Thursday, 12th December 2024

ಮಾನಸ ಸರೋವರದ ಹಂಸ

ವೇದಾಂತಿ ಹೇಳಿದ ಕಥೆ

ಶಶಾಂಕ್ ಮುದೂರಿ

ಮಾನಸ ಸರೋವರದಲ್ಲಿಹಲವು ಹಂಸಗಳು ವಾಸವಾಗಿದ್ದವು. ಒಮ್ಮೆ ಆ ಗುಂಪಿನ ಒಂದು ಹಂಸಕ್ಕೆ ಒಂದು ಕುತೂಹಲ ಹುಟ್ಟಿತು. ತಮ್ಮ ಸರೋವರದಿಂದ ಬಹು ದೂರ ಸಾಗಿ, ಹಿಮಾಲಯದ ಪರ್ವತಗಳನ್ನು ದಾಟಿದರೆ ಏನಿರಬಹುದು ಎಂಬ ಕುತೂಹಲ ಅದು.

ಒಂದು ಮುಂಜಾನೆ ತನ್ನ ವಿಶಾಲವಾದ ರೆಕ್ಕೆಗಳನ್ನು ಬಿಡಿಸಿ, ಪರ್ವತ ಶಿಖರಗಳನ್ನು ದಾಟಿ ಭಾರತದ ಬಯಲಿನತ್ತ ಸಾಗಿತು. ತುಂಬಾ ಹೊತ್ತು ಹಾರಿದ ನಂತರ, ಹಳ್ಳಿಗಳು, ಕೆರೆಗಳು ಕಾಣಿಸಿದವು. ಒಂದು ಕೆರೆಯ ಬಳಿ ಹಲವು ಹಕ್ಕಿಗಳನ್ನು ಕಂಡು ಹಂಸವು ನಿಧಾನವಾಗಿ ಆ ಕೆರೆಯ ಬಳಿ ಇಳಿಯಿತು. ಅಲ್ಲಿ ಹತ್ತಾರು ಕೊಕ್ಕರೆ ಗಳು ಮೀನು ಹಿಡಿಯುತ್ತಾ ನಿಂತಿದ್ದವು. ಹಂಸವು ಕೆರೆಯ ಅಂಚಿನಲ್ಲಿ ಇಳಿದು, ಆ ಕೊಕ್ಕರೆಗಳತ್ತ ಕುತೂಹಲ ದಿಂದ ಸಾಗಿತು. ಭವ್ಯ ನಿಲುವಿನ ಹಂಸವನ್ನು ಕಂಡು ಕೊಕ್ಕರೆಗಳಿಗೆ ಕುತೂಹಲವಾಯಿತು. ಒಂದು ಕೊಕ್ಕರೆ ಯು ಹಂಸದ ಬಳಿ ಬಂದು “ಅಯ್ಯಾ ಆಗಂತುಕ, ನೀನು ಯಾರು?” ಎಂದು ಕೇಳಿತು.

“ನಾನು ಹಂಸ”
“ಹಂಸ? ಹಂಸಗಳ ಕುರಿತು ಕೇಳಿದ್ದೇವೆ. ನೀನು ಎಲ್ಲಿಂದ ಬಂದೆ?” ಎಂದು ಕೊಕ್ಕರೆ ಕೇಳಿತು. “ನಾನು ಮಾನಸ ಸರೋವರದದಿಂದ ಬಂದೆ” ಎಂದಿತು ಹಂಸ. “ಮಾನಸ ಸರೋವರ ಎಲ್ಲಿದೆ?” ಎಂದು ಇನ್ನೊಂದು ಕೊಕ್ಕರೆ ನಡುವೆ ಬಾಯಿ ಹಾಕಿತು. “ಕೈಲಾಸ ಪರ್ವತದ ಹತ್ತಿರ ಇರುವ ಸರೋವರವೇ ಮಾನಸ
ಸರೋವರ. ನಾನು ವಾಸಿಸುವ ಸರೋವರ ಮತ್ತು ಕೈಲಾಸ ಪರ್ವತ ಎರಡೂ ಪವಿತ್ರ ಎನಿಸಿವೆ” ಎಂದು ಹಂಸ ಹೇಳಿತು. “ಮಾನಸ ಸರೋವರದ ಕುರಿತು ಇದೇ ಮೊದಲ ಸಲ ನಮಗೆ ಗೊತ್ತಾಗಿದ್ದು. ಆ ಕೆರೆಯು ನಮ್ಮ ಕೆರೆಗಿಂತ ದೊಡ್ಡದೇ ಅಥವಾ ಚಿಕ್ಕದೇ?” ಎಂದು ಮರಿ ಕೊಕ್ಕರೆ ಕೇಳಿತು.

“ಮಾನಸ ಸರೋವರವು ಬಹಳ ದೊಡ್ಡದು. ಅದರ ಸ್ವರೂಪವು ಈ ಕೆರೆಗಿಂತ ಬಹಳ ಭಿನ್ನ ಎಂದು ಹಂಸ ವಿನಯದಿಂದ ಹೇಳಿತು. “ಭಿನ್ನ ಅಂದರೆ ಹೇಗೆ? ನಿನಗೆ ಈ ಸರೋವರದ ಕುರಿತು ಗೊತ್ತೇ? ಪ್ರತಿ ದಿನ ಇಲ್ಲಿ ಕನಿಷ್ಠ ಐವತ್ತು ಎಮ್ಮೆಗಳು ಬಂದು ಸ್ನಾನ ಮಾಡುತ್ತವೆ. ಹಳ್ಳಿಯ ಜನರು ಬಂದು ಪಾತ್ರೆ ತೊಳೆಯುತ್ತಾರೆ,
ಬಟ್ಟೆ ಒಗೆಯುತ್ತಾರೆ.” ಎಂದಿತು ಇನ್ನೊಂದು ಕೊಕ್ಕರೆ. “ಮಾನಸ ಸರೋವರದಲ್ಲಿ ಯಾವುದೇ ಹಸು, ಎಮ್ಮೆಗಳು ಸ್ನಾನ ಮಾಡಲು ಬರುವುದಿಲ್ಲ. ಅದರ ಹತ್ತಿರ ಹಳ್ಳಿಯೂ ಇಲ್ಲ. ಆದರೆ, ಮಾನಸ ಸರೋವರದಲ್ಲಿ ರಾತ್ರಿ ಹೊತ್ತು ಗಂಧರ್ವರು, ಕಿನ್ನರರು ಬಂದು ಸ್ನಾನ ಮಾಡುತ್ತಾರೆ. ಒಮ್ಮೊಮ್ಮೆ ಅವರು ಸಂಗೀತವನ್ನು ಹಾಡುವುದನ್ನು ಸಹ ನಾನು ಕೇಳಿದ್ದೇನೆ” ಎಂದಿತು ಹಂಸ.

“ಗಂಧರ್ವರೆ? ಹಾಗೆಂದರೆ ಯಾರು? ಹೋಗಲಿ, ಮಾನಸ ಸರೋವರದಲ್ಲಿ ನಮ್ಮ ಕೆರೆಯಲ್ಲಿರುವಂತೆ ಜಲ ಸಸ್ಯಗಳು ಇವೆಯೆ? ಆ ಸಸ್ಯಗಳು ಬಿಡುವ ಪುಟಾಣಿ ಹೂವುಗಳು ಇವೆಯೆ?” “ಇಲ್ಲ. ಆದರೆ ಅಲ್ಲಿ ಚಿನ್ನದ ಬಣ್ಣದ ಕಮಲಗಳಿವೆ”

“ನಿನ್ನ ಆಹಾರವೇನು? ಇಲ್ಲಿ ಹೇರಳವಾಗಿ ಮೀನು ಮತ್ತು ಕಪ್ಪೆಗಳು ಸಿಗುತ್ತವೆ. ನಿನಗೆ ಅಲ್ಲೂ ಸಿಗುತ್ತವೆಯೋ?” “ನಾನು ಮತ್ತು ನನ್ನ ಗೆಳೆಯರೆಲ್ಲರೂ ಕಮಲದ ಹೂವಿನ ಮಕರಂದ ಮತ್ತು ಕಮಲದ ಹಣ್ಣನ್ನು ತಿಂದು ಜೀವಿಸುತ್ತೇವೆ” ಎಂದಿತು ಹಂಸ. “ಅಂದರೆ, ನೀನು ಕೀಟಗಳನ್ನು, ಕ್ರಿಮಿಗಳನ್ನು, ಏಡಿಗಳನ್ನು ತಿಂದೇ ಇಲ್ಲವೆ?” “ಹಾಗೆಂದರೇನು?” ಎಂದು ಹಂಸ ಅಚ್ಚರಿಯಿಂದ ಕೇಳಿತು.

“ಓಹ್. . ನಿನ್ನ ಜೀವನವೇ ವ್ಯರ್ಥ. ರುಚಿ ರುಚಿಯಾದ ಏಡಿಗಳನ್ನು ಮತ್ತು ಕೀಟಗಳನ್ನು ನೀನು ತಿಂದಿಲ್ಲವೆ? ಅದನ್ನು ತಿನ್ನದ ಪಕ್ಷಿಯ ಜನ್ಮವೇ ಬರಡು ಎಂಬುದೇ ನಮ್ಮೆಲ್ಲರ ದೃಢ ಅಭಿಪ್ರಾಯ. ಮೀನು, ಏಡಿ ಇಲ್ಲದ ಮಾನಸ ಸರೋವರವೂ ನಮ್ಮ ದೃಷ್ಟಿಯಲ್ಲಿ ಕ್ಷುಲ್ಲಕವಾದದ್ದು.. ಅಲ್ವೆ ಗೆಳೆಯರೆ?” ಎಂದು ಕೊಕ್ಕರೆ ಗುಂಪಿನ ನಾಯಕ ದೊಡ್ಡ ದನಿಯಲ್ಲಿ ಕೇಳಿತು. ಉಳಿದೆ ಕೊಕ್ಕರೆಗಳು ತಮ್ಮ ಕೊಕ್ಕನ್ನು ಅಗಲಿಸಿ, ಗಹಗಹಿಸಿ ನಕ್ಕು, ಹಂಸನನ್ನು ವ್ಯಂಗ್ಯವಾಡಿದವು.

ಅವರ ನಗುವನ್ನು ಕಂಡು ಹಂಸವು ಮನದ ನಕ್ಕಿತು. ಬೇರೇನೂ ಪ್ರತಿಕ್ರಿಯೆ ನೀಡದೇ, ತನ್ನ ವಿಶಾಲವಾದ ರೆಕ್ಕೆಗಳನ್ನು ಬಿಚ್ಚಿ ನಭವನ್ನೇರಿ, ಮಾನಸ ಸರೋವರದತ್ತ ಹಾರಿ ಹೋಯಿತು.