ಪ್ರಸ್ತುತ
ವಿಜಯ್ ದರ್‌ಡ
ಮಹಾಮೃತ್ಯುಂಜಯ ಮಂತ್ರ ಪಠಣೆ ಮಾಡುವ ಬಬಿಜೆಪಿ ನಾಯಕರು ದೇಶಕ್ಕೆ ಯಾವ ಸಂದೇಶ ಕೊಡಲು ಹೊರಟಿದ್ದೀರಿ? ಈಗ ಬೇಕಿರುವುದು ಮಹಾ ಮೃತ್ಯುಂಜಯ ಮಂತ್ರವಲ್ಲ, ಅದಕ್ಕಿಂತ ಬಹುಮುಖ್ಯವಾಗಿ ಮೋದೀಜಿಯವರ ಭದ್ರತೆಯ ವಿಚಾರದಲ್ಲಿ ಎಲ್ಲಿ ಲೋಪವಾಗಿದೆ ಎಂಬುದನ್ನು ಮೊದಲು ತಿಳಿಯ ಬೇಕು.
ಪ್ರಧಾನಮಂತ್ರಿಯಾದವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರಲಿ, ಅವರು ಈ ದೇಶದ ಅಗ್ರಣಿ ನೇತಾರ. ಅವರಿಗೆ ಕೊಡಲಾಗುವ ಭದ್ರತೆಯಲ್ಲಿ ಒಂದು ಗುಲಗುಂಜಿಯಷ್ಟು ಲೋಪವಾದರೂ ಸಹಿಸಲಾಗದು. ಅಂತಹ ಭದ್ರತಾ ಲೋಪಗಳ ಕಾರಣದಿಂದ ನಾವು ಈ ಹಿಂದೆ ಪ್ರಧಾನ ಮಂತ್ರಿ ಹುದ್ದೆಯಲ್ಲಿದ್ದವರನ್ನು ಕಳೆದುಕೊಂಡಿದ್ದೇವೆ.
ಭದ್ರತೆಯ ವಿಚಾರ ಬಂದಾಗ ರಾಜಕೀಯ ದೃಷ್ಟಿಕೋನದಿಂದ ಪರ್ಯಾಲೋಚಿಸುವುದು ತಪ್ಪು. ಹಿಂದೆ ಆಗಿರುವ ತಪ್ಪುಗಳು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲಾಗುವ ಭದ್ರತೆಯ ವಿಚಾರದಲ್ಲಿ ಪಂಜಾಬಿನಲ್ಲಿ ಆಗಿರುವ ಲೋಪವನ್ನು ಕಂಡು ಇಡೀ ದೇಶವೇ ದಿಗ್ಭೃಮೆಗೆ ಒಳಗಾಗಿದೆ. ಇಂತಹದೊಂದು ಗಂಭೀರ ಮತ್ತು ಅಕ್ಷಮ್ಯವೆನಿಸುವ ನಡೆಗೆ ಯಾರು ಜವಾಬ್ದಾರರು ಎಂಬುದನ್ನು ದೇಶ ತಿಳಿಯಬಯಸುತ್ತದೆ. ಇಲ್ಲಿ ಪಂಜಾಬ್ ಪೋಲೀಸರ ನಡವಳಿಕೆ ಅನುಮಾನ ಮೂಡಿಸು ವಂತಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ವಿಶೇಷ ರಕ್ಷಣಾ ತಂಡ (ಎಸ್‌ಪಿಜಿ)ದವರು ಎಲ್ಲಿದ್ದರು, ಏನು ಮಾಡುತ್ತಿದ್ದರು, ಬೇಹುಗಾರಿಕೆ ಪಡೆ ಏನು ಮಾಡುತ್ತಿತ್ತು? ಎಂಬುದೇ ಇಲ್ಲಿರುವ ಪ್ರಶ್ನೆ. ಈ ರಕ್ಷಣಾ ವ್ಯವಸ್ಥೆಗಳು ಪ್ರಧಾನ ಮಂತ್ರಿಗಳ ಸುರಕ್ಷೆಯ ಹೊಣೆಗಾರಿಕೆ ಹೊತ್ತಿರುವ ಸಂಸ್ಥೆಗಳಲ್ಲವೇ? ಮೊದಲಿಗೆ ನಾವು ಎಸ್‌ಪಿಜಿ ಅಂದರೇನು? ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗಮನಿಸೋಣ. 1984ರಲ್ಲಿ ಇಂದಿರಾಗಾಂಧಿಯವರ ಹತ್ಯೆಯಾದ ನಂತರದಲ್ಲಿ, ವಿಶ್ವದರ್ಜೆಯ ನುರಿತ ಮಿಲಿಟರಿ ರಕ್ಷಣಾ ತಂಡವನ್ನು ರಚಿಸುವ ಚಿಂತನೆಗೆ ಚಾಲನೆ ಸಿಕ್ಕಿತು.
ಇದನ್ನು ಪ್ರಧಾನಮಂತ್ರಿಗಳ ಮತ್ತು ಅವರ ಕುಟುಂಬದ ಸುರಕ್ಷೆಗೆ ಬಳಸುವ ಪದ್ಧತಿ ಜಾರಿಗೆ ಬಂತು. 1988ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ವಿಶೇಷ ವಿಧೇಯಕ ದಡಿಯಲ್ಲಿ ಅಂಗೀಕೃತವಾದ ಕಾಯಿದೆಯನ್ವಯ ಇದರ ರಚನೆಯಾಗಿದೆ. ಪೋಲೀಸ್ ಮತ್ತು ಅರೆಸೇನಾ ಪಡೆಯಿಂದ ಆಯ್ದ ಅನುಭವೀ ಅಧಿಕಾರಿ ಗಳನ್ನು ಎಸ್‌ಪಿಜಿಯಲ್ಲಿ ಅಳವಡಿಸಲಾಗಿದೆ. ಅಮೆರಿಕ ಅಧ್ಯಕ್ಷರ ಭದ್ರತೆಗೆ ನಿಯೋಜನೆ ಮಾಡಲಾಗುವ ಯುನೈಟೆಡ್ ಸ್ಟೇಟ್ಸ ಸೀಕ್ರೆಟ್ ಸರ್ವಿಸ್ ಏಜೆಂಟ್ಸ ತಂಡಕ್ಕೆ ಕೊಡಲಾಗುವ ತರಬೇತಿಯ ಮಾದರಿಯಲ್ಲಿಯೇ ಎಸ್‌ಪಿಜಿ ತಂಡಕ್ಕೂ ತರಬೇತು ಕೊಡಲಾಗುತ್ತದೆ.
ಅತ್ಯಾಧುನಿಕ ಶಸ್ತಗಳು ಮತ್ತು ವಿನೂತನ ಸಂಪರ್ಕ ಸಾಧನಗಳನ್ನು ಎಸ್‌ಪಿಜಿಗೆ ಒದಗಿಸಲಾಗಿದೆ. 1991ರಲ್ಲಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ
ರಾಜೀವ ಗಾಂಧಿಯವರ ಹತ್ಯೆಯಾದ ನಂತರದಲ್ಲಿ, ಮಾಜಿ ಪ್ರಧಾನಮಂತ್ರಿಗಳಿಗೆ ಮತ್ತು ಅವರ ಕುಟುಂಬಕ್ಕೂ ಎಸ್‌ಪಿಜಿ ಸುರಕ್ಷೆ ನೀಡುವ ನಿರ್ಣಯವನ್ನು 2019ರಲ್ಲಿ ಸರಕಾರ ತೆಗೆದುಕೊಂಡಿತು. ಅಧಿಕಾರದಿಂದ ನಿರ್ಗಮಿಸಿದ ನಂತರ ಐದು ವರ್ಷಗಳ ಕಾಲ ಈ ರೀತಿಯ ಭದ್ರತೆ ಒದಗಿಸುವ ಕುರಿತಾಗಿ ಕಾಯಿದೆಗೆ ತಿದ್ದುಪಡಿಯನ್ನು ತರಲಾಯಿತು. ಹೀಗಾಗಿ ಪೂರ್ವಪ್ರಧಾನಮಂತ್ರಿ ಮನಮೋಹನಸಿಂಗ್ ಅವರಿಗೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆಯನ್ನು 2019ರ ಆಗಸ್ಟಿನಲ್ಲಿ ವಾಪಸು ಪಡೆಯಲಾಯಿತು. ಅದೇ ವರ್ಷದ ನವೆಂಬರ್ ತಿಂಗಳಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾಗಾಂಧಿ, ಆಕೆಯ ಮಗ ರಾಹುಲ್ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ ವಾಧ್ರಾಗೆ ನೀಡಲಾಗಿದ್ದ ಭದ್ರತೆಯನ್ನು ಕೂಡ ವಾಪಸು ಪಡೆಯಲಾಯಿತು.
ಇಂದು ಮಾತು ಗಮನಿಸಲೇಬೇಕು, ನಮ್ಮ ದೇಶದ ರಾಷ್ಟಪತಿಗಳಿಗೂ ಎಸ್‌ಪಿಜಿ ಭದ್ರತೆ ಇಲ್ಲ. ಪ್ರಧಾನಮಂತ್ರಿಗಳ ಭದ್ರತೆಯು ವಿಚಾರದಲ್ಲಿ ಎಸ್ ಪಿಜಿ ತನ್ನದೇ ಆದ ನೀತಿಸಂಹಿತೆಯನ್ನು ಹೊಂದಿದೆ. ಅದಕ್ಕೆ ಬ್ಲೂ ಬುಕ್ ಎಂಬ ಹೆಸರಿದೆ. ಕೇವಲ ರಕ್ಷಣೆ ಕೊಡುವುದು ಮಾತ್ರ ಎಸ್‌ಪಿಜಿಯ ಉದ್ದೇಶವಲ್ಲ, ಅದಕ್ಕಿಂತ ಮುಖ್ಯ ವಾಗಿ ಭದ್ರತೆಯ ವಿಚಾರದಲ್ಲಿ ಇರುವ ಆತಂಕವನ್ನು ಮೊದಲಾಗಿ ಅರಿತುಕೊಳ್ಳುವ ಜಾಣ್ಮೆಯೂ ಅದಕ್ಕೆ ಇರಬೇಕು. ಬೇಹುಗಾರಿಕೆಯಲ್ಲಿ ಲಭ್ಯವಾಗುವ ಅಂಶಗಳ ಕ್ರೋಡೀಕರಣದೊಂದಿಗೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ.
ಪ್ರಧಾನಮಂತ್ರಿಗಳು ಎಲ್ಲಿಗಾದರೂ ಹೋಗುವಾಗ ಮುಂದಾಗಿ ರಕ್ಷಣೆ ಮಾಡುವುದು ಮಾತ್ರ ಎಸ್‌ಪಿಜಿ ಹೊಣೆಯಲ್ಲ, ಪ್ರಧಾನಮಂತ್ರಿಗಳು ಹೋಗುವ ಪ್ರದೇಶ ವನ್ನು ಸಂಪೂರ್ಣವಾಗಿ ತನ್ನ ಹತೋಟಿಗೆ ತೆಗೆದುಕೊಳ್ಳಬೇಕಾಗುತ್ತದೆ. ಹೀಗೆ ಪ್ರಧಾನಮಂತ್ರಿಗಳ ಸುರಕ್ಷೆಗೆ ಅದು ಆದ್ಯ ಗಮನ ವಹಿಸಬೇಕು. ಸುರಕ್ಷೆ ಮತ್ತು ಭದ್ರತೆಗೆ ಸಂಬಂಧಪಟ್ಟಂತೆ ನಿಯಮನಿಬಂಧನೆಗಳು ಬ್ಲೂ ಬುಕ್ ನಲ್ಲಿ ದಾಖಲಾಗಿರುತ್ತವೆ.
ಒಂದೊಮ್ಮೆ ಅಡ್ಡಿಗಳು ಬಂದರೂ ಆಕಸ್ಮಿಕವಾಗಿ ಪರಿಸ್ಥಿತಿಗೆ ತಕ್ಕಂತೆ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಎಸ್‌ಪಿಜಿ ಜತೆಗೆ ಬೇಹುಗಾರಿಕಾ ಅಧಿಕಾರಿಗಳು ನಿಕಟ ಸಂಪರ್ಕದಲ್ಲಿರುತ್ತಾರೆ ಮತ್ತು ಪ್ರಧಾನಮಂತ್ರಿಗಳು ಪ್ರವಾಸ ಮಾಡುವ ಸ್ಥಳಗಳು, ಭಾಷಣ ಮಾಡುವಲ್ಲಿ ಸೇರುವ ಜನಜಂಗುಳಿ ಬಗ್ಗೆ ಹೆಚ್ಚಿನ ಗಮನ ವಹಿಸುತ್ತಾರೆ. ಯಾವುದೇ ಅಹಿತಕರ ಘಟನೆಯ ವಾಸನೆ ಬಂದರೂ ಸರಿ ಅವರು ತತ್‌ಕ್ಷಣದಲ್ಲಿ ಪ್ರಧಾನಿ ಪ್ರಯಾಣಮಾರ್ಗ ಬದಲಿಸುತ್ತಾರೆ. ಪ್ರಸ್ತುತ ನರೇಂದ್ರಮೋದಿಯವರ 122 ಕಿಮೀ ದೂರದ ಪಂಜಾಬ್ ಪ್ರಯಾಣಕ್ಕೆ ಸಂಬಂಧಪಟ್ಟಂತೆ ಭದ್ರತಾ ವ್ಯವಸ್ಥೆಯನ್ನು ಎಸ್‌ಪಿಜಿ ಮತ್ತು ಬೇಹುಗಾರಿಕೆ ತಂಡವರು ನಿಯೋಜನೆ ಮಾಡಿದ್ದರೇ? ಪ್ರಧಾನಮಂತ್ರಿಗಳು ಹಾದುಹೋಗುವ ಪ್ರಯಾಣದ ರಸ್ತೆಯನ್ನು ಸ್ಯಾನಿಟೈಸ್ ಮಾಡುವುದಕ್ಕೆ ನಿಷ್ಟ ಒಂದು ಗಂಟೆ ಬೇಕು ಎಂದು ಪಂಜಾಬಿನ ಡಿಜಿಪಿ ಹೇಳಿದ್ದಾರೆ.
ಈ ವಿಚಾರದಲ್ಲಿ ಎಸ್.ಪಿ.ಜಿ ಮತ್ತು ಬೇಹುಗಾರಿಕಾ ತಂಡಗಳು ಸಮನ್ವಯದಿಂದ ಕೆಲಸ ಮಾಡಿಲ್ಲವೇ? ರೈತರು ಅದಾಗಲೇ ಮುಷ್ಕರದ ಪ್ರಕಟಣೆ ಮಾಡಿದ್ದರು.
ಇದೆಲ್ಲ ಇರುವಾಗ ಅಲ್ಲಿ ಪ್ರಧಾನಮಂತ್ರಿಗಳ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್ ಯಾಕೆ ಕೊಡಲಾಯಿತು. ಇದೆಲ್ಲದರ ಸಂಪೂರ್ಣ ಹೊಣೆ ಹೊರಬೇಕಾಗಿರುವುದು ಎಸ್‌ಪಿಜಿ. ನಾವು ನಮ್ಮ ದೇಶದ ಎಸ್‌ಪಿಜಿಯನ್ನು ಅಮೆರಿಕದ ಸೀಕ್ರೆಟ್ ಸರ್ವಿಸ್ ಗೆ ಹೋಲಿಕೆ ಮಾಡುತ್ತೇವೆ. ಆದರೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸ ಲಾಗುತ್ತಿದೆಯೇ? ನಾನು ಸಂಸತ್ ಸದಸ್ಯನಾಗಿzಗ, ಅಮೆರಿಕ ಅಧ್ಯಕ್ಷರು ಭಾರತಕ್ಕೆ ಭೇಟಿ ಕೊಟ್ಟ ಸಂದರ್ಭಗಳಲ್ಲಿ ಬಿಲ್ ಕ್ಲಿಂಟನ್ ಮತ್ತು ಬರಾಕ್ ಒಬಾಮಾ ಅವರ ಭದ್ರತೆಯ ವಿಚಾರಗಳನ್ನು ಅಧ್ಯಯನ ಮಾಡುವುದು ನನಗೆ ಸಾಧ್ಯವಾಗಿತ್ತು. ದೆಹಲಿಯನ್ನು ಹೇಗೆ ಅವರು ತಮ್ಮ ಹತೋಟಿಯಲ್ಲಿಟ್ಟು ಕೊಂಡಿದ್ದರು ಎಂಬುದನ್ನೂ ನಾನು ಬಲ್ಲೆ.
ಅಮೆರಿಕದ ಸೀಕ್ರೆಟ್ ಸರ್ವಿಸ್‌ನ ಏಜೆಂಟರು ಪಾರ್ಲಿಮೆಂಟ್ ಭವನವನ್ನೇ ಆಕ್ರಮಿಸಿಕೊಂಡಿದ್ದರು. ವಿಶೇಷ ವಿಮಾನದಲ್ಲಿ ನೂರಕ್ಕೂ ಹೆಚ್ಚು ತರಬೇತಾದ ಶ್ವಾನಗಳು ಬಂದಿಳಿದಿದ್ದವು. ಆ ನಾಯಿಗಳಿಗೆ ಪಂಚತಾರಾ ಹೋಟೇಲುಗಳಲ್ಲಿ ಕೊಠಡಿಗಳನ್ನು ಕಾದಿರಿಸಲಾಗಿತ್ತು. ಆ ಪೈಕಿ ಕೆಲವು ನಾಯಿಗಳಿಗೆ ಜನರಲ್, ಕರ್ನಲ್ ರ‍್ಯಾಂಕ್ ಗಳನ್ನೂ ಕೊಡಲಾಗಿತ್ತು. ಬರಾಕ್ ಒಬಾಮಾ ಅವರು ಮುಂಬಯಿಗೆ ಬಂದಿದ್ದಾಗ, ಅವರು ತಿರುಗಾಡಲಿರುವ ಪ್ರದೇಶಗಳಲ್ಲಿ ಸುರಕ್ಷತೆಯ ಹೊಣೆಯನ್ನು ಮುಂಬಯಿ ಪೋಲೀಸರು ವಹಿಸಲಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಅಮೆರಿಕದ ಸೀಕ್ರೆಟ್ ಏಜೆಂಟರು ಅದನ್ನು ತಿರಸ್ಕರಿಸಿದರು. ರಷ್ಯಾದ ಅಧ್ಯ? ಪುಟಿನ್ ಇರಬಹುದು, ಚೀನಾದ ಜಿನ್ ಪಿಂಗ್ ಇರಬಹುದು, ಬ್ರಿಟನ್ ಅಥವಾ
ಇತರೆ ದೇಶಗಳ ಪ್ರಮುಖ ನಾಯಕರಿರಬಹುದು, ಅವರು ಭದ್ರತೆಯ ವಿಷಯಕ್ಕೆ ಬಂದಾಗ ರಾಜಿ ಆಗುವುದೇ ಇಲ್ಲ. ನಮಗೆಲ್ಲ ಗೊತ್ತೇ ಇದೆ, ಶ್ರೀಮತಿ ಇಂದಿರಾ ಗಾಂಧಿ ಮತ್ತು ರಾಜೀವಗಾಂಧಿಯವರನ್ನು ನಾವು ಕಳೆದುಕೊಂಡಿದ್ದು ಇಂತಹದೇ ಭದ್ರತಾಲೋಪಗಳ ಕಾರಣದಿಂದ ಎಂಬುದನ್ನು ಮರೆಯುವಂತಿಲ್ಲ.
ರಾಜೀವಗಾಂಧಿಯವರು ಶ್ರೀಪೆರಂಬದೂರಿಗೆ ಹೋಗುವುದು ಬೇಡ ಎಂದು ಬೇಹುಗಾರಿಕೆ ಇಲಾಖಾ ಮುಖ್ಯಸ್ಥರು ಹೇಳುತ್ತಲೇ ಇದ್ದರೂ ಅದನ್ಯಾರೂ ಗಣನೆಗೆ ತೆಗೆದುಕೊಳ್ಳಲಿಲ್ಲ. ರಾಜೀವಗಾಂಧಿಯವರ ಕಾರ್ಯಕ್ರಮ ರದ್ದು ಮಾಡಿ ಎಂಬ ಮನವಿ ಇದ್ದಾಗ್ಯೂ ಅದನ್ನು ತಡೆಯಲಾಗಲಿಲ್ಲ. ಎಲಟಿಟಿಇ ಉಗ್ರಗಾಮಿಗಳ ಷಡ್ಯಂತ್ರದಿಂದಾಗಿ ರಾಜೀವ ಗಾಂಧಿಯವರು ಜೀವ ತೆರಬೇಕಾಯಿತು. ಪಂಜಾಬಿನ ವಿಷಯಕ್ಕೆ ಬರುವುದಾದರೆ ಅದು ಅತೀಸೂಕ್ಷ್ಮ ಪ್ರದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಕೇವಲ 10 ಕಿಮೀ ಅಂತರದಲ್ಲಿ ಪಾಕಿಸ್ತಾನದ ಗಡಿ ಇದೆ.
ಅಂತಹದೊಂದು ಪ್ರದೇಶದಲ್ಲಿ ಪ್ರಧಾನಮಂತ್ರಿಗಳು ಅತಂತ್ರರಾಗಿ ಇರಬೇಕಾಗಿ ಬಂತು. ಪ್ರಧಾನಮಂತ್ರಿಗಳ ಜೀವಕ್ಕೆ ಅಪಾಯ ಉಂಟಾಗುವ ಎಲ್ಲ ಸಾಧ್ಯತೆ ಗಳೂ ಅಲ್ಲಿ ಇದ್ದವು. ಪಾಕಿಸ್ತಾನ ಡ್ರೋನ್ ಮೂಲಕ ಅಲ್ಲ ಬಾಂಬ್ ದಾಳಿ ಮಾಡುತ್ತಲೇ ಇರುತ್ತದೆ. ಹಾಗಾಗಿ ಒಟ್ಟಾರೆ ವಿಷಯವನ್ನು ಯಾವುದೇ ಪಕ್ಷ ರಾಜ ಕೀಯಕ್ಕೆ ಸೀಮಿತಗೊಳಿಸದೇ ಸಮಗ್ರ ಚಿಂತನೆ ಮಾಡಬೇಕು. ಮಹಾಮೃತ್ಯುಂಜಯ ಮಂತ್ರ ಪಠಿಸುವ ಬಬಿಜೆಪಿ ನಾಯಕರು ದೇಶಕ್ಕೆ ಯಾವ ಸಂದೇಶ ಕೊಡಲು ಹೊರಟಿದ್ದೀರಿ? ಈಗ ಬೇಕಿರುವುದು ಮಹಾಮೃತ್ಯುಂಜಯ ಮಂತ್ರವಲ್ಲ, ಅದಕ್ಕಿಂತ ಬಹುಮುಖ್ಯವಾಗಿ ಮೋದೀಜಿಯವರ ಭದ್ರತೆಯ ವಿಚಾರದಲ್ಲಿ ಎಲ್ಲಿ ಲೋಪವಾಗಿದೆ ಎಂಬುದನ್ನು ಮೊದಲು ತಿಳಿಯಬೇಕು.
ಇದಕ್ಕೂ ಮೊದಲು ನಮ್ಮ ಪ್ರಧಾನಮಂತ್ರಿಗಳು 2017 ಮತ್ತು 2018ರಲ್ಲಿ ಕೂಡಮ ಗೌತಮ ಬುದ್ಧ ನಗರದಲ್ಲಿ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇದ್ಯಾಕೆ ಆಗುತ್ತಿದೆ ಎಂಬುದನ್ನು ನಾವು ಪ್ರಶ್ನಿಸಬೇಕಿದೆ. ಪ್ರಧಾನಿ ಯಾವ ರಾಜಕೀಯ ಪಕ್ಷದಿಂದ ಬಂದವರೇ ಆಗಿರಬಹುದು, ಅದಿಲ್ಲಿ ಮುಖ್ಯವಲ್ಲ, ಅವರು ದೇಶದ ಹೆಮ್ಮೆ, ಅವರ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಸಲ್ಲ.