Friday, 22nd November 2024

ತಮ್ಮ ಸೋಲಬಾರದು, ಪಕ್ಷದ ಅಭ್ಯರ್ಥಿ ಗೆಲ್ಲಬೇಕು: ಜಾರಕಿಹೊಳಿಯ ಸಂಕಷ್ಟ

ramesh jarkiholi

ವಿಶ್ವವಾಣಿ ವಿಶೇಷ

ಬಿಜೆಪಿ ಸೋತರೆ ಭವಿಷ್ಯ ಕಷ್ಟ, ಕಾಂಗ್ರೆಸ್ ಗೆದ್ದರೆ ಕಡು ವೈರಿ ಮುಂದೆ ಮಂಡಿಯೂರುವ ಪರಿಸ್ಥಿತಿ

ಬೆಂಗಳೂರು: ‘ಬಿಜೆಪಿ ಅಭ್ಯರ್ಥಿ ಗೆಲ್ಲಿಸದಿದ್ದರೆ ಪಕ್ಷದಲ್ಲಿ ಮುಂದೆ ಭವಿಷ್ಯವಿಲ್ಲ. ಸಹೋದರ ಸೋತರೆ ತಾನು ಯಾರನ್ನು ವಿರೋಧಿಸಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದೇನೋ, ಅವರ ಮುಂದೆಯೇ ಮಂಡಿಯೂರಿದಂತಾಗುತ್ತದೆ’. ಇದು ಬೆಳಗಾವಿ ಜಿಲ್ಲೆ ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸದ್ಯದ ರಾಜಕೀಯ ಪರಿಸ್ಥಿತಿ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಉರುಳಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮೆರೆಯುತ್ತಿರುವ ರಮೇಶ್, ಮೇಲ್ಮನೆ ಚುನಾವಣೆಯಲ್ಲಿ ಸಹೋದರನನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಬೆಳಗಾವಿ ದ್ವಿಸದಸ್ಯ ಕ್ಷೇತ್ರವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಬ್ಬರು ಅಭ್ಯರ್ಥಿ ಗಳನ್ನು ಕಣಕ್ಕಿಳಿಸುವ ಮೂಲಕ ೨ ಸ್ಥಾನಗಳನ್ನು ಹಂಚಿಕೊಳ್ಳಲು ಮುಂದಾಗಿತ್ತು. ಆದರೆ, ರಮೇಶ್ ಜಾರಕಿಹೊಳಿ ತನ್ನ ಸಹೋದರ ಲಖನ್ ಜಾರಕಿಹೊಳಿಗೆ ಬಿಜೆಪಿ
ಟಿಕೆಟ್ ಕೊಡಿಸಲು ಕೊನೆಯವರೆಗೆ ಪ್ರಯತ್ನ ನಡೆಸಿ ವಿಫಲರಾಗಿ ಪಕ್ಷೇತರ ಅಭ್ಯರ್ಥಿ ಯಾಗಿ ಕಣಕ್ಕಿಳಿಸಿದ್ದಾರೆ. ಇದರಿಂದ ಎರಡು ಸ್ಥಾನಗಳಿಗೆ ತ್ರಿಕೋನ ಸ್ಪರ್ಧೆ ಕಾಣಿಸಿಕೊಂಡಿದೆ.

ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬದ ರಾಜಕೀಯ ವೈಖರಿಯೇ ಭಿನ್ನ. ಯಾರೇ ಅಧಿಕಾರದಲ್ಲಿರಲಿ, ಅಲ್ಲಿ ಜಾರಕಿ ಹೊಳಿ ಕುಟುಂಬದ ಯಾರಾದರೂ ಒಬ್ಬರು ಇರಲೇ ಬೇಕು ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ಹೀಗಾಗಿ ಕುಟುಂಬದ ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ಪೈಕಿ ಯಾರಾದರೂ ಒಬ್ಬರು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಹಂಚಿಕೆಯಾಗಿದ್ದರು. ಆದರೆ, ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಕುಂದಿದ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು.

ಕಾಂಗ್ರೆಸ್‌ನಲ್ಲಿದ್ದ ರಮೇಶ್ ಜಾರಕಿಹೊಳಿ

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವನ್ನು ಉರುಳಿಸಿ ಬಿಜೆಪಿ ಸೇರಿದ್ದರು. ಕಾಂಗ್ರೆಸ್‌ನಲ್ಲಿದ್ದ ಲಖನ್ ಜಾರಕಿಹೊಳಿಯನ್ನು ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿಗೆ ಕರೆತರಲು ಯತ್ನಿಸಿ ಅದು ಸಾಧ್ಯವಾಗದೆ ಪಕ್ಷೇತರರಾಗಿ ಕಣಕ್ಕಿಳಿಸಿದ್ದಾರೆ.

ಕಾಂಗ್ರೆಸ್ ಗೆದ್ದರೂ ರಮೇಶ್ ಸೋತಂತೆ: ತ್ರಿಕೋನ ಸ್ಪರ್ಧೆಯಲ್ಲಿ ಎರಡು ಸ್ಥಾನಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಗೆದ್ದು ಲಖನ್ ಜಾರಕಿಹೊಳಿ ಸೋತರೆ ಆಗ ರಮೇಶ್ ಜಾರಕಿಹೊಳಿ ಜಿಲ್ಲೆಯಲ್ಲಿ ತಮ್ಮ ರಾಜಕೀಯ ಬದ್ಧ ವಿರೋಧಿ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬದ ಮುಂದೆ ಮಂಡಿಯೂರಬೇಕಾದ ಪರಿಸ್ಥಿತಿ ಬರಲಿದೆ.

ಏಕೆಂದರೆ, ರಮೇಶ್ ಜಾರಕಿಹೊಳಿ ಕಾಂಗ್ರೆಸ್ ತೊರೆಯಲು ಮುಖ್ಯ ಕಾರಣವೇ ಲಕ್ಷ್ಮೀ ಹೆಬ್ಬಾಳ್ಕರ್. ಪಕ್ಷದಲ್ಲಿ ಅವರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬ ಕಾರಣಕ್ಕೆ ಬಂಡೆದಿದ್ದ ರಮೇಶ್, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಉರುಳಿಸಿ ಬಿಜೆಪಿ ಸೇರಿ, ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಈಗಲೂ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ಮಧ್ಯೆ ಸಮರ ಮುಂದು ವರಿದಿದ್ದು, ವೈಯಕ್ತಿಕ ಮಟ್ಟಕ್ಕೆ ಇಳಿದಿದೆ.

ಪ್ರಸ್ತುತ ಮೇಲ್ಮನೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವುದು ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ.
ರಮೇಶ್ ಅವರ ಮತ್ತೊಬ್ಬ ಸಹೋದರ ಸತೀಶ್ ಜಾರಕಿಹೊಳಿ ಕಾಂಗ್ರೆಸ್‌ನಲ್ಲಿರುವುದರಿಂದ ಅನಿವಾರ್ಯವಾಗಿ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲೇ ಬೇಕು.

ಇದು ರಮೇಶ್ ಜಾರಕಿಹೊಳಿ ಅವರಿಗೆ ಸಂಕಷ್ಟ ತಂದೊಡ್ಡಿದೆ. ಸತೀಶ್ ಜಾರಕಿಹೊಳಿ ಪಟ್ಟು ಹಿಡಿದು ಕುಳಿತು ಕಾಂಗ್ರೆಸ್
ಅಭ್ಯರ್ಥಿಯನ್ನು ಗೆಲ್ಲಿಸಿದರೆ ತಾವು ಇಷ್ಟು ದಿನ ವಿರೋಧಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬದ ಮುಂದೆ ಸೋತು ತಲೆತಗ್ಗಿಸ ಬೇಕಾಗುತ್ತದೆ. ಇದರಿಂದ ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯವನ್ನು ಕಳೆದುಕೊಂಡಂತಾಗುತ್ತದೆ.

ಸಹೋದರನನ್ನು ಗೆಲ್ಲಿಸಲು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದರೆ ಮುಂದೆ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ಅಥವಾ
ಅಧಿಕಾರ ಸಿಗುವುದು ಸಾಧ್ಯವಿಲ್ಲ. ಮತ್ತೆ ಕಾಂಗ್ರೆಸ್‌ಗೆ ಹೋಗುವ ಪರಿಸ್ಥಿತಿಯಲ್ಲೂ ಇಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿ ಪರಿಸ್ಥಿತಿ ಇತ್ತ ಧರೆ, ಅತ್ತ ಪುಲಿ ಎಂಬಂತಾಗಿದೆ.

ಇಕ್ಕಟ್ಟಿನಲ್ಲಿ ರಮೇಶ್
ಇದುವೇ ರಮೇಶ್ ಜಾರಕಿಹೊಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಆತಂಕಕ್ಕೊಳಗಾಗಿರುವ ಬಿಜೆಪಿ, ಹೇಗಾದರೂ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ರಮೇಶ್ ಜಾರಕಿಹೊಳಿಗೆ ಎಚ್ಚರಿಕೆಯ ಸಂದೇಶ
ರವಾ ನಿಸಿದೆ. ಲಖನ್ ಜಾರಕಿಹೊಳಿಯನ್ನು ಗೆಲ್ಲಿಸುವ ನಿಮ್ಮ ಪ್ರಯತ್ನದಿಂದ ಬಿಜೆಪಿ ಅಭ್ಯರ್ಥಿ ಸೋತರೆ ಮುಂದೆ ನೀವು ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಹೀಗಾಗಿ ಬಿಜೆಪಿ ಬೆಂಬಲಿತ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಮೊದಲ ಪ್ರಾಶಸ್ತ್ಯದ ಮತಗಳನ್ನು ಬಿಜೆಪಿಗೆ ಹಾಕಿ ಎರಡನೇ ಪ್ರಾಶಸ್ತ್ಯದ ಮತಗಳನ್ನು ಲಖನ್ ಜಾರಕಿ ಹೊಳಿಗೆ ಹಾಕಿ ಎಂದು
ಬಹಿರಂಗವಾಗಿ ಹೇಳಲಾರಂಭಿಸಿದ್ದಾರೆ.