Thursday, 12th December 2024

ಸಿಸ್ಟರ್‌ ಅಭಯಾಗೆ ನ್ಯಾಯ ದೊರಕಿಸಿದ ಅಡಕೆ ಕಳ್ಳ !

ಪ್ರಚಲಿತ

ಗಣೇಶ್ ಭಟ್, ವಾರಣಾಸಿ

ಆನೆ ಕದ್ದರೂ, ಅಡಕೆ ಕದ್ದರೂ ಕಳ್ಳ, ಅಡಕೆಲಿ ಹೋದ ಮಾನ ಆನೆ ಕೊಟ್ಟರೂ ಬರದು… ಹೀಗೆಲ್ಲ ಅನೇಕ ಅಡಕೆ ಬಗ್ಗೆ ಗಾದೆಗಳಿವೆ. ಆದರೆ ಅಡಕೆ ಕಳ್ಳನೊಬ್ಬ ಕೋರ್ಟಿಗೆ ಬಂದು ಹೇಳಿದ ಸಾಕ್ಷಿ ದೇಶದಲ್ಲಿ ಅತೀ ಹೆಚ್ಚು ಚರ್ಚಿಸಲ್ಪಟ್ಟ ಕೊಲೆ ಪ್ರಕರಣವೊಂದನ್ನು ಪರಿಹರಿಸಲು ಹಾಗೂ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಸಫಲವಾಗಿದೆ!

ಆ ಸಾಕ್ಷೀದಾರನ ಹೆಸರು ಅಡಕ ರಾಜು. ಮಲಯಾಳಂನಲ್ಲಿ ಅಡಕೆಗೆ ಅಡಕ/ಅಡಕ್ಕ ಎಂದು ಕರೆಯುತ್ತಾರೆ. ರಾತ್ರಿ ಹೊತ್ತು ಇತರರ ತೋಟಕ್ಕೆ ನುಗ್ಗಿ ಅಡಕೆ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ರಾಜುವಿಗೆ ‘ಅಡಕ ರಾಜು’ ಎಂಬುದು ಅನ್ವರ್ಥಕ ನಾಮ. ಅವನ ಹೆಸರಲ್ಲಿ ಹಳೇ ಕೇಸೊಂದು ನೆನಪಾಗುತ್ತದೆ.

ಕೇರಳದ ಕಾನ್ವೆಂಟ್‌ನಲ್ಲಿ ಕ್ರೈಸ್ತ ಸನ್ಯಾಸಿನಿ ಕೊಲೆ ಪ್ರಕರಣ ಸರಿಸುಮಾರು ಮೂರು ದಶಕಗಳ ಹಿಂದೆ ನಡೆದಿದ್ದು ಆತ್ಮಹತ್ಯೆ ಎಂದು ಅದನ್ನು ಮುಚ್ಚಿಹಾಕಲಾಗಿತ್ತು. ಕೇರಳ ದಡೆ ಕೋಲಾಹಲವನ್ನೆಬ್ಬಿಸಿದ್ದ ಈ ಪ್ರಕರಣದ ಮರು ವಿಚಾರಣೆ ನಡೆದು ಕೊಲೆಯನ್ನು ಪ್ರತ್ಯಕ್ಷ ನೋಡಿದ್ದ ಅಡಕ ರಾಜು ಸಾಕ್ಷ್ಯದಿಂದಾಗಿ ಸಾಬೀತಾಯಿತು ಹಾಗೂ ಅಪರಾಧಿ ಗಳಿಗೆ ಶಿಕ್ಷೆಯೂ ಆಯಿತು.

ಸಿಸ್ಟರ್ ಅಭಯಾ ( ದೀಕ್ಷಾಪೂರ್ವ ಹೆಸರು ಬೀನಾ ಥಾಮಸ್) ಕೇರಳದ ಕೊಟ್ಟಾಯಂ ಜಿಯ ಕ್ನಾನಾಯ ಕ್ಯಾಥೋಲಿಕ್ ಆರ್ಚೆಪ್ರಾಚಿಯ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಸೈಂಟ್ ಜೋಸೆಫ್ ಕಾಂಗ್ರಿಗೇಶನ್ ಫಾರ್ ರಿಲೀಜಿಯಸ್ ಸಿಸ್ಟರ್ಸ್ ಸಂಘಟನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸನ್ಯಾಸಿನಿ.

1973ರಲ್ಲಿ ಜನಿಸಿದ್ದ ಈಕೆಯ ಶವವು ಕೊಟ್ಟಾಯಂ ಜಿ ಸೈಂಟ್ ಪೀಯೂಸ್ ಎಕ್ಸ್ ಕಾನ್ವೆಂಟಿನ ಭಾವಿಯಲ್ಲಿ 1992ರ ಮಾ.27 ರಂದು ಪತ್ತೆಯಾಗಿತ್ತು. ಕೇರಳದ ಪೋಲಿಸ್ ಕ್ರೈಂ ಬ್ರ್ಯಾಂಚ್ ಅದೇ ವರ್ಷ ಎಪ್ರಿಲ್ ನಲ್ಲಿ ತನಿಖೆ ಆರಂಭಿಸಿ 1993ರ ಜನವರಿಯಲ್ಲಿ ವರದಿ ಸಲ್ಲಿಸಿತು. ಅದರನ್ವಯ ‘ಮಾನಸಿಕ ಅನಾರೋಗ್ಯಕ್ಕೀಡಾಗಿದ್ದ ಸಿಸ್ಟರ್ ಅಭಯಾಳ ಸಾವು ಆತ್ಮಹತ್ಯೆ’. ಕೇಸ್ ಅನ್ನು ಮುಚ್ಚಿ ಹಾಕಲಾಯಿತು. ಆದರೆ ಇದು ಆತ್ಮಹತ್ಯೆಯಲ್ಲ ಎಂದು ಕೇರಳದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವು.
ಮಾನವ ಹಕ್ಕುಗಳ ಹೋರಾಟಗಾರ ಜೋಮೋನ್ ಪುತೆನ್ಪುರಕ್ಕಲ್ ನೇತೃತ್ವದಲ್ಲಿ ರೂಪುಗೊಂಡ ‘ಸಿಸ್ಟರ್ ಅಭಯಾ ಕೇಸ್ ಆಕ್ಷನ್ ಕೌನ್ಸಿಲ್’ ಅಡಿಯಲ್ಲಿ ಕಾನೂನು ಹೋರಾಟ ಹಾಗೂ ಪ್ರದರ್ಶನ ನಡೆದವು.

ಜೋಮೋನ್ ಕೇಸನ್ನು ಹೈಕೋರ್ಟಿಗೆ ಒಯ್ದರು. ಜತೆಗೆ ಆ ಕಾನ್ವೆಂಟಿನ ಮದರ್ ಸುಪೀರಿಯರ್ ಆಗಿದ್ದ ಸಿಸ್ಟರ್ ಬನಿಕಾಸ್ಸಿಯಾ
ನೇತೃತ್ವದ 65 ಕ್ರೈಸ್ತ ಸನ್ಯಾಸಿನಿಯರ ನಿಯೋಗ ಅಂದಿನ ಕೇರಳದ ಮುಖ್ಯಮಂತ್ರಿ ಪಿ. ಕರುಣಾಕರನ್ ಅವರನ್ನು ಭೇಟಿ ಮಾಡಿ ಅಭಯಾ ಕೊಲೆಯಾಗಿದ್ದು ಪ್ರಕರಣವನ್ನು ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿತ್ತು.

ಇವುಗಳೆಲ್ಲದರ ಫಲವಾಗಿ ಕೊನೆಗೆ ಕೇರಳದ ಹೈಕೋರ್ಟ್ 1993ರ ಮಾರ್ಚ್‌ನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಿತು. ಆದರೆ 1996ರಲ್ಲಿ ಸಿಬಿಐ, ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗದೇ ಇದು ಆತ್ಮಹತ್ಯೆಯೇ ಎಂದು ವರದಿ ಕೊಟ್ಟಿತು. ಇದನ್ನು ತಳ್ಳಿ ಹಾಕಿದ ಕೋರ್ಟ್ ಪುನಃ ತನಿಖೆ ಮಾಡಲು ಸಿಬಿಐಗೆ ಸೂಚಿಸಿತು. ಹೀಗಾಗಿ ಸಿಬಿಐ 1997ರಲ್ಲಿ ತನ್ನ ಎರಡನೇ ವರದಿ ಸಲ್ಲಿಸಿ ಸಿಸ್ಟರ್ ಅಭಯಾ ಸಾವು ಆತ್ಮಹತ್ಯೆಯಲ್ಲ, ಬದಲಾಗಿ ಇದೊಂದು ಕೊಲೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. ಆದರೆ ಕೊಲೆಗಾರರು ಯಾರು ಎಂದು ಹೇಳಲು ವಿಫಲವಾದ ಸಿಬಿಐ ಹೊಸದಾಗಿ ಕೇಸ್‌ನ ವಿಚಾರಣೆ ಆರಂಭಿಸಿತು.

ಮುಂದಿನ 10 ವರ್ಷ ತನಿಖೆಯಲ್ಲಿ ಯಾವುದೇ ಪ್ರಗತಿ ಆಗಲಿಲ್ಲ. ಸಹಜವಾಗಿ ಪ್ರಕರಣ ಮುಚ್ಚಿಹಾಕುವ ಉದ್ದೇಶ ಹೊಂದಿದ್ದ ಧಾರ್ಮಿಕ ಶಕ್ತಿಗಳು ರಾಜಕೀಯ ಒತ್ತಡ ತರುತ್ತಿದ್ದವು. ಆದರೆ, ಎಸ್‌ಪಿ ನಂದಕುಮಾರ್ ನಾಯರ್ ಬಗ್ಗುವ ಮನುಷ್ಯನಾಗಿರಲಿಲ್ಲ. ಆತ ಕೇಸು ಕೈಗೆತ್ತಿಕೊಂಡ ನಂತರ ತನಿಖೆ ವೇಗ ಪಡೆದುಕೊಂಡಿತು. ೨೦೦೮ರಲ್ಲಿ ತನಿಖಾ ವರದಿಯನ್ನು ಹೈಕೋರ್ಟಿಗೆ ಸಲ್ಲಿಸಿದ ಸಿಬಿಐ, ಅಭಯಾ ಸಾವಿನ ಹಿಂದೆ ಕ್ಯಾಥೋಲಿಕ್ ಪಾದ್ರಿಗಳಾಗಿದ್ದ ಫಾದರ್ ಥಾಮಸ್ ಕೊಟ್ಟೂರ್, ಫಾದರ್ ಜೋಸ್ ಪೋತ್ರಿಕ್ಕ ಯಿಲ್ ಹಾಗೂ ಕ್ರೈಸ್ತ ಸನ್ಯಾಸಿನಿ ಸಿಸ್ಟರ್ ಸೆಫಿ ಇದ್ದಾರೆಂದು ಸಾಕ್ಷಿ ಸಹಿತ ಹೇಳಿತು. ಕೊಲೆ, ಸಾಕ್ಷಿನಾಶ ಹಾಗೂ ಕ್ರಿಮಿನಲ್ ಪಿತೂರಿಯ ಆರೋಪದಡಿಯಲ್ಲಿ ಈ ಮೂವರನ್ನೂ ಬಂಧಿಸಲಾಯಿತು.

ಕೊಟ್ಟಾಯಂ ಡಯೋಸಿಸ್‌ನ ಚಾನ್ಸಿಲರ್ ಆಗಿದ್ದ -.ಥಾಮಸ್, ಕೊಟ್ಟಾಯಂ ಡಯೋಸಿಸ್ ನಡೆಸುತ್ತಿದ್ದ ಕಾಲೇಜಿನ ಅಧ್ಯಾಪಕ -.ಜೋಸ್ ಪೋತ್ರಿಕ್ಕಯಿಲ್ ಹಾಗೂ ಸಿಸ್ಟರ್ ಸಿಫಿ ಇವರ ನಡುವಿನ ಅನೈತಿಕ ಸಂಬಧವೇ ಕೊಲೆಗೆ ಮೂಲ ಕಾರಣವಾಗಿತ್ತು. ಪದವಿ
ಶಿಕ್ಷಣ ಪಡೆಯು ತ್ತಿದ್ದ ಸಿಸ್ಟರ್ ಅಭಯಾ ಅದೇ ಪೀಯೂಸ್ ಎಕ್ಸ್ ಕಾನ್ವೆಂಟ್ ಹಾಸ್ಟೆಲ್‌ನಲ್ಲಿ ತಂಗಿದ್ದಳು. ಘಟನೆ ದಿನ ಅಭಯಾ ಬೆಳಗ್ಗೆ 4ಕ್ಕೆ ಅಭ್ಯಾಸಕ್ಕಾಗಿ ಎದ್ದವಳು ನೀರು ಕುಡಿಯಲೆಂದು ಅಡುಗೆ ಕೋಣೆಗೆ ಹೋದಳು. ಆ ಹೊತ್ತಿನಲ್ಲಿ ಅಲ್ಲಿ ಸಿಸ್ಟರ್ ಸೆಫಿ,
-.ಥಾಮಸ್ ಹಾಗೂ -. ಜೋಸ್‌ರ ಸರಸದಾಟ ನಡೆದಿತ್ತು. ಅಭಯಾ ದಿಗ್ಭ್ರಾಂತಳಾದಳು.

ಇನ್ನು ಆಕೆ ಜೀವಂತವಾಗಿದ್ದರೆ ತಮ್ಮ ಕೃತ್ಯ ಬಹುರಂಗವಾಗಿ ಮಾನ ಹರಾಜಾಗುತ್ತದೆ ಎಂದು ಭಾವಿಸಿದ ಇಬ್ಬರೂ ಪಾದ್ರಿಗಳು
ಅಭಯಾಳ ಕತ್ತು ಹಿಚುಕಿದರೆ, ಅದೇ ಹೊತ್ತಿಗೆ ಕೊಡಲಿಯಿಂದ ಸಿಸ್ಟರ್ ಸಿಫಿ ಅಭಯಾಳ ತಲೆಯ ಹಿಂಭಾಗಕ್ಕೆ ಹೊಡೆದು ಕೊಂದು, ಮೂವರೂ ಸೇರಿ ದೇಹವನ್ನು ಕಾನ್ವೆಂಟಿನ ಭಾವಿಗೆ ಎಸೆಯುತ್ತಾರೆ.

ಪ್ರಕರಣ, ತನಿಖೆಯುದ್ದಕ್ಕೂ ಅನೇಕ ಅನಿರೀಕ್ಷಿತ ತಿರುವು ಪಡೆಯುತ್ತಾ ಹೋಗಿತ್ತು. ಸಂಜೂ ಮ್ಯಾಥ್ಯೂ ಎಂಬಾತ ಕಾನ್ವೆಂಟ್ ಪಕ್ಕದ ಹೋಟೆಲ್‌ನಲ್ಲಿದ್ದು ಅಭಯಾ ಹತ್ಯೆಯ ಮುನ್ನಾ ದಿನ -.ಥಾಮಸ್ ಅನ್ನು ಕಾನ್ವೆಂಟಿನ ಆವರಣದಲ್ಲಿ ಕಂಡಿದ್ದೇನೆ ಎಂಬ ಹೇಳಿಕೆ ಕೊಟ್ಟಿದ್ದ. ಆತನ ಹೇಳಿಕೆಯ ಆಧಾರದಲ್ಲಿ -. ಥೋಮಸ್, -. ಜೋಸ್ ಹಾಗೂ ಸೆಫಿಯನ್ನು ಬಂಧಿಸಲಾಗಿತ್ತು. ಆದರೆ ಕೋರ್ಟಿನಲ್ಲಿ ಸಂಜೂ ಮ್ಯಾಥ್ಯೂ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದ.

ಹೀಗಾಗಿ ಕೋರ್ಟ್ ಆರೊಪಿಗಳನ್ನು ನಾರ್ಕೋ ಅನಾಲಿಸಿಸ್‌ಗೆ ಒಳಪಡಿಸಲು ಸಿಬಿಐಗೆ ಸೂಚಿಸಿತು. ಮೂವರನ್ನೂ ಬೆಂಗಳೂರಿ ನಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಆಪಾದಿತರ ನಾರ್ಕೋ ಅನಾಲಿಸಿಸ್ ಸೀಡಿಯನ್ನು ಪರಿಶೀಲಿಸಿದ ಬಳಿಕವೂ ಸಿಬಿಐ, ಆರೊಪ ಸಾಬೀತುಪಡಿಸುವ ಯಾವುದೇ ಅಂಶಗಳಿಲ್ಲ ಎಂದುಬಿಟ್ಟಿತು. ಅಷ್ಟಕ್ಕೇ ತೃಪ್ತರಾಗದ ಕೊಚ್ಚಿ ಚೀಫ್ ಜ್ಯುಡೀಶಿ ಯಲ್ ಮ್ಯಾಜಿಸ್ಟ್ರೇಟ್ ಸೀಡಿಗಳನ್ನು ಪರಿಶೀಲಿಸಲು ತಿರುವನಂತಪುರದ ಸೆಂಟರ್ ಫಾರ್ ಡೆವೆಲಪ್ಮೆಂಟ್ ಆಫ್  ಇಮೇಜಿಂಗ್ ಟೆಕ್ನಾಲಜಿ(ಸಿಡಿಐಟಿ) ಗೆ ಹಸ್ತಾಂತರಿಸಿದರು.

ಮೂಲ ಟೇಪ್‌ಗಳನ್ನು ಪರಿಶೀಲಿಸಿದ ಸಿಡಿಐಟಿ, ಅವನ್ನು ತಿದ್ದಲಾಗಿದೆ ಎಂದದ್ದು ಮತ್ತೊಂದು ತಿರುವಿಗೆ ಕಾರಣವಾಯಿತು.
ಹೌದು -.ಥಾಮಸ್ ಅವರ ಪರೀಕ್ಷೆ ಸಿಡಿಯನ್ನು ೩೦ ಕಡೆ ತಿದ್ದುಪಡಿ ಮಾಡಲಾಗಿತ್ತು. -. ಜೋಸ್‌ನದ್ದನ್ನು 19 ಕಡೆ ಹಾಗೂ ಸೆಫಿಯ ಸಿಡಿ 3 ಸಂದರ್ಭಗಳಲ್ಲಿ ತಿದ್ದುಪಡಿಗೊಂಡಿತ್ತು. ಹೀಗಾಗಿ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸುವಂತಿಲ್ಲವೆಂದು ಕೋರ್ಟ್ ಹೇಳಿತು.

ಈ ನಡುವೆ ಆಗ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ, ಕೇರಳ ಮೂಲದ ಜಸ್ಟೀಸ್ ಸಿರಿಯಾಕ್ ಜೋಸೆಫ್  ಬೆಂಗಳೂರಿ ನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಫಾರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ) ಭೇಟಿ ಕೊಟ್ಟು ಆರೋಪಿಗಳ ನಾರ್ಕೋ ಅನಾಲಿಸಿಸ್‌ನ ಟೇಪ್‌ಗಳನ್ನು ಪರಿಶೀಲಿಸಿದ್ದರು ಎಂಬ ಮಾಹಿತಿ ನೀಡಿತು ಸಿಬಿಐ. ವಿಧಿವಿಜ್ಞಾನ ಪ್ರಯೋಗಾಲಯದ ಅಂದಿನ
ಸಹಾಯಕ ನಿರ್ದೇಶಕ ಡಾ. ಮಾಲಿನಿ ಸಹ ಇದನ್ನು ಸಮರ್ಥಿಸಿದ್ದರು. ಅಲ್ಲಿನ ಅತಿಥಿಗಳ ನೋಂದಣಿ ಪುಸ್ತಕದಲ್ಲಿ ಕೂಡ ಅವರ ಹೆಸರು ದಾಖಲಾಗಿತ್ತು. ಈ ವಿಚಾರ ಬಹಳ ಕೋಲಾಹಲ ಎಬ್ಬಿಸಿತ್ತು.

ಸಿಡಿ ತಿದ್ದುಪಡಿಯಲ್ಲಿ ಇವರ ಪಾತ್ರ ಇದೆಯೇ ಎಂಬ ಸಂಶಯವೂ ಮೂಡಿತ್ತು. ನಂತರ ಸಿರಿಯಾಕ್ ಜೋಸೆಫ್ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಬಡ್ತಿ ಹೊಂದಿ 2012ರಲ್ಲಿ ನಿವೃತ್ತರಾದರು. ಇದರಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ನ್ಯಾ. ಸಿರಿಯಾಕ್ ಜೋಸೆಫ್ ಹೇಳಿಕೆಯನ್ನೂ ಕೊಟ್ಟರು. ಈ ನಡುವೆ ಸಿಸ್ಟರ್ ಸೆಫಿ ತನಗೆ ಪಾದ್ರಿಗಳೊಡನೆ ಲೈಂಗಿಕ ಸಂಪರ್ಕವಿರಲಿಲ್ಲ ಹಾಗೂ ತಾನಿನ್ನೂ ಕನ್ಯೆ ಎಂಬುದನ್ನು ಸಾಬೀತುಪಡಿಸಲೆಂದೇ ತನ್ನ ಕನ್ಯಾಪೊರೆಯ ಮರುಜೋಡಣೆ ಆಪರೇಶನ್‌ಗೆ (ಹಿಮ್ನೋ ಪ್ಲಾಸ್ಟಿ) ಒಳಗಾಗಿದ್ದಳು. ಈ ವಿಚಾರವನ್ನು ಆಲಪ್ಪುಳ ಮೆಡಿಕಲ್ ಕಾಲೇಜಿನ ಪೋಲೀಸ್ ಸರ್ಜನ್ ಡಾ.ರಮಾ ಹಾಗೂ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಲಲಿತಾಂಬಿಕಾ ಕರುಣಾಕರನ್ ದೃಢಪಡಿಸಿದ್ದರು.

ಪ್ರಕರಣದ ನಿಜವಾದ ತಿರುವ ಆರಂಭವಾಗಿದ್ದು ಇಲ್ಲೆ. ಈ ಸಂದರ್ಭದಲ್ಲಿ ಕೋರ್ಟ್ ಸಾಂದರ್ಭಿಕ ಸಾಕ್ಷ್ಯವನ್ನು ಪರಿಗಣಿಸಲು ನಿರ್ಧರಿಸಿ ಅಡಕೆ ಕಳ್ಳ ರಾಜು ಹೇಳಿಕೆಯನ್ನು ಪರಿಗಣಿಸಲು ನಿರ್ಧರಿಸಿತು. ಅಭಯಾ ಹತ್ಯೆ ದಿನ ಬೆಳಗ್ಗೆ 4 ಗಂಟೆಗೆ ರಾಜು ಕಾನ್ವೆಂಟಿನ ಸಿಡಿಲು ನಿರೋಧಕದಲ್ಲಿನ ತಾಮ್ರ ಕದಿಯಲೆಂದು ಅಲ್ಲಿ ಅಡ್ಡಾಡುತ್ತಿದ್ದ. ಈ ವೇಳೆ ರಾಜು, ಕಾನ್ವೆಂಟಿನ ಆವರಣ ದೊಳಗೆ -.ಥಾಮಸ್ ಹಾಗೂ -. ಜೋಸ್ ಅವರನ್ನು ಕಂಡಿದ್ದ. ಹಾಗೂ ಈ ಕುರಿತು ಹೇಳಿಕೆಯನ್ನೂ ನೀಡಿದ್ದ. ಬಹಳಷ್ಟು ಸಾಕ್ಷಿಗಳು ಆಮಿಷ ಹಾಗೂ ಒತ್ತಡಗಳಿಗೆ ಸಿಲುಕಿ ತಮ್ಮ ಹೇಳಿಕೆಗಳನ್ನು ಬದಲಿಸಿ ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿದ್ದರು. ಆದರೆ ಸ್ವತಃ ಕಳ್ಳನಾಗಿದ್ದರೂ ರಾಜು ಯಾವುದಕ್ಕೂ ಬಲಿಯಾಗದೇ ತನ್ನ ಹೇಳಿಕೆಗೆ ಕೊನೆಯವರೆಗೂ ಬದ್ಧನಾಗಿಯೇ ಉಳಿದ.

೨೦೧೯ರಲ್ಲಿ ವಿಚಾರಣೆ ಸಂದರ್ಭದಲ್ಲಿ ಆಡಕ ರಾಜು ಹೇಳಿಕೆ ಬದಲಿಸಲು ತನಗೆ 2 ಲಕ್ಷ ರು. ಆಮಿಷವನ್ನೊಡ್ಡಲಾಗಿತ್ತು. ಅದೇ ರೀತಿ ಪೋಲಿಸ್ ಠಾಣೆಯಲ್ಲಿ ಭಾರೀ ಚಿತ್ರ ಹಿಂಸೆಯನ್ನೂ ಕೊಡಲಾಗಿತ್ತು ಎಂದು ಹೇಳಿಕೆ ನೀಡಿದ್ದಾನೆ. ಪ್ರಜ್ಞಾವಂತ ಸಮಾಜ ಹಾಗೂ ಸುಶಿಕ್ಷಿತರೆಂದು ಕರೆಸಿಕೊಳ್ಳುತ್ತಿದ್ದ ಜನರು ಸತ್ಯವನ್ನು ಮುಚ್ಚಿ ಹಾಕುತ್ತಿದ್ದಾಗ ಅಡಕೆ ಕಳ್ಳನೊಬ್ಬ ಸತ್ಯದ ಪರವಾಗಿ
ಗಟ್ಟಿಯಾಗಿ ನಿಂತ. ಅಡಕ ರಾಜುವಿನ ಸಾಕ್ಷಿಯನ್ನು ಪ್ರಮುಖ ಆಧಾರವಾಗಿ ಪರಿಗಣಿಸಿದ ಕೋರ್ಟ್ ಡಿಸೆಂಬರ್ ೨೦೨೦ರ ಕ್ರಿಸ್ಮಸ್ ಮುನ್ನಾ ದಿನ ಪಾದ್ರಿ ಥಾಮಸ್ ಕೊಟ್ಟೂರ್ ಹಾಗೂ ಸಿಸ್ಟರ್ ಸ್ನೆಯನ್ನು ಕೊಲೆಗಾರರೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿತು.
ಸಮರ್ಪಕ ಸಾಕ್ಷಿಯ ಕೊರತೆಯಿಂದ -.ಜೋಸ್‌ಗೆ ಶಿಕ್ಷೆ ತಪ್ಪಿತು. ಈ ಕ್ರಿಸ್‌ಮಸ್ ಬಂದರೆ ತೀರ್ಪು ಬಂದು ವರ್ಷವಾಗುತ್ತಿದೆ.

ಸಿಸ್ಟರ್ ಅಭಯಾಗೆ ನ್ಯಾಯ ಸಿಗಲು ಜೋಮೋನ್ ಪುತೆನ್ಪುರಕ್ಕಲ್ ಅವರ ನಿರಂತರ ಹೋರಾಟವೇ ಕಾರಣ. ಹೋರಾಟ ಆರಂಭಿ ಸಿದ ಸಂದರ್ಭ ಅವರ ವಯಸ್ಸು 24. ಶಿಕ್ಷೆ ಘೋಷಣೆಯಾದಾಗ 52. ಹೋರಾಟಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡ ಜೋಮೋನ್‌ಗೆ ವಿವಾಹವಾಗಲೂ ಸಮಯ ಸಿಗಲಿಲ್ಲ. ಅವರ ಹೋರಾಟ ಚರ್ಚ್ ಗಳ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ವಾಗಿದ್ದುದರಿಂದ ಇಡೀ ಕ್ರೈಸ್ತ ಸಮುದಾಯವೇ ಅವರಿಗೆ ಒಂದು ರೀತಿಯ ಬಹಿಷ್ಕಾರ ಹಾಕಿತ್ತು. ಸಹೋದರರೂ ದೂರ ಹೋದರು. ಅವರ ತಂದೆ 2012ರಲ್ಲಿ ತೀರಿಕೊಂಡಾಗ ತಂದೆಯ ಹಣೆಗೊಂದು ಮುತ್ತು ಕೊಡಲೂ ಪಾದ್ರಿಯೊಬ್ಬ ಬಿಡಲಿಲ್ಲ.
ಆದರೂ ಜೋಮೋನ್ ಹೋರಾಟ ವ್ಯರ್ಥವಾಗಲಿಲ್ಲ.

ಜೋಮೋನ್ ಪುತೆನ್ಪುರಕ್ಕಲ್ ತಮ್ಮ 28 ವರ್ಷಗಳ ಸುದೀರ್ಘ ಹೋರಾಟದ ನಂತರ ಸಿಸ್ಟರ್ ಅಭಯಾಳ ಕೊಲೆಯ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಕೊನೆಗೂ ಯಶಸ್ವಿಯಾದರು.