ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
journocate@gmail.com
ಟಿವಿ ವರದಿಗಾರಿಕೆಗೆ ಅಕ್ಷರಜ್ಞಾನವೇ ಬೇಕಿಲ್ಲ ಎಂಬಂತಹ ಅಪಾಯಕಾರಿ ಸನ್ನಿವೇಶಕ್ಕೆ ಕನ್ನಡಮ್ಮ ಸಿಲುಕಿzಳೆ. ರಾಜಕಾರಣಿಗಳ ಮೂತಿಗೆ ಮೈಕ್ ಹಿಡಿಯು ವುದು. ಅವರು ಉದುರಿಸಿದ್ದನ್ನು ಕ್ಯಾಮರಾದಲ್ಲಿ ದಾಖಲಿಸಲು ಬಂದರೇ ಸಾಕಾಗಿದೆ.
ಅವರು ಹಿರಿಯ ಸರಕಾರಿ ಅಧಿಕಾರಿ. ಇಪ್ಪತ್ತು ವರ್ಷದ ಹಿಂದೆ ನಡೆದ ಈ ಪ್ರಸಂಗದ ಸಮಯ ದಲ್ಲಿ ಅವರಿಗೆ 58 ವರ್ಷವಿದ್ದಿರಬಹುದು. ಅವರ ಬಿನ್ನಲ್ಲಿ ಕುಳಿತಿದ್ದೆ. ಅವರಿಗೆ ಕರೆ ಬಂತು. ನನ್ನೊಟ್ಟಿಗೆ ಮಾತನಾಡುತ್ತಿದ್ದ ಅವರು ರಿಸೀವರ್‌ಗೆ ತಮ್ಮ ಮೂತಿಯನ್ನಿಟ್ಟು ದನಿಯನ್ನು ಮಾರ್ಪಡಿಸುವ ಪ್ರಯತ್ನದಲ್ಲಿ ತಮ್ಮ ಬಾಯನ್ನು ಸೊಟ್ಟಗೆ ತಿರುಗಿಸಿ ಸಾಹೇಬ್ರು ಸೀಟ್ನಲ್ಲಿಲ್ಲ ಎಂದು ಹೇಳಿ ಫೋನಿಟ್ಟರು. ತಾವಾಡಿದ ನಾಟಕದ ಬಗ್ಗೆ ಅವರಿಗೇನೂ ಮುಜುಗರವಾದಂತೆ ಕಾಣಲಿಲ್ಲ.
ಒಮ್ಮೆ ಸ್ನೇಹಿತನೊಬ್ಬನ ಜತೆ ಕಾರಿನಲ್ಲಿ ಓಡಾಡುತ್ತಿದ್ದಾಗ ಅವನಿಗೆ ಯಾರದ್ದೋ ಕರೆ ಬಂತು. ಅವನ ವ್ಯವಹಾರಕ್ಕೆ ಸಂಬಂಧಿಸಿದ್ದು. ಸ್ನೇಹಿತ ತಾನು ಬೆಂಗಳೂರಿ ನಲ್ಲಿದ್ದೇನೆಂದು ಸುಳ್ಳು ಹೇಳಿದ. ಕರೆ ಮಾಡಿದ ವ್ಯಕ್ತಿ ಮೈಸೂರಿನವನಂತೆ. ಬೆಂಗಳೂರಿನವನಾದ ನನ್ನ ಸ್ನೇಹಿತ ಆ ಕ್ಷಣ ನನ್ನೊಡನಿದ್ದದ್ದು ಮೈಸೂರಿನಲ್ಲಿ. ಅವನೇನಾದರೂ ಈಗ ನಿನ್ನೆದುರಿಗೆ ಬಂದರೆ ಎಡವಟ್ಟಾಗುವುದಿಲ್ಲವೇ ಎಂದು ಕೇಳಿದೆ. ಇಲ್ಲ, ಅವನು ಬೆಂಗಳೂರಿನಲ್ಲಿದ್ದಾನೆ, ಎಂಬ ಉತ್ತರ ಬಂತು. ಅವನೂ ಮೈಸೂರಿನ ಇದ್ದು ಕೊಂಡು ನಿನ್ನ ಹಾಗೇ ಸುಳ್ಳು ಹೇಳಿದ್ದರೇ? ಎಂಬ ಪ್ರಶ್ನೆಗೆ ಇಲ್ಲ, ಬೆಳಿಗ್ಗೆ ತಾನೇ ಅವನು ಬೆಂಗಳೂರಿಗೆ ಹೊರಟ ಎಂದ. ಅವನು ಕೆಲಸ ಮುಗಿಸಿಕೊಂಡು ಮೈಸೂರಿಗೆ ವಾಪಸ್ ಬರುವಾಗ ಮದ್ದೂರು ಬಳಿ ನಿನಗೆ ಎದುರಾದರೇ? ಎಂದು ಮತ್ತೊಂದು ಪ್ರಶ್ನೆ ಎಸೆದೆ.
ಅವನೊಂದಿಗೆ ನಾನು ಅಷ್ಟೆಲ್ಲ ಪ್ರಾಮಾಣಿಕನಾಗಿ ವರ್ತಿಸುವ ಅವಶ್ಯಕತೆ ನನಗಿಲ್ಲ. ನಾನು ಸುಳ್ಳು ಹೇಳಿದೆ ಅಂತ ಅವನಿಗೆ ಗೊತ್ತಾಗಲಿ ಬಿಡು. ನಾನು ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕಾದಷ್ಟು ಅರ್ಹತೆ ಅವನಿಗಿಲ್ಲ ಅಂತ ಅವನಿಗೂ ತಿಳಿಯುತ್ತೆ ಎಂದ.
ಗೆಳೆಯ ಅತೀ ಬುದ್ಧಿವಂತನಾದ್ದರಿಂದ ಅವನು ತನ್ನ ಹೇಳಿಕೆಯ ಮೂಲಕ ನನಗೂ ಅವ್ಯಕ್ತ ಸಂದೇಶವನ್ನೇ ನಾದರೂ ರವಾನಿಸಿಸುತ್ತಿದ್ದಾನಾ ಎಂಬ ಶಂಕೆ ಮೂಡಿತು. ತಾನು ಅಪ್ರಾಮಾಣಿಕ ಎಂದು ನನಗೆನ್ನಿಸಿದರೆ ಅದರಿಂದ ಅವನಿಗೇನೂ ಬಾಧೆಯಿಲ್ಲ ಎಂಬುದೇ ಆ ಸಂದೇಶವೇ? ಈ ಎರಡನೇ ಅನುಭವದ ಹಿನ್ನೆಲೆಯಲ್ಲಿ, ಮೊದಲ ಸಂದರ್ಭದಲ್ಲಿ ಆ ಅಧಿಕಾರಿ ನನಗೆ ತೋರಿದ್ದೂ ಅಗೌರವವೇ ಎಂದು ಅರ್ಥೈಸಿಕೊಂಡೆ. ಒಂದೋ, ಅವರು ಹಾಗೆ ನಟಿಸಿದ್ದು ತಪ್ಪೇ ಅಲ್ಲ ಅಂತ ಅವರಿಗೆ ಅನ್ನಿಸಿರಬೇಕು, ಅಥವಾ ಅವರಂತೆಯೇ ನಾನು ಎಂದುಕೊಂಡು ನನ್ನ ಮುಂದೆಯೇ ಆ ಅಗೋಚರ ಕರೆದಾರನಿಗೆ ಸುಳ್ಳು ಹೇಳಿರಬೇಕು, ಅಥವಾ ನಂತರದ ವರ್ಷಗಳಲ್ಲಿ ನನ್ನ ಸ್ನೇಹಿತ ಮಂಡಿಸಿದ ತರ್ಕದಂತೆ, ಅವರು ನನ್ನ ಮುಂದೆ ತಮ್ಮ ಸನ್ನಡತೆಯನ್ನು ತೋರ್ಪಡಿಸಬೇಕಾದ ಅನಿವಾರ್ಯ ತಾಭಾವವನ್ನು ಸೃಷ್ಟಿಸುವ ತೂಕ ನನಗಿಲ್ಲವೆಂದು ಅವರೂ ಮನಗಂಡಿರರಬೇಕು.
ತೂಕವಿಲ್ಲದ ಮಾತುಗಳು ಹೆಚ್ಚಾಗುತ್ತಿವೆ. ಮೊನ್ನೆ, ಅರೆ ಕಿಲೊ ಭಾರದ ಚಿನ್ನಾಭರಣಗಳನ್ನು ಮೈಕೈಗೆ ತೊಟ್ಟ ಅರೆಬರೆ ತಿಳುವಳಿಕೆಯ ವ್ಯಕ್ತಿ ಕನ್ನಡಿಗ-ತೆರಿಗೆ ದಾರರ ಹಣವನ್ನು ಸಂಸ್ಕೃತಕ್ಕಾಗಿ ಬಳಸಲು ಬಿಡುವುದಿಲ್ಲವೆಂದು ಗುಟುರುಹಾಕಿದ್ದು ವರದಿಯಾಗಿದೆ. ಈತನ ಕ್ವಿಂಟಲ್ ತೂಕದ ದೇಹವನ್ನು ನೋಡಿದರೆ, ಆತ ತೆರಿಗೆಪಾವತಿಸಬೇಕಾದ ಸಂಪಾದನೆ ಯನ್ನು ಮಾಡಿದಂತಿಲ್ಲ. ಪುಗಸಟ್ಟೆ ಉಂಡಿದ್ದಕ್ಕೆ ತೆರಿಗೆ ವಿಧಿಸುವುದಾದರೆ, ಇವನ ಸ್ವತ್ತು, ಸೊಕ್ಕೂ ಎರಡೂ ಒಂದು
ವರ್ಷದಲ್ಲಿ ಕರಗುವ ಸಾಧ್ಯತೆ ಇದೆ.
ಆದರೆ, ಅವರದ್ದೇ ಸ್ವರಚಿತ ಸಂಸ್ಕೃತ ಬಿಟ್ಟು ಬೇರಾವುದೇ ಭಾಷೆಯ ಗಂಧವೇ ಇರದಿದ್ದರೂ ಕನ್ನಡಮ್ಮನ ಹೆಸರಲ್ಲಿ ಅನ್ನ-ಚಿನ್ನ ಗಳಿಸಿಕೊಂಡು ದರ್ಬಾರು ನಡೆಸುವ ಇವರನ್ನು ಮಟ್ಟ ಹಾಕುವ ಗಟ್ಟಿತನವನ್ನು ಯಾವುದೇ ಸರ್ಕಾರ ತೋರಿಲ್ಲ. ರಾಮನಗರದಲ್ಲಿ ನಡೆದ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಸಮಾರಂಭದಲ್ಲಿ ನಮ್ಮ ಚುನಾಯಿತ ಪ್ರತಿನಿಧಿಗಳೇ ಪುಡಿರೌಡಿಗಳಂತೆ ಪರಸ್ಪರ ಧಮ್ಕಿ ಹಾಕಿದ್ದನ್ನು ನೋಡಿಯಾಗಿದೆ. ಉನ್ನತ ಶಿಕ್ಷಣ ಸಚಿವ ಹಾಗೂ ವೈದ್ಯಕೀಯ ಪದವೀಧರರಾದ ಅಶ್ವಥನಾರಾಯಣರೇ ಲಘುವಾಗಿ ಮಾತನಾಡುತ್ತಾರೆಂದ ಮೇಲೆ ಡಿಕೆ ಸುರೇಶರಿಂದ ಅದಕ್ಕಿಂತ ಉತ್ತಮ ನಡೆವಳಿಕೆ ನಿರೀಕ್ಷಿಸಲಿಕ್ಕಾಗುತ್ತದೆಯೇ? ಮುಖ್ಯಮಂತ್ರಿಗಳ ಸಮ್ಮುಖದ ನಡೆಯುತ್ತಿದ್ದ ಸಚಿವರ ಭಾಷಣಕ್ಕೆ ಅಡ್ಡಿಪಡಿಸಿದ್ದಕ್ಕೆ ಮೊಕದ್ದಮೆ ದಾಖಲಿಸಲು ಸುರೇಶ್ ಏನು ಹಿಂದುಮುಂದಿಲ್ಲದ ದಾರಿಹೋಕನೇ? ಚಿಕ್ಕದ್ದರಲ್ಲಿ ಚಿವುಟಿಹಾಕದ ಇಂತಹ ಪ್ರವೃತ್ತಿಗಳಿಂದಲೇ ಓ-ಮೈಕ್ರಾನ್ ಹಾವಳಿಯ ನಡುವೆಯೂ ಮಾಜಿ ಮುಖ್ಯ ಮಂತ್ರಿಯೂ, ಅದಕ್ಕೆ ಮೊದಲು, ಆಕಾಂಕ್ಷೀ ಮುಖ್ಯಮಂತ್ರಿಯೂ ಸಾಮಾಜಿಕ ಜವಾಬ್ದಾರಿಯನ್ನು ಗಾಳಿಗೆ ತೂರಿ ಪಾದಯಾತ್ರೆ ಬೆಳೆಸುವ ಸವಾಲೆಸೆಯುತ್ತಾರೆ.
ಗಂಡಸ್ತನದ ಮಾತಾಡುವ ಅಶ್ವಥನಾರಾಯಣ ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ. ಎರಡೂ ಪಕ್ಷದವರಿಗೂ ತಪರಾಕಿ ಹಾಕಲು ನ್ಯಾಯಾಲಯವೇ ಮಧ್ಯ ಪ್ರವೇಶಿಸಬೇಕಾಗುತ್ತದೆ. ವೆರಡೂ ಇತ್ತೀಚಿನ ರಾಜಕೀಯ ಪ್ರಹಸನಗಳಿಂದ ಜನರು ತಿಳಿಯಬೇಕಾದದ್ದೇನೆಂದರೆ ನಾವು ಪಾಳೇಗಾರರಿಂದ ಆಳಲ್ಪಡುತ್ತಿದ್ದೇವೆ. ಇವರು ತೊಡೆತಟ್ಟುವುದೇನು! ಮೀಸೆ ತಿರುವಿದ್ದೇನು! ಪರಸ್ಪರಿಗೆ ಧಮ್ಕಿ ಹಾಕಿದ್ದೇನು! ಪಾಳೇಗಾರಿಕೆಯಲ್ಲೂ ಅಧಿಕಾರ ಹಾಗೂ ಎಲ್ಲರಿಗೂ ಸೇರಬೇಕಾದ
ಸಂಪನ್ಮೂಲಗಳು ಹಲ ಸೀಮಿತ ಕೈಗಳಲ್ಲಿರುತ್ತದೆ. ಪಾಳೇಗಾರರು ಪರಸ್ಪರ ಕೈಕೈ ಮಿಲಾಯಿಸುವುದು, ಬಡಿದಾಡುವುದು ಆ ಸಂಪನ್ಮೂಲಗಳ ಅನುಭೋಗಕ್ಕೆ ಅಥವಾ ಅವನ್ನು ನಿಯಂತ್ರಣ ಪಡೆದುಕೊಳ್ಳುವುದಕ್ಕೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮತ್ತೊಂದು ವೀಡಿಯೊನಲ್ಲಿ ಸಿದ್ಧರಾಮಯ್ಯ ಮತ್ತು ಸಿ ಎಂ ಇಬ್ರಾಹಿಂ ಪರಸ್ಪರ ಹೀನಾಯವಾಗಿ ಬೈದುಕೊಂಡಿದ್ದನ್ನು ನೋಡಿದ್ದೇವೆ. ಆ ವೀಡಿಯೊವನ್ನು ತಿರುಚಲಾಗಿದೆ ಎಂದು ಸಿದ್ಧರಾಮಯ್ಯ ಹೇಳಿದ್ದರೂ, ಅವರ ನಡತೆಯ ಪರಿಚಯವಿರುವವರಿಗೆ ಅದು ತಿರುಚಿzಂದೆನಿಸುವುದಿಲ್ಲ. ನೀನು ಕೂಲಿಗಾಗಿ ಬಂದಿ ಅಂತ ಇಬ್ರಾಹಿಂ ಸಿದ್ಧರಾಮಯ್ಯರಿಗೂ ನಾನು ರಾಜಕಾರಣಕ್ಕೆ ಬಂದಾಗ ನೀನು ಚಡ್ಡಿಯೇ ಹಾಕುತ್ತಿ
ರಲಿಲ್ಲವೆಂದು ಸಿಧ್ಧರಾಮಯ್ಯ ಇಬ್ರಾಹಿಂಗೂ ಹೇಳಿದ್ದು ದಾಖಲಾಗಿದೆ. ಕೂಲಿಗಳ ಬಗ್ಗೆ ಇಬ್ರಾಹಿಂಗಿರುವ ತಾತ್ಸಾರವನ್ನೂ ಮತ್ತು ಚಡ್ಡಿ ಹಾಕದ ಇಬ್ರಾಹಿಮ್ರನ್ನು ಸಿಧ್ಧರಾಮಯ್ಯ ನೋಡಿದ್ದೇ ಅವರ ಬಾಳಿನ ಅವಿಸ್ಮರಣೀಯ ಅನುಭವ ಎಂಬುದನ್ನೂ ವೀಡಿಯೊ ಸಾಬೀತುಗೊಳಿಸುತ್ತದೆ.
ಇದೆಲ್ಲಕ್ಕಿಂತಲೂ ಮಿಗಿಲಾಗಿ, ಕುಸಿಯುತ್ತಿರುವ ನಮ್ಮ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವ ಮುಖ್ಯಸ್ಥರ ಬೌದ್ಧಿಕ ದಿವಾಳಿತನಕ್ಕೆ ಈ ಪ್ರಸಂಗಗಳು ಲೇಟೆಸ್ಟ್ ಉದಾಹರಣೆಗಳು. ಬೌದ್ಧಿಕತೆಗೂ ಭಾಷೆಗೂ ಅವಿನಾಭಾವ ಸಂಬಂಧ. ಬೌದ್ಧಿಕ ಪ್ರಗತಿಯನ್ನಳೆಯಲು ಭಾಷೆಯೇ ಸಾಧನ. ಭಾಷೆಯನ್ನು ಸಂಪದ್ಭರಿತ ವನ್ನಾಗಿಸುವುದೇ ಉನ್ನತ ಚಿಂತನೆ. ನಾಡಿನ ಅಭಿವೃದ್ಧಿಗೆ ಅರ್ಪಿಸಿಕೊಂಡವರ ಚಿಂತನೆ ಮೇಲ್ಮಟ್ಟದ್ದಾಗಿರುತ್ತದೆ. ಹಾಗಾಗಿ, ಅವರ ಭಾಷೆಯೂ ಮೌಲ್ಯಯುತ ವಾಗಿರುತ್ತದೆ.
ತಮ್ಮ ಮತ್ತು ತಮ್ಮ ಸಂಕುಲದ ಕ್ಷೇಮದತ್ತ ಮಾತ್ರ ಚಿಂತಿಸುವ ಮಂದಿಗೆ ಸಮಾಜಪರ ಚಿಂತನೆ ಇರುವುದಿಲ್ಲ. ಅವರು ಬಳಸುವ ಭಾಷೆಯೂ, ಅದಕ್ಕೆ ಅನುಗುಣವಾಗಿ, ಪಾಳೇಗಾರರದ್ದಾಗಿರುತ್ತದೆ. ತಮ್ಮ ಪುಟಗೋಸಿಯನ್ನು ಊರ ಹೆಬ್ಬಾಗಿಲಿಗೆ ಹಾಕಿ, ಯಾವನಾದರೂ ಗಂಡಸು ತನ್ನನ್ನೆದುರು ಹಾಕಿಕೊಳ್ಳಲು ದಂ ಇದ್ದರೆ ಲಂಗೋಟಿಯನ್ನು ಸರಿಸೋ, ಇಳಿಸೋ ಮುಂದೆ ಬರಲಿ ಎಂದು ಸವಾಲೆಸೆಯುತ್ತಿದ್ದನ್ನು ನೆನಪಿಸುವಂತಿದೆ ಈ ರಾಜಕೀಯ ಪ್ರಸಂಗಗಳು. ಇದು ಪ್ರಜಾಸತ್ತೆಗೆ ಮಾರಕವಾದ ಬೆಳವಣಿಗೆಗಳು. ಇದು ಭಾಷೆಗೂ ಅಷ್ಟೇ ಮಾರಕ.
ಭಾಷೆ, ಪ್ರಸಕ್ತ ಸಂದರ್ಭದಲ್ಲಿ ಕನ್ನಡ ಭಾಷೆ (ಅಭಿವೃದ್ಧಿ ಹೊಂದುವ ಮಾತು ಬಿಡಿ), ಪಾಳೇಗಾರರ ಕಪಿಮುಷ್ಟಿಯಿಂದ ವಿಮುಕ್ತವಾಗಬೇಕಾದರೆ ನಮ್ಮ ಸ್ಥಳೀಯ ನೇತಾರರ ಪಾಳೇಗಾರಿಕೆ ಬದಲಾಗಬೇಕಾಗುತ್ತದೆ. ಅವರ ಪಾಳೇಗಾರಿಕೆಯ ಮನಃಸ್ಥಿತಿ ಬದಲಾಗಬೇಕಾಗುತ್ತದೆ. ಪ್ರಜಾಸತ್ತಾತ್ಮಕ ಮೌಲ್ಯಗಳ ಪ್ರಾಮುಖ್ಯತೆ ಯನ್ನರಿತು ಅವುಗಳನ್ನು ಪ್ರಜ್ಞಾ ಪೂರ್ವಕವಾಗಿ ರೂಢಿಸಿಕೊಳ್ಳಬೇಕಾಗುತ್ತದೆ. ಶ್ರೀಸಾಮಾನ್ಯ ನನ್ನು ಐದು ವರ್ಷಕ್ಕೊಮ್ಮೆ (ಅಥವಾ ಮಧ್ಯಕಾಲೀನ ಚುನಾವಣೆ ಯ) ಸಂದರ್ಭದಲ್ಲಿ ಮಾತ್ರ ಗೌರವಿಸುವ ಮನೋಭಾವದವರಿಗೆ ಅದು ಸಾಧ್ಯವಿಲ್ಲ. ನಡೆ ಮತ್ತು ನುಡಿಗಿರುವ ಬಿಡಿಸಲಾಗದ ಸಂಬಂಧವನ್ನು ನಮ್ಮ ನೇತಾರರು ಅರ್ಥಮಾಡಿಕೊಂಡೇ ಇಲ್ಲ. ಪ್ರಜೆಗಳನ್ನು ತುಚ್ಛವಾಗಿ ಕಾಣುವುದು ನಮ್ಮ ನವಯುಗದ ಪಾಳೇಗಾರರಿಗೆ ಅಭ್ಯಾಸವಾಗಿ ಹೋಗಿದೆ. ಅವರಿಂದ ನಿರೀಕ್ಷಿಸಲಾಗದ ಪರಿವರ್ತನೆ, ಅವರನ್ನವರು ಗೌರವದಿಂದ ಕಾಣಲು ಆರಂಭವಾದ ದಿನ ಸಾಧ್ಯ.
ರಾಜಕಾರಣಿಗಳ ಪ್ರತಿಯೊಂದು ನಡೆ-ನುಡಿಗೆ ಭೂತಗನ್ನಡಿ ಹಿಡಿದು, ಅದನ್ನು ಎಳೆದೆಳೆದು, ಮತ್ತೆ ಮತ್ತೆ ಪ್ರಸಾರ ಮಾಡುವ ೨೪*೭ ಚಾನೆಲ್‌ಗಳು ಅವರ ಅಸಮ್ಮತ ನಡೆನುಡಿಗಳನ್ನು ಮಹಾಮಾರಿಯಂತೆ ಹರಡುತ್ತವೆ. ನಡೆನುಡಿಗಳೆರಡಕ್ಕೂ ಸಾಂಸ್ಥಿಕರೂಪ ಒದಗಿಸುತ್ತವೆ. ಆ ಕಾರಣದಿಂದಲೇ, ರಾಜಕಾರಣಿ ಗಳಿರುವುದೇ ಹೀಗೆ ಎಂಬ ಪ್ರಜೆಗಳ, ನಾವಿರಬೇಕಾದದ್ದೇ ಹೀಗೆ ಎಂಬ ರಾಜಕಾರಣಿಗಳ ನಂಬಿಕೆಗಳು ಸಾರ್ವತ್ರಿಕವಾಗಿವೆ. ಪ್ರಜೆಗಳ ಕುರಿತ ಅಸಡ್ಡೆ
ಶಾಶ್ವತವಾಗಿರುವುದು ಹೀಗೆ.
ಈ ಅಸಡ್ಡೆಯ ಹಿಂದೆ ಕ್ರೌರ್ಯವಿದೆ. ಭ್ರಷ್ಟಾಚಾರ, ಅದರಿಂದ ಇಂಧನ ಪಡೆದ ಲೋಲುಪತೆಗಳೆರಡರ ಹಿಂದೆ ಸಾಮಾನ್ಯರ ಗ್ರಹಿಕೆಗೆ ನಿಲುಕದ ಕ್ರೌರ್ಯವಿದೆ. ಲೋಲುಪತೆ ಮತ್ತು ಕ್ರೌರ್ಯ. ಸೆಕ್ಸ್ ಮತ್ತು ಕ್ರೈಂ – ಇವೆರಡೂ ನಮ್ಮ ಚಲನಚಿತ್ರಗಳಲ್ಲಷ್ಟೇ ಅಲ್ಲ, ರಾಜಕಾರಣವನ್ನೂ ಆವರಿಸಿವೆ. ಮುಖ್ಯವಾಹಿನಿ ಮಾಧ್ಯಮದಲ್ಲಂತೂ ಹೇಳುವುದೇ ಬೇಡ. ಸೆಕ್ಸ್ ಮತ್ತು ಹಿಂಸೆಗಳೆರೆಡರಲ್ಲೂ ಮಾತು ಕಡಿಮೆ. ಕೃತಿಗಷ್ಟೇ ಪ್ರಾಧಾನ್ಯ. ಸಚಿವರುಗಳಿಂದ ಕೆಲಸಮಾಡಿಸಿ ಕೊಳ್ಳುವ ಛಾತಿ ಕೆಲವೇ ಮಂದಿಗಿರುವುದು ಈ ಕಾರಣಕ್ಕೆ.(ಹಾಸು ಇಲ್ಲವೇ ಕಾಸು!) ಮಾತು ಕಡಿಮೆಯಾದ್ದರಿಂದ ಭಾಷೆಗೆ ಮಹತ್ವವಿಲ್ಲ. ಇವೆರಡು ವಿಷಯಗಳನ್ನೇ ಬಂಡವಾಳವಾಗಿರಿಸಿಕೊಂಡ ಟಿವಿ ಮಾಧ್ಯಮಕ್ಕೂ ಭಾಷೆಯ ರಗಳೆಯೇ ಬೇಡ. ಯಾವುದೋ ತಿಮಿಂಗಿಲ ನುಂಗಿದ ಲಂಚ, ಇನ್ನಾವನೋ ಯಾರೊಂದಿಗೋ ಹಂಚಿಕೊಂಡ ಮಂಚ.
ಟಿಆರ್‌ಪಿ ಗೆ ಬೇರೇನು ತಾನೇ ಕಸರತ್ತು ಬೇಕು? ಅತಿ ಕಡಿಮೆ ಶಬ್ದಗಳಲ್ಲಿ ವೀಕ್ಷಕರ ಗಮನ ಸೆಳೆಯಬಹುದು. ಶಬ್ದವೂ ಬೇಡ, action ಸೂಚಿಸುವ ಹಿಮ್ಮೇಳ ವಿದ್ದರೂ ಸಾಕು. ರಾಜಕಾರಣಿಗಳ ನಡೆ-ನುಡಿಗಳಿಗೆ ಅನುಚಿತ ಪ್ರಚಾರ ನೀಡುವ ಏಕಮಾತ್ರ ಕಾರಣದಿಂದ ಕನ್ನಡ ಭಾಷೆ ಸೊರಗುತ್ತಿರುವುದು ಹೀಗೆ.
ಟಿವಿ ವರದಿಗಾರಿಕೆಗೆ ಅಕ್ಷರಜ್ಞಾನವೇ ಬೇಕಿಲ್ಲ ಎಂಬಂತಹ ಅಪಾಯಕಾರಿ ಸನ್ನಿವೇಶಕ್ಕೆ ಕನ್ನಡಮ್ಮ ಸಿಲುಕಿದ್ದಾಳೆ.
ರಾಜಕಾರಣಿಗಳ ಮೂತಿಗೆ ಮೈಕ್ ಹಿಡಿಯುವುದು. ಅವರು ಉದುರಿಸಿದ್ದನ್ನು ಕ್ಯಾಮರಾದಲ್ಲಿ ದಾಖಲಿಸುವುದು. ಅವರದ್ದೂ ಸೀಮಿತ ಜ್ಞಾನ, ಅದಕ್ಕಿಂತಲೂ ಸೀಮಿತವಾದ ಭಾಷೆ. ಇವರದ್ದೂ ಅದೇ ಕಥೆ. ಹುದ್ದೆಗೆ ತಕ್ಕ ಘನತೆಯಿಲ್ಲ. ಘನತೆಗೆ ತಕ್ಕ ಮಾತಿಲ್ಲ. ನಡೆಗೆ ತಕ್ಕ ಮಾತು. ಮಾತು ಬಂದರಲ್ಲವೇ ಭಾಷೆ ಬೆಳೆಯುವುದು.
ಮತ್ತೊಮ್ಮೆ ಹೇಳುತ್ತೇನೆ: ಮಾತನಾಡುವವರು ತಮ್ಮನ್ನು ತಾವು ಗೌರವಿಸಿಕೊಳ್ಳುವಂತಹ ಮಾತನ್ನಾಡಬೇಕು. ಕ್ಷಮತೆಯನ್ನು ಮುಚ್ಚಿಕೊಳ್ಳುವಂತಹ ಹಾರಿಕೆ ಮಾತುಗಳಿಗೆ ತೂಕವಿರುವುದಿಲ್ಲ. ಲಘುವಾದ ಮಾತುಗಳು ಗಾಳಿಗೆ ಹಾರಿ ಹೋಗುತ್ತವೆ. ಜನರ ಹೃದಯದಾಳಕ್ಕೆ ಇಳಿಯುವುದಿಲ್ಲ. ಘನಂದಾರಿ ಕಾರ್ಯಗಳನ್ನು ನಿರ್ವಹಿಸಿದಾಗ ಕೊಚ್ಚಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಮಾತು ಅನವಶ್ಯಕವಾಗುತ್ತವೆ.
ಹಾಗಾದ ದಿನ, ನಿಷ್ಪ್ರಯೋಜಕರು ಉದುರಿಸುವ ಮಾತನ್ನು ಮತ್ತೆಮತ್ತೆ ಬಿತ್ತರಿಸುವುದನ್ನೇ ಕಾಯಕ ಮಾಡಿಕೊಂಡ ಟಿವಿ ಚಾನೆಲ್‌ಗಳು ಬಾಗಿಲು ಹಾಕಬೇಕಾಗುತ್ತದೆ. ಅದು ಸೊರಗುತ್ತಿರುವ ಕನ್ನಡಮ್ಮನ ಹೆಬ್ಬಯಕೆಯೂ ತಾನೇ?