ವೇದಾಂತಿ ಹೇಳಿದ ಕಥೆ
ಶಶಾಂಕ್ ಮುದೂರಿ
ಪಂಜಾಬ್ ಪ್ರಾಂತ್ಯದಲ್ಲಿ ಜಲಹನ್ ಎಂಬ ಗುರು ಇದ್ದರು. ಅಧ್ಯಾತ್ಮ ಚಿಂತನೆಗಳಲ್ಲಿ ಸದಾ ಮುಳುಗಿರುತ್ತಿದ್ದ ಅವರ ಮನದಲ್ಲಿ, ಜನರು ನಡೆಸುತ್ತಿರುವ ಮೂಢನಂಬಿಕೆಗಳ ಕುರಿತು ಸಾಕಷ್ಟು ಪ್ರಶ್ನೆಗಳು ಏಳುತ್ತಿದ್ದವು. ಜನಸಾಮಾನ್ಯರು ಮೂಢನಂಬಿಕೆ ಗಳಂತಹ ನಾನಾ ಸಂಪ್ರದಾಯಗಳನ್ನು ಅನುಸರಿಸುವುದನ್ನು ಅವರು ಇಷ್ಟಪಡು ತ್ತಿರಲಿಲ್ಲ.
ಆದ್ದರಿಂದ ಅವರು ಸ್ಥಳೀಯರೊಂದಿಗೆ ಬೆರೆಯದೇ ತಮ್ಮ ಪಾಡಿಗೆ ತಾವು ಅಧ್ಯಾತ್ಮ ಸಾಧನೆ ಮಾಡುತ್ತಿದ್ದರು. ಆದರೆ ಆ ಗುರುವಿನ ಪತ್ನಿಗೆ ಸ್ಥಳೀಯ ಆಚರಣೆಗಳು ಎಂದರೆ ಬಹಳ ನಿಷ್ಠೆ. ಈ ದಂಪತಿಗೆ ಒಬ್ಬ ಮಗಳಿದ್ದಳು. ಆಕೆಗೆ ಮದುವೆ ಮಾಡುವ ವಿಚಾರ ಬಂದಾಗ, ಪತ್ನಿಯು ಗುರುವಿಗೆ ಹೇಳಿದಳು ‘ದೇವಾಲಯದಲ್ಲಿರುವ ಪೂಜಾರಿಯವರು ಒಳ್ಳೆಯ ರೀತಿಯಲ್ಲಿ ಶಾಸ್ತ್ರ ಹೇಳುತ್ತಾರೆ, ಮದುವೆಗೆ ಸೂಕ್ತ ವರನನ್ನು ಗೊತ್ತುಮಾಡಿ, ಉತ್ತಮ ದಿನವನ್ನು ಲೆಕ್ಕ ಹಾಕಿ ಹೇಳುತ್ತಾರೆ.
ಬೇಗನೆ ಹೋಗಿ ಅವರ ಬಳಿ ನಮ್ಮ ಮಗಳ ಜಾತಕ ತೋರಿಸಿ’. ಆದರೆ ಆ ಗುರುವಿಗೆ ಶಾಸ ಕೇಳುವುದರಲ್ಲಿ ಅಷ್ಟೇನೂ ನಂಬಿಕೆ ಇರಲಿಲ್ಲ. ಜನರು ತಮ್ಮ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದರೆ, ಮಿಕ್ಕೆಲ್ಲವನ್ನೂ ಮೇಲಿರುವವನು ನೋಡಿಕೊಳ್ಳು ತ್ತಾನೆ ಎಂಬುದು ಅವರ ಅಚಲ ನಂಬಿಕೆ. ನಮ್ಮಷ್ಟಕ್ಕೆ ಒಳ್ಳೆಯ ಜೀವನ ನಡೆಸಿದರೆ, ಕೊನೆ ಯಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಅವರು ಕಂಡುಕೊಂಡಿದ್ದರು. ಆದರೆ ಪತ್ನಿಯು ಮಗಳ ಜಾತಕದ ಕುರಿತು ಪದೇ ಪದೇ ನೆನಪಿಸತೊಡಗಿದಳು.
ಆಕೆಯ ಒತ್ತಾಯಕ್ಕೆ ಕಟ್ಟುಬಿದ್ದು, ಒಬ್ಬ ಉತ್ತಮ ಶಾಸ ಹೇಳುವವರ ಮನೆಗೆ ಹೋದರು. ಶಾಸ್ತ್ರ ಹೇಳುವವರಿಗೆ ಒಳ್ಳೆಯ ಹೆಸ ರಿತ್ತು. ಅವರು ಗುರುತು ಮಾಡಿದ ದಿನ ಮದುವೆಯಾದರೆ, ಆ ಮದುವೆಯು ದೀರ್ಘಕಾಲ ನೆಮ್ಮದಿಯಿಂದ ಕೂಡಿರುತ್ತದೆ ಎಂದು ಎಲ್ಲರೂ ನಂಬಿದ್ದರು. ಗುರುಗಳು ಶಾಸ್ತ್ರ ಹೇಳುವವರ ಮನೆಗೆ ಹೋದಾಗ ಜನಜಂಗುಳಿ ಇತ್ತು. ಬಹಳಷ್ಟು ಜನರು ಶಾಸ ಕೇಳಲು ಬಂದಿದ್ದರು. ಅವರು ಅಲ್ಲೇ ಕಾದು ಕುಳಿತಿದ್ದಾಗ, ಆ ಮನೆಯಲ್ಲಿ ಕಡಿಮೆ ವಯಸ್ಸಿನ ಒಬ್ಬಳು ವಿಧವೆಯನ್ನು ಕಂಡರು. ಆಕೆ ಬೇರಾರೂ ಆಗಿರದೆ, ಶಾಸ್ತ್ರ ಹೇಳುವವರ ಮಗಳೇ ಆಗಿದ್ದಳು.
‘ಓಹೋ, ಈ ವಿಚಾರವನ್ನು ತುಸು ಯೋಚಿಸಲೇ ಬೇಕು.’ ಎಂದುಕೊಂಡರು ಗುರುಗಳು. ‘ಶಾಸ ಹೇಳುವವರು ತಮ್ಮ ಜ್ಞಾನವನ್ನು ಉಪಯೋಗಿಸಿ, ಶ್ರದ್ಧೆಯಿಂದ ಎಲ್ಲರ ಜಾತಕ ನೋಡಿ, ಮದುವೆಯ ದಿನವನ್ನು ಗೊತ್ತು ಮಾಡುತ್ತಾರೆ. ಅದಕ್ಕೆಂದು ಅವರು
ಶುಲ್ಕವನ್ನೂ ತೆಗೆದುಕೊಳ್ಳುವುದಿಲ್ಲ. ಅವರು ಒಳ್ಳೆಯ ವ್ಯಕ್ತಿಯೇನೋ ನಿಜ. ಆದರೆ, ಅವರ ಮಗಳ ಮದುವೆಯ ದಿನವನ್ನು ಅವರು ಗೊತ್ತು ಮಾಡಿದ್ದರೂ, ಅದೇಕೆ ಆಕೆಯ ಬದುಕಿನಲ್ಲಿ ದುರಂತ ಎರಗಿತು?’ ಎಂಬ ಪ್ರಶ್ನೆ ಗುರುಗಳಲ್ಲಿ ಮೂಡಿತು.
ಇದನ್ನೇ ಯೋಚಿಸುತ್ತಾ, ಇಲ್ಲಿಗೆ ಇನ್ನೊಮ್ಮೆ ಬಂದರಾಯಿತು ಎಂದು ತಮ್ಮ ಮನೆಗೆ ಹೊರಟರು. ಅರ್ಧ ದಾರಿ ಬಂದಾಗ, ಒಂದು
ಮನೆಯ ಮುಂದೆ ಬಹಳಷ್ಟು ಜನ ಸೇರಿದ್ದರು. ಹಲವರು ಅಳುತ್ತಿದ್ದರು. ಮನೆಯ ಮುಂದೆ ನಿಂತಿದ್ದ ವ್ಯಕ್ತಿಯನ್ನು ಕರೆದು ‘ಯಾಕೆ
ಇಷ್ಟು ಜನ ಅಳುತ್ತಿದ್ದಾರೆ? ಏನು ಸಮಾಚಾರ?’ ಎಂದು ವಿಚಾರಿಸಿದರು. ‘ಅಯ್ಯೋ ಸ್ವಾಮಿ, ನಿಮಗೆ ಗೊತ್ತಿಲ್ಲವೇ! ನಮ್ಮ ಪಟ್ಟಣದ ಅತ್ಯುತ್ತಮ ವೈದ್ಯರಾಗಿರುವ ಇವರ ಮಗ ಇವತ್ತು ಸತ್ತು ಹೋಗಿದ್ದಾನೆ. ನಿನ್ನೆ ಜ್ವರ ಬಂದಿತ್ತು, ಇವತ್ತು ಆತ ಇಲ್ಲ! ಎಂತಹಾ ದುರಂತ. ಈ ವೈದ್ಯರು ನಮಗೆಲ್ಲಾ ಔಷಧ ನೀಡಿ, ನಮ್ಮ ಪ್ರಾಣ ಉಳಿಸಿದವರು’ ಎಂದ ಆ ವ್ಯಕ್ತಿ.
ಗುರುಗಳು ಅಲ್ಲೇ ಯೋಚಿಸುತ್ತಾ ನಿಂತರು. ಈ ಜಗದ ನಿಯಮಗಳೇನು, ಇವುಗಳನ್ನು ಹಾಕಿದವರು ಯಾರು, ಇಲ್ಲಿ ಏಕೆ ಹೀಗೆ ನಡೆಯುತ್ತಿದೆ ಎಂಬುದೇ ಅವರ ಮನದ ಪ್ರಶ್ನೆ. ‘ಈ ವೈದ್ಯರು ನನಗೂ ಗೊತ್ತು. ಎಲ್ಲಾ ರೀತಿಯ ನಾಟಿ ಔಷಧವನ್ನು ಬಲ್ಲವರು,
ಎಲ್ಲರಿಗೂ ಉಚಿತವಾಗಿ ಔಷಧ ನೀಡುವವರು. ಅದೆಷ್ಟೋ ಜನರ ಜೀವ ಉಳಿಸಿದವರು. ಆದರೆ, ಅವರ ಮಗನಿಗೆ ಉತ್ತಮ ಔಷಧ
ನೀಡಿದರೂ, ಆತನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಇದೇನು ವಿಪರ್ಯಾಸ!’
ಇದನ್ನೇ ಯೋಚಿಸುತ್ತಾ, ಮನೆಗೆ ಬಂದು ಧ್ಯಾನಕ್ಕೆ ಕುಳಿತರು. ಧ್ಯಾನದ ಸಮಯದಲ್ಲಿ ಅವರಿಗೆ ಅದಾವುದೋ ವಾಣಿ ಕೇಳಿಸಿದಂತೆ
ಅನಿಸಿತು ‘ಅದೇಕೆ ಅಷ್ಟು ಯೋಚನೆ ಮಾಡುತ್ತಿರುವೆ? ಈ ಲೋಕದಲ್ಲಿ ಮೇಲೊಬ್ಬನಿದ್ದಾನಲ್ಲಾ, ಅವನು ನಡೆಸಿದಂತೆ ಎಲ್ಲವೂ
ನಡೆಯುತ್ತದೆ. ಮೇಲಿನವನ ಕೃಪೆ ಮತ್ತು ಮನುಷ್ಯನ ಪ್ರಯತ್ನ – ಇವೆರಡರಲ್ಲಿ ಯಾವುದು ದೊಡ್ಡದು ನೀನೇ ಯೋಚಿಸು.’ ಗುರುಗಳು ತಕ್ಷಣ ಕಣ್ಣು ತೆರೆದರು. ಎಲ್ಲವೂ ಅರ್ಥವಾದಂತೆ ನಸುನಕ್ಕರು.