ನವದೆಹಲಿ: ದೇಶದಲ್ಲಿ ಕೋವಿಡ್-19 ಸೋಂಕು ಉಲ್ಬಣವಾಗುತ್ತಿರುವ ಹೊತ್ತಿನಲ್ಲೇ ಓಮೈಕ್ರಾನ್ ಸೋಂಕಿತರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆ ಯಾಗುತ್ತಿದ್ದು, ದೇಶಾದ್ಯಂತ 1892 ಓಮೈಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದೆ.
ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ದೇಶದ ಒಟ್ಟು 23 ರಾಜ್ಯಗಳಲ್ಲಿ ಓಮೈಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದೆ.
ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 568 ಮಂದಿ ಓಮೈಕ್ರಾನ್ ಸೋಂಕು ಪ್ರಕರಣಗಳು ವರದಿ ಯಾಗಿದ್ದು, ಈ ಪೈಕಿ 259 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಎನ್ನಲಾಗಿದೆ. ಭಾನುವಾರದ ಸಂಖ್ಯೆಗಿಂತ 283 ಪ್ರಕರಣಗಳು ಹೆಚ್ಚು ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಈ ವರೆಗೂ 382 ಓಮೈಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 57 ಮಂದಿ ಮಾತ್ರ ಗುಣಮುಖರಾಗಿದ್ದಾರೆ.ದೆಹಲಿಯಲ್ಲಿ ಕಳೆದ ಮೂರು ದಿನಗಳಲ್ಲಿ ದಾಖಲಾದ ಒಟ್ಟಾರೆ ಸೋಂಕು ಪ್ರಕರಣಗಳ ಪೈಕಿ ಶೇ.81 ರಷ್ಟು ಮಾದರಿಗಳು ಓಮಿಕ್ರಾನ್‌ನಿಂದ ಸೋಂಕಿಗೆ ಒಳಗಾಗಿವೆ. ಹೆಚ್ಚಿನ ಪ್ರಕರಣಗಳು ಓಮಿಕ್ರಾನ್‌ಗೆ ಸೇರಿವೆ ಎಂದು ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.
ಇನ್ನು ಕರ್ನಾಟಕದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ 64ಕ್ಕೇರಿಕೆಯಾಗಿದ್ದು, ಈ ಪೈಕಿ 18 ಮಂದಿ ಗುಣಮುಖರಾಗಿದ್ದಾರೆ.