ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ: ಸಿದ್ದು
ವಿಶೇಷ ವರದಿ: ವೆಂಕಟೇಶ ಆರ್. ದಾಸ್ ಬೆಂಗಳೂರು
ನಾವು ಕಾನೂನಿಗೆ ತಲೆ ಬಾಗುತ್ತೇವೆ. ಬಿಜೆಪಿಗರ ಕುತಂತ್ರಕ್ಕಲ್ಲ. ಮೇಕೆದಾಟು ಪಾದಯಾತ್ರೆ ಕುರಿತು ಹೈಕೋರ್ಟ್ ಏನಾದರೂ ಆದೇಶ ನೀಡಿದರೆ ಆ ಕುರಿತು ತಜ್ಞರ ಜತೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ. ಅದನ್ನು ಬಿಟ್ಟು ಬಿಜೆಪಿ ಸರಕಾರ ಷಡ್ಯಂತ್ರದ ಮೂಲಕ ನಮ್ಮ ವಿರುದ್ಧ ಕ್ರಮಕ್ಕೆ ಮುಂದಾದರೆ ಅದನ್ನು ಹೇಗೆ ಎದುರಿಸಬೇಕು ಎಂಬುದು ನಮಗೆ ಗೊತ್ತಿದೆ. ಇದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ಪಷ್ಟ ಅಭಿಪ್ರಾಯ.
ಮೇಕೆದಾಟು ಪಾದಯಾತ್ರೆಯಲ್ಲಿ ಸಕ್ರಿಯವಾಗಿ ತೊಡಗಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಿನ ಪಾದ ಯಾತ್ರೆ, ನ್ಯಾಯಾಲಯ ಈ ಕುರಿತಂತೆ ಸರಕಾರಕ್ಕೆ ನೀಡಿರುವ ನಿರ್ದೇಶನ, ಪಾದಯಾತ್ರೆಯಲ್ಲಿ ತಮ್ಮ ನಡಿಗೆ, ಕಾಂಗ್ರೆಸ್ ನ ಮುಂದಿನ ಹೋರಾಟ ಕುರಿತಂತೆ ವಿಶ್ವವಾಣಿ ಜತೆಗೆ ಅಭಿಪ್ರಾಯಗಳನ್ನು ಹಂಚಿಕೊಂಡಿ ದ್ದಾರೆ.
? ಕಾಂಗ್ರೆಸ್ ಪಾದಯಾತ್ರೆ ಕುರಿತು ಹೈಕೋರ್ಟ್ ಪ್ರಶ್ನೆ ಮಾಡಿದೆ? ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಹೈಕೋರ್ಟ್ ಆದೇಶ ನೀಡಿದರೆ ಅದನ್ನು ನಾವು ಪಾಲನೆ ಮಾಡ್ತೇವೆ. ಆದರೆ, ಈಗ ಕರೋನಾ ನಿಯಂತ್ರಣದ ಬಗ್ಗೆ ಪ್ರಶ್ನೆ ಮಾಡಿರುವುದು ಸರಕಾರವನ್ನು. ಅಸಮರ್ಥವಾಗಿದೆ ಎಂದು ಹೇಳಿರುವುದು ಕೂಡ ಸರಕಾರಕ್ಕೆ. ಇದರ ಜತೆಗೆ ಕೋರ್ಟ್ ಪಾದಯಾತ್ರೆ ಕುರಿತಂತೆ ನಮ್ಮಿಂದ ವಿವರಣೆ ಕೇಳಿದೆ. ಅದಕ್ಕೆ ಕೆಪಿಸಿಸಿ ಕಾನೂನು ಘಟಕದಿಂದ ಸೂಕ್ತ ಉತ್ತರ ಕೊಡುತ್ತೇವೆ. ಆದರೆ, ನಮ್ಮಿಂದ ಯಾವುದೇ ರೀತಿಯ ಕೊವೀಡ್ ನಿಯಮ ಉಲ್ಲಂಘನೆ ಆಗಿಲ್ಲ.
? ಕಾನೂನು ಹೋರಾಟ ಮಾಡುತ್ತೀರೋ, ಪಾದಯಾತ್ರೆ ಸ್ಥಗಿತ ಮಾಡುತ್ತೀರೋ?
ನ್ಯಾಯಾಲದ ತೀರ್ಪಿನ ಬಗ್ಗೆ ಏನು ಮಾಡಬೇಕು ಎಂಬ ಬಗ್ಗೆ ಈಗಾಗಲೇ ಚಿಂತನೆ ನಡೆದಿದೆ. ಸದ್ಯ ಕೋರ್ಟ್ ನಮಗೆ ಏನು ಹೇಳಿದೆ? ಏನು ಉತ್ತರ ಬಯಸಿದೆ ಎಂಬುದನ್ನು ಪರಿಶೀಲಿಸಿ ಉತ್ತರ ಕೊಡ್ತೇವೆ. ನಾವು ಹೋರಾಟ ನಡೆಸುತ್ತಿರುವುದು ಅಣೆಕಟ್ಟೆಗಾಗಿ. ಇದರಿಂದ ಬೆಂಗಳೂರಿಗೆ ಅನುಕೂಲ. ನಮ್ಮ ಅಧ್ಯಕ್ಷರು ಎಲ್ಲದಕ್ಕೂ ಸಿದ್ಧರಾಗಲು ತಿಳಿಸಿದ್ದಾರೆ. ಈ ಬಗ್ಗೆ ಕೋರ್ಟ್ ಆದೇಶ ನೋಡಿ ಮುಂದೆ ಯೋಚಿಸುತ್ತೇವೆ.
? ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೀರಿ, ಆರೋಗ್ಯ ಹೇಗಿದೆ?
ಮೊದಲ ದಿನ ಸ್ವಲ್ಪ ಜ್ವರ ಬಂದಿತ್ತು. ಆ ಕಾರಣಕ್ಕೆ ಒಂದು ದಿನ ವಿಶ್ರಾಂತಿ ಪಡೆದಿದ್ದೆ. ಈಗ ಎರಡು ದಿನದಿಂದ ನಡೆಯುತ್ತಿದ್ದೇನೆ. ಜನರ ಪ್ರೀತಿ ಕಂಡು ಸಂತಸ ವಾಗುತ್ತಿದೆ. ನಾನು ಯಾವಗಲೂ ಫಿಟ್. ಬಳ್ಳಾರಿ ಪಾದಯಾತ್ರೆ ಮಾಡುವ ಮೂಲಕ ಬಿಜೆಪಿಗೆ ನಡುಕ ಹುಟ್ಟಿಸಿದೆ. ಈಗ ಮೇಕೆದಾಟು ಪಾದಯಾತ್ರೆ ಸಾಗುತ್ತಿ ರುವ ರೀತಿ ನೋಡಿ ಬಿಜೆಪಿಗರಿಗೆ ಬಳ್ಳಾರಿ ಪಾದಯಾತ್ರೆಯ ನೆನಪಾಗಿದೆ. ಇದಕ್ಕಾಗಿಯೇ ಇದನ್ನು ತಡಯಲು ಇನ್ನಿಲ್ಲದ ಕುತಂತ್ರ ಮಾಡುತ್ತಿದ್ದಾರೆ. ನಾನು ಫಿಟ್ ಆಗಿದ್ದು ಮುಂದಿನ ದಿನಗಳ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ.
? ಒಂದು ವೇಳೆ ನ್ಯಾಯಾಲಯ ಪಾದಯಾತ್ರೆಗೆ ಅವಕಾಶ ನೀಡದಿದ್ದರೆ, ಮುಂದಿನ ನಡೆಯೇನು?
ಕೋರ್ಟ್ ಆದೇಶ ಇನ್ನೂ ಬಾರದ ಕಾರಣ ಈಗ ಏನೂ ಹೇಳಲು ಸಾಧ್ಯವಿಲ್ಲ. ಕೋರ್ಟ್ ಆದೇಶ ಬಂದ ನಂತರ ನಾವು ನಮ್ಮ ಕಾನೂನು ತಜ್ಞರ ಜತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅವರ ಅಭಿಪ್ರಾಯದಂತೆ ನಡೆದುಕೊಳ್ಳುತ್ತೇವೆ. ಪಾದಯಾತ್ರೆ ನಿಲ್ಲಿಸುವಂತೆ ಕೋರ್ಟ್ ಹೇಳಿರುವ ಮತ್ತು ಹೇಳುವ ಸಾಧ್ಯತೆ ಕಡಿಮೆ. ಹೀಗಾಗಿ, ನಾವು ಪಾದಯಾತ್ರೆ ಮಾಡುತ್ತೇವೆ. ನ್ಯಾಯಾಲಯದ ನಿರ್ದೇಶನ ಮತ್ತು ಕರೋನಾ ಮಾರಗಸೂಚಿಯ ಅನ್ವಯವೇ ಇದು ಮುಂದುವರಿಯಲಿದೆ. ಮುಂದೆಯೂ ಬಿಜೆಪಿ ಸರಕಾರದ ರಾಜ್ಯ ದ್ರೋಹ ನಡೆಯ ವಿರುದ್ಧ ಕಾಂಗ್ರೆಸ್ ಸಕ್ರಿಯವಾಗಿ ಹೋರಾಟ ನಡೆಸಲಿದೆ.
ಪಾದಯಾತ್ರೆ ಬಗ್ಗೆ ಜನಾಭಿಪ್ರಾಯ ಹೇಗಿದೆ?
ಜನರು ಸ್ವಯಂ ಪ್ರೇರಿತರಾಗಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಡಬಲ್ ಎಂಜಿನ್ ಸರಕಾರ ಎನಿಸಿಕೊಂಡಿರುವ ಬಿಜೆಪಿ, ಮೇಕೆದಾಟು ವಿಚಾರದಲ್ಲಿ ಏನು ಮಾಡುತ್ತಿದೆ ಎಂಬುದನ್ನು ರಾಜ್ಯದ ಜನತೆ ಅರಿತುಕೊಂಡಿದ್ದಾರೆ. ಈಗ ಪಾದಯಾತ್ರೆಗೆ ಕೈಜೋಡಿಸುವ ಮೂಲಕ ಡಬಲ್ ಎಂಜಿನ್ ಸರಕಾರಕ್ಕೆ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸಲು ತಯಾರಾಗಿದ್ದಾರೆ. ಮುಂದೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯದ ಜನತೆ ಕೈಜೋಡಿಸುತ್ತಾರೆ ಎಂಬ ವಿಶ್ವಾಸ
ಪಾದಯಾತ್ರೆಯ ಮೂಲಕ ಇಮ್ಮಡಿಯಾಗುತ್ತಿದೆ.