Friday, 22nd November 2024

ನಕಲಿ ಮದ್ಯ ಸೇವನೆ: ಮೃತರ ಸಂಖ್ಯೆ 11ಕ್ಕೆ ಏರಿಕೆ

ನಳಂದ (ಬಿಹಾರ): ಜಿಲ್ಲೆಯಲ್ಲಿ ನಕಲಿ ಮದ್ಯ ಸೇವನೆಯಿಂದ ಮತ್ತೆ ಮೂವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಕಳೆದ ಶನಿವಾರ ಎಂಟು ಮಂದಿ ಮೃತಪಟ್ಟಿದ್ದು, ಪ್ರಕರಣ ಸಂಬಂಧ ಛೋಟಿ ಪಹರಿ ಪ್ರದೇಶದಲ್ಲಿ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ದುರಂತವನ್ನು ಅಂತ್ಯಗೊಳಿಸಲು ಜಿಲ್ಲಾ ಪೊಲೀಸರು ಛೋಟಿ ಪಹರಿ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ತನಿಖೆಯನ್ನು ಉತ್ತಮವಾಗಿ ನಡೆಸುವ ಉದ್ದೇಶದಿಂದ ಪ್ರದೇಶವನ್ನು ನಾಲ್ಕು ಭಾಗವಾಗಿ ವಿಭಾಗಿಸಿ ಕಾರ್ಯಾಚರಣೆ ಕೈಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಹನ್ನೊಂದು ಮಂದಿ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಶಶಾಂಕ್‌ ಶುಭಂಕರ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 184 ಲೀಟರ್‌ ದೇಶೀಯ ಮದ್ಯ, 225 ಲೀಟರ್‌ ವಿದೇಶಿ ಮದ್ಯ ವಶಪಡಿಸಿ ಕೊಳ್ಳಲಾಗಿದ್ದು ಮತ್ತು 34 ಮಂದಿಯನ್ನು ಬಂಧಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ದುರಂತಕ್ಕೆ ಪೊಲೀಸರೇ ಹೊಣೆ. ನಕಲಿ ಮದ್ಯ ಮಾರಾಟದ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿತ್ತು. ಆದಾಗ್ಯೂ, ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ಎಂಟು ಮಂದಿ ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬದವರಿಗೆ ನೀಡಲಾಗಿದೆ ಎಂದು ನಳಂದ ಎಸ್‌ಪಿ ಅಶೋಕ್‌ ಮಿಶ್ರಾ ತಿಳಿಸಿದ್ದಾರೆ.