ವಿಶ್ವವಾಣಿ ವಿಶೇಷ
ಶಾಸಕರ ತಿಂಗಳ ದೂರವಾಣಿ ಬಿಲ್ ೨೦ ಸಾವಿರ
ದೂರವಾಣಿ ವೆಚ್ಚದ ಹೆಸರಲ್ಲಿ ದುಂದು ವೆಚ್ಚ
ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಇಂದಿನ ಡಿಜಿಟಲ್ ಯುಗದಲ್ಲಿ ತಿಂಗಳಿಗೆ 350 ರು. ರೀಚಾರ್ಜ್ ಮಾಡಿಸಿದರೆ, ತಿಂಗಳು ಪೂರ್ತಿ ಅನ್ಲಿಮಿಟೆಡ್ ಕರೆ ಹಾಗೂ ಡೇಟಾ ಬಳಸಬಹುದು. ಹೆಚ್ಚೆಂದರೆ ಸಾವಿರ ರು.ಗಳಲ್ಲಿ ಇಡೀ ಕುಟುಂಬ ತಿಂಗಳಿಡೀ ಮೊಬೈಲ್ ಬಳಸಬಹುದು. ಆದರೆ, ಶಾಸಕರು ಮಾತ್ರ, ದೂರವಾಣಿ ಭತ್ಯೆಯೆಂದು ಪ್ರತಿ ತಿಂಗಳು ೨೦ ಸಾವಿರ ರು. ಪಡೆಯುತ್ತಿದ್ದಾರೆ.
ರಾಜ್ಯ ವಿಧಾನಸಭೆ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಪ್ರತಿಯೊಬ್ಬ ಶಾಸಕ ನಿಗೂ ದೂರವಾಣಿ ಬಿಲ್ ಎಂದು ಪ್ರತಿ ತಿಂಗಳು 20 ಸಾವಿರ ರು. ರಾಜ್ಯ ಸರಕಾರದ ಬೊಕ್ಕಸದಿಂದ ಪಾವತಿಯಾಗುತ್ತಿದೆ ಎನ್ನುವುದು ಬಹಿರಂಗವಾಗಿದೆ. ಆದರೆ, ಇಂದಿನ ಮಾರುಕಟ್ಟೆಯ ರಿಚಾರ್ಜ್ ದರವನ್ನು ನೋಡಿದರೆ, ದೂರವಾಣಿ ಸಂಪರ್ಕ ಪಡೆಯಲು 20 ಸಾವಿರ ರು. ಖರ್ಚು ಮಾಡುವ ಅಗತ್ಯವೇ ಇಲ್ಲ. ಈಗಿರುವ ಟಾರಿಫ್ ಪ್ಲಾನ್ಗಳನ್ನು ನೋಡಿದರೆ, ಒಂದು ಪ್ರಿಪೇಯ್ಡ್ ಸಿಮ್ಗೆ 250ರಿಂದ 600 ರು. ಹಾಗೂ ಪೋಸ್ಟ್ ಪೇಯ್ಡ್ ಸಿಮ್ಗೆ ಹೆಚ್ಚೆಂದರೆ 900 ರಿಂದ ಸಾವಿರ ರು. ಹಾಕಿಸಿದರೆ ಇಡೀ ತಿಂಗಳು ಬಳಸಬಹುದು. ಇದರಲ್ಲಿ, ಅನ್ ಲಿಮಿಟೆಡ್ ಡೇಟಾ ಹಾಗೂ ಕಾಲ್ ಸೇವೆಯೂ ಸೇರಿರುತ್ತದೆ.
ಇದರೊಂದಿಗೆ ಒಂದು ಲ್ಯಾಂಡ್ಲೈನ್ ಸಂಪರ್ಕ ಹಾಗೂ ತಮ್ಮ ಆಪ್ತ ಸಹಾಯಕನಿಗೆ ಸಂಪರ್ಕ ಕೊಡಿಸಿದರೂ ಐದು ಸಾವಿರ ರು. ದಾಟುವುದಿಲ್ಲ. ಹೀಗಿರುವಾಗ 20 ಸಾವಿರ ರು. ಭತ್ಯೆಯನ್ನು ಪ್ರತಿ ತಿಂಗಳು ನೀಡುವುದು ಏಕೆ ಎನ್ನುವ ಪ್ರಶ್ನೆಗಳು ಶುರುವಾಗಿದೆ.
ವರ್ಷಕ್ಕೆ ಏಳು ಕೋಟಿಗೂ ಹೆಚ್ಚು ಖರ್ಚು: ಅಂದರೆ, ವಿಧಾನಸಭೆಯ 225 ಹಾಗೂ ಪರಿಷತ್ತಿನ 75 ಸದಸ್ಯರು ಒಟ್ಟು 300 ಶಾಸಕರಿಗೆ ತಿಂಗಳಿಗೆ ದೂರವಾಣಿ ವೆಚ್ಚಕ್ಕಾಗಿಯೇ ತಿಂಗಳಿಗೆ 60 ಲಕ್ಷ ರು. ಖರ್ಚಾಗಲಿದೆ. ವರ್ಷಕ್ಕೆ ಲೆಕ್ಕ ಹಾಕಿದರೆ ಈ ಒಂದು ಭತ್ಯೆಗೆ ಬರೋಬ್ಬರಿ 7.20 ಕೋಟಿ ರು. ಖರ್ಚಾಗಲಿದೆ. ಒಬ್ಬ ಶಾಸಕರಿಗೆ ವರ್ಷಕ್ಕೆ ಹೆಚ್ಚೆದ್ದಂತೆ 20 ರಿಂದ 25 ಸಾವಿರದಲ್ಲಿ ಮುಗಿ ಯುವ ದೂರವಾಣಿ ಖರ್ಚಿಗೆ ಇಷ್ಟು ದೊಡ್ಡ ಮಟ್ಟದ ಖರ್ಚು ಏಕೆ ಎನ್ನುವ ಮಾತುಗಳು ಕೇಳಿಬಂದಿದೆ.
ವೆಚ್ಚ ಕಡಿತವೆಂದು ಹೇಳಿ, ದುಂದು ವೆಚ್ಚ
ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ದುಂದು ವೆಚ್ಚಕ್ಕೆ ಕಡಿತ ಹಾಕುವುದಾಗಿ ಹೇಳಿದ್ದರು. ಇದಕ್ಕಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆದರೆ ಈಗ ಶಾಸಕರೊಬ್ಬರಿಗೆ ದೂರವಾಣಿ ವೆಚ್ಚವೆಂದೇ ತಿಂಗಳಿಗೆ 20 ಸಾವಿರ ರು. ನೀಡಲಾಗುತ್ತಿದೆ. ಈ ರೀತಿಯ ದುಂದು ವೆಚ್ಚಕ್ಕೆ ಮೊದಲು ಬ್ರೇಕ್ ಹಾಕಿ ದಾಗ ಮಾತ್ರ ಆರ್ಥಿಕ ಹೊರೆ ತಗ್ಗಿಸ ಬಹುದು ಎನ್ನುವ ಮಾತುಗಳು ಕೇಳಿಬಂದಿದೆ.
ಎಷ್ಟೇ ಬಳಸಿದರೂ ೨೦ ಸಾವಿರದಷ್ಟು ಖರ್ಚಾಗಲ್ಲ
ಇಂದಿನ ಡಿಜಿಟಲ್ ಯುಗದಲ್ಲಿ ಯಾವುದೇ ನೆಟ್ ವರ್ಕ್ನ ಸಿಮ್ ಪಡೆದುಕೊಂಡರೆ ಒಂದು ಸಾವಿರ ರು.ಗಿಂತ ಹೆಚ್ಚಿನ ಕರೆನ್ಸಿ ಹಾಕಿಸುವ ಅಗತ್ಯವಿಲ್ಲ. ಬಹುತೇಕ ನೆಟ್ವರ್ಕ್ಗಳು 350 ರಿಂದ 600 ರು. ಒಳಗೆ ಅನ್ಲಿಮಿಟೆಡ್ ಕರೆ ಹಾಗೂ ಡೇಟಾ ಸೌಲಭ್ಯ ವನ್ನು ನೀಡುತ್ತದೆ. ಇನ್ನು ಲ್ಯಾಂಡ್ಲೈನ್ ಗಳನ್ನು ಹಾಕಿಸಿಕೊಂಡಿ ದ್ದರೂ ಅದನ್ನು ಬಳಸುವ ಶಾಸಕರು ತೀರಾ ಕಡಿಮೆ. ಒಂದು ವೇಳೆ ಬಳಸಿದರೂ ಹೆಚ್ಚೆಂದರೆ ಎರಡು ಸಾವಿರ ರು. ಖರ್ಚು ಬರಬಹುದು. ಎರಡರಿಂದ ಮೂರು ಸಾವಿರದಲ್ಲಿ ಮುಗಿಯುವ ದೂರವಾಣಿ ಬಿಲ್ಗೆ 20 ಸಾವಿರ ನೀಡುತ್ತಿರುವುದು ಹಲವರ ಆಕ್ಷೇಪಕ್ಕೆ ಕಾರಣವಾಗಿದೆ.