ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ಬುದ್ಧ ತೋರಿದ ಮೇಲಿನ ಏಳು ಮಾರ್ಗಗಳನ್ನು ಅರ್ಥಮಾಡಿಕೊಂಡು, ಅದರಂತೆ ನಡೆಯುವುದೇ ಎಂಟನೆಯ ಮಾರ್ಗ. ಇದುವೇ ನಿಜ ವಾದ ತಪಸ್ಸು. ಹೀಗೆ ಬುದ್ಧನ ಪರಿಪಕ್ವ ಮನಸ್ಸು ಚತ್ವಾರಿ ಆರ್ಯಸತ್ಯಾನಿ ಯನ್ನು ಕಂಡುಕೊಂಡು, ಬೌದ್ಧ ಧರ್ಮವನ್ನು ಸ್ಥಾಪಿಸುತ್ತದೆ.
ಭಾರತ ಉಪಖಂಡದಲ್ಲಿ ಮನುಷ್ಯನ ಮನಸ್ಸಿನ ಬಗ್ಗೆ ಗಂಭೀರವಾಗಿ ಮೊದಲು ವಿಚಾರ ಮಾಡಿದ್ದು ಹಿಂದು ಧರ್ಮ. ಆದರೆ ಮನಸ್ಸಿನ ವಿರಾಟ್ ರೂಪವನ್ನು ಹಾಗೂ ಸಾಮರ್ಥ್ಯ ಅನಾವರಣ ಮಾಡಿದ್ದು ಬೌದ್ಧ ಧರ್ಮ. ಜಗತ್ತಿನ ಪ್ರಮುಖ ಧರ್ಮಗಳಲ್ಲಿ ಬೌದ್ಧ ಧರ್ಮವು ಐದನೆಯ ಸ್ಥಾನ ದಲ್ಲಿದೆ ಯದರೂ, ಅದನ್ನು ಧರ್ಮ ಎಂದು ಕರೆಯುವುದು ಅಷ್ಟು ಸೂಕ್ತವಲ್ಲ.
ಬೌದ್ಧ ‘ದರ್ಶನ’ ಎನ್ನುವುದು ಹೆಚ್ಚು ಸೂಕ್ತ. ಬೌದ್ಧ ಧರ್ಮವು ಸಾಂಪ್ರದಾಯಿಕ ಧರ್ಮದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇದಕ್ಕೆ ಕಾರಣಗಳಿವೆ. ಮೊದಲ ನೆಯದಾಗಿ ಬೌದ್ಧಧರ್ಮವು ಪರಮಾತ್ಮನ (ದೇವರು) ಅಸ್ತಿತ್ವ ವನ್ನು ಒಪ್ಪುವುದಿಲ್ಲ. ಹಾಗಾಗಿ ಆತ್ಮದ ಪ್ರಶ್ನೆಯೇ ಬರುವುದಿಲ್ಲ. ಇತರ ಧರ್ಮಗಳಲ್ಲಿ ಧರ್ಮ ಸಂಸ್ಥಾಪಕರಿಗೆ ದೈವ ಪ್ರೇರಣೆ ಅಥವ ದೇವವಾಣಿಯು ಧರ್ಮ ಸ್ಥಾಪನೆಗೆ ಕಾರಣವಾಗುತ್ತದೆ. ಬೌದ್ಧ ಧರ್ಮದಲ್ಲಿ ದೇವರ ಪರಿಕಲ್ಪನೆಯೇ ಇಲ್ಲದ ಕಾರಣ, ದೈವಪ್ರೇರಣೆ ಮತ್ತು ದೇವವಾಣಿಗಳ ಪ್ರಶ್ನೆಯೇ ಬರುವುದಿಲ್ಲ.
ಬೌದ್ಧಧರ್ಮದ ತಿರುಳೆಲ್ಲ ಬುದ್ಧನು ತನ್ನ ಜೀವಮಾನ ಕಾಲದಲ್ಲಿ ತನ್ನ ಚಿಂತನ- ಮಂಥನ-ಅವಲೋಕನ-ತೀಮಾನಗಳಿಂದ ಕಂಡುಕೊಂಡ ಸಾರ. ಹಾಗಾಗಿ ಬೌದ್ಧ ಧರ್ಮವನ್ನು ಬುದ್ಧನ ಪರಿಪಕ್ವ ಮನಸ್ಸು ಕಂಡು ಕೊಂಡ ಹಲವು ನಿರ್ಣಯಗಳ ಸಾರ, ಅವನು ಕಂಡುಕೊಂಡ ಸತ್ಯಗಳ ದರ್ಶನ ಎಂದು ಕರೆದರೆ ಅದು ಹೆಚ್ಚು ಅರ್ಥವತ್ತಾದೀತು. ಸಿದ್ಧಾರ್ಥ ಗೌತಮನೆಂಬ ಮಹಾನುಭಾವನು ಇಂದಿಗೆ ಸರಿಸುಮಾರು 2500 ವರ್ಷಗಳ ಹಿಂದೆ ಇಂದಿನ ನೇಪಾಳದ ಲುಂಬಿಣಿಯಲ್ಲಿ ಹುಟ್ಟಿದ. ನಂತರ ಭಾರತದ ಕಪಿಲ ವಸ್ತುವಿನಲ್ಲಿ ಬೆಳೆದ. ಬುದ್ಧನ ತಂದೆ ಶುದ್ಧೋದನ ಹಾಗೂ ತಾಯಿ ಮಾಯಾ. ದಂತಕಥೆಯ ಅನ್ವಯ ಸಿದ್ಧಾರ್ಥನು ಹುಟ್ಟಿದಾಗ, ಆತ ಮಹಾ ಚಕ್ರವರ್ತಿಯಾಗುತ್ತಾನೆ ಇಲ್ಲ ಮಹಾ ಸನ್ಯಾಸಿಯಾಗುತ್ತಾನೆ ಭವಿಷ್ಯ ವಾಣಿಯು ಕೇಳಿಬಂದಿತಂತೆ. ಹಾಗಾಗಿ ಶುದ್ದೋದನನು ಸಿದ್ಧಾರ್ಥ ನನ್ನು ರಕ್ಷಿತ ಪರಿಸರದಲ್ಲಿ ಬೆಳೆಸಿದ.
ಹೊರಜಗತ್ತಿನ ಕಷ್ಟ ಕಾರ್ಪಣ್ಯಗಳು ಅವನ ಅನುಭವಕ್ಕೆ ಬರದ ಹಾಗೆ ನೋಡಿಕೊಂಡ. 16 ವರ್ಷಗಳಾದಾಗ ಯಶೋಧರೆ ಎನ್ನುವ ಕನ್ಯೆಯೊಡನೆ ಮದುವೆಯನ್ನೂ ಮಾಡಿದ. ಅವರಿಗೆ ರಾಹುಲನೆಂಬ ಮಗನು ಹುಟ್ಟಿದ. ಒಂದುಸಲ ಸಿದ್ದಾರ್ಥನಿಗೆ ಅರಮನೆಯ ಗೋಡೆಗಳ ಹೊರಗೆ ಏನಿದೆ ಎನ್ನುವು ದನ್ನು ತಿಳಿಯುವ ಕುತೂಹಲ ಉಂಟಾಯಿತು. ಸಾರತಿ ಚೆನ್ನನ ಜತೆಯಲ್ಲಿ ಅರಮನೆಯಿಂದ ಹೊರಗೆ ಹೊರಟ. ಒಬ್ಬ ಮುದುಕನನ್ನು ನೋಡಿದ. ಮನುಷ್ಯನು ಏಕೆ ಮುದುಕನಾಗ ಬೇಕು ಎನ್ನುವುದು ಸಿದ್ಧಾರ್ಥನಿಗೆ ಅರ್ಥವಾಗಲಿಲ್ಲ.
ಎರಡನೆಯ ಸಲ ಒಬ್ಬ ರೋಗಿಷ್ಠನ ಕಷ್ಟವನ್ನು ಗಮನಿಸಿದ. ಮನುಷ್ಯನು ರೋಗಗಳು ಏಕೆ ಬರುತ್ತವೆ, ಅವುಗಳಿಂದ ಏಕೆ ನರಳಬೇಕು ಎನ್ನುವುದಕ್ಕೆ ಕಾರಣವು ಸಿದ್ಧಾರ್ಥನಿಗೆ ಹೊಳೆಯಲಿಲ್ಲ. ಮೂರನೆಯ ಸಲ ಒಂದು ಶವಯಾತ್ರೆಯನ್ನು ನೋಡಿದ. ಹುಟ್ಟಿದವನು ಸಾಯಲೇಬೇಕೆನ್ನುವ ಚೆನ್ನನ ಮಾತನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ. ನಾಲ್ಕನೆಯ ಸಲ ಒಬ್ಬ ಶ್ರಮಣನನ್ನು ನೋಡಿದ. ಈತನು ನಮ್ಮ ಬದುಕಿನ ಅರ್ಥವನ್ನು ತಿಳಿಯಲು ಹೊರಟಿ ರುವ ಸತ್ಯಾನ್ವೇಷಿ ಎಂದು ವಿವರಿಸಿದ ಚೆನ್ನ.
ಸಿದ್ಧಾರ್ಥನಿಗೆ ತಾನೂ ಸತ್ಯಾನ್ವೇಷಿಯಾಗಬೇಕೆನಿಸಿತು. ಮಧ್ಯರಾತ್ರಿಯಲ್ಲಿ ಹೆಂಡತಿ ಮತ್ತು ಮಗುವನ್ನು ಬಿಟ್ಟು ಅರಮನೆಯಿಂದ ಹೊರಟ. ಹಲವು ಗುರುಗಳನ್ನು ಭೇಟಿಯಾದ. ಉಪವಾಸ, ಆಸನ, ಪ್ರಾಣಾಯಾಮ, ಸ್ಮಶಾನ- ಕಾಡುಗಳಲ್ಲಿ ಪದ್ಮಾಸನ, ಮಾಗಿಯ ಛಳಿಯಲ್ಲಿ ಕೊರೆವ ನೀರಿನ ಸ್ನಾನ, ವೈಶಾಖದ ಬಿರು ಬಿಸಿಲಿನ ನಡುನೆತ್ತಿಯ ಸೂರ್ಯನಡಿ ಧ್ಯಾನ… ಎಲ್ಲವನ್ನೂ ಮಾಡಿದ. ಆರು ವರ್ಷಗಳ ಕಾಲ! ಸಿದ್ಧರ್ಥನ ಶರೀರದಲ್ಲಿ ಮೂಳೆ-ಚಕ್ಕಳ
ಮಾತ್ರ ಉಳಿದವು. ಉರುವೇಲು ಎಂಬ ಸ್ಥಳದಲ್ಲಿ ಅಸ್ಥಿ ಪಂಜರದಂತಿದ್ದ ಗೌತಮ ಮೂರ್ಛಿತನಾದ. ಕೊನೆಗೆ ಸತ್ಯಾನ್ವೇಷಣೆಯ ಈ ಸಾಂಪ್ರದಾಯಿಕ ಮಾರ್ಗಗಳನ್ನು ತ್ಯಜಿಸಿದ.
ಬೋಧಿವೃಕ್ಷದಡಿಯಲ್ಲಿ ಕುಳಿತ. ಆಳವಾಗಿ ಚಿಂತನ-ಮಂಥನಗಳನ್ನು ನಡೆಸಿದ. ವೈಶಾಖ ಹುಣ್ಣಿಮೆಯಂದು ಅವನಿಗೆ ಜ್ಞಾನೋದಯವಾಯಿತು.
ಜ್ಞಾನೋದಯ ಎಂದರೆ ಬದುಕಿನ ನಾಲ್ಕು ಸತ್ಯಗಳು ಗೋಚರವಾದ ಕ್ಷಣ. ಅವು ಮುಂದೆ ಪಾಲಿ ಭಾಷೆಯಲ್ಲಿ ‘ಚತ್ತಾರಿ ಅರಿಯಸಚ್ಚಾನಿ’ ಎಂದು ಹಾಗೂ ಸಂಸ್ಕೃತದಲ್ಲಿ ‘ಚತ್ವಾರಿ ಆರ್ಯಸತ್ಯಾನಿ’ ಎಂದು ಪ್ರಸಿದ್ಧವಾದವು. ಕನ್ನಡದಲ್ಲಿ ನಾಲ್ಕು ದಿವ್ಯಸತ್ಯಗಳು ಎನ್ನಬಹುದು. ಸಿದ್ಧಾರ್ಥನು ಈ ನಾಲ್ಕು ದಿವ್ಯಸತ್ಯ ಗಳನ್ನು ಕುರಿತು ಮೊದಲ ಬಾರಿಗೆ ಸಾರನಾಥದಲ್ಲಿದ್ದ ಜಿಂಕೆಯ ಉದ್ಯಾನವದಲ್ಲಿ ಪ್ರವಚನವನ್ನು ನೀಡಿದ. ಇವು ‘ಧಮ್ಮಚಕ್ಕ ಪವನ ಸುತ್ತ’
(ಧರ್ಮಚಕ್ರ ಪ್ರವರ್ತನ ಸೂತ್ರ) ಎಂದೂ ಪ್ರಸಿದ್ಧ ವಾಗಿವೆ. ಈ ನಾಲ್ಕು ದಿವ್ಯಸತ್ಯಗಳು ಗೌತಮನಿಗೆ ಬುದ್ಧನ ಸ್ಥಾನವನ್ನು ತಂದುಕೊಟ್ಟಿವೆ. ಅವುಗಳನ್ನು ಸ್ಥೂಲವಾಗಿ ನೋಡೋಣ.
ದುಃಖ: ಮೊದಲನೆಯ ದಿವ್ಯಸತ್ಯವೆಂದರೆ ನಮ್ಮ ಬದುಕು ದುಃಖದಿಂದ ತುಂಬಿದೆ. ಪ್ರತಿಯೊಬ್ಬ ಮನುಷ್ಯನು ದುಃ ಖವನ್ನು ಅನುಭವಿಸಲೇಬೇಕು. ದುಃಖವು ನಮ್ಮ ಬದುಕಿನ ಅವಿಭಾಜ್ಯ ಅಂಗ. ಪ್ರತಿಯೊಬ್ಬ ಮನುಷ್ಯನು ಸಂಸಾರ ಚಕ್ರದಲ್ಲಿ ಪಾಲುಗೊಳ್ಳಲೇಬೇಕು. ಹುಟ್ಟು- ಬದುಕು-ಸಾವು -ಹುಟ್ಟು ಇದು ಸಂಸಾರಚಕ್ರ. ಪ್ರತಿಯೊಂದು ಹುಟ್ಟಿನಲ್ಲೂ ಒಂದಲ್ಲ ಒಂದು ರೀತಿಯ ಕಷ್ಟಗಳನ್ನು, ನೋವನ್ನು, ದುಃಖವನ್ನು ಅನುಭವಿಸಲೇ ಬೇಕಾಗುತ್ತದೆ.
ನಾವು ದುಃಖಮುಕ್ತ ರಾಗಲು, ಸದಾ ಸಂತೋಷವಾಗಿರಲು ಏನೆಲ್ಲ ಪ್ರಯತ್ನಗಳನ್ನು ಮಾಡುತ್ತೇವೆ, ಅವೆಲ್ಲವೂ ತಾತ್ಕಾಲಿಕ. ಅಂತಿಮವಾಗಿ ಅವು ದುಃಖದಲ್ಲಿ ಕೊನೆಗೊಳ್ಳುತ್ತದೆ. ದುಃಖವು ನಮ್ಮ ಬದುಕಿನ ಅವಿಭಾಜ್ಯ ಅಂಗ ಎನ್ನುವ ತಿಳಿವಳಿಕೆಯೇ ಮೊದಲನೆಯ ದಿವ್ಯಸತ್ಯ.
ಸಮುದಾಯ: ನಮ್ಮ ಬದುಕಿನಲ್ಲಿ ಕಂಡುಬರುವ ಎಲ್ಲ ದುಃಖಗಳಿಗೆ ಕಾರಣವನ್ನು ತಿಳಿದು, ಅವುಗಳಿಂದ ದೂರವಾಗುವುದೇ ಎರಡನೆಯ ದಿವ್ಯಸತ್ಯ. ನಮ್ಮ ಎಲ್ಲ ದುಃಖಕ್ಕೆ ಕಾರಣ ಆಸೆ. ನನಗೆ ಅದು ಬೇಕು, ಇದು ಬೇಕು ಎಂಬ ನಿರಂತರ ಬೇಡಿಕೆ. ಈ ಬೇಡಿಕೆ ಹಾಗೂ ನನಗೆ ಮತ್ತಷ್ಟು ಬೇಕು ಎನ್ನುವ
ಆಸೆಯು ನಮ್ಮನ್ನು ಅಂತಿಮ ದುಃಖಸಾಗರದಲ್ಲಿ ಮುಳುಗಿಸುತ್ತದೆ. ಬುದ್ಧನು ರೂಪಿಸಿದ ಸಂಸಾರ-ಚಕ್ರವನ್ನು ಗಮನಿಸಿದರೆ ಅದರಲ್ಲಿ ಮೂರು ಪ್ರಾಣಿಗಳು ಕಂಡುಬರುತ್ತವೆ.
ಒಂದು ಹಂದಿ, ಒಂದು ಕೋಳಿ ಹಾಗೂ ಒಂದು ಹಾವು. ಹಂದಿಯು ಅಜ್ಞಾನದ ಸೂಚಕ. ಕೋಳಿಯು ಆಸೆಯನ್ನು ಪ್ರತಿಬಿಂಬಿಸುತ್ತದೆ. ಹಾವು ಕೋಪ, ದ್ವೇಷ, ಸೇಡು ಇತ್ಯಾದಿ ಭಾವಗಳನ್ನು ಪ್ರತಿನಿಽಸುತ್ತದೆ. ನಾವು ಈ ಮೂರು ವಿಷಗಳಿಂದ ಮುಕ್ತರಾದ ದಿನ-ಕ್ಷಣ ನಾವು ಸಂಸಾರ-ಚಕ್ರದಿಂದ ಮುಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಅಜ್ಞಾನ, ದುರಾಸೆ ಹಾಗೂ ದ್ವೇಷಾದಿಗಳು ಮೂರು ವಿಷಗಳು. ಇವು ನಮ್ಮನ್ನು ಸದಾ ಕಾಲಕ್ಕೂ ಸಂಸಾರ-ಚಕ್ರದಲ್ಲಿ
ಬಂಧಿಸುತ್ತವೆ, ಹಾಗಾಗಿ ಸಂಸಾರ-ಚಕ್ರದಿಂದ ಮುಕ್ತಿಯನ್ನು ಪಡೆಯ ಬೇಕಾದರೆ ಈ ವಿಷಗಳಿಂದ ದೂರವಾಗಬೇಕು ಎನ್ನುವ ಪರಿಜ್ಞಾನವೇ ಎರಡನೆಯ ದಿವ್ಯಸತ್ಯ.
ನಿರೋಧ: ದುಃಖವನ್ನು ಕೊನೆಗೊಳಿಸಬಹುದು ಎನ್ನುವ ಅರಿವೇ ಮೂರನೆಯ ದಿವ್ಯಸತ್ಯ. ನಮ್ಮ ಬದುಕಿನ ಎಲ್ಲ ಅಗತ್ಯಗಳ ಬಗ್ಗೆ ನಾವು ತಿಳಿವಳಿಕೆ ಯನ್ನು ಪಡೆಯುತ್ತ ಹೋದರೆ, ಆಗ ಸಹಜವಾಗಿ ಬೇಡಿಕೆ ಮತ್ತು ಆಸೆಗಳು ಕಡಿಮೆಯಾಗುತ್ತವೆ. ಆಗ ಸಹಜವಾಗಿ ಮತ್ತೊಬ್ಬರ ಜೊತೆಯಲ್ಲಿ ಜಗಳ ವಾಡುವ, ಅವರನ್ನು ದ್ವೇಷಿಸುವ ಗುಣಗಳೂ ಕಡಿಮೆಯಾಗುತ್ತವೆ. ಅದರ ಹಿಂದೆಯೇ ದುಃಖವೂ ಸಹ ಕರಗಿಹೋಗುತ್ತದೆ. ಹಾಗಾಗಿ ಬದುಕಿನಲ್ಲಿ
ಸುಖದಂತೆ ಕಾಣುವ ಭ್ರಮೆಗಳನು ಅಲ್ಲಲ್ಲಿಯೇ ಬಿಟ್ಟು ಮುಂದೆ ಮುಂದೆ ನಡೆಯಲು ಕಲಿಯಬೇಕು. ಆಗ ನಾವು ಹೆಚ್ಚು ಶ್ರಮವಿಲ್ಲದೇ ನಿರ್ವಾಣದತ್ತ ನಡೆಯಬಹುದು.
ಮಾರ್ಗ: ನಮ್ಮ ಬದುಕಿನಲ್ಲಿ ಯಾವಾಗಲು ಮಧ್ಯಮ ಮಾರ್ಗವನ್ನು ಆಯ್ಕೆಮಾಡಿಕೊಳ್ಳುವುದು ಒಳ್ಳೆಯದು. ಸ್ವೇಚ್ಛಾಜೀವನವನ್ನೂ ನಡೆಸಬಾರದು. ಅತ್ಯಂತ ಕಠಿಣ ವ್ರತ-ನಿಯಮಗಳ ಬದುಕನ್ನು ನಡೆಸಬಾರದು. ಮಧ್ಯಮ ಮಾರ್ಗದಲ್ಲಿ ನಡೆಯುವುದು ಒಳ್ಳೆಯದು. ಎಂಟು ಉದಾತ್ತ ಪಥಗಳಲ್ಲಿ ನಡೆಯುವುದೇ ಮಧ್ಯಮ ಮಾರ್ಗ. ಆ ಎಂಟು ಉದಾತ್ತ ಮಾರ್ಗ ಗಳನ್ನು ಮೊದಲ ಮೂರು ಮೂರು ಮಾರ್ಗಗಳನ್ನು ನೀತಿ ಮಾರ್ಗಗಳೆಂದು, ಎರಡನೆಯ ಮೂರನ್ನು ಧ್ಯಾನಮಾರ್ಗ ಗಳೆಂದು ಮತ್ತು ಕೊನೆಯ ಎರಡನ್ನು ಜ್ಞಾನಮಾರ್ಗಗಳೆಂದು ಕರೆದರು.
ಸರಿಯಾದ ನಡೆ: ನಾವು ಒಬ್ಬರಿಗೆ ತೊಂದರೆಯನ್ನು ಕೊಡದ ಹಾಗೆ ನಮ್ಮ ಬದುಕನ್ನು ನಡೆಸಬೇಕು.
ಸರಿಯಾದ ಮಾತು: ನಮ್ಮ ಮಾತು ಒಬ್ಬರಿಗೆ ನೋವನ್ನು ಉಂಟು ಮಾಡಬಾರದು. ಮಾತು ಹಿತವಾಗಿರಬೇಕು.
ಸರಿಯಾದ ಬದುಕು: ನಾವು ಇತರರಿಗೆ ತೊಂದರೆಯನ್ನು ಕೊಡದೆ ಹಣವನ್ನು ಸಂಪಾದಿಸಬೇಕು.
ಸರಿಯಾದ ಪರಿಜ್ಞಾನ: ನಮ್ಮ ಭಾವನೆಗಳನ್ನು ಹದವಾಗಿ ಇಟ್ಟುಕೊಳ್ಳುವುದರ ಜೊತೆಯಲ್ಲಿ, ಇತರ ಭಾವನೆಗಳಿಗೆ ಅರ್ಥಮಾಡಿಕೊಂಡು, ಅವರಿಗೆ ತೊಂದರೆಯಾಗದ ಹಾಗೆ ನಡೆದುಕೊಳ್ಳಬೇಕು.
ಸರಿಯಾದ ಪ್ರಯತ್ನ: ನಾವು ಸದಾ ಕಾಲಕ್ಕೂ ಇತ್ಯಾತ್ಮಕ ಮನೋಭಾವ ಬೆಳೆಸಿಕೊಂಡು ಧ್ಯಾನದಲ್ಲಿ ತೊಡಗಬೇಕು.
ಸರಿಯಾದ ಏಕಾಗ್ರತೆ: ನಮ್ಮ ಬದುಕಿನ ಆದ್ಯತೆಯನ್ನು ಕಂಡುಕೊಂಡು, ಅದನ್ನು ಸಾಧಿಸಲು ಏಕಾಗ್ರತೆಯಿಂದ ಧ್ಯಾನವನ್ನು ಮಾಡಬೇಕು.
ಸರಿಯಾದ ಜಾಗರೂಕತೆ: ನಾವು ಮಾಡುವ ಪ್ರತಿಯೊಂದು ಕೆಲಸವೂ, ಮತ್ತೊಬ್ಬರ ಮೇಲೆ/ಸಮಾಜದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಬಹುದು ಎನ್ನುವುದನ್ನು ಸದಾ ಮನಸ್ಸಿನಲ್ಲಿಕೊಂಡು, ಸದಾ ಹಿತವಾದ ಮಾರ್ಗವನ್ನೇ ಆಯ್ದುಕೊಳ್ಳಬೇಕು.
ಸರಿಯಾದ ತಪಸ್ಸು: ಬುದ್ಧ ತೋರಿದ ಮೇಲಿನ ಏಳು ಮಾರ್ಗಗಳನ್ನು ಅರ್ಥಮಾಡಿಕೊಂಡು, ಅದರಂತೆ ನಡೆಯುವುದೇ ಎಂಟನೆಯ ಮಾರ್ಗ. ಇದುವೇ ನಿಜವಾದ ತಪಸ್ಸು. ಹೀಗೆ ಬುದ್ಧನ ಪರಿಪಕ್ವ ಮನಸ್ಸು ಚತ್ವಾರಿ ಆರ್ಯಸತ್ಯಾನಿಯನ್ನು ಕಂಡುಕೊಂಡು, ಬೌದ್ಧ ಧರ್ಮವನ್ನು ಸ್ಥಾಪಿಸುತ್ತದೆ.