಚೇರಿ ಉದ್ಘಾಟನೆ ಮಾಡಿದಾಗ ಸಹಜವಾಗಿ ಕಣದಲ್ಲಿ ಕದನ ಕುತೂಹಲವಿತ್ತು. ಆದರೆ ಏಕಾಏಕಿ ಕಣದಿಂದ ಹಿಂದೆ ಸರಿದ ಬಳಿಕ ಎರಡೂ ರಾಷ್ಟ್ರೀಯ ಪಕ್ಷಗಳು ಗೆಲ್ಲುವುದು ಖಚಿತವಾಗಿರುವುದರಿಂದ ಕಣ ಕತೂಹಲವನ್ನು ಕಳೆದು ಕೊಂಡು ಸಪ್ಪೆಯಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಯಾರಿಗೂ ಎರಡನೇ ಪ್ರಾಶಸ್ತ್ಯದ ಮತ ನೀಡಲೇ ಬೇಡಿ ಎಂದು ಪ್ರಚಾರ ಸಭೆಯಲ್ಲಿ ಹೇಳುತ್ತಿದ್ದಾರೆ. ಕಾಂಗ್ರೆಸ್ಸಿನ ಮಂಜುನಾಥ ಭಂಡಾರಿ ಅವರ ಪರವಾಗಿ ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪ ಮೊಯಿಲಿ ಅವರು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಮಾಡಿದ್ದಾರೆ. ಬಿಜೆಪಿ ವತಿಯಿಂದಲೂ ಅಲ್ಲಲ್ಲಿ ಪ್ರಚಾರ ಸಭೆಗಳು ನಡೆಯುತ್ತಿವೆ.
ಎಬಿವಿಪಿ ಸಮಾವೇಶ ವಿವಾದ
ಮಂಜುನಾಥ ಭಂಡಾರಿ ಅವರು ತಮ್ಮ ಶಿಕ್ಷಣ ಸಂಸ್ಥೆ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳ ಎಬಿವಿಪಿ ಸಮಾವೇಶ ನಡೆಯಲು ಅವ ಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಸ್ವಪಕ್ಷೀಯರಿಂದ ಕೇಳಿ ಬಂದಿತ್ತು. ಇದು ಟಿಕೆಟ್ ಸಿಗದವರ ಆಕ್ರೋಶದ ಪ್ರತಿಫಲನ ವಾಗಿತ್ತು. ಇದಕ್ಕೆ ಕಾಂಗ್ರೆಸ್ಸಿಗರು ಪ್ರತಿಕ್ರಿ ಯಿಸದೇ ಇದ್ದರೂ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದರೆ ಪ್ರತಿಕ್ರಿಯಿಸಿ, ಕಾಂಗ್ರೆಸ್ಸಿನ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರೇ ಆರ್ಎಸ್ ಎಸ್ ಸಮಾವೇಶ ನಡೆಸಲು ಅವರ ಆಡಳಿತದ ಕುದ್ರೋಳಿ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದರು ಎಂದು ಕಾಂಗ್ರೆಸ್ಸಿಗರ ಗಾಯಕ್ಕೆ ಉಪ್ಪು ಸವರಿದ್ದರು.