ಕಾನೂನಿನಲ್ಲಿ ಇಂತಹ ನಿಷೇಧ ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು
ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದವರ ಮೇಲೆ ಕ್ರಮ ಸಾಧ್ಯ
ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು
ಬೆಳಗಾವಿಯಲ್ಲಿ ಪುಂಡಾಟ ಮೆರೆದ ಎಂಇಎಸ್ ಅನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಧಿಸಬೇಕು ಎಂಬ ಕೂಗು ಪ್ರಬಲವಾಗುತ್ತಿದೆ. ಆದರೆ, ಕಾನೂನಾ ತ್ಮಕವಾಗಿ ಎಂಇಎಸ್ ನಿಷೇಧ ಸುಲಭವಲ್ಲ ಎನ್ನುತ್ತಾರೆ ಕಾನೂನು ತಜ್ಞರು.
ದೇಶದಲ್ಲಿರುವ ಕಾನೂನುಗಳ ಅನ್ವಯ ಯಾವುದೇ ಸಂಘಟನೆಯ ನಿಷೇಧ ಅಷ್ಟು ಸುಲಭವಲ್ಲ. ಎಸ್ಡಿಪಿಐ, ಎಸ್ಎಫ್ಐನಂತಹ ಸಂಘಟನೆಗಳ ನಿಷೇಧ ಮಾಡಬೇಕು ಎಂಬ ಒತ್ತಾಯವೂ ಬಹಳ ದಿನಗಳಿಂದ ಇದೆ. ಶ್ರೀ ರಾಮಸೇನೆ, ಭಜರಂಗ ದಳದಂತಹ ಸಂಘಟನೆಗಳು ಕೋಮುವಾದ ಬಿತ್ತುತ್ತಿವೆ ಎಂಬ ಕಾರಣಕ್ಕೆ ಈ ಸಂಘಟನೆ ಗಳ ನಿಷೇಧವೂ ಆಗಬೇಕು ಎಂಬ ಒತ್ತಾಯವೂ ಆಗಾಗ ಕೇಳಿಬರುತ್ತದೆ.
ಆಯಾ ಸಂಘಟನೆಗಳ ಸಿದ್ಧಾಂತಗಳಿಂದ ಪ್ರೇರಿತವಾದ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಾಗ ವಿರುದ್ಧ ಸಿದ್ಧಾಂತಗಳ ಸಂಘಟನೆಗಳ ನಿಷೇಧಕ್ಕೆ ಪ್ರಸ್ತಾಪ ಸಲ್ಲಿಸುವುದು ಸಾಮಾನ್ಯ ಸಂಗತಿ. ಆದರೆ, ಅದರ ಅನುಷ್ಠಾನ ಅಷ್ಟು ಸುಲಭವಲ್ಲ. ಎಂಇಎಸ್ ಮಹಾರಾಷ್ಟ್ರದಲ್ಲಿ ಪ್ರಬಲ ಸಂಘಟನೆ. ಜತೆಗೆ ರಾಜಕೀಯ ಪಕ್ಷವಾಗಿ ಮಾನ್ಯತೆ ಪಡೆದಿದೆ. ಬೆಳಗಾವಿಯಲ್ಲಿ ಹಿಂದೆ ಎರಡು ಶಾಸಕರು ಆಯ್ಕೆಯಾಗುವಷ್ಟರ ಮಟ್ಟಿಗೆ ಪ್ರಬಲವಾಗಿ ಬೇರೂರಿತ್ತು.
ಎಂಇಎಸ್ ಹೆಸರಿನಲ್ಲಿ ಪುಂಡರು ಕನ್ನಡ ಬಾವುಟ ಸುಡುವುದು, ರಾಯಣ್ಣ ಪ್ರತಿಮೆ ಭಗ್ನಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನವಾಗಿದ್ದು, ಇಂತಹವರ ಮೇಲೆ ಕ್ರಮ ಕೈಗೊಳ್ಳಬಹುದು. ಆದರೆ, ಎಂಇಎಸ್ ಬ್ಯಾನ್ ಭಾವನಾತ್ಮಕವಾಗಿ ಮಾತ್ರ ಸಾಧ್ಯ. ಆದರೆ, ಕಾನೂನಾತ್ಮಕ ಸಾಧ್ಯತೆ ಕಡಿಮೆ.
ದೇಶದ್ರೋಹ ಪ್ರಕರಣ ದಾಖಲು: ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆ ನಾಶದಂತಹ ಕ್ರಮ ದೇಶದ್ರೋಹ. ಹೀಗಾಗಿ, ರಾಯಣ್ಣ ಪ್ರತಿಮೆ ಭಗ್ನ ಮಾಡಿ ದವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬಹುದು. ಇಂತಹ ಘಟನೆ ನಡೆಯದಂತೆ ಸರಕಾರ ಎಚ್ಚರಿಕೆ ವಹಿಸಬಹುದು. ಎಂಇಎಸ್ನ ಕಾರ್ಯ ಚಟುವಟಿಕೆಗಳ ಮೇಲೆ ನಿಗಾಯಿಡುವ ನಿಟ್ಟಿನಲ್ಲಿ ಪೊಲೀಸರು ಕಾರ್ಯ ಪ್ರವೃತ್ತರಾಗಬಹುದು. ಆದರೆ, ಎಂಇಎಸ್ ಬ್ಯಾನ್ ಅಷ್ಟು ಸುಲಭ ಸಾಧ್ಯವಲ್ಲ. ಈ ನಿಟ್ಟಿನಲ್ಲಿ ಸರಕಾರ ಹೆಜ್ಜೆಯನ್ನಿಟ್ಟರು, ಪ್ರಸ್ತಾವನೆ ಕೇಂದ್ರ ಗೃಹ ಇಲಾಖೆಗೆ ರವಾನೆಯಾಗುತ್ತದೆ. ಕೇಂದ್ರ ಈ ಪ್ರಸ್ತಾವನೆ ಒಪ್ಪಿ ಲೋಕಸಭೆ ಅಂಗೀ ಕರಿಸಬೇಕು. ಇಷ್ಟೆಲ್ಲ ರಾಜಕೀಯ ಕಾರಣಗಳಿಂದ ಸಾಧ್ಯವಿಲ್ಲದ ಮಾತಾಗಿದ್ದು, ನಿಷೇಧಕ್ಕಿಂತ ಅವರ ಆಟೋಟೋಪಕ್ಕೆ ಕಡಿವಾಣ ಹಾಕಲು ಕೆಲ ವೊಂದು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಸರಿಯಾದ ಮಾರ್ಗ ಎನ್ನಲಾಗುತ್ತಿದೆ.
ಧ್ವಜಕ್ಕೆ ಅಧಿಕೃತ ಸ್ಥಾನಮಾನ ಸಾಧ್ಯವೇ?
ಕನ್ನಡ ಧ್ವಜ ಸುಟ್ಟ ಪ್ರಕರಣ ಕನ್ನಡಿಗರ ಭಾವನೆ ಕೆರಳಿಸುವ ಪ್ರಯತ್ನ ಎನ್ನುವುದು ಸರಿ. ಆದರೆ, ಕನ್ನಡ ಧ್ವಜಕ್ಕೆ ಈವರೆಗೆ ಅಧಿಕೃತ ಸ್ಥಾನಮಾನ ಸಿಕ್ಕಿಲ್ಲ. ಈ ಹಿಂದೆ ಅಧಿಕೃತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಪ್ರಸ್ತಾವನೆ ಅಂಗೀಕರಿಸಿ, ಕೇಂದ್ರಕ್ಕೆ ಕಳುಹಿಸಲಾಗಿದೆ. ಆದರೆ, ಕೇಂದ್ರ ಸರಕಾರ ಪ್ರಸ್ತಾವನೆ ಅಂಗೀಕರಿಸಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಮತ್ತು ಭಾವಾನಾತ್ಮಕ ವಿಚಾರ ಕೆರಳಿಸುವ ಪ್ರಯತ್ನದ ಕಾರಣಕ್ಕೆ ಧ್ವಜ ಸುಟ್ಟವರ ಮೇಲೆ ಕ್ರಮ ತೆಗೆದು ಕೊಳ್ಳಬಹುದೇ ಹೊರತು, ನಾಡಧ್ವಜ ಅಧಿಕೃತವಲ್ಲದ ಕಾರಣಕ್ಕೆ ಇದೇ ವಿಚಾರ ಮುಂದಿಟ್ಟುಕೊಂಡು ಎಂಇಎಸ್ ನಿಷೇಧ ಸಾಧ್ಯವಿಲ್ಲ.
ಜತೆಗೆ, ಸಂವಿಧಾನದಲ್ಲಿ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಹೊಂದುವ ನಿಟ್ಟಿನಲ್ಲಿ ಅವಕಾಶವಿಲ್ಲ. ಜಮ್ಮು ಕಾಶ್ಮೀರಕ್ಕೆ ಮಾತ್ರವೇ ಪ್ರತ್ಯೇಕ ಧ್ವಜವಿದ್ದು, ಅದು 2019ರ ನಂತರ ಅಮಾನ್ಯಗೊಂಡಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬ ಪ್ರಸ್ತಾವನೆ ಸಲ್ಲಿಸಿದ್ದು, ಈವರೆಗೆ ಮಾನ್ಯತೆ ದೊರೆತಿಲ್ಲ.
***
ಎಂಇಎಸ್ ನಿಷೇಧ ಮಾಡಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಆದರೆ, ಆ ಸಂಘಟನೆಯವರು ನಡೆಸುವ ಅಹಿತಕರ ಘಟನೆ ಮತ್ತು ಪುಂಡಾ ಟದ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಅವಕಾಶವಿದೆ. ಪ್ರತ್ಯೇಕ ಧ್ವಜದ ವಿಚಾರದಲ್ಲಿಯೂ ಸಂವಿಧಾನ ಯಾವುದೇ ಅವಕಾಶವನ್ನು ನೀಡಿಲ್ಲವಾದ್ದರಿಂದ ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನವೂ ಅಷ್ಟು ಸುಲಭವಲ್ಲ.
– ಎಂ.ಸಿ. ನಾಣಯ್ಯ, ಮಾಜಿ ಕಾನೂನು ಸಚಿವ