ಕಳೆ ತಂದ ಜೋಡೆತ್ತು ಜುಗಲ್ಬಂದಿ
ಸಿದ್ದು, ಡಿಕೆಶಿ ಸಹನಡಿಗೆಗೆ ಜೈಕಾರ
ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಘೋಷಣೆ
ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಕನಕಪುರ
ಮೇಕೆದಾಟು ಯೋಜನೆಗೆ ಆಗ್ರಹಿಸಿ ಸಂಗಮದಿಂದ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಮೂರನೇ ದಿನ ಮತ್ತಷ್ಟು ಬಿರುಸು ಪಡೆದುಕೊಂಡಿದೆ. ಎರಡು
ದಿನಗಳಿಂದ ನಡೆದು ಸುಸ್ತಾಗಿದ್ದರೂ, ಮೂರನೇ ದಿನದ ಪಾದಯಾತ್ರೆಗೆ ಕನಕಪುರದಿಂದ ಮತ್ತಷ್ಟು ಕಳೆ ಬಂದಿದ್ದು, ಇದಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ
ಸಿದ್ದರಾಮಯ್ಯ ಅವರ ಮರು ಆಗಮನ ಕಾರಣವಾಗಿತ್ತು.
ಜ್ವರದ ಕಾರಣದಿಂದ ತೆರಳಿದ್ದ ಸಿದ್ದರಾಮಯ್ಯ ಮರಳಿ ಬರುತ್ತಿದ್ದಂತೆ ಕನಕಪುರದಲ್ಲಿ ಪಾದಯಾತ್ರೆ ಕಳೆಗಟ್ಟಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಮಾನಿಗಳು, ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಮೈಸೂರು, ಚಾಮರಾಜನಗರ, ಮಡಿಕೇರಿ ಭಾಗದಿಂದ ಬಂದಿದ್ದ ಕಾರ್ಯಕರ್ತರು ಸೇರಿ ಕನಕಪುರ ಸಂಪೂರ್ಣ ಕಾಂಗ್ರೆಸ್ ಕಾರ್ಯಕರ್ತರಿಂದ ಕಿಕ್ಕಿರಿದು ಹೋಗಿತ್ತು. ಈ ನಡುವೆ ಸಿದ್ದರಾಮಯ್ಯ ಮಾತನಾಡಲು ಮೈಕ್ ಕೈಗೆತ್ತಿಕೊಳ್ಳು ತ್ತಿದ್ದಂತೆ ಜನ ಜೈಕಾರ ಹಾಕಿದರೆ, ಪಾದಯಾತ್ರೆಯಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆಗಳನ್ನು ಮೊಳಗಿಸಿದರು.
ಕನಕಪುರದ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಆರಂಭವಾದ ಮೂರನೇ ದಿನದ ಪಾದಯಾತ್ರೆ, ಕನಕಪುರ ಪುರಭವನದ ಎದುರಿನಲ್ಲಿ ಸಮಾವೇಶಗೊಂಡಿತು. ಸಾವಿರಾರು ಕಾರ್ಯಕರ್ತರು ಬಂದು ಕೂಡಿಕೊಂಡರು. ಸರ್ಕಲ್ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಜೆಸಿಬಿಗಳ ಮೂಲಕ ಬೃಹತ್ ಸೇಬಿನ ಹಾರ ಮತ್ತು ಹೂವಿನ ಹಾರಗಳನ್ನು ಹಾಕುವ ಮೂಲಕ ಸ್ವಾಗತಿಸಲಾಯಿತು.
ಅಲ್ಲಿಂದ ಡೊಳ್ಳು ಕುಣಿತ, ಗಾಡಿಗ ಕುಣಿತ, ಚನ್ನಪಟ್ಟಣದ ಬೊಂಬೆ ಕುಣಿತ, ತಮಟೆ, ನಗಾರಿ, ವೀರಗಾಸೆ ಸೇರಿ ಸಾಂಸ್ಕೃತಿಕ ಕಲಾ ತಂಡಗಳ ಜತೆಗೆ ಮೆರವಣಿಗೆ ಹೊರಟರು. ಕನಕಪುರದಿಂದ ರಾಮನಗರ ರಸ್ತೆಯಲ್ಲಿ ಪಾದಯಾತ್ರೆ ಹೊರಟಿತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್, ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅವರ ಮೇಲೆ ಅಕ್ಕಪಕ್ಕದ ಕಟ್ಟಡಗಳ ಮೇಲೆ ನಿಂತಿದ್ದ ಅಭಿಮಾನಿಗಳು ಹೂಮಳೆಗರೆಯುವ ಮೂಲಕ ಸ್ವಾಗತಿಸಿದರು. ದಾರಿಯುದ್ದಕ್ಕೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರ ಘೋಷಣೆಗಳನ್ನು ಕೂಗುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಅಲ್ಲಲ್ಲಿ ಗ್ರಾಮಸ್ಥರು, ಆರತಿ ಬೆಳಗುವ ಮೂಲಕ ಅವರಿಗೆ ಶುಭ ಹಾರೈಸಿದರು. ಪೂರ್ಣಕುಂಭ ಸ್ವಾಗತದ ಮೂಲಕ ಮಹಿಳೆಯರು ಮೆರವಣಿಗೆಗೆ ಇನ್ನಷ್ಟು ಮೆರುಗು ನೀಡಿದರು.
ಜೋಡೆತ್ತುಗಳು ಘೋಷಣೆ: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವ ಕುಮಾರ್ ಜತೆಯಾಗಿ ಮೆರವಣಿಗೆಯಲ್ಲಿ ಸಾಗಿ ಸ್ವಲ್ಪ ದೂರದ ನಂತರ ನಡಿಗೆ ಆರಂಭಿಸಿದರು. ಆ ವೇಳೆ ಅಭಿಮಾನಿಗಳ ನೂಕುನುಗ್ಗಲು ಜಾಸ್ತಿಯಾಯಿತು. ಅವರನ್ನು ಸುತ್ತುವರಿದ ಅಭಿಮಾನಿಗಳು ಜೋಡೆತ್ತುಗಳು ಒಂದಾಗಿವೆ ಎಂದು ಘೋಷಣೆ ಕೂಗಿದರು. ಸ್ಥಳೀಯ ರೈತರೊಬ್ಬರು ಜೋಡೆತ್ತು ಗಳನ್ನು ಸಿಂಗಾರ ಮಾಡಿ ಕರೆತಂದಿದ್ದರು. ಆ ಎತ್ತುಗಳು ಕೂಡ ಪಾದಯಾತ್ರೆಯಲ್ಲಿ ನಾಯಕರೊಂದಿಗೆ ಸ್ವಲ್ಪ ದೂರ ಹೆಜ್ಜೆ
ಹಾಕಿದವು. ಈ ವೇಳೆ ಕಾರ್ಯಕರ್ತರು ಪದೇ ಪದೇ ಜೋಡೆತ್ತುಗಳೆಂದು ಘೋಷಣೆ ಕೂಗಿದ್ದು ಕಂಡುಬಂತು.
ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಘೋಷಣೆ: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜತೆಯಾಗಿ ನಡೆಯುವಾಗ ಜನದಟ್ಟಣೆ ಜಾಸ್ತಿಯಾಗಿತ್ತು. ಹೀಗಾಗಿ, ಇಬ್ಬರೂ ಬೇರೆ ಬೇರೆ ತಂಡವಾಗಿ ನಡೆಯಲು ಆರಂಭಿಸಿದರು. ಆಗ ಸ್ವಲ್ಪ ಮಟ್ಟಿಗೆ ಜನಸಂದಣಿ ಚದುರಿತು. ಈ ವೇಳೆ ಮೈಸೂರು ಭಾಗದಿಂದ ಆಗಮಿಸಿದ ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಸುತ್ತುವರಿದು ಘೋಷಣೆಗಳನ್ನು ಕೂಗುತ್ತಾ ಹೆಜ್ಜೆ ಹಾಕಿದರು.
ದಾರಿಯುದ್ದಕ್ಕೂ ಸಿದ್ದರಾಮಯ್ಯ ಅವರ ಮೇಲೆ ಹೂಮಳೆ, ಸೇಬಿನ ಹಾರ ಹಾಕುವುದು ಸಾಮಾನ್ಯವಾಗಿತ್ತು. ಜತೆಗೆ ಕಾರ್ಯಕರ್ತರು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೈ ಎಂದು ಘೋಷಣೆ ಕೂಗುತ್ತಾ ಸಾಗಿದರು. ಇದು ಡಿ.ಕೆ.ಶಿವಕುಮಾರ್ ಮತ್ತು ಅವರ ಅಭಿಮಾನಿಗಳಿಗೆ ಇರುಸುಮುರುಸು ತಂದೊಡ್ಡಿದ್ದು ಸುಳ್ಳಲ್ಲ.
ನಲಪಾಡ್ ವಿರುದ್ಧ ಆಕ್ರೋಶ
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸುತ್ತಲೇ ಸುತ್ತುತ್ತಿದ್ದ ಮಹಮದ್ ನಲಪಾಡ್ ಅವರನ್ನು ಸಂಸದ ಡಿ.ಕೆ.ಸುರೇಶ್ ಎಳೆದು ದೂರ ತಳ್ಳಿದ ಘಟನೆ ಪಾದಯಾತ್ರೆ ವೇಳೆ ಜರುಗಿದೆ. ಇಬ್ಬರು ನಾಯಕರು ಜಂಟಿಯಾಗಿ ನಡಿಗೆ ಆರಂಭಿಸುತ್ತಿದ್ದಂತೆ ಅವರ ನಡುವೆ ಬಂದು ನಿಂತು ಪೋಸ್ ಕೊಡಲು ನಲಪಾಡ್ ಮುಂದಾದರು ಎನ್ನಲಾಗಿದೆ. ಇದರಿಂದ ಕುಪಿತರಾದ ಡಿ.ಕೆ. ಸುರೇಶ್, ನಲಪಾಡ್ ಅವರನ್ನು ಎಳೆದು ಪಕ್ಕಕ್ಕೆ ತಳ್ಳಿದರು. ಇದರಿಂದ ನಲಪಾಡ್ ಒಂದು ಕ್ಷಣ
ವಿಚಲಿತರಾದರು. ನಲಪಾಡ್ ಪಾದಯಾತ್ರೆಯಲ್ಲಿ ಎಲ್ಲವೂ ನನ್ನದೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ
ಅತಿಯಾಗಿ ಬಿಂಬಿಸಿಕೊಳ್ಳುತ್ತಿದ್ದರು. ಇದು ಸುರೇಶ್ ಅವರ ಕೋಪಕ್ಕೆ ಕಾರಣವಾಗಿತ್ತು. ಈ ಸಂಬಂಧ ಸೋಮವಾರ ರಾತ್ರಿಯೇ ನಲ್ಪಾಡ್ ಗೆ ಸುರೇಶ್ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಇದನ್ನು ಮೀರಿಯೂ ಮತ್ತೇ ಅದೇ ರೀತಿ ವರ್ತಿಸಿದ ನಲಪಾಡ್ ಮೇಲೆ ಸುರೇಶ್ ಸಿಡಿಮಿಡಿಗೊಂಡರು ಎಂದು ಹೇಳಲಾಗಿದೆ.
ಮೈಸೂರು ಭಾಗದ ಕಾರ್ಯಕರ್ತರು ಭಾಗಿ
ಮೂರನೇ ದಿನದ ಪಾದಯಾತ್ರೆಯಲ್ಲಿ ಸ್ಥಳೀಯ ಕಾರ್ಯಕರ್ತರ ಜತೆಗೆ ಮೈಸೂರು, ಚಾಮರಾಜನಗರ ಮತ್ತು ಮಡಿಕೇರಿ ಜಿಯ ಕಾರ್ಯಕರ್ತರು ಭಾಗಿ ಯಾಗಿದ್ದರು. ಆ ಭಾಗದ ನಾಯಕರಾದ ತನ್ವೀರ್ ಸೇಠ್, ಸೋಮಶೇಖರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವನಾರಾಯಣ, ಡಾ. ಯತೀಂದ್ರ ಸಿದ್ದರಾಮಯ್ಯ, ಮಂಜುನಾಥ್ ಮೊದಲಾದ ನಾಯಕರು ಕಾರ್ಯಕರ್ತರೊಂದಿಗೆ ಆಗಮನಿಸಿದ್ದರು. ಬುಧವಾರ ನಡೆಯುವ ಪಾದಯಾತ್ರೆಯಲ್ಲಿ ಮಂಡ್ಯ ಮತ್ತು ಹಾಸನ ಜಿಲ್ಲೆಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
***
ಇಚ್ಛಾಶಕ್ತಿ ಕೊರತೆಯಿಂದ ಬಿಜೆಪಿ ನಾಯಕರು ತಮಿಳುನಾಡು ಜತೆ ಸೇರಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಮುಂದೆ ಬಿಜೆಪಿಯ ಮತ್ತಷ್ಟು ಷಡ್ಯಂತ್ರ ಗಳನ್ನು ಬಯಲು ಮಾಡುತ್ತೇವೆ. ರೈತರು, ನಾಗರಿಕರಿಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಸರಕಾರದ ಮೇಲೆ ಒತ್ತಡ ಹೇರಲು ಪಾದಯಾತ್ರೆ ಹಮ್ಮಿಕೊಳ್ಳ ಲಾಗಿದೆ. ಆದರೆ, ಇದನ್ನು ತಡೆಯಲು ಕರೋನಾ ಪುಕಾರು ಹಬ್ಬಿಸಲಾಗುತ್ತಿದೆ. ಉತ್ತರಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ಮೂರನೇ ಅಲೆ ಇಲ್ಲವೇ? ಅಲ್ಲಿ ಚುನಾ ವಣಾ ರ್ಯಾಲಿಗಳು ನಡೆಯುತ್ತಿಲ್ಲವೇ.
– ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ
? ಗಾಣಾಳು ಬಳಿ ಮುದ್ದೆ ಊಟ ಸವಿದ ಸಿದ್ದರಾಮಯ್ಯ
? ಸಂಜೆ ವೇಳೆಗೆ ಸ್ವಲ್ಪ ದಣಿದಂತೆ ಕಂಡ ಸಿದ್ದರಾಮಯ್ಯ
? ಸಂಜೆ ನಂತರ ಕಾರಿನ ಮೂಲಕ ಚಿಕ್ಕೇನಹಳ್ಳಿಗೆ ಪ್ರಯಾಣ
? ಬೆಳಗ್ಗೆ ೧೧ ಗಂಟೆಯಿಂದ ಮೂರು ಗಂಟೆಯವರೆಗೆ ಸತತ ನಡೆದ ನಾಯಕರು
? ದಾರಿಯುದ್ದಕ್ಕೂ ನಾಯಕರಿಗೆ ಪುಷ್ಪವೃಷ್ಠಿ, ಸೇಬಿನ ಹಾರ