ನೀಟ್ನಿಂದ ದೂರ ಉಳಿದ ಹಳ್ಳಿ ವಿದ್ಯಾರ್ಥಿಗಳು
ವಿಳಂಬದಿಂದ ನನಸಾಗದ ವೈದ್ಯರಾಗುವ ಕನಸು
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಕಳೆದ ನಾಲ್ಕು ತಿಂಗಳಿನಿಂದ ವಿಳಂಬವಾಗುತ್ತಿರುವ ನೀಟ್ ಸೀಟು ಹಂಚಿಕೆ ರಾಜ್ಯ ಗ್ರಾಮೀಣ ವಿದ್ಯಾರ್ಥಿಗಳ ಕನಸನ್ನು ನುಚ್ಚುನೂರು ಮಾಡುತ್ತಿದೆ. ವೈದ್ಯಕೀಯ ಸೀಟು ಹಂಚಿಕೆ ಮಾಡಲು ದೇಶಾದ್ಯಂತ ಏಕರೂಪ ಹಾಗೂ ಪ್ರಾದೇಶಿಕ ಸಮಾನತೆ ಕಾಪಾಡುವ ನಿಟ್ಟಿನಲ್ಲಿ ಆರಂಭಿಸಿದ್ದ ನೀಟ್ ಸೌಲಭ್ಯ ಶೇ.5ರಷ್ಟು ಗ್ರಾಮೀಣ ವಿದ್ಯಾರ್ಥಿ ಗಳಿಗಷ್ಟೇ ಸಿಗುತ್ತಿದೆ.
ಅದರ ಜತೆ ಈಗ ಸೀಟು ಹಂಚಿಕೆಯೂ ವಿಳಂಬವಾಗುತ್ತಿರುವುದರಿಂದ ಆ 5ರಷ್ಟು ವಿದ್ಯಾರ್ಥಿಗಳಿಗೂ ಈಗ ನೀಟ್ ಗಗನಕುಸುಮ ಆದಂತಾಗಿದೆ. ಅಂದರೆ ಗ್ರಾಮೀಣ ವಿದ್ಯಾರ್ಥಿಗಳು ನೀಟ್ಗಾಗಿ ಕಾದು ಬೇಸತ್ತಿದ್ದು, ಅವರು ವೈದ್ಯ ಸೀಟುಗಳಿಂದ ವಂಚಿತವಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಇದರಿಂದ ಅವರು ವೈದ್ಯರ ಆಗಬೇಕೆನ್ನುವ ಕನಸು ನುಚ್ಚುನೂರಾಗುತ್ತಿದ್ದು ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಅಥವಾ ಬಿಎಸ್ಸಿ ಪದವಿಗಳಿಗೆ ಪ್ರವೇಶ ಪಡೆಯತ್ತಿದ್ದಾರೆ.
ಏಕೆಂದರೆ ನೀಟ್ ಸೀಟು ಹಂಚಿಕೆಯಾಗಿದ್ದರೆ ವೈದ್ಯ ಮತ್ತು ಎಂಜಿನಿಯರಿಂಗ್ ಎರಡು ಕಡೆ ಸೀಟ್ಗಾಗಿ ಕಾಯ ತ್ತಿರುವ ವಿದ್ಯಾರ್ಥಿಗಳು ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ನಂತರ ತೆರವಾಗುವ ಸೀಟುಗಳನ್ನು ನಂತರದ ರ್ಯಾಂಕ್ ನವರಿಗೆ ಹಂಚಿಕೆ ಮಾಡಬಹುದಿತ್ತು. ಆಗ ಗ್ರಾಮೀಣ ವಿದ್ಯಾರ್ಥಿಗಳಿಗೆ ಒಂದಷ್ಟು ವೈದ್ಯ ಸೀಟುಗಳು ಸಿಗುತ್ತಿತ್ತು. ಪ್ರಯತ್ನ ಮಾಡಬಹುದಿತ್ತು. ಆದರೆ ಈಗ ನೀಟ್ ಸೀಟು ಹಂಚಿಕೆಯಾಗದೆ ಗ್ರಾಮೀಣ ವಿದ್ಯಾರ್ಥಿಗಳು ಮೆಡಿಕಲ್ ಮತ್ತು ಎಂಜಿನಿಯರಿಂಗ್ ಎರಡೂ ಸೀಟುಗಳು ಸಿಗದೆ, ಎಂಜಿನಿಯರಿಂಗ್ ಸೀಟೂ ಸಿಗದೆ ಬಿಎಸ್ಸಿ ಪದವಿ ಪ್ರವೇಶದ ಕಡೆ ಮುಖ ಮಾಡುವಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗ್ರಾಮೀಣರು ಏಕೆ ನೀಟ್ನಿಂದ ದೂರ: ರಾಜ್ಯದಲ್ಲಿ ಸುಮಾರು 9000ಕ್ಕೂ ಹೆಚ್ಚು ವೈದ್ಯ ಸೀಟುಗಳು ಲಭ್ಯವಿದ್ದು, ಇದಕ್ಕಾಗಿ ಪ್ರತಿ ವರ್ಷ ವೈದ್ಯ ಕೀಯ ಪ್ರವೇಶಕ್ಕೆ ಸುಮಾರು 60 ಸಾವಿರ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಾರೆ. ಅವರಲ್ಲಿ ಶೇ.30ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಕೂಡ ನಿಟ್ಟಿನಲ್ಲಿ ಭಾಗವಹಿಸುತ್ತಾರೆ. ಆದರೆ ಯಶಸ್ಸು ಕಾಣುತ್ತಿರುವುದು ಕೇವಲ ಶೇ.5ರಷ್ಟು ಮಾತ್ರ. ಅಂದರೆ ಗ್ರಾಮೀಣರು ಬುದ್ಧಿವಂತರಾಗಿದ್ದು, ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸುತ್ತಾರೆ. ಆದರೂ ನೀಟ್ ನಲ್ಲಿ ಮಾತ್ರವಲ್ಲ ಯಶಸ್ವಿಯಾಗಲಾರರು. ಕಾರಣ ಅವರಿಗೆ ಸೂಕ್ತ ಮಾರ್ಗದರ್ಶನ ಇರುವುದಿಲ್ಲ.
ಪಟ್ಟಣ ಮತ್ತು ನಗರ ಪ್ರದೇಶಗಳ ಕೋಚಿಂಗ್ ಸೌಲಭ್ಯ ಸಿಗುವುದಿಲ್ಲ. ವರ್ಷಕ್ಕೆ 2 ಲಕ್ಷ ರು. ಪಾವತಿಸಿ ಹೆಚ್ಚು ಪಡೆಯಲು ಶಕ್ತರಾಗಿರುವುದಿಲ್ಲ. ಕೋಚಿಂಗ್ ಇಲ್ಲದೆ ನೀಟ್ನಲ್ಲಿ ಕೇಳುವವರ ಸ್ಪರ್ಧಾತ್ಮಕ ಪ್ರಶ್ನೆಗಳಿಗೆ ಉತ್ತರಿಸುವ ಪ್ರಾವೀಣ್ಯ ಮತ್ತು ಕೌಶಲ ಅವರಲ್ಲಿ ಇರುವುದಿಲ್ಲ. ಹೀಗಾಗಿ ಗ್ರಾಮೀಣರಿಗೆ ಲಾಭ ತರುತ್ತಿಲ್ಲ ಎನ್ನುತ್ತಾರೆ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು.
ಸರಕಾರ ಏನು ಮಾಡಬೇಕು?
ಗ್ರಾಮೀಣ ವಿದ್ಯಾರ್ಥಿಗಳ ವೈದ್ಯ ಕನಸು ನನಸಾಗಬೇಕಾದರೆ ಸರಕಾರ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಕೇವಲ ಶೇ.5ರಷ್ಟು ಗ್ರಾಮೀಣ ಕೋಟಾ ಕೊಟ್ಟರೆ ಸಾಲದು. ಬದಲಾಗಿ ಅವರನ್ನು ನೀಟ್ ಪರೀಕ್ಷೆಗೆ ಸಮರ್ಥವಾಗಿ ಸಜ್ಜುಗೊಳಿಸಬೇಕು. ಗ್ರಾಮೀಣ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ವರ್ಷ ಪಾವತಿಸಿ, ನಗರಗಳಲ್ಲಿ ಸಿಗುವ ಕೋಚಿಂಗ್ ಪಡೆಯಲು ಸಾಧ್ಯವಿಲ್ಲದ ಕಾರಣ.
ವಿಶೇಷ ಕೋಚಿಂಗ್ ಸೌಲಭ್ಯ ಕಲ್ಪಿಸಬೇಕು. ಈಗ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಡೆಸುತ್ತಿರುವ ಸಣ್ಣ ಪುಟ್ಟ ಕೋಚಿಂಗ್ ಬದಲು ವೈದ್ಯಕೀಯ ಶಿಕ್ಷಣ ಇಲಾಖೆ ಗ್ರಾಮೀಣ ಮಟ್ಟದಲ್ಲಿ ಪರೀಕ್ಷಾರ್ಥಿಗಳಿಗೆ ಕನಿಷ್ಠ 6ರಿಂದ 1 ವರ್ಷ ಗಳ ಕಾಲದ ತರಬೇತಿ ಸೌಲಭ್ಯ ಕಲ್ಪಿಸಬೇಕು ಎನ್ನುತ್ತಾರೆ ಪರಿಶ್ರಮ ನೀಟ್ ಅಕಾಡೆಮಿಯ ಮುಖ್ಯಸ್ಥ ಪ್ರದೀಪ್ ಈಶ್ವರ್ ಹೇಳುತ್ತಾರೆ.