ಸುಪ್ತ ಸಾಗರ
ರಾಧಾಕೃಷ್ಣ ಎಸ್.ಭಡ್ತಿ
rkbhadti@gmail.com
ಆರಂಭದ ದಿನವೇ ಯಾವುದೇ ಗಿಮಿಕ್‌ಗಳಿಲ್ಲದೇ, ಉಚಿತ ಪ್ರತಿಗಳಿಲ್ಲದೇ ಪ್ರಸಾರ ಸಂಖ್ಯೆ ಎರಡು ಲಕ್ಷ ತಲುಪಿದ ಏಕೈಕ ಕನ್ನಡ ಪತ್ರಿಕೆ ಎಂಬ ದಾಖಲೆಯ ಹೆಗ್ಗಳಿಕೆ ’ವಿಶ್ವವಾಣಿ’ಯದ್ದು. ಏಕಕಾಲಕ್ಕೆ ಆರು ಆವೃತ್ತಿಗಳೊಂದಿಗೆ ಬಿಡುಗಡೆ ಹೊಂದಿದ ಪ್ರಥಮ ಪತ್ರಿಕೆಯೂ ‘ವಿಶ್ವವಾಣಿ’ಯೇ. ಓದುಗರೇ ಪತ್ರಿಕೆ ಬೆಳೆಸು ವುದು ಅಂದರೆ ಇದೇ ತಾನೆ?
ಅನುಮಾನ ಇದ್ದದ್ದು ಸಂಪಾದಕೀಯ ಸಂಗತಿಗಳ ಬಗ್ಗೆ ಅಲ್ಲವೇ ಅಲ್ಲ. ಪತ್ರಿಕೋದ್ಯಮದಲ್ಲಿ ಇನ್ನೊಂದು ಕ್ರಾಂತಿ ಘಟಿಸುತ್ತದೆ ಎಂಬುದರಲ್ಲಿ ಎರಡನೇ
ಮಾತಿರಲೇ ಇಲ್ಲ. ಆದರೆ, ಹೊಸ ಪತ್ರಿಕೆಯೊಂದನ್ನು ಆರಂಭಿಸಲು ಅಗತ್ಯ ಬೃಹತ್ ಆರ್ಥಿಕ ಮೊತ್ತ ಮುದ್ರಣ ವ್ಯವಸ್ಥೆ, ಸಂಪಾದಕಿಯೇತರ ಸಿಬ್ಬಂದಿ, ಪ್ರಸಾರಾಂಗ ಜಾಲ, ವಿತರಣಾ ಸರಪಳಿ, ಜಾಹೀರಾತು ಸಂಗ್ರಹ ಎಲ್ಲಕ್ಕಿಂತ ಹೆಚ್ಚಾಗಿ ಆಡಳಿತಾತ್ಮಕ ವಿಚಾರಗಳನ್ನು ನಿಭಾಯಿಸುವುದು ಹುಡುಗಾಟಿಕೆಯೇ? ಸಂಶಯಗಳು ಇದ್ದದ್ದು ಈ ಬಗ್ಗೆಯೇ.
ಬರೋಬ್ಬರಿ ಏಳೂವರೆ ವರ್ಷಗಳ ಹಿಂದೆ ಕನ್ನಡದಲ್ಲಿ ಹೊಸ ಪತ್ರಿಕೆ ಆರಂಭಿಸುವ ಕನಸಿನ ಮೊಟ್ಟೆಗೆ ಕಾವು ಕೊಡಲು ಕುಳಿತಾಗ ಬೇರೆಯವರನ್ನು ಮಾತ್ರವಲ್ಲ, ನಮ್ಮನ್ನೂ ಕಾಡಿದ್ದು ಇಂಥದ್ದೇ ಸಂದೇಹ. ಅದು 2015, ಮೇ 5 ವಿಶ್ವೇಶ್ವರ ಭಟ್ಟರ ಜತೆಗೆ ಕನ್ನಡಪ್ರಭ ತೊರೆದು, ರಾಜರಾಜೇಶ್ವರಿ ನಗರದ ಅವರದೇ ಮನೆಯ ಹೂದೋಟದ ನಡುವಿನ ಕೆನೋಪಿಯಲ್ಲಿ ಕುಳಿತಿದ್ದಾಗ ಆಯ್ಕೆಗಳಿಗೆ ಬರವಿಲಿಲ್ಲ. ಆದರೆ, ಅಂಥ ಪುನರಾಯ್ಕೆಗಳು ಬೇಕಿರಲಿಲ್ಲ. ಏನೇ ಆಗಲಿ, ಇನ್ನು ‘ಬಾಡಿಗೆ ಮನೆ’ಯ ಪ್ರಶ್ನೆಯೇ ಇಲ್ಲ. ಹೋದರೆ ಅದು ನಮ್ಮದೇ ‘ಸ್ವಂತ ಮನೆ’ಗೆ!
ಪುಟ್ಟದೊಂದು ಆತಂಕದ ನಡುವೆಯೇ, ಅಸೀಮ ಆತ್ಮವಿಶ್ವಾಸ, ಇನ್ನಿಲ್ಲದ ಪುಳಕ, ಕನಸಿಗೆ ರೆಕ್ಕೆ ಕಟ್ಟಿದಂತೆ, ಒಗ್ಗೂಡಿದ ಉತ್ಸಾಹ. ಅದಕ್ಕೆ ಬಲತುಂಬಲು ನಾಡಿನಾದ್ಯಂತ ನಿಂತಿರುವ ನಮ್ಮದೇ ಓದುವ ವರ್ಗ. ಜತೆಗೆ ಪತ್ರಿಕೋದ್ಯಮದಲ್ಲಿ ನಮ್ಮ ಸ್ಟ್ರೆಂತ್ ಎನಿಸಿಕೊಂಡಿರುವ ಭಟ್ಟರ ಬ್ರಾಂಡ್. ಬೃಹತ್ ಯೋಜನೆಗೆ ತಕ್ಕ ಇಂಧನ ಇರಲಿಲ್ಲ. ನಮ್ಮ ಶಕ್ತಿ ಏನಿದ್ದರೂ, ಬೌದ್ಧಿಕತೆಗೆ ಸಂಬಂಽಸಿದ್ದು. ಅದನ್ನೇ ಹೂಡಲು ಹೊರಟಿದ್ದೆವು. ಹೇಗೇ ತಿಣುಕಿದರೂ ಮೂರು ವರ್ಷಗಳ ನಷ್ಟ ಭರಿಸಲು ಟೊಂಕ ಕಟ್ಟಲೇಬೇಕಿತ್ತು.
ಜತೆಗೆ, ಇಂದಿನ ಸಾಮಾಜಿಕ ಜಾಲತಾಣಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಹಾಗೂ ಡಿಜಿಟಲ್ ಜಮಾನದಲ್ಲಿ ಮುದ್ರಣ ಮಾಧ್ಯಮ ತನ್ನ ಪ್ರಸ್ತುತತೆ ಕಳೆದು ಕೊಳ್ಳುತ್ತದೆ ಎಂಬ ಹುಸಿ ಆತಂಕವೂ ಹೂಡಿಕೆದಾರರನ್ನು ಕಾಡುತ್ತಿರುವುದು ಗಮನಕ್ಕೆ ಬಂದಿತು. ಪ್ರತಿ ಓವರ್‌ನ ಪ್ರತಿ ಚೆಂಡಿನ ನಡೆಯನ್ನು ಎವೆಯಿಕ್ಕದೆ ನೋಡಿದ ಬಳಿಕವೂ ಕ್ರಿಕೆಟ್ ಮ್ಯಾಚ್‌ವೊಂದರ, ವಿಶ್ಲೇಷಣಾತ್ಮಾಕ ಬರಹಕ್ಕಾಗಿ ಮರುದಿನದ ಪತ್ರಿಕೆಯನ್ನು ಕಾಯುವ ಮನೋಭಾವದ ನೆಲದಲ್ಲಿ ಪತ್ರಿಕೆಗಳ ಅವಸಾನ ಸನಿಹದಲ್ಲಿಲ್ಲ ಎಂಬುದನ್ನು ಅರ್ಥ ಮಾಡಿಸಬೇಕಿತ್ತು ನಾವು.
ಇಷ್ಟೇ ಅಲ್ಲ, ಹತ್ತು ಪತ್ರಿಕೆಗಳ ಜತೆಗೆ ಹನ್ನೊಂದಾಗದ ಇನ್ನೊಂದು ಪತ್ರಿಕೆಯ ಅಗತ್ಯವನ್ನು ಪ್ರತಿಪಾದಿಸಬೇಕಿತ್ತು. ಮಾರುಕಟ್ಟೆ ಗಾತ್ರ, ಓದುಗರು, ನಿರೀಕ್ಷಿತ ಜಾಹೀರಾತು ಆದಾಯ, ಮುದ್ರಣ ಖರ್ಚು, ಕಾಗದ ವೆಚ್ಚ, ಸಿಬ್ಬಂದಿಯ ಸಂಬಳ, ಕಚೇರಿ ಮೂಲಭೂತ ಸೌಕರ್ಯ, ಪ್ರಸ್ತುತ ಕನ್ನಡ ಪತ್ರಿಕೋದ್ಯಮದ
ಸ್ಥಿತಿ ಗತಿ ಇತ್ಯಾದಿ ಇತ್ಯಾದಿಗಳನ್ನೆಲ್ಲ ಕಳೆದು ಕೊನೆಗಂತೂ ನಮ್ಮ ಯೋಜನಾ ಗಾತ್ರ ಹದಿನೈದು ದಿನಗಳಲ್ಲಿ ಸಿದ್ಧಗೊಂಡಿತು. ಎಲ್ಲವೂ ಸಮ್ಮತ ಎನ್ನುವ ಸ್ಥಿತಿ ತಲುಪುವ ಹೊತ್ತಿಗೆ ‘ಬಂಡವಾಳಶಾಹಿ’ಗಳಿಗೆ ಭಟ್ಟರು ಪತ್ರಿಕೆ ಮಾಲೀಕತ್ವದ ಭಾಗವಾಗುವುದು ಬೇಡವಾಗಿತ್ತು ಎಂಬುದೂ ಸತ್ಯವೇ!
ಓದುಗರದು ಒಂದೇ ವರಾತ, ಆಗಲೇ ಶುರುವಾಗಿ ಹೋಗಿತ್ತು. ಎಲ್ಲಿದ್ದೀರಿ? ಯಾವಾಗ ಬರುತ್ತೀರಿ? ಪತ್ರಿಕೆ ಯಾವಾಗ ಬರುತ್ತದೆ? ಏನು ಹೆಸರು? ನಿಮ್ಮ ಬರಹಗಳಿಲ್ಲದೇ ಬೆಳಗಿನ ಓದು ನೀರಸವಾಗಿಬಿಟ್ಟಿದೆ. ದಿನಕ್ಕೆ ಹತ್ತಾರು ಕಾಲು, ನೂರಾರು ಮೆಸೇಜ್, ಟ್ವೀಟು, ಫೇಸ್ ಬುಕ್ ಸ್ಟೇಟಸ್ಸು, ಎದುರಿಗೆ ಸಿಕ್ಕರಂತೂ ಅದೇ ಮಾತು. ಹೀಗಾಗಿ ಕೂಸಿಗೂ ಮೊದಲೇ ಕುಲಾವಿ ಹೊಲಿಯಲು ಕುಳಿತೇ ಬಿಟ್ಟಿದ್ದೆವು. ಒಂದು ರೀತಿ ಕೆಲಸವಿಲ್ಲ, ಬಿಡುವೂ ಇಲ್ಲ ಎಂಬಂಥ ಸ್ಥಿತಿ. ಪ್ರತಿದಿನ ಬೆಳಗ್ಗೆ ಹನ್ನೊಂದಕ್ಕೆ ಹರಟೆಯ ರೂಪದಲ್ಲಿ ಆರಂಭವಾಗುತ್ತಿದ್ದ ಬ್ರೈನ್ ಸ್ಟಾರ್ಮಿಂಗ್, ಕೆಲದಿನ ಓವರ್ ನೈಟ್ ನಡೆದಿದ್ದು ಇದೆ.
‘ನಮ್ಮದೇ ಪತ್ರಿಕೆ’ ಹೇಗಿರಬೇಕು ಎಂಬುದಕ್ಕೆ, ಜಗತ್ತಿನ ಅದೆಷ್ಟೋ ಪತ್ರಿಕೆಗಳು, ವೆಬ್‌ಸೈಟ್‌ಗಳು, ಪುಸ್ತಕಗಳನ್ನು ಮಗುಚಿಹಾಕಿದ್ದು ಸುಳ್ಳಲ್ಲ. ಜತೆಗೆ ಅಂಕಣ ಗಳು, ಅಂಕಣಕಾರರು, ಮುಖಪುಟ, ಸುದ್ದಿ ಸ್ವರೂಪ, ಪತ್ರಿಕೆಯ ವ್ಯಾಪ್ತಿ, ಇತ್ಯಾದಿ ಇತ್ಯಾದಿ ಐಡಿಯಾಗಳ ಹೊಳೆ, ತುಂಬಿದ್ದವು ಥಾನುಗಟ್ಟಲೇ ಹಾಳೆ. ನಮಗಿಂತ ಓದುಗರು ಫಸ್ಟ್ ಇದ್ದರು. ಪತ್ರಿಕೆಯ ಟೈಟಲ್ ಏನಿರಬೇಕೆಂಬುದಕ್ಕೆ ದಿನದಲ್ಲಿ ಕನಿಷ್ಠ ೨೫ ಮಂದಿ ಸಲಹೆ ರೂಪದ ಸಂದೇಶ ಕಳುಹಿಸುತ್ತಿದ್ದರು. ಅಷ್ಟರಲ್ಲಿ, ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಜಾಲತಾಣಗಳಲ್ಲಿ ಅಭಿಮಾನಿಗಳ ಗ್ರೂಪ್‌ಗಳು ಸಹ ಅಸ್ತಿತ್ವ ಪಡೆದವು.
ಅದರಲ್ಲಿ ನಿರಂತರ ಚರ್ಚೆ. ‘ವಿಶ್ವ’ ಎಂಬುದು ಎಲ್ಲ ಮನಸುಗಳ ಸಾಮಾನ್ಯ ಹೂರಣ. ಬಹುತೇಕ ಶೀರ್ಷಿಕೆಗಳು ಈ ಹಾದಿಯಲ್ಲಿಯೇ ಇದ್ದವು. ಅವುಗಳಲ್ಲಿ ‘ವಿಶ್ವ ಕನ್ನಡ’, ‘ವಿಶ್ವ ವಿಜಯ’, ‘ಕನ್ನಡ ವಿಶ್ವ’ ಸಾಕಷ್ಟು ವೋಟುಗಳನ್ನು ಪಡೆದುಕೊಂಡಿದ್ದವು. ಅಷ್ಟರಲ್ಲಾಗಲೇ ತಿಂಗಳು ಕಳೆದಿತ್ತು. ಎರಡು ಪ್ರಮುಖ ಅಂಶಗಳ ಬಗ್ಗೆ ನಿರ್ಧಾರ ಕೈಗೊಳ್ಳಲೇ ಬೇಕಿತ್ತು. ಮೊದಲನೆಯದು ಪತ್ರಿಕೆಯ ಮಾಲೀಕತ್ವ, ಇನ್ನೊಂದು ಪತ್ರಿಕೆಯ ಸ್ವರೂಪ.
ಸಂಪಾದಕೀಯ ಸಿದ್ಧತೆಗಳಿಗೆ ಯಾವುದೇ ಅಡ್ಡಿ ಇರಲಿಲ್ಲ. ಪ್ರತಿ ಬೆಳಗಿನಲ್ಲೂ ಪತ್ರಿಕೆಯ ಸ್ವರೂಪದ ಬಗ್ಗೆ ಹೊಸ ಹೊಸ ಐಡಿಯಾಗಳು ಚರ್ಚೆಯಾಗುತ್ತಲೇ ಇದ್ದವು. ಈ ಹಂತದಲ್ಲೇ ಪರಿಪೂರ್ಣ ‘ಮಾಧ್ಯಮ ಮನೆ’ಯ ಕಲ್ಪನೆ ಮೂರ್ತ ರೂಪ ಕಂಡದ್ದು. ಮಾಡಿದರೆ ಕೇವಲ ಪತ್ರಿಕೆಯನ್ನಷ್ಟೇ ಅಲ್ಲ, ನಮ್ಮ ‘ಮನೆ’ಯಿಂದ ಟಿವಿ ಚಾನೆಲ್, ಡಿಜಿಟಲ್ ಪತ್ರಿಕೆ ಸೇರಿದಂತೆ ಆಧುನಿಕ ಜಾಲತಾಣಗಳಲ್ಲಿನ ಅಸ್ತಿತ್ವ, ಮಾಧ್ಯಮ ಮಹಾವಿದ್ಯಾಲಯ ಜತೆಗೊಂಡು ಇಂಗ್ಲೀಷ್ ಪತ್ರಿಕೆ ಎಲ್ಲವೂ ಹೊರಹೊಮ್ಮಬೇಕು. ಏನಾದರಾಗಲಿ, ಎಷ್ಟಾದರಾಗಲಿ, ಇವಿಷ್ಟೂ ಆಗಲೇ ಬೇಕೆಂದು ಹಠಕ್ಕೆ ನಿಂತಿದ್ದರು ವಿಶ್ವೇಶ್ವರ ಭಟ್.
ಇನ್ನು ತಡಮಾಡುವುದರಲ್ಲಿ ಅರ್ಥವಿರಲಿಲ್ಲ. ಪತ್ರಿಕೆಯ ಹೆಸರು, ಸಿಬ್ಬಂದಿ ಹಾಗೂ ಕಚೇರಿ ತಕ್ಷಣದ ಅಗತ್ಯವಾಗಿತ್ತು. ಸಾಕಷ್ಟು ಹುಡುಕಾಟ, ತಿರುಗಾಟದ ಬಳಿಕ ಸುಸ್ತಾಗಿ ದಿಕ್ಕು ತೋಚದೆ ಕುಳಿತಿದ್ದ ಸಮಯಕ್ಕೆ ಒದಗಿ ಬಂದಿದ್ದು, ರಾಜರಾಜೇಶ್ವರಿ ನಗರದ ಪಕ್ಕದಲ್ಲೇ ನಗುನಗುತ ನಿಂತಿದ್ದ ‘ಧನುಷ್ ಪ್ಲಾಜಾ’. ಅಲ್ಲೇ ಕೆಲಸಕ್ಕೆ ಕುಳಿತೇ ಬಿಟ್ಟೆವು. ನಂತರದ ಆದ್ಯತೆ ಪತ್ರಿಕೆಯ ಟೈಟಲ್‌ದಾಗಿತ್ತು. ಹೊಸ ಹೆಸರಿನ ತಡಕಾಟದಲ್ಲಿರುವಾಗಲೇ ರಾಜ್ಯದ ಕೆಲ ಜಿಲ್ಲಾ ಹಾಗೂ ವಿಭಾಗ ಮಟ್ಟದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಪತ್ರಿಕಾ ಸಂಪಾದಕರು ತಮ್ಮ ಪತ್ರಿಕೆಯ ಟೈಟಲ್ ಅನ್ನು ಹಸ್ತಾಂತರಿಸಲು ಮುಂದೆ ಬಂದಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ಕಟ್ಟಾಳು, ಹೋರಾಟಗಾರ, ನೇರ ನಿಷ್ಠುರ ವಾಗ್ಮಿ ಪಾಟೀಲ್ ಪುಟ್ಟಪ್ಪನವರ ‘ವಿಶ್ವವಾಣಿ’ಯ ಬಗ್ಗೆಯೂ ಕೇಳಿಬಂತು. ಉತ್ತರ ಕರ್ನಾಟಕ ಭಾಗದಲ್ಲಿ ತನ್ನದೇ ಛಾಪು ಮೂಡಿಸಿದ್ದು, ಹಲವು ಕ್ರಾಂತಿಗೆ ಕಾರಣವಾಗಿದ್ದ 59 ವರ್ಷಗಳ(ಆಗ) ಇತಿಹಾಸ ಹೊಂದಿದ್ದ ‘ವಿಶ್ವವಾಣಿ’ಯನ್ನೇ ನಮ್ಮದಾಗಿಸಿಕೊಳ್ಳಬಾರದೇಕೆ ಎಂಬ ಯೋಚನೆ ನಮ್ಮೊಳಗೆ ಪುಳಕ ಮೂಡಿಸಿತು.
‘ಪಾಪು’ ಬಳಿ ಹೋಗಿ ನೇರವಾಗಿ ಕೇಳುವುದು ಹೇಗೆ ಎಂಬ ಅಳುಕು. ಆದರೆ ಅವರು ಸಹ ಸಮರ್ಥರೊಬ್ಬರಿಗೆ ಪತ್ರಿಕೆಯ ಹೊಣೆಯನ್ನು ಹಸ್ತಾಂತರಿಸಿ ಪತ್ರಿಕೆಯ
ಹೆಸರಿನ ದಿನಗಳನ್ನು ಮರುಕಳಿಸಬೇಕೆಂಬ ಚಿಂತನೆಯಲ್ಲಿದ್ದಿದ್ದು ತಿಳಿದ ಮೇಲಂತೂ ಆತ್ಮವಿಶ್ವಾಸ ಇಮ್ಮಡಿಸಿತು. ಹುಬ್ಬಳ್ಳಿಯ ಸಾಹಿತ್ಯಪ್ರಕಾಶನದ ಮಾಲೀಕ ಸುಬ್ರಹ್ಮಣ್ಯಅವರ ಮೂಲಕ ಪ್ರಸ್ತಾಪ ಪುಟ್ಟಪ್ಪನವರ ಅಂಗಳಕ್ಕೆ ಹೋಗಿ ನಿಂತಿತು. ‘ಪಾಪು’ ವಯೋ ಸಹಜ ಕಾರಣಗಳಿಂದಾಗಿ ಪತ್ರಿಕೆಯನ್ನು ಪುತ್ರನಿಗೆ ಹಸ್ತಾಂತರಿಸಿ ಕೆಲ ವರ್ಷಗಳಾಗಿದ್ದವು.
ಸೆಪ್ಟೆಂಬರ್ 8, 2015ರಂದು ತೊಂಬತ್ತಾರು ವರ್ಷದ ಭೀಷ್ಮ ಪಾಟೀಲ್ ಪುಟ್ಟಪ್ಪನವರ ಮನೆಯ ಜಗಲಿಯಲ್ಲಿ ನಾನು, ಸಾಹಿತ್ಯ ಸುಬ್ಬಣ್ಣ, ಪಾಪು ಪುತ್ರ ಅಶೋಕ್ ಪಾಟೀಲ, ಅಳಿಯಂದಿರಾದ ಡಾ. ಜಿ.ಆರ್. ತಮಗೊಂಡ ಹಾಗೂ ಡಾ.ವಾಲಿ ಸೇರಿದೆವು. ಹಿರಿಯಜ್ಜ ಸ್ವಾತಂತ್ರ ಪೂರ್ವದ ದಿನಗಳನ್ನು ಮೆಲುಕ ತೊಡಗಿದರು. ಲೋಕಶಿಕ್ಷಣ ಟ್ರಸ್ಟ್‌ನ ಮೊಹರೆ ಹನುಮಂತರಾಯರ ಉದಾರ ನೆರವು, ಟಿ ಎಂ ಪೈಗಳ ಸಹೃದಯತೆ, ಪ್ರಪಂಚಕ್ಕೆ ಬಿದ್ದ ಮುನ್ನುಡಿ ಇತ್ಯಾದಿ ಇತ್ಯಾದಿ ಗಳನ್ನು ಸವಿಸ್ತಾರವಾಗಿ ಹೇಳುತ್ತಿದ್ದರು ಪಾಪು.
ದಿನಾಂಕ ಸಹಿತ ಘಟನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದ ಅವರ ಮಾತಿನ ಪರಿಗೆ ಸೋತಿದ್ದೆವು. ನಿಧಾನಕ್ಕೆ ‘ವಿಶ್ವವಾಣಿ’ ಹಸ್ತಾಂತರದ ಬಗ್ಗೆ ಮಾತು ಹೊರಳಿತು. ಬೆಳಗ್ಗೆ 10ಕ್ಕೆ ಆರಂಭವಾದ ಮಾತು ಊಟದ ವಿರಾಮದವರೆಗೂ ಮುಂದುವರಿಯಿತು. ತುಸು ವಿಶ್ರಾಂತಿಯ ಬಳಿಕ ಸಂಜೆ ೪ಕ್ಕೆ ಮತ್ತೆ ಬೈಠಕ್.
ಹೀಗೆಯೇ ಮೂರುದಿನ ಮುಂದುವರಿದಿತ್ತು. ಕೊನೆಗೂ ಭಟ್ಟರಂಥ ಸಮರ್ಥರ ಕೈಗೆ ಪತ್ರಿಕೆಯ ನೊಗ ನೀಡಲು ಮಹಾ ಜಿಗುಟು ಸ್ವಭಾವದ ಪಾಪು ಮನ ಮಾಡಿದ್ದರು. ಎಲ್ಲ ವ್ಯವಹಾರಗಳ ಹೊರತಾಗಿ ನಿರ್ಮಲ ಭಾವದಿಂದ, ಪತ್ರಿಕೆ ನೂರ್ಕಾಲ ಕನ್ನಡಿಗರ ಜನಮಾನಸ ತಲುಪುವ ವಿಶ್ವಾಸ, ಆಶಯದೊಂದಿಗೆ ‘ವಿಶ್ವವಾಣಿ’ಯನ್ನು ವಿಶ್ವೇಶ್ವರ ಭಟ್ಟರಿಗೆ ನೀಡಲು ಸಮ್ಮತಿಸಿದಾಗ ಯುದ್ಧ ಗೆದ್ದ ಅನುಭವ.
ಸೆಪ್ಟೆಂಬರ್ 11, 2015ರಂದು ಪಾಟೀಲ ಪುಟ್ಟಪ್ಪನವರ ಸಂಸ್ಥಾಪಕತ್ವ, ಅಶೋಕ ಪಾಟೀಲರ ಸಂಪಾದಕತ್ವದ ‘ವಿಶ್ವವಾಣಿ’ ವಿಶ್ವೇಶ್ವರ ಭಟ್ ಅವರ ಸಂಪಾ ದಕತ್ವಕ್ಕೆ ಸುಸೂತ್ರವಾಗಿ ಹಸ್ತಾಂತರವಾಯಿತು. ಮುನ್ನಾ ದಿನವೇ ಬೆಂಗಳೂರಿನಿಂದ ಬಂದು ಹುಬ್ಬಳ್ಳಿಯ ಕೆ.ಎಲ್.ಇ ಗೆಸ್ಟ್‌ಹೌಸ್‌ನಲ್ಲಿ ಉಳಿದಿದ್ದ ವಿಶ್ವೇಶ್ವರ ಭಟ್, ಜಿಲ್ಲಾ ನೋಂದಣಾಧಿಕಾರಿಗಳ ಸಮ್ಮುಖ ದಲ್ಲಿ ಪತ್ರಿಕೆಯ ಹಕ್ಕನ್ನು ಪಡೆದು, ಜಿಲ್ಲಾ ದಂಡಾಧಿಕಾರಿಗಳ ಎದುರು ಘೋಷಣಾ ಪತ್ರ ಹೊರಡಿಸಿಯೇ ಬಿಟ್ಟರು.
ಇದಕ್ಕೂ ಮೊದಲು ನಮ್ಮ ಯೋಜನೆಗೊಂದು ಸಾಂಸ್ಥಿಕ ಸ್ವರೂಪ ನೀಡುವ ಪ್ರಕ್ರಿಯೆಗಳೂ ಸಾಗಿದ್ದವು. ಇಷ್ಟ ಮಿತ್ರರು, ಹಿತೈಷಿಗಳು, ಓದುಗ ಸಮೂಹದಿಂದ ನೂರಾರು ಹೆಸರುಗಳ ಪಟ್ಟಿ, ಸಲಹೆ ರೂಪದಲ್ಲಿ ಬಂದಿತ್ತು. ಅದರಲ್ಲೊಂದು ‘ವಿಶ್ವಾಕ್ಷರ’. ಇದೇ ಧಾಟಿಯಲ್ಲಿ ಇನ್ನೂ ಹಲವು ಮಂದಿ ಹೆಸರನ್ನು ಸೂಚಿಸಿದ್ದರು. ‘ಅಕ್ಷರ’ ಎಂದರೆ ನಾಶವಿಲ್ಲದ್ದು ಎಂಬ ವಿಶೇಷ ಅರ್ಥವೂ ಧ್ವನಿಸುತ್ತದೆ. ವಿಶ್ವೇಶ್ವರ ಭಟ್ ಅವರನ್ನು ಆತ್ಮೀಯ ಸ್ನೇಹಿತರ ಬಳಗ ‘ವಿಶ್ವ’ ಎಂದೇ ಪ್ರೀತಿಯಿಂದ
ಕರೆಯುತ್ತಿದೆ. ‘ವಿಶ್ವ’ ಮತ್ತು ಅವರ ‘ಅಕ್ಷರ’ ಎಂಬರ್ಥ ದಲ್ಲೂ ‘ವಿಶ್ವಾಕ್ಷರ’ ಸೂಕ್ತವೆನಿಸಿತು. ಅದನ್ನೇ ಆಯ್ದು ಸಂಸ್ಥೆಗೆ ‘ವಿಶ್ವಾಕ್ಷರ ಮೀಡಿಯಾ ಪ್ರೈವೇಟ್ ಲಿಮಿಟೆಡ್’ ಎಂದು ನಾಮಕರಣ ಮಾಡಿ ನೋಂದಣಿ ಮಾಡಲಾಯಿತು.
ಸಂಪಾದಕೀಯ ಸಿಬ್ಬಂದಿ ನೇಮಕ ಪ್ರಶ್ನೆ ಬಂದಾಗ ಈಗಿರುವ ಪತ್ರಕರ್ತರ ಹೊರತಾಗಿ ಹೊಸಬರದ್ದೇ ಒಂದು ತಂಡ ಕಟ್ಟಬೇಕು. ಪತ್ರಿಕೋದ್ಯಮಕ್ಕೆ ಹೊಸ ನೀರನ್ನು ಹರಿಸಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು. ‘ಎಳೆನಿಂಬೆ ಕಾಯಿಗಳು ಬೇಕಾಗಿದ್ದಾರೆ’ ಎಂಬ ವಿಭಿನ್ನ, ಆಕರ್ಷಕ ಜಾಹೀರಾತು ಮಾದರಿಯೊಂದಿಗೆ ಪತ್ರಿಕೋದ್ಯಮ ನೇಮಕ ಪ್ರಕ್ರಿಯೆಗೆ ಹೊಸ ಭಾಷ್ಯ ಬರೆದದ್ದು ಇತಿಹಾಸ. ನಮಗಾಗ ಬೇಕಿದ್ದುದು ‘ಪತ್ರಿಕೋದ್ಯಮ ಪಠ್ಯ’ದಲ್ಲಿ ಡಿಸ್ಟಿಂಕ್ಷನ್ ಪಡೆದವರು ಅಲ್ಲ. ಸುದ್ದಿಯ ವಾಸನೆ ಗ್ರಹಿಸಬಲ್ಲ ಸೂಕ್ಷ್ಮ ಮತಿಯ, ಶ್ರದ್ಧಾಳು, ಕ್ರಿಯಾಶೀಲ ಯುವ ಮನಸ್ಸುಗಳನ್ನ ಹುಡುಕಿ ಹೊರಟಿದ್ದೆವು. ಹೀಗಾಗಿ ಆವರೆಗೆ ಯಾವೊಂದು ಪತ್ರಿಕೆಗಳೂ ನಡೆಸಿಲ್ಲದ ವಿಭಿನ್ನ, ಸ್ಪರ್ಧಾತ್ಮಕ ಪರೀಕ್ಷೆ ಮಾದರಿಯ ಪ್ರವೇಶ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.
ನಿರೀಕ್ಷೆ ಯಂತೆ ಅಪರೂಪದ, ಉತ್ಸಾಹದಿಂದ ಚಿಮ್ಮುತ್ತಿದ್ದ ಹಲವು ಕ್ಷೇತ್ರಗಳಲ್ಲಿ(ಪತ್ರಿಕೋದ್ಯಮ ಮಾತ್ರವಲ್ಲ) ಓದಿದ್ದ ಯುವ ಮನಸುಗಳು ವಿಭಾಗಕ್ಕೆ ಆಯ್ಕೆಯಾಗಿದ್ದವು. ಓಹ್! ಆ ವೈವಿಧ್ಯಕ್ಕೆ ಅವರೇ ಸಾಟಿ. ಅಂಥ ‘ಎಳೆ ನಿಂಬೆ ಕಾಯಿ’ಗಳಿಗೆ ಸತತ 2 ತಿಂಗಳು ಪತ್ರಿಕೋದ್ಯಮದ ಪ್ರಾಥ ಮಿಕ ಪಾಠದಿಂದ ಆರಂಭಿಸಿ, ಪುಟ ವಿನ್ಯಾಸ, ‘ಸಂಪಾದಕೀಯ’ ಬರಹದವರೆಗೆ ಪ್ರತಿಯೊಂದರ ಬಗ್ಗೆಯೂ ತರಬೇತಿ ನೀಡಿ, ಪತ್ರಿಕೆ ಆರಂಭಿಸಿದ್ದು ಸಹ ದಾಖಲೆ. ನಿಜವಾದ ಯುದ್ಧ ಈಗ ಆರಂಭವಾಗಿತ್ತು, ಮನದ ಒಳಗೂ. ಏಕೆಂದರೆ ಜನವರಿ ೧೫ರ ಮಕರ ಸಂಕ್ರಾಂತಿಗೆ ಪತ್ರಿಕೆಯ ಮೊದಲ ಪ್ರಕಟಣೆಯ ದಿನಾಂಕ ಘೋಷಣೆ ಆಗಿ ಹೋಯಿತು. ಹೇಳಿ ಕೇಳಿ ಪತ್ರಕರ್ತರೆಂದರೆ ‘ಡೆಡ್ ಲೈನ್ ವೀರರು’. ಅದಿಲ್ಲದೇ ಯಾವುದೇ ಕೆಲಸವನ್ನು ಹೀಗೆ ಸುಮ್ಮನೆ ಮುಗಿಸಿ ಕುಳಿತುಕೊಳ್ಳುವುದು ನಮ್ಮಿಂದಾಗದು.
ಹೀಗಾಗಿ ದಿನಾಂಕ ಘೋಷಿಸಿಯೇ ಬಿಟ್ಟೆವು. ಬೆಳಗಾಗುವುದು ಕಾಣುತ್ತಿತ್ತು. ಕತ್ತಲೆ ಆವರಿಸುವುದು ಅರಿವಿಗೆ ಬರುತ್ತಿತ್ತು. ದಿನಗಳು ಉರುಳುತ್ತಲೇ ಇದ್ದವು. ಡಿಸೆಂಬರ್ ಕಾಲಿಟ್ಟೇ ಬಿಟ್ಟಿತ್ತು. ಎಲ್ಲರೂ ವರ್ಷಾಂತ್ಯದ ರಜೆ, ಪ್ರವಾಸ, ಮೋಜಿನ ಗುಂಗಿನಲ್ಲಿದ್ದರೆ ನಾವು ಕುದಿಮರಳು ಸ್ಥಿತಿಯಲ್ಲಿ. ಅವತ್ತು ಡಿಸೆಂಬರ್ ನಾಲ್ಕು, ಭಟ್ಟರು ಒಂದೇ ಸಾಲಿನ ಘೋಷಣೆ ಹೊರಡಿಸಿದರು- ‘ನಮ್ಮ ಸಂಸ್ಥೆಗೆ ಸಂಬಳ, ಹುದ್ದೆಗಾಗಿ ಬರುವ ಬದಲು ಸದೃಢ, ಆರೋಗ್ಯಕಾರಿ ಪತ್ರಿಕೋದ್ಯಮ ಅನುಭವ ಹಾಗೂ ಪ್ರೀತಿಯಿಂದ ಕೆಲಸ ಮಾಡಲು ಬರುವವರೆಲ್ಲ ಬರಬಹುದು’. ಬೆಳಕು ಹರಿಯುವುದರೊಳಗೆ ಹತ್ತು ಕೈಗಳೊಂದಿಗೆ ಇನ್ನು ನೂರಾರು ಕೈಗಳು ಸೇರಿದ್ದವು.
ಭಟ್ಟರ ಆ ಕರೆಗೆ ಓಗೊಟ್ಟು ಬಂದವರಿಂದ ಮೂರೇ ದಿನದಲ್ಲಿ ಕಚೇರಿ ತುಂಬಿ ತುಳುಕುತ್ತಿತ್ತು.
ಬಂದವರೆಲ್ಲ ಪತ್ರಿಕೋದ್ಯಮದಲ್ಲಿ ಒಬ್ಬರನ್ನು ಒಬ್ಬರು ಮೀರಿಸುವವರೇ. ನಾಲ್ಕು ಹಗಲು ನಾಲ್ಕು ರಾತ್ರಿ ದುಡಿದು ಕಚೇರಿಯನ್ನು ಕೆಲಸಕ್ಕೆ ಅಣಿಗೊಳಿಸಿಕೊಟ್ಟಾಗ ಡಿಸೆಂಬರ್ 29. ಹೊಸ ವರ್ಷ ಜನವರಿ ೧ರಂದು ಹೊಸ ಸಂಪಾದಕೀಯ ಕಚೇರಿಯ ಪ್ರವೇಶ. ಅವತ್ತಿನಿಂದಲೇ ಪ್ರಾಯೋಗಿಕ ಸಂಚಿಕೆಯ ಕೆಲಸ ಆರಂಭವಾಗೇ ಬಿಟ್ಟಿತು. ಜನರ ನಿರೀಕ್ಷೆ ಆಗಲೇ ಮುಗಿಲು ಮುಟ್ಟಿತು. ಪತ್ರಿಕೆಯ ಲಾಂಚಿಂಗ್ ದಿನ ಹತ್ತಿರ ಬರುತ್ತಿದ್ದಂತೆ ಎದೆ ಬಡಿತ ಜಾಸ್ತಿ ಆಗುತ್ತಿತ್ತು. ರಾಜ್ಯಾದ್ಯಂತ ಪತ್ರಿಕೆಯ ಪ್ರಸಾರ ಜಾಲವನ್ನು ಸೃಷ್ಟಿಸುವುದು ನಿಜಕ್ಕೂ ಸವಾಲಾಗಿತ್ತು. ಪ್ರತಿಸ್ಪರ್ಧಿ ಪತ್ರಿಕೆಗಳವರೂ ಇದೇ ಕಾರಣಕ್ಕೆ ನಿರಾಳವಾಗಿದ್ದರು. ‘ಭಟ್ಟರು ಅತ್ಯುತ್ತಮ ಪತ್ರಿಕೆ ತರುವುದರಲ್ಲಿ ಅನುಮಾನವಿಲ್ಲ. ಆದರೆ ಜಾಹೀರಾತು, ಪ್ರಸಾರ ವ್ಯವಸ್ಥೆ ಅವರಿಗೇನು ಗೊತ್ತು? ಇದರಲ್ಲಿ ಗುರಿ ತಲುಪುವುದು ಸಾಧ್ಯವೇ ಇಲ್ಲದ ಮಾತು’ ಎಂಬರ್ಥ ದಲ್ಲಿ ಎಲ್ಲರೂ ಹೇಳುತ್ತಿದ್ದರು.
ಅದರ ಸಂಕಷ್ಟದ ಬಗ್ಗೆ ನಮಗೂ ಅರಿವಿತ್ತು. ಉಫ್… ಪ್ರಸಾರಾಂಗ ವ್ಯವಸ್ಥೆ ಬಹು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು ನೂರಕ್ಕೆ ನೂರು ನಿಜ. ಆದರೆ ಪ್ರತಿ ಸ್ಪರ್ಧಿಗಳಂದ ರೀತಿಯಲ್ಲ. ಒಂದೊಂದು ಊರಲ್ಲೂ ಕನಿಷ್ಠ ಮೂವರು ಮುಂಗಡ ಹಣದೊಂದಿಗೆ ರೇಸಿಗಿಳಿದರು. ಕೆಲವೆಡೆ ಅಕ್ಷರಶಃ ವಾಕ್ಸಮರವೂ ನಡೆಯಿತು. ವಿಶೇಷವೆಂದರೆ ಎಲ್ಲ ಪತ್ರಿಕೆಗಳಿಗಿಂತ ಮುಂಗಡ ಹೆಚ್ಚು ನಿಗದಿಗೊಳಿಸಿದ್ದರೂ ಅವರಲ್ಲಿ ಹಿಂಜರಿಕೆ ಇರಲಿಲ್ಲ. ಪ್ರಕಟಣೆಯ ದಿನಕ್ಕೆ ಇನ್ನೂ ಹದಿನೈದು ದಿನವಿದೆ ಎನ್ನುವಾಗಲೇ ಅಂತಿಮ ಪ್ರಸಾರ ಸಂಖ್ಯೆ ಒಂದೂವರೆ ಲಕ್ಷ ದಾಟಿತ್ತು. ಬಹುಶಃ ಆರಂಭದ ದಿನವೇ ಯಾವುದೇ ಗಿಮಿಕ್ ಗಳಿಲ್ಲದೇ, ಉಚಿತ ಪ್ರತಿಗಳಿಲ್ಲದೇ ಪ್ರಸಾರ ಸಂಖ್ಯೆ ಎರಡು ಲಕ್ಷ ತಲುಪಿದ ಏಕೈಕ ಕನ್ನಡ ಪತ್ರಿಕೆ ಎಂಬ ದಾಖಲೆಯ ಹೆಗ್ಗಳಿಕೆ ’ವಿಶ್ವವಾಣಿ’ ಯದ್ದು.
ಮಾತ್ರವಲ್ಲ ಏಕಕಾಲಕ್ಕೆ ಆರು ಆವೃತ್ತಿಗಳನ್ನು ಹೊಂದಿ ಬಿಡುಗಡೆ ಹೊಂದಿದ ಪ್ರಥಮ ಪತ್ರಿಕೆಯೂ ‘ವಿಶ್ವವಾಣಿ’ಯೇ. ನಿಜವಾಗಿ ಓದುಗರೇ ಪತ್ರಿಕೆಯನ್ನು
ಬೆಳೆಸುವುದು ಅಂದರೆ ಇದೇ ತಾನೆ? ಅದೇನು ಮೋಡಿಯೋ, ಏನು ಮಾಯವೋ… ಯಾರೂ ಯಾರನ್ನೂ ಕೋರಲಿಲ್ಲ. ಯಾರೂ ಹೀಗೆಯೇ ಮಾಡಿ ಎಂದು
ಕರೆ ನೀಡಲಿಲ್ಲ. ಜನ ಹುಚ್ಚೆದ್ದು ಹೊರಟಿದ್ದರು. ಪ್ರತಿ ತಾಲೂಕು, ಜಿಲ್ಲೆ, ಹೋಬಳಿ ಕೊನೆಗೆ ಗ್ರಾಮ ಗ್ರಾಮಗಳಲ್ಲಿ ಸ್ಥಳೀಯ ಮುಖಂಡರು, ಸಂಘಟನೆಯ ಪದಾಽಕಾರಿಗಳು, ಕಾರ್ಯಕರ್ತರು ಸ್ವತಃ ತಮ್ಮನ್ನು ತಾವೇ ‘ವಿಶ್ವವಾಣಿ’ಯ ರಾಯಭಾರಿಗಳೆಂದು ಗುರುತಿಸಿಕೊಂಡರು.
ಸ್ವ-ಇಚ್ಛೆಯಿಂದ ಪತ್ರಿಕೆಯ ಪರವಾಗಿ ಪ್ರಚಾರಕ್ಕೆ ಇಳಿದರು. ತಮ್ಮದೇ ಖರ್ಚಿನಲ್ಲಿ ಬ್ಯಾನರ್‌ಗಳನ್ನು ಮಾಡಿಸಿ ಊರಿನ ಪ್ರಮುಖ ವೃತ್ತ, ರಸ್ತೆ, ಹೆದ್ದಾರಿಗಳಲ್ಲಿ ಕಟ್ಟಿದರು. ಪುಟ್ಟ ಪುಟ್ಟ ತಂಡಗಳಲ್ಲಿ ಮನೆ ಮನೆಗೆ ಹೋಗಿ ಪ್ರಚಾರ ಆರಂಭಿಸಿದರು. ಯಾರಿಗೂ ಯಾವುದೇ ಹಣಕಾಸು ಇತ್ಯಾದಿ ನೆರವನ್ನು ಸಂಸ್ಥೆ ನೀಡಲಿಲ್ಲ.
ಹಾಗೆಂದು ಅದರಿಂದ ಅವರಿಗೇನೂ ಲಾಭವೂ ಇರಲಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಪ್ರತಿಯೊಬ್ಬರೂ ಪತ್ರಿಕೆಯನ್ನು ‘ತಮ್ಮದು’ ಎಂದುಕೊಂಡರು. ಪ್ರೀತಿಯ ಹೊಳೆ ಹರಿಸಿದರು. ಪ್ರಕಟಣೆಗೂ ಮುನ್ನವೇ ನಾಡಿನ ಮನೆ ಮಾತಾದ ಪತ್ರಿಕೆ ಇತಿಹಾಸದಲ್ಲಿ ಇನ್ನೊಂದು ಇರಲಿಕ್ಕಿಲ್ಲ.
ಸರಿಯಾಗಿ ಆರು ವರ್ಷಗಳ ಹಿಂದೆ. ಸಂಕ್ರಾಂತಿಯ ಮುಸ್ಸಂಜೆಯ ಗೂಧೂಳಿ ಮುಹೂರ್ತದಲ್ಲಿ ನಭೂತೋ ಎಂಬಂತೆ ಲಕ್ಷಾಂತರ ಅಭಿಮಾನಿಗಳ, ಗಣ್ಯ ಮಾನ್ಯರ ಸಮ್ಮುಖ ಪತ್ರಿಕೆ ಬಿಡುಗಡೆಯೂ ಆಯಿತು. ಮುಂದಿನ ದೆಲ್ಲವೂ ಇತಿಹಾಸ. ಪತ್ರಿಕೆಯ ಕನಸಿಗೆ ಹೆಗಲು ಕೊಟ್ಟು, ಹೆರಿಗೆಯ ನೋವಿನಲ್ಲಿ ಪಾಲುದಾರ ನಾಗಿ, ಹುಟ್ಟಿದ ಕ್ಷಣದಲ್ಲಿ ಹೈರಾಣಾಗಿ, ಬಾಣಂತನ ಮುಗಿಸುವ ಹೊತ್ತಿಗೆ ಮನಸೇಕೋ ಕಹಿಯಾಗಿತ್ತು. ಹನ್ನೊಂದು ತಿಂಗಳ ಅವಿರತ ಹೋರಾಟದ
ಬಳಿಕ ನನ್ನದೇ ಸುದ್ದಿ ಮನೆಯಿಂದ ಹೊರನಡೆದಿದ್ದೆ. ನಂತರದ ಐದು ವರ್ಷಗಳಲ್ಲಿ ಏನೇನೋ ಆಗಿ ಹೋದವು. ಆರಂಭಿಕ ವೈಭವಕ್ಕೆ ಅಪವಾದ ಎಂಬಂತೆ ಇಡೀ ಕನಸಿನ ಸೌಧ ಕುಸಿಯತೊಡಗಿತ್ತು. ಉಳಿದವರಿಗಿಂತ ತೊರೆದವರೇ ಹೆಚ್ಚು. ಬಂಡವಾಳ ಹೂಡಲು ಮುಂದೆ ಬಂದಿದ್ದ ಉದ್ಯಮಿ ಸೇರಿದಂತೆ ‘ವಿಶ್ವಾಕ್ಷರ’ದ ಬಹುತೇಕ ತಂಡ ಹೊರನಡೆದಿತ್ತು. ಆದರೆ ಭಟ್ಟರು ಮತ್ತವರ ಹಠ ಕದಲಲೇ ಇಲ್ಲ. ಇವತ್ತು ಆರು ತುಂಬಿದ ಹೊತ್ತಿಗೆ ಯಾವ ಆರ-ಭಾರಗಳಿಲ್ಲದೇ ಪತ್ರಿಕೆ ಗಟ್ಟಿ
ಯಾಗಿ ನಿಂತಿದೆ. ಕಹಿ ಉಳಿಸಿಕೊಳ್ಳದ ಭಟ್ಟರ ಸ್ವಭಾವಕ್ಕೆ, ಪ್ರೀತಿಗೆ ಕಟ್ಟಿಬಿದ್ದು ನಾಲ್ಕು ತಿಂಗಳ ಹಿಂದೆ ಮತ್ತೆ ಮನೆಗೆ ಮರಳಿದ್ದೇನೆ.
ಅದೇ ಹೊಣೆ, ಅದೇ ಖುರ್ಚಿ ನನಗಾಗಿ ಕಾಯುತ್ತಿತ್ತು. ಖುಷಿ ಇದೆ. ಭರವಸೆ ಇದೆ. ಮತ್ತೊಮ್ಮೆ ಉರುಳಿದ ಪಾಗಾರದ ಕಲ್ಲುಗಳನ್ನೆಲ್ಲ ಆಯ್ದು ಜೋಡಿಸುತ್ತಿದ್ದೇನೆ. ಮೊದಲಿಗಿಂತ ಹೆಚ್ಚು ಥ್ರಿಲ್ ಸಿಗುತ್ತಿದೆ. ‘ವಿಶ್ವವಾಣಿ’ ಹಾಗೂ ವಿಶ್ವೇಶ್ವರ ಭಟ್ ಎರಡೂ ಬಿಟ್ಟರೂ ಬಿಡದ ಮಾಯೆ!