Saturday, 23rd November 2024

ಬಿಎಸ್‌ಎಫ್ ಅಧಿಕಾರಿ ಬಳಿಯಿದ್ದ ₹14 ಕೋಟಿ ನಗದು, ಒಂದು ಕೋಟಿ ಮೌಲ್ಯದ ಆಭರಣ, ವಾಹನ ವಶಕ್ಕೆ

ಗುರ್ಗಾಂವ್: ₹14 ಕೋಟಿ ನಗದು, ಒಂದು ಕೋಟಿ ಮೌಲ್ಯದ ಆಭರಣಗಳು ಮತ್ತು ಬಿಎಂಡಬ್ಲ್ಯೂ, ಜೀಪ್ ಮತ್ತು ಮರ್ಸಿಡಿಸ್ ಸೇರಿದಂತೆ ಏಳು ಐಷಾರಾಮಿ ಕಾರುಗಳನ್ನ ಹರಿಯಾಣದ ಗಡಿ ಭದ್ರತಾ ಪಡೆಯ ಅಧಿಕಾರಿಯಿಂದ ವಶಪಡಿಸಿಕೊಳ್ಳಲಾಗಿದೆ.

ಮನೇಸರ್ʼನಲ್ಲಿರುವ ರಾಷ್ಟ್ರೀಯ ಭದ್ರತಾ ಪಡೆಯ ಪ್ರಧಾನ ಕಚೇರಿಯಲ್ಲಿ ನೇಮಕಗೊಂಡಿದ್ದ ಬಿಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್ ಪ್ರವೀಣ ಯಾದವ್  ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಂತೆ ನಟಿಸಿ ಜನರಿಂದ ₹125 ಕೋಟಿ ಹೆಚ್ಚು ವಂಚಿಸಿದ್ದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಯ ಪತ್ನಿ ಮಮ್ತಾ ಯಾದವ್, ಸಹೋದರಿ ರಿತು ಮತ್ತು ಸಹಚರನನ್ನ ಬಂಧಿಸಿದ್ದಾರೆ. ಯಾದವ್, ಎನ್‌ಎಸ್‌ಜಿ ಕ್ಯಾಂಪಸ್ʼನಲ್ಲಿ ನಿರ್ಮಾಣ ಗುತ್ತಿಗೆ ಪಡೆಯುವ ನೆಪವೊಡ್ಡಿ ಜನರಿಂದ ಕೋಟ್ಯಂತರ ರೂ. ಪಡೆದಿದ್ದಾರೆ. ‘ವಂಚನೆಯ ಹಣವನ್ನ ಎನ್ ಎಸ್ ಜಿ ಹೆಸರಿನಲ್ಲಿ ನಕಲಿ ಖಾತೆಗೆ ವರ್ಗಾಯಿಸಲಾಗಿದೆ. ಆಕ್ಸಿಸ್ ಬ್ಯಾಂಕ್ʼನಲ್ಲಿ ಮ್ಯಾನೇಜರ್ ಆಗಿರುವ ಅವರ ಸಹೋದರಿ ರಿತು ಯಾದವ್ ಈ ಖಾತೆ ತೆರೆದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.