ದಾಸ್ ಕ್ಯಾಪಿಟಲ್
ಟಿ.ದೇವಿದಾಸ್
dascapital1205@gmail.com
ಕವಯಿತ್ರಿಯೋ, ಕತೆಗಾರಳೋ, ಕಲಾವಿದೆಯೋ ಅಲ್ಲದ ಈ ಅತ್ತೆಯ ನಿವೇದನೆಗೆ ನೀನು ಬೇಸರಪಡಬೇಡ! ಹೀಗೆ ಹೇಳುತ್ತಾ ತನ್ನ ಕಥೆಯನ್ನು ಎಲ್ಲಿಂದ ಆರಂಭಿಸಲಿ ಎಂದು ಕೃಷ್ಣನನ್ನು ಕೇಳುತ್ತ ತನಗೆ ಅರುಳು-ಮರುಳು ಆಗಲಿಲ್ಲ ಎನ್ನುತ್ತಾಳೆ.
ಮಹಾಭಾರತದ ಯಾವ ಪಾತ್ರವೂ ಸುಖದ ಮುಖವನ್ನು ಸಹಜವೆಂಬಂತೆ ಅನುಭವಿಸಿದ್ದಿಲ್ಲ. ಬದುಕು ದ್ವಂದ್ವಗಳ ಸಮ್ಮಿಲನವಾದರೂ ಮಹಾಭಾರತದ ಸ್ತ್ರೀ ಪಾತ್ರಗಳು ದುಃಖದ ಮುಖವೊಂದನ್ನೇ ಬದುಕಾಗಿ ಉಂಡರು. ಸತ್ಯವತಿಯ ಅಪ್ಪ ಏನೇ ಷರತ್ತುಗಳನ್ನು ಹಾಕಿ ಮಗಳನ್ನು ಹಸ್ತಿನಾವತಿಗೆ ಮದುವೆ ಮಾಡಿ ಕೊಟ್ಟರೂ ಸತ್ಯವತಿ ಕಂಡ ಸುಖ ಅಂಥಾ ಪರಿಯದ್ದೇನೂ ಅಲ್ಲ. ಗಾಂಧಾರಿಯ ಬದುಕಂತೂ ದುಃಖದಲ್ಲೇ ಮುಗಿದು ಹೋಗುತ್ತದೆ. ಗಂಡ ಕಾಣದ ಈ ಜಗತ್ತನ್ನು ತಾನೂ ಕಾಣುವುದು ಬೇಡ ಎಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಹೆಣ್ಣಾಕೆ.
ಪತಿಯೇ ಪರದೈವ ಎಂದು ನಂಬಿದ್ದ ಕಾಲವದು. ದ್ರೌಪದಿಯ ಬದುಕು ಅನುಭವಿಸಿದಷ್ಟು ಹಿಂಸೆ, ಹೀನಾಯ, ಅವಹೇಳನಪಟ್ಟವರಾರು? ಹಸ್ತಿನೆಯ ಪಟ್ಟದರಸಿ ಭಾನುಮತಿಯು ಪಟ್ಟ ಸುಖವೇನು? ಇನ್ನು ಕುಂತಿಯ ಪಾಡೋ! ಯಾವ ಹೆಣ್ಣೂ ಅನುಭವಿಸಲಾಗದ, ಅನುಭವಿಸಬಾರದ ಯಾತನೆಯ ಹೂಟವದು! ಕೊನೆಯ ವರೆಗೂ ಅನಿರೀಕ್ಷೆಯ ಆತಂಕ, ಭಯ, ದುಗುಡ, ತಲ್ಲಣಗಳ ಮಹಾಪೂರಗಳಿಂದಲೇ ಮುಗಿದುಹೋಯ್ತು. ಬಯಸಿದ್ದೆಲ್ಲ, ಹಂಬಲಿಸಿದ್ದೆಲ್ಲ ಕನಸಲ್ಲಿ ಕಂಡು ಕನವರಿಸದಂತಾಯಿತು. ತನ್ನ ದುಃಖವನ್ನು ನುಂಗಿಕೊಂಡೇ ಹೊಟ್ಟೆ ತುಂಬಿಕೊಂಡವಳು ಕುಂತಿ. ತನ್ನ ಕಣ್ಣೀರು ಕುಡಿದೇ ತೃಷೆ ಅಡಗಿಸಿಕೊಂಡವಳು ಕುಂತಿ. ತನ್ನ ಪಾಡನ್ನು ಕುನ್ತೀ ತಾನೇ ತೋಡಿಕೊಳ್ಳಬೇಕು. ಏಕೆಂದರೆ ಮೂಲ ವ್ಯಾಸರಿಗೂ ಎಟುಕದ ದುಃಖ ತನ್ನದು ಎಂದು ಹೇಳುತ್ತಾಳೆ.
ಏನು ಮಾರ್ಮಿಕ, ಮರ್ಮಾಘಾತಕ ವಾಕ್ಯವಿದು! ಆಕೆಯ ಹೃದಯಾಗ್ನಿಯಿಂದ ಹೊರಬಂದ ಉರಿ ಇದು, ಉಸಿರಲ್ಲ! ಅಹುದು ನಾನು ಹೇಳುತ್ತಿರುವುದು ಆಚಾರ್ಯರ ಮಹಾಮಾತೆ ಕುಂತಿ ಕಂದೆರೆದಾಗ ಎಂಬ ಆತ್ಮಕಥಾರೂಪೀ ಕಾದಂಬರಿಯ ಬಗ್ಗೆ. It is simply amazing! ಕುಂತಿಯಾಗಿ ಆಚಾರ್ಯರು, ಕುನ್ತೀಯು ತನ್ನ ಬದುಕನ್ನು ಹೀಗೆ ಸಿಂಹಾವಲೋಕನ ಮಾಡಿಕೊಳ್ಳಲು ಸಾಧ್ಯವಿಲ್ಲವೇನೋ ಎಂಬಂತೆ ಆಚಾರ್ಯರ ನಿರೂಪಣೆಯಿದೆ. ಆಚಾರ್ಯರ ನೇರ ನಿಷ್ಠುರ ಗುಣಸ್ವಭಾವ ಇಲ್ಲಿ ಸತ್ತು ಕೇವಲ ಭಾವಪ್ರಧಾನತೆಯೇ ಕಾದಂಬರಿಯುದ್ದಕ್ಕೂ ಹಾಸಿದೆ. ಆಚಾರ್ಯರು ಅಸಾ ಮಾನ್ಯ ಭಾವುಕರು. ಗುಣಗ್ರಾಹಿಗಳು. ತಾಯೀ ಭಾವವನ್ನು ಹೊಂದಿರುವವರು.
ಶ್ರೀಕೃಷ್ಣನಡಿಯಲ್ಲಿ ಹುಟ್ಟಿ ಶ್ರೀ ಕೃಷ್ಣನಡಿಗಳನ್ನೇ ಸೇರಿದ ಭಾಗೀರತಿಯಂತೆ ಕುಂತಿ ತನ್ನ ಜೀವನಭಾಗೀರತಿಯನ್ನು ಶ್ರೀ ಕೃಷ್ಣನಿಗೆ ಅರ್ಪಿಸುವ ಅಂತಿಮ ನಾಕು ಅನುವಾ ಕುಗಳನ್ನು ಆಚಾರ್ಯರ ಮಾತುಗಳಲ್ಲಿ ಕೇಳಿ: ಕೃಷ್ಣ! ನಿನ್ನ ಸ್ಮರಣೆಯಲ್ಲಿ ಈ ಶರೀರ ಬಿಡುತ್ತಿದ್ದೇನೆ… ಸದ್ಯ ಮಕ್ಕಳಿಗೂ ಊರವರಿಗೂ ಯಾರಿಗೂ ತೊಂದರೆ ಇಲ್ಲದೆ ಈ ಮರಣ ಕೊಟ್ಟುದಕ್ಕಾಗಿ ನಾನು ತುಂಬಾ ಕೃತಜ್ಞಳು. ಕರ್ಣ, ನನ್ನನ್ನು ಕ್ಷಮಿಸು! ಯುಧಿಷ್ಠಿರ, ಅರ್ಜುನ, ಭೀಮ! ಯಮಳರೇ! ಹೋಗಿ ಬರುತ್ತೇನೆ. ಬದುಕಿರುವಾಗ ಈ ಕುನ್ತೀಯಿಂದ ಯಾರಿಗೂ ಉಪಕಾರ ಆಗಲಿಲ್ಲ. ಈಗ ಸಾಯುವಾಗ ಯಾರಿಗೂ ನನ್ನಿಂದ ತೊಂದರೆಯಾಗಲಿಲ್ಲ ಎಂಬುದೇ ಅಲ್ಪತೃಪ್ತಿ!
ಅರಗಿನಮನೆಯಲ್ಲೇ ಸತ್ತಿದ್ದರೆ ಕೆಲವರಿಗೆ ಹೆಚ್ಚು ಉಪಯೋಗ ಆಗುತ್ತಿತ್ತೇನೋ! ಅಂತೂ ಬಯಸಿದಾಗ ಮೃತ್ಯು ಬರುವುದಿಲ್ಲ. ಈಗ ಬಂದಾಗಲೇ ಸ್ವಾಗತಿಸ ಬೇಕು….ಕೃಷ್ಣ! ಗೋವಿಂದ! ಗೋಕುಲಕಂದ, ಶರಣು, ಶರಣು, ಶರಣು…. ಆಚಾರ್ಯರು ಬರೆದ ಈ ಅತ್ಮಕಥಾರೂಪೀ ಕಾದಂಬರಿಯಲ್ಲಿ ಒಟ್ಟೂ ೨೧ ಅಧ್ಯಾಯ ಗಳಿವೆ. ಕುಂತಿಯೇ ತನ್ನ ಬದುಕಿನ ಪ್ರಮುಖ ಘಟನೆಗಳನ್ನು, ಕಾಲದೇಶವನ್ನೂ ಮೀರಿದ ಸಂದರ್ಭಗಳನ್ನು ಅವಲೋಕನ ಮಾಡುತ್ತ ಮಾಡುತ್ತ ಪ್ರಾಂಜಲ ಮನಸ್ಸಿನಿಂದ ತಪ್ಪೊಪ್ಪಿಗೆಯನ್ನು ಮಾಡಿಕೊಳ್ಳುತ್ತಾಳೆ, ದುಃಖಿಸುತ್ತಾಳೆ, ನ್ಯಾಯಾನ್ಯಾಯದ, ಧರ್ಮಾಧರ್ಮದ ವಿವೇಚನೆಯನ್ನು ದರ್ಶಿಸುತ್ತಾಳೆ. ಬದುಕೂ
ತನ್ನದೇ, ಅವಲೋಕನವೂ ತನ್ನದೇ, ಆದರೆ ಎಲ್ಲಿಯೂ ತನ್ನನ್ನು ಸಮರ್ಥಿಕೊಳ್ಳುವ ಜಾಣತನವಿಲ್ಲದ, ಮೂಲವನ್ನೇ ಆಧಾರವಾಗಿಟ್ಟುಕೊಂಡು ಬರೆದ ಆಚಾರ್ಯರು ಎಲ್ಲಿಯೂ ಕಲ್ಪನೆಯನ್ನು ಹರಿಯಬಿಡಲಿಲ್ಲ.
ಗಂಡು ಗಂಡಸಷ್ಟೇ ಅಲ್ಲ, ಹೆಂಗಸೂ ಹೌದು. Basically you are Thought ಎನ್ನುತ್ತಾನೆ ಓಶೋ ರಜನೀಶ. ಗಂಡಿನಲ್ಲಿ ಹೆಣ್ತನದ ಭಾವವೂ ಮನೆ ಮಾಡಿರು ತ್ತದೆ. ಆಚಾರ್ಯರು ಹೆಣ್ಣಾಗಿ ಬರೆದ ಕಾದಂಬರಿಯಿದು. ಹೆಣ್ಣಾಗಿ ಬರೆದ ಸತ್ಯ! ಪ್ರಾಯಃ ಆಚಾರ್ಯರು ಮಾತ್ರ ಬರೆಯಬಹುದಾದ ಕೃತಿಯಿದು! ಅವರು ಚಾಣಕ್ಯ, ದೇವಕಿಯ ಚಿಂತನೆಗಳು, ಮಹಾಪ್ರಸ್ಥಾನ, ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು-ಇವೆಲ್ಲ ಸತ್ಯವನ್ನು ನಿರ್ವಚಿಸುವ ಕಾದಂಬರಿ ರೂಪದ್ದವು. ಸಾಹಿತ್ಯದಲ್ಲಿ ಈ ಕೃತಿಗಳೆಲ್ಲ ಯಾವುದೇ ರೂಪವನ್ನು ಪಡೆದರೂ ಪಡೆಯದಿದ್ದರೂ ವಾಸ್ತವವನ್ನು ಹೇಳದೇ ಆಚಾರ್ಯರು ಕಳಚಿಕೊಳ್ಳಲಿಲ್ಲ.
ಮಹಾಮಾತೆ ಕುಂತಿ ಕಣ್ತೆರೆದಾಗ ಅಂದರೆ ಕುಂತಿ ತನ್ನ ಬದುಕನ್ನು ಬದುಕಿನ ಜೀವನಸಂಧ್ಯೆಯಲ್ಲಿ ನಿಂತು ಬಾಳಿ ಬಂದ ಬದುಕಿನ ಹಾದಿಯನ್ನು ಹಿಂತಿರುಗಿ ನೋಡುವುದು. ಎಲ್ಲವನ್ನೂ ಶ್ರೀಕೃಷ್ಣನಲ್ಲಿ ಹೇಳಿಕೊಳ್ಳುವುದು. ಅಪರೋಕ್ಷವಾಗಿ confess ಮಾಡಿಕೊಳ್ಳುವುದು. ತನ್ನಿಂದಾದ ತಪ್ಪುಗಳನ್ನು, ತನಗರಿವಿಲ್ಲದೇ ಆದ ತಪ್ಪುಗಳನ್ನು ತೆರೆದ ಮನಸ್ಸಿನಿಂದ ಸಾಕ್ಷಾತ್ಕರಿಸಿಕೊಳ್ಳುವುದು. ಮಹಾಪ್ರಸ್ಥಾನಕ್ಕೆ ಹೊರಟ ಕುಂತಿ ಶ್ರೀಕೃಷ್ಣನಲ್ಲಿ ಆಡುವ ಈ ಮಾತುಗಳನ್ನು ನೋಡಿ: ನಾನು ನಿಜ ಜೀವನದಲ್ಲೂ ನಡಗೆ ತಿಳಿಯದವಳು; ಈ ಅಂತ್ಯಯಾತ್ರೆಯಲ್ಲೂ, ಗತಿ, ಗಮ್ಯ, ಲಯ ಒಂದೂ ತಿಳಿಯದವಳು….ಎಲ್ಲರ ಹಿಂದೆ ನಾನು!
ಈ ಯಾತ್ರೆಯಲ್ಲೂ ಪರಾವಲಂಬಿಯಾಗಿಲ್ಲದವಳು ಈ ಪೈಕಿ ನಾನೊಬ್ಬಳೇ ಎಂಬುದೇ ಒಂದು ಹಿಗ್ಗು! ನನಗೀಗ ಎಂಭತ್ತೆಂಟೋ, ಎಂಭತ್ತೊಂಭತ್ತೋ ವರ್ಷ ವಯಸ್ಸಾಗಿರಬೇಕು! ಕೃಷ್ಣ, ನನ್ನ ಕಥೆ ಹೇಳಲೇಬೇಕೆಂಬ ಹುಚ್ಚು ನನಗಿಲ್ಲ! ಎಲ್ಲರ ಅಂತರ್ಯಾಮಿ ಆದ ನಿನಗೆ ನಾನು ಹಾಗೊಂದು ಕಥೆ ಹೇಳಲೂ ಬೇಕಿಲ್ಲ. ಆದರೆ ಹೊರಡುವಾಗ ನನ್ನ ಹೃದಯ ಹಗುರವಾಗಲಿ; ಶರೀರದ ಭಾರವಂತೂ ತಿಂಗಳಿಗೊಮ್ಮೆ ಸಿಕ್ಕ ಹಣ್ಣುಗಳ ಅಶನದಿಂದ ಎಷ್ಟೋ ಹಗುರವಾಗಿದೆ!
ಯಾವ ಭಾರವೂ ಇಲ್ಲದೇ ಸಾಯಬೇಕೆಂದು ಹೇಳುತ್ತಾರೆ, ತಿಳಿದವರು. ಆ ದೃಷ್ಟಿಯಲ್ಲಿ ನನ್ನ ಹೃದಯದ ಗೂಢಗಳನ್ನೂ, ಗಾಢನೋವುಗಳನ್ನೂ, ಒತ್ತಡಗಳನ್ನೂ ಗಾಳಿಗೆ ಎರಚುತ್ತಿದ್ದೇವೆ. ಗಾಳಿಯಲ್ಲೂ ನೀನೇ ಇಲ್ಲವೇ? ಈ ಅನುಭವದ ಕುಸುಮಗಳು ನಿನಗೆ ಅರ್ಚನೆಯಾಗಲಿ ಒಂದೇ ಬಗೆಯ ಹೂಗಳು ಇವು ಅಲ್ಲ; ಜೀವನ ದಲ್ಲಿ ನಾನು ಸುಖಪಡಲೇ ಇಲ್ಲ ಎಂದು ಹೇಳುವಷ್ಟು ನಾನು ದುಃಖಪ್ರೇಮಿಯಲ್ಲ! ಅದೂ ಒಂದು ರೋಗ ಎಂದು ನಾನು ಬಲ್ಲೆ! ನಾನೀಗ ಹೃದಯವನ್ನು ಹಗುರ ಗೊಳಿಸಿಕೊಳ್ಳುತ್ತ ಹಿಮಾಲಯದ ಕಾಡುಗಳ ಎತ್ತರಗಳನ್ನು ಸ್ವಲ್ಪ ಸ್ವಲ್ಪ ಏರುತ್ತಿದ್ದೇನೆ. ಓದು ಬರೆಹ ನಾನು ಬಹಳ ಬಲ್ಲವಳಲ್ಲ!
ಕಲಿತದ್ದೆಲ್ಲಾ ಜೀವನದಿಂದಲೇ ಎಂದರೆ ಇದರಲ್ಲಿ ಹೊಸದೂ ಇಲ್ಲ! ಹಾಗೆ ಕಲಿತದ್ದು ಮುಂದಿನ ಯಾರಿಗಾದರೂ ಪ್ರಯೋಜನವಾದರೆ, ಈ ನಿರ್ಭಾಗ್ಯೆ, ಕುಂತಿ, ಕೊನೆಯುಸಿರ ಬಿಸಿಗಾಳಿಯಲ್ಲಿ ಈ ಅನುಭವ ಕುಸುಮಗಳನ್ನು, ಹಾರಿದಷ್ಟು ಎತ್ತರಕ್ಕೆ ಎರಚಿದ್ದೂ ಒಂದು ಸಾರ್ಥಕ ಎಂದು ಭಾವಿಸುತ್ತೇನೆ. ನನ್ನ ವಂಶದ ಹಿರಿಯ ದ್ವೈಪಾಯನವ್ಯಾಸರು ಅದೇನೋ ನನ್ನ ಮಕ್ಕಳ ಕಥೆ ಬರೆಯುತ್ತಾರಂತೆ! ಈ ಕಥೆಯಲ್ಲಿ ನಾನು ಇದ್ದೆ ನಾಗಿ ಅದರ ಹೊರಗಿಂದ ಅದನ್ನು ಕಾಣುವ ಅವರ ಅಲೌಕಿಕ ಕಣ್ಣು ನನಗಿಲ್ಲ! ನನ್ನ ಹೃದಯದೊಳಗಿಂದ ನಾನು ಕಂಡದ್ದನ್ನು ಪ್ರಾಯಶಃ ನನ್ನಂತೆ ಅವರು ವರ್ಣಿಸಿಯಾರೋ, ಇಲ್ಲವೋ, ಅವರ ದೃಷ್ಟಿಗೆ ಅದು ಪ್ರಸ್ತುತವೋ, ಅಲ್ಲವೋ, ನಾನು ಹೇಗೆ ಹೇಳಲಿ? ಆದುದರಿಂದ ಕವಯಿತ್ರಿಯೋ, ಕತೆಗಾರಳೋ, ಕಲಾವಿದೆಯೋ ಅಲ್ಲದ ಈ ಅತ್ತೆಯ ನಿವೇದನೆಗೆ ನೀನು
ಬೇಸರಪಡಬೇಡ! ಹೀಗೆ ಹೇಳುತ್ತಾ ತನ್ನ ಕಥೆಯನ್ನು ಎಲ್ಲಿಂದ ಆರಂಭಿಸಲಿ ಎಂದು ಕೃಷ್ಣನನ್ನು ಕೇಳುತ್ತ ತನಗೆ ಅರುಳು- ಮರುಳು ಆಗಲಿಲ್ಲ ಎನ್ನುತ್ತಾಳೆ.
ತನ್ನ ಹುಟ್ಟಿನಿಂದ ಕಥೆಯನ್ನು ಹೇಳಲು ತೊಡಗುತ್ತಾಳೆ. ಹೀಗೆ ಕುಂತಿ ಕಥೆಯನ್ನು ಸಾದ್ಯಂತವಾಗಿ ನಿರೂಪಣೆ ಮಾಡುವ ಆಚಾರ್ಯರು ನಿನ್ನತ್ತಲೇ ಹೊರಟೆ ಕೃಷ್ಣ, ದುರ್ವಿಧಿ, ಕನ್ಯೆ ಇರುತ್ತಾ ತಾಯಿಯಾದೆ, ಗಂಗೆ! ತಾಯಿ! ಮಗುವನ್ನು ರಕ್ಷಿಸು, ಅಯ್ಯೋ! ನ್ಯಾಯ ಕಾಣದ ಕರ್ಣ!!, ವಿವಾಹದ ಆಮೇಲಿನ ನೆನಪುಗಳು
ನೆನಪು ಗಳು-೨, ದೇವಸಮಪುತ್ರರಾಗಿಯೂ ಇನ್ನೊಂದು ಆಪತ್ತು, ಹಳೆಯ ಗೂಡಿನಲ್ಲಿ ಹೊಸ ಹಕ್ಕಿಗಳು, ಅಡವಿಯಲ್ಲಿ ಎಡವಿದರೂ ಕೈ ಹಿಡಿದ ನಾರಾಯಣ, ತಾಯಿಯಾಗಿ ನಾನೇ ತಂದ ಮಕ್ಕಳ ಆಪತ್ತು!, ಈ ಸಲ ಇಂದ್ರ ಪ್ರಸ್ಥಕ್ಕೆ, ರಾಜಸೂಯ ತಂದ ಅನರ್ಥ, ಜೂಜು ತಡೆಯದ ಜನಾರ್ದನ, ಗಂಡಂದಿರೇ ಕೈ ಬಿಟ್ಟ ಹೆಂಡತಿ! ದ್ರೌಪದಿಯ ಪಾಡು! ಎಂಥ ಮಕ್ಕಳು?, ಓ! ಆಪದ್ಬಾಂಧವ!, ನನ್ನ ಬೇಸರ ಯಾರಿಗೆ ಹೇಳಲಿ?, ವ್ಯಾಸ-ವಿದುರರ ನೆನಪುಗಳು, ಅಗೋ ಅಗ್ನಿ
ನಾರಾಯಣನೇ ಶರಣು-ಎಂಬೀ ಹೆಜ್ಜೆಗಳ ಮೂಲಕ ಕುಂತಿಯ ಮೂಲಕವೇ ಕುಂತಿಯ ಕಥೆಯನ್ನು ಆತ್ಮಾವಲೋಕನ ರೀತ್ಯ ಹೇಳುತ್ತಾರೆ.
ಮಹಾಕಾವ್ಯದ ಪಾತ್ರವೊಂದು ತನ್ನ ಬದುಕನ್ನು ಸಿಂಹಾವ ಲೋಕನ ಕ್ರಮದಿ ಹೀಗೆ ಅವಲೋಕಿಸಿ ತಪ್ಪು ಒಪ್ಪುಗಳನ್ನು ತನ್ನ ಆತ್ಮಸಾಕ್ಷಿ ಮೂಲಕವೇ ಹೇಳಿಕೊಳ್ಳುವುದು ಅಥವಾ ಹೇಳಿಸುವುದನ್ನೇ ಮುನ್ನುಡಿಯಲ್ಲಿ ಶ್ರೀ ಎನ್ಕೆಯವರು ಹೀಗೆ ಅಂದಿರಬೇಕು: ಇದೊಂದು ಆತ್ಮಕಥಾ ರೂಪೀ ಕಾದಂಬರಿ. ಅಂತಿಂತಹ ಕಾದಂಬರಿಯಲ್ಲ. ತನ್ನ ಅಪೂರ್ವ ತಂತ್ರ, ಅಪರೂಪದ ಸೃಜನಶೀಲತೆ, ಅನಾದೃಶ ನಿರೂಪಣ ಶೈಲಿ ಗಳಿಂದಾಗಿ ಕನ್ನಡಕ್ಕಷ್ಟೇ ಅಲ್ಲ, ಭಾಷಾಂತರಿಸಿದರೆ ಭಾರತಕ್ಕೇ ಒಂದು ಭೂಷಣ ಎನ್ನುವಂತಹ ಮಹಾಭಾರತ ಕಥೆಯನ್ನಾಧರಿಸಿದ ಆತ್ಮಕಥೆ ಎನ್ನುತ್ತಾರೆ.