Sunday, 15th December 2024

ಜೆಡಿಎಸ್‌ : ಕುಟುಂಬಕ್ಕೆ ಒತ್ತು, ಪಕ್ಷಕ್ಕೆ ಆಪತ್ತು !

Suraj Revanna

ಅಭಿಪ್ರಾಯ

ಮಾರುತೀಶ್ ಅಗ್ರಾರ

ದೇಶದಲ್ಲಿ ಕಾಂಗ್ರೆಸ್ ಹಾಗೂ ರಾಜ್ಯದಲ್ಲಿ ಜೆಡಿಎಸ್ ತಂತಮ್ಮ ಚಾರ್ಮ್ ಕಳೆದುಕೊಳ್ಳುತ್ತಿವೆ. ಜೆಡಿಎಸ್ ಜನರಿಂದ ದೂರವಾಗುತ್ತಿರುವುದಕ್ಕೆ ಅನೇಕ ಕಾರಣಗಳಿದ್ದರೂ ಮಿತಿಮೀರಿದ ‘ಕುಟುಂಬ ರಾಜಕಾರಣ’ವೇ ಅವುಗಳಲ್ಲಿ ಪ್ರಮುಖ. ವಿಧಾನ ಪರಿಷತ್‌ಗೆ ಸೂರಜ್ ರೇವಣ್ಣರ ಆಯ್ಕೆ ಮೂಲಕ ಗೌಡರ
ಇನ್ನೊಂದು ಕುಡಿ ರಾಜಕೀಯಕ್ಕೆ ಅಧಿಕೃತವಾಗಿ ಲಗ್ಗೆ ಇಟ್ಟಿದೆ.

ಬಹುಶಃ ಭಾರತದ ರಾಜಕೀಯ ಇತಿಹಾಸದಲ್ಲಿ ಕುಟುಂಬವೊಂದು ಈ ಪರಿಪ್ರಮಾಣದಲ್ಲಿ ರಾಜಕಾರಣದಲ್ಲಿ ತೊಡಗಿಕೊಂಡಿದ್ದು ನೋಡಿಲ್ಲ. ವಾಸ್ತವ ರಾಜಕಾರಣದಲ್ಲೂ ಇದರ ಕುರುಹುಗಳಿಲ್ಲ. ದೇಶದ ಅನೇಕ ಭಾಗ ಗಳಲ್ಲಿ ಪ್ರಾದೇಶಿಕ ಪಕ್ಷಗಳಿವೆ. ಆದರೆ ಇವರುಗಳ್ಯಾರು ದೇವೇಗೌಡರ ರೀತಿ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳಾದಿಯಾಗಿ ಇಡೀ ಕುಟುಂಬವನ್ನೇ ರಾಜಕೀಯ ಪಡಸಾಲೆಯೊಳಗೆ ತಂದು ಕೂರಿಸಿಕೊಂಡಿಲ್ಲ. ಕಾರ್ಯಕರ್ತರಿಗೆ ಮೊದಲ ಪ್ರಾಶಸ್ತ್ಯ ಕೊಡುವ ಬದಲು ಕುಟುಂಬ ಸದಸ್ಯರಿಗೆ ಆದ್ಯತೆ ಕೊಡುವ ಜೆಡಿಎಸ್‌ನ ಈ ಚಾಳಿ ಸಾಕಷ್ಟು ಬಾರಿ ಚರ್ಚೆಗೂ, ವಿವಾದಕ್ಕೂ ಕಾರಣವಾಗಿದೆ. ಗೌಡರ ಕುಟುಂಬ ರಾಜಕಾರಣದ ವ್ಯಾಮೋಹ ಸಹಜವಾಗಿಯೇ ನಾಡಿನ ಜನರ ಕೆಂಗಣ್ಣಿಗೂ ಗುರಿಯಾಗಿದೆ.

ಎರಡು ವರ್ಷದ ಹಿಂದೆ ಜೆಡಿಎಸ್‌ನಿಂದ ಹೊರಬಂದ ಎಚ್.ವಿಶ್ವನಾಥ್, ತಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದು ಕೇವಲ ನಾಮ್ ಕೇ ವಾಸ್ತೆ. ಪಕ್ಷದ ಎಲ್ಲವನ್ನೂ ಆ ಕುಟುಂಬದ ನಾಯಕರೇ ನಿರ್ಧರಿಸುತ್ತಿದ್ದರು. ಅಲ್ಲಿ ಕುಟುಂಬದ ಹೊರತಾಗಿ ಪಕ್ಷದೊಳಗಿರುವ ಇತರ ನಾಯಕರುಗಳ ಮಾತುಗಳಿಗೆ ಬೆಲೆಯಿಲ್ಲ. ಕುಟುಂಬದ ತೀರ್ಮಾನವೇ ಅಂತಿಮ ಎಂದಿದ್ದರು. ಜೆಡಿಎಸ್‌ನಿಂದ ಹೊರಬಂದ ಅನೇಕ ನಾಯಕರುಗಳ ಅಳಲು ಕೂಡ ಇದೇ ಆಗಿದೆ. ಆದರೂ ದೇವೇಗೌಡರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಜೆಡಿಎಸ್ ನ ಆಪ್ತ ಮೂಲಗಳ ಮಾಹಿತಿ ಪ್ರಕಾರ ಪಕ್ಷದೊಳಗಿನ ಅನೇಕ ನಿರ್ಧಾರಗಳು ರೇವಣ್ಣ, ಕುಮಾರಸ್ವಾಮಿ, ಭವಾನಿ ರೇವಣ್ಣ ಅವರ ಮೇಲೆಯೇ ಅವಲಂಬಿತ. ದೊಡ್ಡಗೌಡರು ಸಹ ‘ನೆಪಕ್ಕೆ ಪಟೇಲ’ ಎಂಬಂತಾಗಿzರೆ! ಹಾಗಾಗಿ ಅನೇಕ ನಾಯಕರು ಪಕ್ಷದಲ್ಲಿರಲು ಸುತಾರಾಂ ಒಪ್ಪುತ್ತಿಲ್ಲ. ಇದರ ಭಾಗವಾಗಿಯೇ ಅನೇಕರು ಈಗಾಗಲೇ ಪಕ್ಷ ತೊರೆದಿದ್ದಾರೆ.

ಇತ್ತೀಚಿಗಷ್ಟೆ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಎನ್. ಎಚ್. ಕೋನರೆಡ್ಡಿ ಕೂಡ ಕಾಂಗ್ರೆಸ್ ಸೇರಿದರು. ಜಿ.ಟಿ.ದೇವೇಗೌಡ, ಗುಬ್ಬಿ ಶಾಸಕ ಶ್ರೀನಿ ವಾಸ್ ಈಗಾಗಲೇ ಹೆಜ್ಜೆ ಹೊರಗಿಟ್ಟಿದ್ದಾರೆ. ಆದರೆ, ಅವರಿಬ್ಬರು ಯಾವ ಪಕ್ಷ ಸೇರುತ್ತಾರೆ ಎನ್ನುವುದಷ್ಟೇ ಬಾಕಿ. ಒಂದು ಮಾಹಿತಿಯ ಪ್ರಕಾರ ಉತ್ತರ ಕರ್ನಾಟಕದ ಮತ್ತೊಬ್ಬ ಪ್ರಭಾವಿ ನಾಯಕರಾದ ಸ್ಪೀಕರ್ ಬಸವರಾಜ ಹೊರಟ್ಟಿ ಅವರು ಕೂಡ ‘ದೊಡ್ಮನೆ’ಪಕ್ಷದಿಂದ ಹೊರಬರಲಿದ್ದಾರೆ.

ಕಳೆದ ಒಂದುವರೆ ವರ್ಷಗಳಲ್ಲಿ ರಾಜ್ಯದ ಯಾವುದೇ ಚುನಾವಣೆಯಲ್ಲೂ ಜೆಡಿಎಸ್ ಇತರ ಪಕ್ಷಗಳಿಗೆ ಹೇಳಿಕೊಳ್ಳುವ ಪೈಪೋಟಿಯನ್ನೇ ನೀಡಿಲ್ಲ. ಕನಿಷ್ಠ ತನ್ನ ಹಿಡಿತದಲ್ಲಿದ್ದ ಕ್ಷೇತ್ರಗಳನ್ನೂ ಉಳಿಸಿಕೊಂಡಿಲ್ಲ. ಇದಕ್ಕೆ ಪಕ್ಷ ಸಂಘಟನೆಯ ಕೊರತೆಯೇ ಕಾರಣ. ಚುನಾವಣಾ ಸಮಯದಲ್ಲಿ ಮಾತ್ರ ಕ್ಷೇತ್ರಗಳ ಕಡೆ ಹೋಗಿ ನಾಲ್ಕೈದು ಜನರನ್ನು ಸೇರಿಸಿ ಪ್ರಚಾರ  ಮಾಡಿದರೆ ಮುಗಿಯಿತು! ಅಲ್ಲಿ ಪಕ್ಷ ಸೋಲಲಿ ಅಥವಾ ಗೆಲ್ಲಲಿ ಮತ್ತೆ ಆ ಕ್ಷೇತ್ರದ ಕಡೆ ಎಡಗಾಲನ್ನೂ ಇಡುವುದಿಲ್ಲ ಗೌಡರ ಕುಟುಂಬ.

ನಿಖಿಲ್ ಕುಮಾರಸ್ವಾಮಿ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ತಾನು ಬೆಂಗಳೂರಿನಿಂದ ಬೀದರ್‌ವರೆಗೂ, ಚಾಮರಾಜನಗರ ದಿಂದ ಕರಾವಳಿವರೆಗೂ ಓಡಾಡಿ ಪಕ್ಷ ಸಂಘಟಿಸುತ್ತೇನೆ ಎಂದಿದ್ದು ಅಂದಿನ ವೇದಿಕೆಯ ಭಾಷಣಕ್ಕೆ ಸೀಮಿತವಾಯಿತು. ಸರಕಾರದ ವಿರುದ್ಧ ಜನಪರ ಹೋರಾಟ ಸಂಘಟಿಸಲು ಸಾಕಷ್ಟು ವಿಷಯಗಳಿವೆ. ಆದರೆ ಅದನ್ನು ಸದುಪಯೋಗಪಡಿಸಿಕೊಂಡು ಜನರನ್ನು ಪಕ್ಷದ ಕಡೆ ಸೆಳೆಯಬೇಕೆಂಬ
ರಾಜಕೀಯ ಅಜೆಂಡಾವೂ ಅವರ ತಲೆಯಲ್ಲಿಲ್ಲ. ಅಂದಮೇಲೆ ರಾಜ್ಯಕ್ಕೆ ಜೆಡಿಎಸ್ ನ ಅವಶ್ಯಕತೆಯಾದರು ಯಾಕೆ ಬೇಕು? ನಿಖಿಲ್ ಮತ್ತು ಪ್ರಜ್ವಲ್ ರೇವಣ್ಣ ಇಬ್ಬರೂ ಯುವಕರಿದ್ದಾರೆ. ಇಬ್ಬರಿಗೂ ಅವರದೇ ಆದ ಫೋನ್ ಫಾಲೋವರ್ಸ್ ಇದ್ದಾರೆ. ಮನಸ್ಸು ಮಾಡಿದ್ದರೆ ಇಬ್ಬರೂ ರಾಜ್ಯಾದ್ಯಂತ ಪ್ರವಾಸ ಮಾಡಿ ಯುವಕರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಪಕ್ಷ ಸಂಘಟಿಸಬಹುದಿತ್ತು.

ಸರಕಾರದ ಜನವಿರೋಧಿ ಕಾರ್ಯಕ್ರಮಗಳ ವಿರುದ್ಧ ಬೀದಿಗಿಳಿದು ಹೋರಾಡಬಹುದಿತ್ತು. ಆದರೆ ಅವರುಗಳಿಗ್ಯಾಕೋ ಪಕ್ಷವನ್ನು ಕಟ್ಟಿ-ಬೆಳೆಸುವ ಆಸಕ್ತಿ ಇದ್ದಂತಿಲ್ಲ! ಹಾಗಾಗಿ ಪ್ರಜ್ವಲ್ ಹಾಸನಕ್ಕೆ ಸೀಮಿತವಾದರೆ, ನಿಖಿಲ್ ಸಿನಿಮಾದಲ್ಲಿ ಬ್ಯುಸಿ. ದೇವೇಗೌಡರಿಗೆ ವಯಸ್ಸಾಗಿದೆ. ಕುಮಾರಸ್ವಾಮಿ ಅವರಿಗೆ ಆರೋಗ್ಯ ಸರಿಯಿಲ್ಲ. ಇನ್ನು ರೇವಣ್ಣನವರಿಗೆ ಪಕ್ಷ ಸಂಘಟನೆ, ರಾಜ್ಯ ಪ್ರವಾಸದ ಬಗ್ಗೆ ಕೇಳಲೇ ಬೇಡಿ. ಆದರೂ ಅಪ್ಪಿತಪ್ಪಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಅವರಿಗೆ ಲೋಕೋಪಯೋಗಿ ಇಲಾಖೆಯೇ ಬೇಕು!

ವಿಪರ್ಯಾಸವೆಂದರೆ ಜೆಡಿಎಸ್ ನ ಈಗಿನ ರಾಜ್ಯಾಧ್ಯಕ್ಷರು ಯಾರು ಎಂಬುದೇ ಅನೇಕರಿಗೆ ಗೊತ್ತಿಲ್ಲ! ಹೀಗಾದರೆ ಪಕ್ಷಕ್ಕೆ ಭವಿಷ್ಯ ಇರುತ್ತದಾ? ಇನ್ನು ಎಷ್ಟು ದಿನ ಅಂತ ಗೌಡರು ಕುಟುಂಬ ರಾಜಕಾರಣ ಮಾಡುತ್ತಾರೆ? ಕುಮಾರಸ್ವಾಮಿ ಅವರ ಸೊಸೆ ಹಾಗೂ ರೇವಣ್ಣನ ಮೊದಲ ಸೊಸೆಯನ್ನು ರಾಜ ಕೀಯಕ್ಕೆ ತರಬೇಕು ಎಂಬ ಅತಿಯಾದ ಕನಸೇನಾದರೂ ಜೆಡಿಎಸ್‌ಗೆ ಇದೆಯಾ? ಗೊತ್ತಿಲ್ಲ. ಆದರೆ ಒಂದು ಮಾತಂತು ಸತ್ಯ. ಇದು ಹೀಗೆ ಮುಂದು ವರಿದರೆ ಜೆಡಿಎಸ್ ಬಾರಿ ಬೆಲೆ ತೆರಬೇಕಾಗುತ್ತದೆ.

ಹಾಗಾಗಿ ಯಾವುದಕ್ಕೂ ಜೆಡಿಎಸ್ ನ ಹೆಡ್ ಮಾಸ್ಟರ್‌ಗಳು ಪಕ್ಷದ ಸಾಧಕ-ಬಾಧಕಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಮುಂದಡಿ ಇಡುವುದು ಒಳ್ಳೆಯದು.