Wednesday, 11th December 2024

ಸಂಪಾದಕನ ಸ್ವಾತಂತ್ರ‍್ಯಕ್ಕೆ ವಿಶ್ವವಾಣಿ ಹೊಸ ಭಾಷ್ಯ

ಹೊಣೆ ಮತ್ತು ವಿವೇಚನೆಯನ್ನು ಅರಿತ ಸಂಪಾದಕ ವಿಶ್ವೇಶ್ವರ ಭಟ್

ಕೈಯಲ್ಲಿ ದೊಡ್ಡ ಬಂಡವಾಳ ಇಲ್ಲದೆಯೇ ಜನಪ್ರಿಯತೆ, ಅನುಭವವನ್ನೇ ಹೂಡಿ ಆರಂಭಿಸಿದ ‘ವಿಶ್ವವಾಣಿ’ ಪತ್ರಿಕೆ ೭ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಕನ್ನಡದ
ಪತ್ರಿಕೋದ್ಯಮಕ್ಕೆ ವಿಶ್ವೇಶ್ವರ ಭಟ್ಟರು ಕಾಲಿಟ್ಟ (ಸಂಪಾದಕರಾಗಿ) ನಂತರ ಪತ್ರಿಕೆಗಳಲ್ಲಿ ಆದ ಬದಲಾವಣೆ, ಮೊದಲು ಪತ್ರಿಕೆಗಳು ಇದ್ದ ರೀತಿಯನ್ನು ನೋಡಿದರೆ, ಕನ್ನಡ ಪತ್ರಿಕೋದ್ಯಮ ಹೇಗಿತ್ತು ಎಂಬುದು ಅರ್ಥವಾಗುತ್ತದೆ.

ಡಾ.ಎಸ್.ಎಲ್.ಭೈರಪ್ಪ

‘ವಿಶ್ವವಾಣಿ’ಗೆ ಆರು ವರ್ಷ ತುಂಬಿ ಏಳನೇ ವರ್ಷಕ್ಕೆ ಪತ್ರಿಕೆ ಕಾಲಿಡುತ್ತಿರುವುದು ಬಹಳ ಸಂತೋಷದ ವಿಷಯ. ನಾನು ನನ್ನ ೧೫-೧೬ನೇ ವಯಸ್ಸಿನಿಂದ ಪತ್ರಿಕೆಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ. ಈಗಲೂ ದಿನಕ್ಕೆ ಮೂರ‍್ನಾಲ್ಕು ಪತ್ರಿಕೆಗಳನ್ನಾದರೂ ಓದುತ್ತೇನೆ. ಯಾವ ಪತ್ರಿಕೆ ಹೇಗೆ ಇರುತ್ತದೆ; ಅದರ ಧ್ಯೇಯ- ಧೋರಣೆಗಳು ಏನು ಇತ್ಯಾದಿಗಳನ್ನು ನಾನು ಗಮನಿಸಿಕೊಂಡೇ ಬಂದಿದ್ದೇನೆ.

ಕನ್ನಡದ ಪತ್ರಿಕೋದ್ಯಮಕ್ಕೆ ವಿಶ್ವೇಶ್ವರ ಭಟ್ಟರು ಕಾಲಿಟ್ಟ (ಸಂಪಾದಕರಾಗಿ) ನಂತರ ಪತ್ರಿಕೆಗಳಲ್ಲಿ ಆದ ಬದಲಾವಣೆ, ಅವರು ಬರುವುದಕ್ಕಿಂತ ಮೊದಲು ಪತ್ರಿಕೆಗಳು ಇದ್ದ ರೀತಿಯನ್ನು ನೋಡಿದರೆ, ವಿಶ್ವೇಶ್ವರ ಭಟ್ಟರನ್ನು ಒಂದು ರೀತಿಯಲ್ಲಿ ಕನ್ನಡ ಪತ್ರಿಕೋದ್ಯಮದ ಯುಗಪುರುಷ ಅನ್ನಬಹುದು. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಸಾಧಾರಣವಾಗಿ ಪತ್ರಿಕೆಗಳು ತಮ್ಮದೇ ಆದ ಐಡಿಯಾಲಜಿ ಇಟ್ಟುಕೊಂಡಿದ್ದೆವು . ಐಡಿಯಾಲಜಿ ಅನ್ನುವುದಕ್ಕಿಂತ ಹೆಚ್ಚಾಗಿ ಅದರ ಮಾಲೀಕರು ಒಂದು ಗೆರೆ ಎಳೆದಿರುತ್ತಾರೆ. ನೀವು ಹೀಗೇ ಬರೆಯಬೇಕು; ಈ ಗೆರೆಯನ್ನು ದಾಟಬಾರದು ಅಂತ ನಿರ್ಬಂಧ ವಿಧಿಸಿರುತ್ತಾರೆ. ಅದಕ್ಕೆ ಅವರ ಬ್ಯುಸಿನೆಸ್ ಅಂಶವೂ ಕಾರಣ ವಿರಬಹುದು. ರಾಜಕೀಯ ಅಂಶವೂ ಮುಖ್ಯವಾಗಿರಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಧೈರ್ಯ, ಛಾತಿಗಳೂ ಮುಖ್ಯವಾಗಿ ರುತ್ತದೆ. ಆದ್ದರಿಂದ ಈ ‘ಸಂಪಾದಕನ ಸ್ವಾತಂತ್ರ್ಯ’ ಅನ್ನುವುದು ಮಾತಿಗೆ ಅಷ್ಟೇ ಹೊರತು ನಿಜವಾಗಿ ಯಾವ ಸಂಪಾದಕನಿಗೂ ಸ್ವಾತಂತ್ರ್ಯ ಇರುವುದಿಲ್ಲ.

ವಿಶ್ವೇಶ್ವರ ಭಟ್ಟರು ಸಂಪಾದಕರಾಗಿ ಬಂದ ಮೇಲೆ ಆ ಸ್ವಾತಂತ್ರ್ಯವನ್ನು , ಪತ್ರಿಕೆಗಳಲ್ಲಿ ಸ್ವಾತಂತ್ರ್ಯ ಅಂದರೆ ಏನು ಅನ್ನುವುದನ್ನು ನಾವೆಲ್ಲ ಕಾಣಲಿಕ್ಕೆ ಅವಕಾಶ ಆಯ್ತು. ಇಂಥ ಸ್ವತಂತ್ರ ಮನೋಭಾವದ ಪತ್ರಕರ್ತರಿಗೆ ಬೇರೆ ಮಾಲೀಕರ ಕೈಕೆಳಗೆ ಕೆಲಸ ಮಾಡುವುದು ಕೆಲ ಕಾಲದ ನಂತರ ಅಸಾಧ್ಯವಾಗಲಿದೆ. ನಾನು ಕಂಡಹಾಗೆ ಅವರು ಕನ್ನಡದ ಮೂರು ಪತ್ರಿಕೆಗಳಿಗೆ ಸಂಪಾದಕರಾಗಿದ್ದು, ಪ್ರತಿ ಬಾರಿಯೂ ತಮ್ಮ ಮನೋಧರ್ಮಕ್ಕೆ ಹೊಂದುವುದಿಲ್ಲ ಎಂಬ ಕಾರಣಕ್ಕೆ ಅವೆಲ್ಲವುಗಳಿಂದ ದೂರವಾಗಿ ತಮ್ಮದೇ ಸ್ವಂತ ಪತ್ರಿಕೆ ಆರಂಭ ಮಾಡಿದರು.

‘ವಿಶ್ವವಾಣಿ’ ಹುಟ್ಟಿದ್ದು ಹೇಗೆ ಎಂಬುದು ಪತ್ರಿಕೆಯ ಓದುಗರೆಲ್ಲರಿಗೂ ಗೊತ್ತಿದೆ. ಬಹಳ ಮುಖ್ಯ ಸಂಗತಿ ಎಂದರೆ, ವಿಶ್ವೇಶ್ವರ ಭಟ್ಟರ ಸ್ವಾತಂತ್ರ್ಯ ಪ್ರಿಯತೆ, ಅದಕ್ಕೆ
ಬೇಕಾದ ಧೈರ‍್ಯ ಹಾಗೂ ಕೆಚ್ಚು. ಆ ಕೆಚ್ಚಿಗೆ ಮುಖ್ಯ ಕಾರಣವೆಂದರೆ ಅವರಲ್ಲಿರುವ ಜನ ವೈಶಾಲ್ಯ. ಇವರಿಗಿರುವಷ್ಟು ಓದಿನ ವ್ಯಾಪ್ತಿ ಕನ್ನಡದ ಬೇರೆ ಯಾವುದೇ
ಸಂಪಾದಕರಿಗಾಗಗಲೀ, ಪತ್ರಕರ್ತರಿಗಾಗಲೀ ಇಲ್ಲ. ಅವರ ಬಳಿ ಇರುವ ಸ್ವಂತ ಖಾಸಗೀ ಲೈಬ್ರರಿ ನೋಡಿದರೆ ‘ಅಬ್ಬಾ’ ಎನಿಸುತ್ತದೆ. ಜತೆಗೆ ಭಟ್ಟರು ನೋಡಿರುವಷ್ಟು ದೇಶಗಳನ್ನು ಕನ್ನಡದ ಪತ್ರಕರ್ತರ‍್ಯಾರೂ ನೋಡಿಲ್ಲ. ಬರೀ ನೋಡುವುದಷ್ಟೇ ಅಲ್ಲ, ಭಟ್ಟರು ಯಾವ್ಯಾವ ದೇಶಕ್ಕೆ ಹೋಗುತ್ತಾರೋ ಅಲ್ಲಿನ ರಾಜಕೀಯ, ಇತಿಹಾಸ, ಆರ್ಥಿಕತೆ, ಕಲೆ ಹೀಗೆ ಅನೇಕ ಸಂಗತಿಗಳನ್ನು ಅಧ್ಯಯನ ಮಾಡಿ ಬರುತ್ತಾರೆ. ಇಂಥ ವ್ಯಾಪ್ತಿ ಬೇರೆ ಇನ್ಯಾವ ಪತ್ರಕರ್ತರಿಗೂ ಇಲ್ಲ

ಬಹಳಷ್ಟು ಸಂಪಾದಕರನ್ನು ನೋಡಿದ್ದೇವೆ. ಸಂಪಾದಕರು ಅಂದರೆ ಪತ್ರಿಕೆಗಳಲ್ಲಿ ಸಂಪಾದಿಸುವುದು ಎಂದರ್ಥ. ಸಂಪಾದನೆ ಅಂದರೆ ಕನ್ನಡದಲ್ಲಿ ‘ಅರ್ನಿಂಗ್’ ಎನ್ನುವ ಅರ್ಥವೂ ಇದೆ. ಅಥವಾ ಒಂದು ರೂಪ ಕೊಡುವುದು ಅಂತ ಇನ್ನೊಂದು ಅರ್ಥವಿದೆ. ನ್ಯೂಸ್ ಎಲ್ಲೆಲ್ಲಿಂದಲೋ ಬರುತ್ತದೆ, ಅದಕ್ಕೊಂದು ರೂಪ ಕೊಡುವುದು. ಹೆಡ್‌ಲೈನ್ ಕೊಡುವುದು, ಯಾವ್ಯಾವ ಪುಟಗಳಿಗೆ ಏನೇನು ಕೊಡುವುದು ಎಂಬುದು. ಆದರೆ, ಅದಷ್ಟೇ ಅಲ್ಲ. ಸ್ವತಃ ಬರೆಯುವ ಶಕ್ತಿ ಎಷ್ಟು ಜನರಿಗಿದೆ. ಅದರಲ್ಲೂ ವೃತ್ತಪತ್ರಿಕೆ ಎಂದರೆ ಒಂದು ರೀತಿಯಲ್ಲಿ ರಾಕ್ಷಸನ ಹೊಟ್ಟೆ ಇದ್ದ ಹಾಗೆ.

ಪ್ರತೀ ದಿನವೂ ಅದಕ್ಕೆ ತುಂಬುತ್ತಿರಬೇಕು. ಎಲ್ಲಿಂದ ಹೊಂದಿಸೋದು? ಆ ಹೊಂದಿಸುವುದಕ್ಕೆ ಸಾಕಷ್ಟು ಜನ ಇರಬೇಕು. ಯಾವ ವಿಷಯ ಬಂದರೂ ಅದರ ಬಗ್ಗೆ
ಅದನ್ನು ವಿಶ್ಲೇಷಣೆ ಮಾಡುವಂತಹುದು ಮತ್ತು ಅದರ ಬೇರನ್ನು ಹುಡುಕಿ ಹೊರತರುವುದು. ಈ ತರದ ತಿಳಿವಳಿಕೆ ಇರಬೇಕು. ವಿಶ್ವೇಶ್ವರ ಭಟ್ಟರಿಗೆ ಇವೆಲ್ಲ ಇರುವುದರಿಂದ ಪ್ರತಿ ದಿವಸವೂ ಅವರು ಬರೆಯುತ್ತಲೇ ಇರುತ್ತಾರೆ. ಅವರು ಏನು ಬರೆದರೂ ಓದುಗರಿಗೆ ಆ ಬಗ್ಗೆ ಆಸಕ್ತಿ ಹುಟ್ಟುತ್ತದೆ. ಅದು ಇವರ ಅಖಂಡ ಬುದ್ಧಿಮತ್ತೆಗೆ ನಿದರ್ಶನ.

ಧೈರ್ಯ, ಛಾತಿಯ ಸಂಪಾದಕ: ಇನ್ನು ಸಂಪಾದಕರೊಬ್ಬರ ಧೈರ್ಯ, ಛಾತಿಯ ವಿಚಾರ. ನನ್ನ ‘ಆವರಣ’  ಪುಸ್ತಕ ಹೊರಬಂದಾಗ ಬೇರೆ ಪತ್ರಿಕೆಗಳು ಸಕಾರಾತ್ಮಕವಾಗಿ ಬರೆಯಲು ಹಿಂಜರಿದಿದ್ದವು. ವಿಶ್ವೇಶ್ವರ ಭಟ್ಟರು ಮಾತ್ರ ನಿರ್ಬಿಢೆಯಿಂದ ಪರಿಚಯ ಹಾಗೂ ಪುಸ್ತಕದ ಬಗ್ಗೆ ಸಕಾರಾತ್ಮಕವಾಗಿ ಪ್ರಕಟಿಸಿದರು. ಆ ಸಂದರ್ಭದಲ್ಲಿ ಆವರಣ ಪುಸ್ತಕ ವಿರೋಧಿಸಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಾಲ್ಕು ಸೆಮಿನಾರ್‌ಗಳನ್ನು ನಡೆಸಲಾಯಿತು.

ಭಟ್ಟರು ಆ ಸೆಮಿನಾರ್‌ಗಳ ವರದಿಯನ್ನೂ ಪ್ರಕಟಿಸದಿರಲಿಲ್ಲ. ತದನಂತರ ಅಂಥ ನಕಾರಾತ್ಮಕ ಅಂಶಗಳಿಂದಲೇ ಕೂಡಿದ್ದ ಸೆಮಿನಾರ್‌ಗಳಿಗೆ ಜನರಿಂದ, ಕೆಲ
ಲೇಖಕರಿಂದ ಪ್ರತಿಸ್ಪಂದನೆಯೂ ಬಂತು. ಜನರೇ ಕೃತಿಯನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಿದ್ದರು. ಅದನ್ನೂ ಭಟ್ಟರು ಪ್ರಕಟಿಸಲು ಹಿಂಜರಿಯಲಿಲ್ಲ. ಈ
ಬೆಳವಣಿಗೆಯಿಂದಾಗಿ ಹೆಚ್ಚು ಜನರಿಗೆ ಆವರಣ ಪುಸ್ತಕ ತಲುಪಲು ಸಾಧ್ಯವಾಯಿತು. ವಿಷಯವೊಂದರ ಕುರಿತು ಎಲ್ಲ ಮಗ್ಗುಲುಗಳನ್ನೂ ನಿರ್ಬಿಢೆಯಿಂದ ಜನರಿಗೆ
ತಲುಪಿಸುವುದು ಸಂಪಾದಕನ ಹೊಣೆ, ಮತು ವಿವೇಚನೆ. ಅದನ್ನು ಎಲ್ಲ ಸಂದರ್ಭದಲ್ಲೂ ಭಟ್ಟರು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ.

ಈ ರೀತಿ ಬರೆಯುವವರಿಗೆ ಎಷ್ಟೋ ಸಂದರ್ಭದಲ್ಲಿ ಶತ್ರುಗಳೂ ಹುಟ್ಟಿಕೊಳ್ಳುತ್ತಾರೆ. ನಿಜ ಬರೆಯಲು ಹೊರಟಾಗ ಕೆಲವರಿಗೆ ಅದು ಚುಚ್ಚುವುದು ಸಹಜ.
ಅಂಥವರು ಶತ್ರುಗಳಾಗಿ ಪರಿವರ್ತಿತರಾಗುತ್ತಾರೆ. ವಿಶ್ವೇಶ್ವರ ಭಟ್ಟರು ಇಂಥವಕ್ಕೆಲ್ಲ ಡೋಂಟ್‌ಕೇರ್. ಯಾರೇ ಭಟ್ಟರಿಗೆ ಕೀಟಲೆ ಮಾಡಲಿ, ಗೇಲಿ ಮಾಡಲಿ. ಕೆಲವನ್ನು ನಿರ್ಲಕ್ಷಿಸುತ್ತಾರೆ. ಆದರೆ ಉತ್ತರ ಕೊಡಲೇಬೇಕಾದುದಕ್ಕೆ ಸರಿಯಾದ ಪ್ರತ್ಯುತ್ತರ ಕೊಡಲೂ ಹಿಂಜರಿಯುವುದಿಲ್ಲ.

ಎಲ್ಲ ಸಂದರ್ಭದಲ್ಲೂ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ತನಗೂ ತಿರುಗಿ ಉತ್ತರ ಕೊಡುವುದು ಗೊತ್ತು ಎಂಬುದನ್ನು ತೋರಿಸುವುದರಲ್ಲಿ ಅವರು ನಿಸ್ಸೀಮರು. ಹೀಗಾಗಿ ಗೇಲಿ ಮಾಡುವವರು ಬಾಯಿ ಮುಚ್ಚಿಕೊಳ್ಳುತ್ತಾರೆ. ಏನೂ ಇಲ್ಲದೆಯೇ, ಕೈಯಲ್ಲಿ ದೊಡ್ಡ ಬಂಡವಾಳವೂ ಇಲ್ಲದೆಯೇ ಪತ್ರಿಕೆ ನಡೆಸುವುದು, ಪತ್ರಿಕೋದ್ಯಮ ಸಾಹಸ ಆರಂಭ ಮಾಡುವುದಿದೆಯಲ್ಲಾ ಅದು ಸುಲಭದ ಮಾತಲ್ಲ. ಇವರಿಗಿದ್ದುದು ಜನಬಲ ಮಾತ್ರ. ಆ ಜನಬಲ ಸಂಪಾದಿಸಿದ್ದು ಹಿಂದಿನ ಮೂರು ಪತ್ರಿಕೆಗಳಲ್ಲಿ ಸಂಪಾದಕರಾಗಿ ಕೆಲಸ ಮಾಡಿದ್ದಾಗಿನದ್ದು. ಆಗ ಇವರು ಬರೆಯುತ್ತಿದ್ದ ಲೇಖನಗಳೇ ಬಂಡವಾಳ. ಇವರು ಬರೆಯುತ್ತಿದ್ದ ಸುದ್ದಿಯನ್ನು ನಾವು ದಿನಾ ಓದಬೇಕು. ಆ ಸುದ್ದಿಯ ವಿಶ್ಲೇಷಣೆಯನ್ನು ನಾವು ತಿಳಿದುಕೊಳ್ಳಬೇಕೆಂಬ ವಿಚಾರ ಜನರ ತಲೆಯಲ್ಲಿ ಕುಳಿತಿತ್ತು.

ಲಕ್ಷಾಂತರ ಜನ ಇದ್ದರು. ಅವರ ಬಗ್ಗೆ ಇವರಿಗೆ ಗೊತ್ತಿತ್ತು. ಆ ಧೈರ‍್ಯದ ಮೇಲೆಯೇ ಅವರು ‘ವಿಶ್ವವಾಣಿ’ ಆರಂಭಿಸಿದರು. ಓದುಗರ ನಾಡಿ ಏನು ಎಂಬುದು ಅವರಿಗೆ ಗೊತ್ತಿತ್ತು. ಅನುಭವ ಮತು ಜನಪ್ರಿಯತೆಯನ್ನೇ ಹೂಡಿಕೆ ಮಾಡಿಕೊಂಡು ಪತ್ರಿಕೆ ಆರಂಭಿಸಿದ್ದು. ಅವರ ಊಹೆ ಹಾಗೂ ನಂಬಿಕೆ ಸರಿಯಾಗಿಯೇ ಇತ್ತು. ಹೀಗಾಗಿ ಪತ್ರಿಕೆ ಯಶಸ್ವಿಯಾಗಿ ಆರು ವರ್ಷ ಮುಗಿಸಿ ಏಳನೇ ವರ್ಷಕ್ಕೆ ಕಾಲಿಟ್ಟಿದೆ. ಬರೀ ಆರು ವರ್ಷ ಮಾತ್ರವಲ್ಲ, ಅಷ್ಟೂ ವರ್ಷ ಗಟ್ಟಿಯಾಗಿ ಬೆಳೆದುಕೊಂಡು ಬಂದಿತ್ತು. ಈಗ ಎಷ್ಟರ ಮಟ್ಟಿಗೆ ಆಗಿದೆ ಎಂದರೆ, ಅದರ ಹಣಕಾಸಿನ ಪರಿಸ್ಥಿತಿ ಬಗ್ಗೆ ಏನೂ ಚಿಂತೆ ಮಾಡಬೇಕಿಲ್ಲ.

ಹೀಗಿದ್ದರೆ ಮಾತ್ರ ಒಂದು ಸ್ವತಂತ್ರ ಪತ್ರಿಕೆ ನಿಲ್ಲುತ್ತದೆ. ಬೇರೆ ಪತ್ರಿಕೆಗಳಲ್ಲಿ ಇಲ್ಲದಿರುವಂಥದ್ದು ‘ವಿಶ್ವವಾಣಿ’ಯಲ್ಲಿ ಇರುತ್ತೆ. ಉದಾಹರಣೆಗೆ ಎಷ್ಟೋ ಪತ್ರಿಕೆಗಳಲ್ಲಿ ಪುಸ್ತಕ ವಿಮರ್ಶೆ ಕಾಲಂಗಳೇ ಇಲ್ಲ. ಮೊದಲೆಲ್ಲ ಹೊಸ ಪುಸ್ತಕಗಳು ಬಂದಿದೆ ಎಂದರೆ ವಾರಕೊಮ್ಮೆಯಾದರೂ ವಿಮರ್ಶೆ ಮಾಡುತ್ತಿದ್ದರು. ಈಗ ಆ ಬಗ್ಗೆ ಮಾಹಿತಿಯೇ ಇಲ್ಲ. ಅಂಥ ಒಂದು ಪುಟಕ್ಕಾಗಿ ಖರ್ಚಾಗುತ್ತಲ್ಲ?! ಅದೇ ಜಗದಲ್ಲಿ ಜಹೀರಾತು ಹಾಕಿದರೆ ದುಡ್ಡು ಬರುತ್ತದೆ. ಈ ರೀತಿ ಮನೋಭಾವದೊಂದಿಗೆ ಎಷ್ಟೋ ಪತ್ರಿಕೆಗಳಲ್ಲಿ ಪುಸ್ತಕದ ವಿಮರ್ಶೆ ಅಥವಾ ಪುಸ್ತಕ ಪರಿಚಯದ ವಿಭಾಗವನ್ನೇ ರದ್ದುಗೊಳಿಸಲಾಗಿದೆ.

‘ವಿಶ್ವವಾಣಿ’ ಇಂದಿಗೂ ಇಂಥ ಸತ್ ಸಂಪ್ರದಾಯಗಳನ್ನು ಮುಂದುವರಿಸಿದೆ. ಇಂಥ ಪ್ರಯೋಗಗಳಿಂದಾಗಿಯೇ ಬೇರೆ ಬೇರೆ ಆಸಕ್ತಿ ಇರುವಂತಹವರನ್ನು ಈ ಪತ್ರಿಕೆ ಆರ್ಕಸುತ್ತದೆ. ಅದು ಭಟ್ಟರು ಜನರ ನಾಡಿಮಿಡಿತವನ್ನು ಅರಿತಿರುವ ರೀತಿ. ವಿಶ್ವೇಶ್ವರ ಭಟ್ಟರ ಜತೆ ನಾವು ಗಂಟೆಗಟ್ಟಲೆ ಹರಟಬಹುದು. ಅವರ ಜತೆ ಮಾತನಾಡಲು ಕುಳಿತರೆ ಸ್ವಲವೂ ಬೋರಾಗಲ್ಲ. ನಾವು ಯಾವ ವಿಷಯ ಮಾತನಾಡಿದರೂ ಅದರ ಜತೆಯಲ್ಲೇ ಸಂಭಾಷಣೆ ಸಾಗಿಸಿಕೊಂಡು ಹೋಗುವ ಶಕ್ತಿ ಅವರಿಗಿದೆ. ಅದು ಹೇಗೆ ಅವರಿಗೆ ಬಂತೆಂದರೆ; ಅವರಲ್ಲಿನ ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ.

ಅವರ ಬಗ್ಗೆ ಕೂತು ಮಾತನಾಡುವುದು ಎಷ್ಟು ಆಕರ್ಷಣೀಯವೋ, ಅವರ ಪತ್ರಿಕೆ ಓದುವುದು ಕೂಡ ಅಷ್ಟೇ ಆಕರ್ಷಣೀಯ. ಜೀವ ತುಂಬಿದರೆ ತಾನೇ ಪತ್ರಿಕೆ ಆಕರ್ಷಕವಾಗಿರೋದು?! ಇಲ್ಲದಿದ್ದರೆ ಅದು ಡೆಡ್ ಬಾಡಿ ಆಗಿಬಿಡುತ್ತದೆ. ಆದ್ದರಿಂದ ಇದು ಇಷ್ಟು ಬೆಳೆದಿರುವುದು ನನಗೇನೂ ಆಶ್ಚರ್ಯ ಆಗಿಲ್ಲ, ಅದು ಇನ್ನೂ ಬೆಳೆಯುತ್ತದೆ. ಪತ್ರಿಕೆಗಾಗಿ ಸ್ವಂತ ಕಟ್ಟಡ ಮಾಡಬೇಕೆಂಬುದು ಅವರ ಯೋಜನೆಯಲ್ಲಿದೆ.

ಖಂಡಿತವಾಗಿಯೂ ಅವರು ಅದನ್ನು ಮಾಡೇ ಮಾಡುತ್ತಾರೆ. ಅದನ್ನು ಬೆಂಬಲಿಸುವ ಜನಗಳು ಕೂಡ ಇದ್ದಾರೆ. ಈ ದೃಷ್ಟಿಯಿಂದ ಇದು ಒಂದು ಒಳ್ಳೆಯ ಘಟ್ಟ.
ಇದು ಹೀಗೆ ಬೆಳೆಯಲಿ. ಭಟ್ಟರ ಕನಸುಗಳಲ್ಲಿ ಸಾಕಾರಗೊಳ್ಳಲಿ ಅಂತ ನಾನು ಹಾರೈಸುತ್ತೇನೆ.

ವಿಶ್ವವಾಣಿ ಪತ್ರಿಕೆ ಒಂಥರಾ ಅಡಿಕ್ಷನ್
ಮತ್ತೊಂದು ಉದಾಹರಣೆ; ಭಟ್ಟರ್ ಸ್ಕಾಚ್ ಎಂಬುದು ತಮಾಷೆ ಕಾಲಂ. ಆದರೆ, ಅದಕ್ಕೆ ಪ್ರತಿದಿನವೂ ಉತ್ತರ ಬರೆಯುವುದಿದೆಯಲ್ಲ, ಅದಕ್ಕಾಗಿ ಸಾಕಷ್ಟು ಚುರಕು, ಚತುರಮತಿ ಬೇಕು. ಭಟ್ಟರ್ ಸ್ಕಾಚ್ ಓದುವುದು ಬಹಳ ಜನಕ್ಕೆ ಒಂದು ಅಡಿಕ್ಷನ್ ಆಗಿಬಿಟ್ಟಿದೆ. ಸ್ಕಾಚ್ ಹೇಗೆ ಅಡಿಕ್ಷನ್ ಆಗುತ್ತದೆಯೋ ಹಾಗೆ ಈ ಕಾಲಮ್ಮೂ ಕೂಡ ಅಡಿಕ್ಷನ್ ಆಗಿದೆ.

ಈ ಕೆಪ್ಯಾಸಿಟಿ ಎಷ್ಟು ಜನರಿಗೆ ಇರುತ್ತೆ? ಪತ್ರಿಕೆ ಇಷ್ಟು ಬೆಳೆದದ್ದು ಭಟ್ಟರ ಸಾಮರ್ಥ್ಯ ತಿಳಿದವರಿಗೆ ಆಶ್ಚರ‍್ಯವೇನಲ್ಲ. ನಾನಂತೂ ‘ವಿಶ್ವವಾಣಿ’ ಆರಂಭದ ದಿವಸದಿಂದಲೂ ತರಿಸುತ್ತಿದ್ದೇನೆ. ನಾನು ದಿನಕ್ಕೆ ಆರು ಪತ್ರಿಕೆ ಓದುತ್ತೇನೆ. ಒಂದೊಂದು ಪತ್ರಿಕೆ ಒಂದೊಂದು ರೀತಿ ಇರುತ್ತೆ. ಒಮ್ಮೊಮ್ಮೆ ಪತ್ರಿಕೆ ಹಾಕುವ
ಹುಡುಗ ‘ವಿಶ್ವವಾಣಿ’ ಹಾಕದಿದ್ದಲ್ಲಿ ನನಗೆ ಅವನ ಮೇಲೆ ಸಿಟ್ಟು ಬಂದದ್ದೂ ಉಂಟು. ಇವತ್ತು ಏನು ಹೊಸ ಸುದ್ದಿ ಇದೆ ಎಂಬ ಕಾತರ ನನಗೆ. ಅದರಲ್ಲಿ ಒಂದು ಹೊಸತರ ಲವಲವಿಕೆ ಇರುತ್ತದೆ. ಆ ಲವಲವಿಕೆಗೋಸ್ಕರವಾಗಿಯೇ ಅದು ನನಗೆ ಅಡಿಕ್ಷನ್ ಆಗಿದೆ. ಒಟ್ಟಾರೆ ಆರು ವರ್ಷಗಳಿಂದ ಪತ್ರಿಕೆ ಎಷ್ಟೋ ತರುಣರಿಗೆ, ಬರೆಯುವ ಶಕ್ತಿ ಇರುವವರಿಗೆ ಪ್ರೋತ್ಸಾಹ ನೀಡುತ್ತ ಬಂದಿದೆ. ಭಟ್ಟರು ಮೊದಲಿಂದಲೂ ಹೊಸಬರನ್ನು ಬೆಳೆಸುತ್ತ ಬಂದಿದ್ದಾರೆ. ಉದಾಹರಣೆಗೆ ನಮ್ಮ ಪ್ರತಾಪ್ ಸಿಂಹ ಬಹಳ ಚೆನ್ನಾಗಿ ಕಾಲಂ ಬರೆಯುತ್ತಿದ್ದರು. ಅಂಕಣದ ಮೂಲಕವೇ ಪ್ರತಾಪ್ ಸಿಂಹ ಹೀರೋ ಆದವರು. ಆ ಆಕರ್ಷಣೆಯಿಂದ ಚುನಾವಣೆಗೆ ನಿಂತು ಮೊದಲ ಸಲವೇ ಎಂಪಿ ಆದರು. ಅವರನ್ನು ಬೆಳೆಸಿದವರು ಯಾರು? ಅವಕಾಶ ಕೊಟ್ಟವರು ಯಾರು? ಅವರ ಹಿಂದೆ ಇದ್ದವರು ಯಾರು? ಹೀಗೆ ಹೊಸಬರನ್ನು ಬೆಳೆಸುವ ಕೆಲಸವನ್ನೂ ಭಟ್ಟರು ಮಾಡುತ್ತಿದ್ದಾರೆ. ಇದನ್ನು ಕೂಡ ನಾವು ಗಮನಿಸಬೇಕು.

(ನಿರೂಪಣೆ: ಕೆ.ಜೆ.ಲೋಕೇಶ್ ಬಾಬು)