Saturday, 23rd November 2024

ಗೋಲ್ಡನ್ ಟೆಂಪಲ್‌: 24 ಗಂಟೆ ಅಂತರದಲ್ಲಿ ಎರಡು ಹತ್ಯೆ

Golden Temple

ನವದೆಹಲಿ: ಸಿಖ್​​ರ ಪವಿತ್ರ ಧಾರ್ಮಿಕ ಕ್ಷೇತ್ರ ಸ್ವರ್ಣಮಂದಿರ ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿ ಯುವಕನನ್ನು ಹೊಡೆದು ಕೊಂದ ಘಟನೆ ಬೆನ್ನಲ್ಲೇ ಕಪುರ್ತಲಾದಲ್ಲೂ ಮತ್ತೊಬ್ಬ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ.

ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಇದೇ ರೀತಿಯ ಸಾವು ಸಂಭವಿಸಿದ 24 ಗಂಟೆಗಳ ನಂತರ ಈ ಘಟನೆ ನಡೆದಿದೆ. ಕಪುರ್ತಲಾ ಜಿಲ್ಲೆಯ ನಿಜಂಪುರ ಗ್ರಾಮದ ನಿವಾಸಿಗಳು ಗುರುದ್ವಾರದಿಂದ ವ್ಯಕ್ತಿಯನ್ನು ಹಿಡಿದಿದ್ದಾರೆ ಎನ್ನಲಾಗಿದೆ.

ವ್ಯಕ್ತಿಯು ನಿಶಾನ್ ಸಾಹಿಬ್ (ಸಿಖ್ ಧ್ವಜ) ಗೆ ‘ಅಗೌರವ’ ತೋರುತ್ತಿರುವುದು ಕಂಡುಬಂದಿದೆ ಎಂದು ಆರೋಪಿಸಿ ದ್ದಾರೆ. ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ತಲುಪಿ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಂಡರೂ ಸಿಖ್ ಗುಂಪುಗಳು ತಮ್ಮ ಮುಂದೆ ಪ್ರಶ್ನಿಸುವಂತೆ ಒತ್ತಾಯಿಸಿದವು.

ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ನಂತರ ಸ್ಥಳೀಯರು ವ್ಯಕ್ತಿಯನ್ನು ಥಳಿಸಿ ಕೊಂದಿದ್ದಾರೆ ವರದಿ ಮಾಡಿದೆ.

ಪೊಲೀಸರು ಮತ್ತು ಇತರ ಯಾವುದೇ ಏಜೆನ್ಸಿಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಬಾರದು. ಇಂತಹ ಪ್ರಕರಣ ಗಳು ನಡೆಯಲು ಪಂಜಾಬ್ ಪೊಲೀಸರು ಮತ್ತು ರಾಜ್ಯ ಸರ್ಕಾರ ಜವಾಬ್ದಾರರಾಗಿರುತ್ತಾರೆ ಎಂದು ಗುರುದ್ವಾರ ದಿಂದ ಮಾಡಲಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶನಿವಾರ ಸಂಜೆ, ಅಮೃತಸರದ ಗೋಲ್ಡನ್ ಟೆಂಪಲ್‌ನೊಳಗೆ ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್​​ನನ್ನು ಅಪವಿತ್ರಗೊಳಿಸಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಹೊಡೆದು ಸಾಯಿಸಲಾಗಿದೆ. ಅಮೃತಸರ ಪೊಲೀಸರು ಗೋಲ್ಡನ್ ಟೆಂಪಲ್ ಕಾಂಪ್ಲೆಕ್ಸ್ ಮತ್ತು ಸುತ್ತಮುತ್ತ ಕಟ್ಟೆಚ್ಚರ ವಹಿಸಿದ್ದಾರೆ.