ಚಂಡೀಗಢ: ಪಂಜಾಬ್‌ನಲ್ಲಿ ಒಂದು ವಾರ ಚುನಾವಣೆ ಮುಂದೂಡುವಂತೆ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಫೆ.16ರಂದು ಗುರು ರವಿದಾಸ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ವಾರಣಾಸಿಗೆ ರಾಜ್ಯದ ಬಹುತೇಕ ಪರಿಶಿಷ್ಟ ಜಾತಿಯ ಜನರು ಭೇಟಿ ನೀಡುವ ಸಾಧ್ಯತೆ ಇರುವುದರಿಂದ ರಾಜ್ಯದಲ್ಲಿ ಫೆ.14ರಂದು ನಡೆಯಲಿರುವ ಚುನಾವಣೆಯನ್ನು ಕನಿಷ್ಠ ಆರು ದಿನ ಮುಂದೂಡಬೇಕು ಎಂದು ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಫೆಬ್ರವರಿ 10 ರಿಂದ 16ರವರೆಗೆ ಉತ್ತರ ಪ್ರದೇಶದ ವಾರಣಾಸಿಗೆ ಗುರು ರವಿದಾಸ್ ಅವರ ಜನ್ಮದಿನದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಲಿದ್ದಾರೆ. ಹೀಗಾಗಿ ವಾರಣಾಸಿಗೆ ಸುಮಾರು 20 ಲಕ್ಷ ಭಕ್ತರು ಆಗಮಿಸುವ ಸಾಧ್ಯತೆಯಿದ್ದು, ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮತದಾನದ ದಿನಾಂಕ ಬದಲಿಸುವಂತೆ ಮನವಿ ಮಾಡಿದ್ದಾರೆ.
ಪಂಜಾಬ್‌ನಲ್ಲಿ ಸುಮಾರು 32 ಪ್ರತಿಶತದಷ್ಟು ಜನರು ಪರಿಶಿಷ್ಟ ಜಾತಿಯವರು. ಫೆಬ್ರವರಿ 16 ಗುರು ರವಿದಾಸ್ ಅವರ 645 ನೇ ಜನ್ಮದಿನವಾಗಿದೆ. ಪ್ರತಿ ವರ್ಷದಂತೆ, ಪಂಜಾಬ್ ಮತ್ತು ವಿಶೇಷವಾಗಿ ದೋಬಾ ಪ್ರದೇಶದ ಜನರು ಗುರು ರವಿದಾಸ್ ಅವರ ಜನ್ಮಸ್ಥಳವಾದ ಉತ್ತರ ಪ್ರದೇಶದ ಬನಾರಸ್‌ನ ಗೋವರ್ಧನಪುರಕ್ಕೆ ಹೋಗುತ್ತಾರೆ. ಇದರಿಂದಾಗಿ ಅವರು ಮತದಾನ ಮಾಡಲು ಸಾಧ್ಯವಾಗುವುದಿಲ್ಲ.