ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ranjith.hoskere@gmail.com
ಉತ್ತರ ಕರ್ನಾಟಕದ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ, ಮಹಾರಾಷ್ಟ್ರ ಕ್ಯಾತೆಗೆ ತಡೆಯೊಡ್ಡಬೇಕು ಎನ್ನುವ ಕಾರಣಕ್ಕೆ ಬೆಳಗಾವಿ ಅಧಿವೇಶನ ನಡೆಸ ಬೇಕು ಎನ್ನುವ ನಿಲುವು ಸರಿ. ಆದರೆ ಸದನಕ್ಕೆ ಆಗಮಿಸದ ಶಾಸಕರ ಕಾರ್ಯವೈಖರಿಯನ್ನು ಪ್ರಶ್ನಿಸಲೇ ಬೇಕಿದೆ.
ಕರೋನಾ ಸಂಕಷ್ಟ, ಒಮೈಕ್ರಾನ್ ಆತಂಕ, ಆರ್ಥಿಕ ಇತಿಮಿತಿ ಹೀಗೆ ಸಾಲು ಸಾಲು ಸವಾಲುಗಳಿದ್ದರೂ, ಬೆಳಗಾವಿಯಲ್ಲಿಯೇ ಅಽವೇಶನ ನಡೆಸಬೇಕು ಎನ್ನುವ ಸರಕಾರದ ಯೋಚನೆಯಿಂದ ಹಲವು ಸವಾಲುಗಳ ನಡುವೆಯೂ ಬೆಳಗಾವಿಯಲ್ಲಿ ಸೋಮವಾರದಿಂದ ಚಳಿಗಾಲದ ಅಧಿವೇಶ, ಬೆಳಗಾವಿಯ ಸುವರ್ಣಸೌಧದಲ್ಲಿ ಆರಂಭವಾಗಿದೆ.
ಉತ್ತರ ಕರ್ನಾಟಕದ ಸಮಸ್ಯೆ, ಗಡಿ ಸಮಸ್ಯೆ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ನಡೆಯುತ್ತಿರುವ ಅಧಿವೇಶನ ವೇನೋ ಸೋಮವಾರದಿಂದ ಆರಂಭವಾಗಿದೆ. ಆದರೆ ಮೊದಲ ದಿನವೇ ಶಾಸಕರ ಹಾಜರಾತಿಯನ್ನು ನೋಡಿದರೆ, ನಿಜಕ್ಕೂ ಉತ್ತರದಾಯಿ ಆಗುವುದೇ ಎನ್ನುವ ಅನುಮಾನ ಗಳು ಶುರುವಾಗುವುದರಲ್ಲಿ ಅನುಮಾನವಿಲ್ಲ. ಈ ರೀತಿಯ ಅನುಮಾನಗಳು ಶುರುವಾಗುತ್ತಿರುವುದಕ್ಕೆ ಮುಖ್ಯ ಕಾರಣ ಅಧಿವೇಶನದಲ್ಲಿ ಮೊದಲ ದಿನ ಭಾಗಿಯಾಗಿದ್ದ ಶಾಸಕರ ಸಂಖ್ಯೆ.
ಹೌದು, ವಿಧಾನಸಭೆಯ ಮೊದಲ ದಿನದ ಕಲಾಪದಲ್ಲಿ ಬಿಜೆಪಿಯ 35 ರಿಂದ 40, ಕಾಂಗ್ರೆಸ್ನ 22ರಿಂದ 25 ಹಾಗೂ ಜೆಡಿಎಸ್ ಎಂಟತ್ತು ಶಾಸಕರು ಹಾಜರಿದ್ದರು. ಮೊದಲ ದಿನವೇ ಕೋರಂ ಬೆಲ್ 30 ನಿಮಿಷಕ್ಕೂ ಹೆಚ್ಚು ಕಾಲ ಹೊಡೆದುಕೊಂಡಿದ್ದು ಚಳಿ ಗಾಲದ ಅಧಿವೇಶನದ ಬಗ್ಗೆ ಶಾಸಕರಿಗೆ ಇರುವ ಆಸಕ್ತಿಗೆ ಹಿಡಿದ ಕನ್ನಡಿಯಾಗಿತ್ತು. ಕೋರಂ ಸಿಕ್ಕ ಬಳಿಕ ಕಲಾಪ ಆರಂಭವಾದರೂ, ಖಾಲಿ ಖುರ್ಚಿಗಳು ಶಾಸಕರು ಬೆಳಗಾವಿ ಅಧಿವೇಶನವನ್ನು ಎಷ್ಟರ ಮಟ್ಟಿಗೆ ಗಂಭೀರ ವಾಗಿ ತಗೆದುಕೊಂಡಿದ್ದಾರೆ ಎನ್ನುವುದನ್ನು ಹೇಳುತ್ತಿತ್ತು. ಇದು ಕೇವಲ ವಿಧಾನಸಭೆಯಲ್ಲ, ಪರಿಷತ್ನಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ.
ಮೊದಲ ದಿನವೇ ಈ ಪರಿಸ್ಥಿತಿಯಾದರೆ ಮುಂದಿನ 15 ದಿನಗಳಲ್ಲಿ ಇದು ಯಾವ ಹಂತಕ್ಕೆ ತಲುಪುತ್ತದೆ ಎನ್ನುವುದನ್ನು ನೋಡಬೇಕು. ಸದನಕ್ಕೆ ಗೈರಾಗಿರುವ ಬಗ್ಗೆ ಶಾಸಕರನ್ನು ಕೇಳಿದರೆ, ಮೊದಲ ದಿನವಲ್ಲವೇ ಅದಕ್ಕೆ ಬರಲಿಲ್ಲ ಎನ್ನುವವರು ಕೆಲವರಾದರೆ, ಇನ್ನು ಕೆಲವರು ಅಯ್ಯೋ ಬೇರೆ ಕೆಲಸವಿತ್ತು ಎನ್ನುವ ಹಾರಿಕೆ ಉತ್ತರ ನೀಡುವವರು ಕೆಲವರು. ಇನ್ನು ಕೆಲ ಶಾಸಕರು ಸುವರ್ಣಸೌಧದಲ್ಲಿರುತ್ತಾರೆ ಆದರೆ ಸದನಕ್ಕೂ ನಮಗೂ ಸಂಬಂಧವಿಲ್ಲ ಎನ್ನುವ ಹಾಗೇ, ಕಾರಿಡಾರ್ನಲ್ಲಿ
ಓಡಾಡಿಕೊಂಡು ಇರುವುದು ಸಾಮಾನ್ಯ.
ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆಯೇ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಬೇಕು ಎನ್ನುವ ಒತ್ತಡ ಸಾರ್ವಜನಿಕ ವಲಯದಲ್ಲಿದೆ. ಆದರೆ ಕಲಾಪದಲ್ಲಿ ಪ್ರಸ್ತಾಪಿಸಬೇಕಿರುವ ಉತ್ತರ ಕರ್ನಾಟಕ ಭಾಗದ ಶಾಸಕರೇ, ಸದನದತ್ತ ತಲೆ ಹಾಕದಿದ್ದರೆ, ಇನ್ಯಾರು ಚರ್ಚೆ ಮಾಡಬೇಕು? ಸದನ ಆರಂಭಕ್ಕೂ ಮೊದಲು ಸದನ ಸಲಹಾ ಸಮಿತಿ ಸಭೆಯಲ್ಲಿ ಕನಿಷ್ಠ ಎರಡು ದಿನಗಳ ಕಾಲ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚಿಸಲು ನಿರ್ಧರಿಸಲಾಗಿದೆ. ಪ್ರತಿಪಕ್ಷ
ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ನಾಯಕರು ಈ ಬಗ್ಗೆ ಮಾತನಾಡುತ್ತಾರೆ ಕೂಡ.
ಆದರೆ ಉತ್ತರ ಕರ್ನಾಟಕದ ನೈಜ ಪರಿಸ್ಥಿತಿಯ ಬಗ್ಗೆ ಮಾತನಾಡಬೇಕಾದ ಶಾಸಕರಿಗೆ ಚರ್ಚೆಯ ಬಗ್ಗೆ ಆಸಕ್ತಿ ಇಲ್ಲದಿದ್ದರೆ, ವಿಶೇಷ ಚರ್ಚೆಗೆ ಅವಕಾಶ ನೀಡಿಯೂ
ಪ್ರಯೋಜನವಿಲ್ಲ. ಕೇವಲ ಉತ್ತರ ಕರ್ನಾಟಕ ಭಾಗದ ಶಾಸಕರು ಮಾತ್ರವಲ್ಲದೇ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ ರೇವಣ್ಣ, ಹಿರಿಯ ನಾಯಕರಾದ ಆರ್.ವಿ ದೇಶಪಾಂಡೆ, ಎಚ್.ಕೆ ಪಾಟೀಲ್, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ಮೊದಲ ದಿನವೇ ಗೈರಾ ಗಿದ್ದಾರೆ.
ಕೇವಲ ಕಾಂಗ್ರೆಸ್ ಮಾತ್ರವಲ್ಲ, ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದಲ್ಲಿ ನಮ್ಮ ಭಾಗದ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಆರೋಪಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್, ನಡಹಳ್ಳಿ ಸೇರಿದಂತೆ ಅನೇಕರು ಸುವರ್ಣಸೌಧದಲ್ಲಿ ಕಾಣಿಸಿ ಕೊಳ್ಳಲಿಲ್ಲ. ಮೊದಲ ದಿನ ಬರಲಿಲ್ಲ ಎಂದ ಮಾತ್ರಕ್ಕೆ ಬಾಕಿ ಯಿರುವ ದಿನಗಳಿಗೂ ಗೈರಾಗುತ್ತಾರೆ ಎಂದಿಲ್ಲ. ಅದರೆ ಮೂರು ವರ್ಷದ ಬಳಿಕ ನಡೆಯುತ್ತಿರುವ ಅಧಿವೇಶನದ ಮೊದಲ ದಿನವೇ ಈ ರೀತಿಯ ನಿರುತ್ಸಾಹವನ್ನು ತೋರಿದರೆ, ಮುಂದಿನ ದಿನದಲ್ಲಿ ನಿರುತ್ಸಾಹ, ಉತ್ಸಾಹವಾಗಿ ಪರಿವರ್ತನೆಯಾಗುವುದೇ ಎನ್ನುವುದು ಅನೇಕರ ಪ್ರಶ್ನೆಯಾಗಿದೆ.
ಅದರಲ್ಲಿಯೂ ಯತ್ನಾಳ್, ನಡಹಳ್ಳಿ, ಲಕ್ಷ್ಮೀ ಹೆಬ್ಬಾಳ್ಕರ್, ಜಗದೀಶ್ ಶೆಟ್ಟರ್, ಆರ್.ವಿ ದೇಶಪಾಂಡೆ, ಎಚ್.ಕೆ.ಪಾಟೀಲ್ ರಂತಹ ನಾಯಕರಿಂದ ಈ ರೀತಿಯ ವರ್ತನೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಹಾಗೇ ನೋಡಿದರೆ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಿದ್ದು ಏಕೆಂದು ನೋಡಬೇಕಿದೆ. ಬಿಜೆಪಿ- ಜೆಡಿಎಸ್ ಮೊದಲ ಮೈತ್ರಿ ಸರಕಾರದ ಅವಽಯಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಚರ್ಚಿಸಲು ಹಾಗೂ ಮಹಾರಾಷ್ಟ್ರ ಪುಂಡತನವನ್ನು ಮಟ್ಟಹಾಕುವ ಕಾರಣಕ್ಕೆ, ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಬೆಳಗಾವಿಯಲ್ಲಿ ಅಽವೇಶನ ನಡೆಸಲು ತೀರ್ಮಾನಿಸಿದ್ದರು.
ಆದರೆ ಇಡೀ ಆಡಳಿತ ಯಂತ್ರವನ್ನು ಬೆಂಗಳೂರಿನಿಂದ ಬೆಳಗಾವಿಗೆ ತಂದು, ಅಧಿವೇಶನ ನಡೆಸುವುದು ಆರ್ಥಿಕವಾಗಿ ಹಾಗೂ ದೈಹಿಕವಾಗಿಯೂ ಸರಕಾರಕ್ಕೆ ಹೊರೆಯಾಗುತ್ತದೆ. ಈ ಹಿಂದಿನ ಎರಡು ಅಧಿವೇಶನಕ್ಕೆ ಖರ್ಚಾದ ಮೊತ್ತ ಸರಾಸರಿ 18 ರಿಂದ 21 ಕೋಟಿ ರು. ಈ ಬಾರಿ ಕರೋನಾ ಕಾರಣಕ್ಕೆ ಇನ್ನಷ್ಟು ಮುಂಜಾಗೃತೆ ವಹಿಸಬೇಕಿರುವುದರಿಂದ ಈ ಮೊತ್ತ ಇನ್ನಷ್ಟು ಹೆಚ್ಚಾದರೂ ಅಚ್ಚರಿಯಿಲ್ಲ. ಈ ನಡುವೆ ಕರೋನಾ ಮೂರನೇ ಅಲೆ, ಒಮೈಕ್ರಾನ್ ಆತಂಕ ಸೇರಿದಂತೆ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಬೆಳಗಾವಿಯಲ್ಲಿ ಈ ಬಾರಿ ಅಽವೇಶನ ನಡೆಸಲು ಮುಂದಾಗಿದ್ದು, ಈ ಭಾಗದ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎನ್ನುವ ಕಾರಣಕ್ಕೆ.
ಆದರೆ ಅಧಿವೇಶನದಲ್ಲಿ, ಉತ್ತರ ಕರ್ನಾಟಕ ಭಾಗದ ಶಾಸಕರೇ ಕಾಣಿಸಿಕೊಳ್ಳುತ್ತಿಲ್ಲ. ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತದೆ ಎಂದರೆ ಕೇವಲ ಆರ್ಥಿಕವಲ್ಲ, ಒಂದು ತಿಂಗಳ ಮೊದಲೇ ಇಡೀ ಜಿಡಳಿತ ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನದ ಸಿದ್ಧತೆಯಲ್ಲಿ ತೊಡಗಿರುತ್ತದೆ. ಇದರಿಂದಾಗಿ, ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಒಂದು ತಿಂಗಳು ಬ್ರೇಕ್ ನೀಡಿದಂತೆ. ಜತೆಗೆ ಶಾಸಕರು ಬರುತ್ತಾರೋ ಇಲ್ಲವೋ, ಆದರೆ ಪ್ರತಿಯೊಬ್ಬ ಶಾಸಕನಿಗೂ ಪ್ರತ್ಯೇಕ ರೂಂ ಹಾಗೂ ಅಗತ್ಯ ವ್ಯವಸ್ಥೆ ಮಾಡಲೇಬೇಕು. ಆದರೆ ಶಾಸಕರು ಮಾತ್ರ, ಇತ್ತ ಸುಳಿಯದಿದ್ದರೆ ಅದರ ಪ್ರಯೋಜನವಾದರೂ ಏನು ಎನ್ನುವ ಮಾತುಗಳು ಸಾಮಾನ್ಯವಾಗಿದೆ.
ಇನ್ನು ಬೆಳಗಾವಿ ಅಧಿವೇಶನ ಎಂದರೆ ಕೇವಲ ಚರ್ಚೆ, ಉತ್ತರ, ಆಡಳಿತ-ಪ್ರತಿಪಕ್ಷಗಳ ವಾಕ್ಸಮರ ಅಷ್ಟೇ ಅಲ್ಲ. ಸದನದೊಳಗೆ ಎಷ್ಟು ಗದ್ದಲ- ಗಲಾಟೆ ಇರುವುದೋ ಅಷ್ಟೇ ಗಲಾಟೆ ಸುವರ್ಣಸೌಧದ ಹೊರಭಾಗದಲ್ಲಿಯೂ ಇರುತ್ತದೆ. ಅದರಲ್ಲಿಯೂ ಈ ಬಾರಿ ಮೂರು ವರ್ಷದ ಬಳಿಕ ನಡೆಯುತ್ತಿರುವ ಅಧಿವೇಶನ ಎನ್ನುವ ಕಾರಣಕ್ಕೆ ಪ್ರತಿವರ್ಷಕ್ಕಿಂತ ಹೆಚ್ಚಿನ ಪ್ರತಿಭಟನೆಗಳೇ ನಡೆಯುತ್ತಿವೆ. ಅಚ್ಚರಿಯೆಂದರೆ ಈ ಎಲ್ಲ ಪ್ರತಿಭಟನಾಕಾರರಿಗೆ, ಸರಕಾರವೇ ಟೆಂಟ್ ಹಾಕಿ
ಕೊಡುತ್ತದೆ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಿದೆ.
ಪ್ರತಿಭಟನಾ ನಿರತರರಿಗೆ ಯಾವುದೇ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ, ಸರಕಾರದಿಂದಲೇ ಸುವರ್ಣ ಗಾರ್ಡನ್ನಲ್ಲಿ ಟೆಂಟ್ ಹಾಕಿ ಮಳಿಗೆಯ ರೀತಿಯಲ್ಲಿ ಪ್ರತಿಭಟನಾಕಾರರಿಗೆ ಅವಕಾಶ ನೀಡಲಾಗಿದೆ. (ಈ ಪ್ರತಿಭಟನೆಗಳಿಂದ ಎಷ್ಟು ಪ್ರಯೋಜನವಾಗಲಿದೆ? ಸರಕಾರಕ್ಕೆ ನಿಜಕ್ಕೂ ಅವರ ಮನವಿ
ಅಥವಾ ಆಗ್ರಹ ಕೇಳುತ್ತದೆಯೇ ಎನ್ನುವುದು ಬೇರೆ ಮಾತು.) ಆದರೆ ಶಾಲೆಗಳಲ್ಲಿ ತರಗತಿ ಮಾಡಿದ ರೀತಿಯಲ್ಲಿ, ಪ್ರತಿಭಟನಾಕಾರರು ಇಂತಿಷ್ಟು ಸಮಯ ಬಂದು ಕೂತು ಪ್ರತಿಭಟನೆ ಮಾಡಿ ಹೋಗಬೇಕು ಎನ್ನುವ ಆದೇಶವನ್ನು ಅಂತೂ ಜಿಲ್ಲಾಡಳಿತ ಹೊರಡಿಸಿದೆ.
ಆದ್ದರಿಂದ ಬೆಳಗಾವಿ ಅಧಿವೇಶನ ಎಂದರೆ ಸರಕಾರ, ಆಡಳಿತ ಪ್ರತಿಪಕ್ಷದ ಶಾಸಕರು, ಅಧಿಕಾರಿಗಳು, ಮಾಧ್ಯಮದವರು ಮಾತ್ರವಲ್ಲ ಈ ಪ್ರತಿಭಟನಾಕಾ ರರನ್ನು ಸರಕಾರ ಸಾಕಬೇಕಾಗುತ್ತದೆ. ಆದರೆ ಇಷ್ಟೆಲ್ಲ ಮಾಡಿದರೂ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಸದನದ ಒಳಗೆ ಮಾತನಾಡುವುದಕ್ಕೆ ಮಾತ್ರ ಶಾಸಕರ ಕೊರತೆ ಎಂದರೆ ಇಷ್ಟೆಲ್ಲ ಶ್ರಮ ವ್ಯರ್ಥವಾದಂತಲ್ಲವೇ? ಈ ರೀತಿ ಉತ್ತರ ಕರ್ನಾಟಕ ಭಾಗದ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ, ಮಹಾರಾಷ್ಟ್ರದಿಂದ ಆಗುವ ಗಡಿ ಕ್ಯಾತೆಗೆ ತಡೆಯೊಡ್ಡಬೇಕು ಎನ್ನುವ ಕಾರಣಕ್ಕೆ ಬೆಳಗಾವಿಯಲ್ಲಿ ಪ್ರತಿವರ್ಷ ಅಧಿವೇಶನ ನಡೆಸಬೇಕು ಎನ್ನುವ ನಿಲುವು ಸರಿ.
ಆದರೆ ಅಧಿವೇಶನ ಮಾಡಿzರೆ ಎನ್ನುವ ಕಾರಣವನ್ನು ನೀಡಿ ತಮ್ಮ ಕ್ಷೇತ್ರಗಳಿಂದ ಬೆಳಗಾವಿಗೆ ಆಗಮಿಸಿ, ಸದನಕ್ಕೆ ಆಗಮಿಸದ ಶಾಸಕರ ಕಾರ್ಯವೈಖರಿ
ಯನ್ನು ಪ್ರಶ್ನಿಸಲೇ ಬೇಕಿದೆ. ಅದರಲ್ಲಿಯೂ ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದ ಶಾಸಕರು ಸದನ ದಲ್ಲಿ ಭಾಗವಹಿಸಿ, ತಮ್ಮ ಕ್ಷೇತ್ರಗಳ ಬಗ್ಗೆ ಚರ್ಚಿಸದಿದ್ದರೆ, ಒಟ್ಟಾರೆ ಶ್ರಮ ‘ನದಿಯಲ್ಲಿ ಹುಣಸೆ ತೊಳೆದಂತೆ’ ಆಗುತ್ತದೆ ಎನ್ನುವುದರಲ್ಲಿ ಅನುಮಾನ ಬೇಡ.