Thursday, 12th December 2024

ಜಾಗೃತಪ್ರಜ್ಞೆ ಮೂಡಿಸಿದ ಪತ್ರಿಕೆ ವಿಶ್ವವಾಣಿ

ವಿಶ್ವವಾಣಿ ಕನ್ನಡ ದಿನಪತ್ರಿಕೆಗೆ ೭ ವರ್ಷ ಸಂದ ಸುಸಮಯ. ನನ್ನ ಮೊದಲ ಲೇಖನವನ್ನು ಪ್ರಕಟಿಸಿದ, ಈ ಪತ್ರಿಕೆಯ ಕುರಿತು ಬರೆಯದೆ ಇರಲಾದೀತೆ? ಅದಕ್ಕೇ ಬರೆಯುತ್ತಿದ್ದೇನೆ.

ಪತ್ರಿಕೆಗಳ ಮೂಲೋದ್ದೇಶವೇ ಸುದ್ದಿ ಪ್ರಸಾರ. ಆ ಸುದ್ದಿ ಪ್ರಸಾರದಿಂದ ಜನ ಸಮೂಹದಲ್ಲಿ ಏರ್ಪಡಬಹುದಾದ ’ಸಂವಹನ’ ಪ್ರಕ್ರಿಯೆಯೇ ಪ್ರಜಾಪ್ರಭುತ್ವದ ನೆಲೆಯನ್ನು ಗಟ್ಟಿಗೊಳಿಸುವಂತಹದ್ದು. ಈ ದಿಶೆಯಲ್ಲಿ ಕನ್ನಡ ನಾಡಿನ ಜನತೆಗಾಗಿ ವಿಶ್ವವಾಣಿ ಪತ್ರಿಕೆ ಮೌಲ್ಯಾಧಾರಿತ ಸುದ್ದಿಗಳನ್ನು ದಿನನಿತ್ಯವೂ ಪ್ರಕಟಿಸುತ್ತ ಬಂದಿದೆ. ಆ ಮೂಲಕ ಕನ್ನಡಿಗರಲ್ಲಿ ರಾಜ್ಯವ್ಯವಸ್ಥೆಯ ಬಗ್ಗೆ ಜಾಗೃತ ಪ್ರಜ್ಞೆಯನ್ನು ಉಂಟುಮಾಡಿದೆ. ಒಂದು ವೃತ್ತಪತ್ರಿಕೆಗೆ ವರದಿ ಆಧಾರಿತ ಸುದ್ದಿಗಳು ಎಷ್ಟು ಮುಖ್ಯವೋ ಅಷ್ಟೇ ಗಣನೀಯವಾದವುಗಳು ಅಂಕಣಗಳು.

ಕನ್ನಡದ ಯಾವ ದಿನಪತ್ರಿಕೆಯೂ ದಿನಕ್ಕೆ ೪-೫ ಅಂಕಣಗಳನ್ನು ಓದುಗರ ಮುಂದಿಡುವುದಿಲ್ಲ. ಆದರೆ ವಿಶ್ವವಾಣಿಯಲ್ಲಿನ ಕನಿಷ್ಠ ನಾಲ್ಕು ಕಾಲಮ್‌ಗಳು ನಿತ್ಯವೂ ಅಂಕಣಗಳಿಗೆ ಮೀಸಲು. ವಿಶ್ವೇಶ್ವರ ಭಟ್ಟರಿಂದ ಶುರುಮಾಡಿ ಗಂಗಾವತಿ ಪ್ರಾಣೇಶ್, ಶಶಿಧರ ಹಾಲಾಡಿ, ಶಿಶಿರ್ ಹೆಗಡೆ, ಕಿರಣ ಉಪಾಧ್ಯಾಯ, ಶ್ರೀವತ್ಸ ಜೋಶಿ, ಮೋಹನ ವಿಶ್ವ, ದೇವಿ ಮಹೇಶ್ವರ, ಸಂತೋಷಕುಮಾರ ಮೆಹೆಂದಳೆ, ರಂಜೀತ್ ಅಶ್ವಥ್, ಜಯವೀರ ವಿಕ್ರಮ ಸಂಪತ್ ಗೌಡ ಇತ್ಯಾದಿ ಅಂಕಣಕಾರರ ಅಕ್ಷರ ಹೂರಣ ಓದುಗರ ಮನವನ್ನು ಸಿಹಿಯಾಗಿಸುತ್ತದೆ. ಓದುಗರ ಅಂಕಣರೂಪಿ ಅಭಿಪ್ರಾಯಗಳನ್ನೂ ಪ್ರಕಟಿಸುವ ಈ ಪತ್ರಿಕೆಯ ಹೆಜ್ಜೆ ಇವತ್ತಿನ ಪತ್ರಿಕೋದ್ಯಮದಲ್ಲಿ ನಿಜಕ್ಕೂ ಶ್ಲಾಘನಾರ್ಹ.

ರಾಜ್ಯವ್ಯಾಪಿ ಒಂದು ಪತ್ರಿಕೆಯನ್ನು ಪ್ರಸಾರ ಮಾಡುವುದು ಸುಲಭದ ಕೆಲಸವಂತೂ ಅಲ್ಲ. ಒಂದು ಪತ್ರಿಕೆಗೆ ಪ್ರತಿ ಜಿಲ್ಲೆಗಳಲ್ಲೂ ಸುದ್ದಿ ಮಾಡುವ ವರದಿಗಾರ ರಿರಬಹುದು, ಪತ್ರಿಕೆ ತನ್ನ ಸ್ವಂತ ಮುದ್ರಣಾಲಯವನ್ನೂ ಹೊಂದಿರಬಹುದು. ಅದೆಲ್ಲಕ್ಕೂ ಮಿಗಿಲಾಗಿ ಪತ್ರಿಕಾರಂಗದ ಒಳಹೊರಗನ್ನು ಅರಿತಿವ ಸಂಪಾದಕ ನಿರಬಹುದು, ಒಳ್ಳೆಯ ಸಿಬ್ಬಂದಿಯೂ ಇರಬಹುದು, ಮೌಲ್ಯ ಮತ್ತು ಮಾಹಿತಿ ಆಧಾರಿತ ಸುದ್ದಿಯನ್ನೇ ಆ ಪತ್ರಿಕೆ ಕೊಡುತ್ತಿರಬಹುದು.

ಇಷ್ಟೆ ಇದ್ದಾಗ್ಯೂ ಜನರು ಆ ಪತ್ರಿಕೆಯನ್ನು ಓದಿಯೇ ಓದುತ್ತಾರೆ ಎನ್ನುವ ಖಾತ್ರಿಯನ್ನು ಬ್ರಹ್ಮನೂ ಕೊಡಲಾರ. ಪತ್ರಿಕೆ ಶುರು ಮಾಡಿದ ಕೆಲ ವರ್ಷ ಪ್ರಧಾನ ಸಂಪಾದಕ ಮತ್ತು ಮಾಲೀಕ ಅನಿಶ್ಚಿತತೆಯ ಕಾಲ ನೂಕಬೇಕು. ಸಾವಕಾಶವಾಗಿ ಜನರಲ್ಲಿ ಪತ್ರಿಕೆಯ ಬಗೆಗೆ ವಿಶ್ವಾಸ ಮೂಡಿಸಬೇಕು. ಅದು ಹೇಗೆ ಮಾಡಬೇಕು ಎಂದರೆ ಹೇಳುವುದು ಕಷ್ಟವಿದೆ. ಅದಕ್ಕೆ ವ್ಯಾವಹಾರಿಕ ಕೌಶಲ್ಯವೂ ಬೇಕು. ಪತ್ರಿಕೋದ್ಯಮದಲ್ಲಿ ಪಳಗಿದ ಬುದ್ಧಿಯೂ ಬೇಕು. ಹೀಗಿರುವಾಗ ವಿಶ್ವವಾಣಿ ಜನಮಾನಸದಲ್ಲಿ ವಿಶ್ವಾಸ ಗಳಿಸಿದ ಪರಿ ನಿಜಕ್ಕೂ ಒಂದರ್ಥದಲ್ಲಿ ಆಶ್ಚರ್ಯ ಮೂಡಿಸಿದರೆ ಇನ್ನೊಂದರ್ಥದಲ್ಲಿ ವಿಶ್ವೇಶ್ವರ ಭಟ್ಟರ ವಿಶ್ವಾಸಾರ್ಹತೆ ಪತ್ರಿಕೆಗೂ ವಿಶ್ವಾಸ ಕೊಟ್ಟಿತೆನೋ ಎಂದೆನಿಸುತ್ತದೆ.

ವಿಶ್ವವಾಣಿಗೆ ಆಲ್‌ಲೈನ್ ಓದುಗರು ಬಹಳ ಇದ್ದಾರೆ. ನಾನೂ ಆನ್‌ಲೈನ್‌ನ ಓದಬೇಕು. ಏಕೆಂದರೆ ಧಾರವಾಡ ನಗರದಲ್ಲೂ ಈ ಪತ್ರಿಕೆ ಸಿಗುವುದು ಬಹಳ ಕಷ್ಟವಿದೆ. ಯಾಕೆ ಹೀಗೆ ಗೊತ್ತಿಲ್ಲ. ಆದ್ದರಿಂದ ವಿಶ್ವವಾಣಿಯ ಓದುಗನಾಗಿ ನಾನು ವಿಶ್ವೇಶ್ವರ ಭಟ್ಟರಲ್ಲಿ ಕೇಳುವುದಿಷ್ಟು: ಪ್ರತಿ ಜಿಲ್ಲೆ, ತಾಲೂಕು ಮತ್ತು ಹೊಬಳಿ ಮಟ್ಟಗಳಲ್ಲಿ ವಿಶ್ವವಾಣಿ ಪತ್ರಿಕೆಯ ಪ್ರಸರಣ ಸಂಖ್ಯೆಯನ್ನು ಈಗಿರುವುದಕ್ಕಿಂತ ಸ್ವಲ್ಪ ಹೆಚ್ಚಿಸಿ. ಜನ ಓದಬಯಸುತ್ತಿರುವಾಗ ಪತ್ರಿಕೆ ಅವರ ಕೈಸೇರಬೇಕು. ಅದಷ್ಟೇ ನನ್ನ ಕಳಕಳಿ. ನನ್ನ ಲೇಖನವನ್ನೂ ಮುದ್ರಿಸಿ, ಪ್ರಕಟಿಸಿದ್ದಕ್ಕೆ ಪ್ರಧಾನ ಸಂಪಾದಕರಿಗೆ ಧನ್ಯವಾದಗಳನ್ನು ಈ ಸುಸಂಧರ್ಭದಲ್ಲಿ ತಿಳಿಸಬಯಸುತ್ತೇನೆ. ಧನ್ಯವಾದಗಳು.
-ಹೃತಿಕ್ ಕುಲಕರ್ಣಿ

ಶ್ರೀಯುತ ವಿಶ್ವೇಶ್ವರ ಭಟ್ಟರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ತಮ್ಮ ಪತ್ರಿಕೆ ೬ ವಸಂತಗಳನ್ನು ಯಶಸ್ವಿಯಾಗಿ ಪೂರೈಸಿ ೭ನೇ ವಸಂತಕ್ಕೆ ಕಾಲಿಟ್ಟಿರುವುದು ನಮಗೆಲ್ಲರಿಗೂ ಅತ್ಯಂತ ಸಂತಸ ತಂದಿದೆ. ವಿಶ್ವವಾಣಿ ಪತ್ರಿಕೆಯನ್ನು ಮೀರಿಸುವ ಪತ್ರಿಕೆ ಇಂದು ಇಲ್ಲವೆಂದು ಖಡಾಖಂಡಿತವಾಗಿ
ಹೇಳಬಹುದು. ನಿಮ್ಮ ಪತ್ರಿಕೆಯಲ್ಲಿ ಸಿಗುವಷ್ಟು ವಿಷಯ, ಲೇಖನಗಳು ಇನ್ಯಾವ ಪತ್ರಿಕೆಗಳಲ್ಲೂ ಸಿಗುವುದೇ ಇಲ್ಲ. ನಿಮ್ಮ ಪತ್ರಿಕೆ ಓದಲು ಕನಿಷ್ಠ ಒಂದು ಗಂಟೆ ಬೇಕು. ಪತ್ರಿಕೆ ಒದದಿದ್ದರೆ ಮನಸ್ಸಿಗೆ ಸಮಾಧಾನ ಇರುವುದಿಲ್ಲ. ತಾವು ಇನ್ಮುಂದೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೀರಿ.

ಸಂತೋಷದ ವಿಷಯ. ನಿಮ್ಮ ಎಲ್ಲ ಪ್ರಯತ್ನಗಳಿಗೆ ಯಶಸ್ಸು ಸಿಗಲೆಂದು ಈ ಶುಭ ಸಂದರ್ಭದಲ್ಲಿ ಹಾರೈಸುತ್ತೇನೆ.
-ರಘೋತ್ತಮ ತೀರ್ಥ