Sunday, 15th December 2024

ವಿಶ್ವವಾಣಿ ನಮಗ ಇಷ್ಟೆಲ್ಲಾ ಕಲಿಸ್ಯಾದ, ನಮ್ಮ ಆತ್ಮವಿಶ್ವಾಸ ಜಾಸ್ತಿ ಮಾಡ್ಯೆದ

ನಾನು ನೇತ್ರಾ ಕುಲಕರ್ಣಿ ಅಂತ ವಿಜಯಪುರದಿಂದ. ನಿಮ್ಮ ಪರಿಚಯ ನನಗ ಸರಿಯಾಗಿ ಆಗಿ ಹೆಚ್ಚು ಕಡಿಮಿ ನಾಕು ವರ್ಷ ಆತು. ಅಂದ್ರ ಅದಕ್ಕಿಂತ ಮದ್ಲ ಅಲ್ಲಿ ಇಲ್ಲಿ ನಿಮ್ಮ ಬಗ್ಗೆ ಕೇಳಿದ್ದೆ, ಓದಿದ್ದೆ.

ಹಂಗ ವಿಶ್ವವಾಣಿ ಪತ್ರಿಕೆ ಶುರುವಾಗುವಾಗ ನಮ್ಮೂರ ಬಸ್ಟ್ಯಾಂಡ್ ಮುಂದ ಕಟ್ಟಿದ್ದ ಬ್ಯಾನರ್ ನೋಡಿದ್ದೆ. ನಮ್ಮ ಮನಿ ಮಂದಿ (ತವ್ರಮನಿ ಮತ್ತ ಗಂಡನಮ ನ್ಯಾಗ) ಎಂಥಾ ಕಟ್ಟಾ ಸಂಯುಕ್ತ ಕರ್ನಾಟಕದ ಅಭಿಮಾನಿಗಳು ಅಂದ್ರ ಮನಿಗೆ ವಿಶ್ವವಾಣಿ ಪತ್ರಿಕೆ ತರಸಲಿಕ್ಕೆ ಭರ್ತಿ ಮೂರು ವರ್ಷ ಹಿಡಿತು! ಅದೂ ಎರಡೂ ಪೇಪರ್ ಇರ್ಲಿ ಅನ್ನೋ ಷರತ್ತಿನ ಮ್ಯಾಲೆ.

ಅಲ್ಲಿಂದ ನನ್ನ ಪ್ರಯಾಣ ವಿಶ್ವವಾಣಿ ಜೊತಿಗೆ ಸಾಗ್ಯದ. ಹೆಸರಿಗೆ ನನ್ನ ಸಲುವಾಗಿ ತರಸಿದ್ರೂ ನಮ್ಮ ಮಾವ ತಾವ ಮದ್ಲ ಓದತಾರ, ಅವ್ರ ಬಾಯಾಗ ಮತ್ತ ತಲಿಯೊಳಗ ವಿಶ್ವವಾಣಿ ಜನವಾಣಿ ಆಗ್ಯದ. ಒಂದ್ರಿತಿ ವಿಶ್ವವಾಣಿ ಜನವಾಣಿನೇ. ಈಗ ಅಸಲಿ ಕಥಿಗೆ ಬರ್ತೀನಿ, ಈ ಬೆಂಗಳೂರಾಗ ಅದರಾಗ ಕನ್ನಡ ಮೀಡಿಯಂ ನ್ಯಾಗ ಕಲತ ನಮ್ಮಂಥೋರು ಅಪ್ಡೇಟ್ ಆಗಲಾರದವರು ಅನ್ನೋ ಮನೋಭಾವ ಭಾಳ ಮಂದಿಗೆ ಅದ. ಯಾಕಂದ್ರ ವೀದೇಶದಾಗ ಆದ ಹೊಸ ಬದ್ಲಾವಣೆ ಬೆಂಗಳೂರಿಗೆ ಬರುದಕ್ಕ ಹತ್ತು ವರ್ಷ ಬೇಕು.

ಬೆಂಗಳೂರಿಂದ ನಮ್ಮೂರಿಗೆ ಇನ್ನಾ ಹತ್ತ ವರ್ಷ. ಅಂಥಾದ್ರಾಗ ನೀವು ಅಪ್ಡೇಟ್ ಆಗಲಿ ಅಂದ್ರ ಔಡೇಟ್ ಆಗ್ತಾರೆ ಅನ್ನೊ ಮಾತಿಗೆ ಬದ್ಧರಾಗಿ ನಿಮ್ಮ ಜೊತಿಗೆ ನಮ್ಮಂತ ಓದುಗರನ್ನೂ ಅಪ್ಡೇಟ್ ಮಾಡತೀರಿ. ನೀವು ಒಂದ ರೀತಿ ಜೇನು ಹುಳ ಇದ್ದಂಗ, ಜಗತ್ತಿನ ತುಂಬಾ ಅಡ್ಯಾಡಿ, ಓದಿ ಮಾಹಿತಿ ಹೀರಿ ಜೇನಿನಷ್ಟ ಛೊಲೊ ಇರೋ ಮಾಹಿತಿ ನಮಗ ಕೊಡ್ತೀರಿ. ನಮ್ಮ ಮನಿಯೊರಿಗೆ ದೊಡ್ಡ ದೊಡ್ಡ ಅಂಕಣ ಓದಲಿಕ್ಕೆ ಆಗಂಗಿಲ್ಲ. ಅದಕ್ಕ ನಾ ಓದಿ ಅದ್ರ ಸಾರಾಂಶ ಹೇಳಿದ ಮ್ಯಾಲೆ ಅವ್ರು ಮಂದಿ ಜೊತಿಗೆ ಮಾತಾಡುಮುಂದ ಬಳಸ್ಕೊತಾರ.

ಕಡಿದು (ಕೊನೆಯದಾಗಿ) ನಿಮ್ಮಿಂದ ಜಗತ್ತಿನ್ಯಾಗ ಏನೇನು ನಡದದ ಅಂತ ತಿಳಿತದ, ಅದರಿಂದ ನಮ್ಮ ಆತ್ಮವಿಶ್ವಾಸ ಭಾಳ ಜಾಸ್ತಿ ಆಗ್ಯದ. ಮದ್ಲಿಗೆ ಗೌರ ಗೋಪಾಲದಾಸ ಗುರೂಜಿ ಅವ್ರ ಅನುವಾದಿತ ಅಂಕಣಗಳು ನಮ್ಮ ಜೀವನಕ್ಕ ದಾರಿ ತೋರಿಸ್ಯಾವ, ಅದಕ್ಕ ನೀವು ನಮಗೆ ಗುರುಗಳು. ’ವರ್ಣ ಮಾತ್ರಂ ಕಲಿಸಿದಾತ ಗುರು’ ಆದ್ರ ನೀವು ಮತ್ತ ವಿಶ್ವವಾಣಿ ನಮಗ ಇಷ್ಟೆ ಕಲಿಸ್ಯಾದ, ನಮ್ಮ ಆತ್ಮವಿಶ್ವಾಸ ಜಾಸ್ತಿ ಮಾಡಿದ ನಿಮಗ ಶರಣು ಶರಣಾರ್ಥಿ .
-ನೇತ್ರಾ ಕುಲಕರ್ಣಿ ವಿಜಯಪುರ